ಲಾಕ್‌ಡೌನ್‌ನಲ್ಲಿ ಸಿಲುಕಿಕೊಂಡವರು ಊರಿಗೆ ಹೋಗಲು ಅವಕಾಶ – ನೀವೂ ಹೋಗಬಹುದಾ..? ಇಲ್ಲಿದೆ ನೋಡಿ ಸಂಪೂರ್ಣ ಆದೇಶ

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಬೇರೆ ರಾಜ್ಯಗಳಲ್ಲಿ ಸಿಲುಕಿಕೊಂಡಿರುವ ವಲಸೆ ಕಾರ್ಮಿಕರು, ಪ್ರವಾಸಿಗರು, ವಿದ್ಯಾರ್ಥಿಗಳು ಮತ್ತು ಇತರ ವ್ಯಕ್ತಿಗಳಿಗೆ ಅವರವರ ತವರು ರಾಜ್ಯಗಳಿಗೆ ಹೋಗಲು ಕೇಂದ್ರ ಗೃಹ ಸಚಿವಾಲಯ ಅನುಮತಿ ನೀಡಿದೆ. ಆದರೆ ಇವರನ್ನು ಕರೆಸಿಕೊಳ್ಳುವ ಮತ್ತು ಕಳುಹಿಸುವ ವ್ಯವಸ್ಥೆಯನ್ನು ನೇರವಾಗಿ ಆಯಾಯ ರಾಜ್ಯ ಸರ್ಕಾರಗಳೇ ಮಾಡಬೇಕು ಎಂದೂ ಹೇಳಿದೆ.

ಉದಾಹರಣೆಗೆ ಕರ್ನಾಟಕ ಮೂಲದ ವ್ಯಕ್ತಿಗಳು ಬೇರೆ ರಾಜ್ಯಗಳಲ್ಲಿ ಸಿಲುಕಿಕೊಂಡಿದ್ದರೆ ಆ ರಾಜ್ಯ ಸರ್ಕಾರದೊಂದಿಗೆ ಕರ್ನಾಟಕ ಸರ್ಕಾರ ಮಾತುಕತೆ ನಡೆಸಿ ಅಂತಹ ವ್ಯಕ್ತಿಗಳನ್ನು ಕರ್ನಾಟಕ್ಕೆ ಕರೆದುಕೊಂಡು ಬರಬಹುದು.

ಆದರೆ ಇದು ಲೌಕ್‌ಡೌನ್‌ನಲ್ಲಿ ಬೇರೆ ರಾಜ್ಯಗಳಲ್ಲಿ ಸಿಲುಕಿರುವ ಇನ್ನೊಂದು ರಾಜ್ಯದ ವಲಸೆ ಕಾರ್ಮಿಕರು, ಪ್ರವಾಸಿಗರು, ಪುಣ್ಯಕ್ಷೇತ್ರಕ್ಕೆ ಹೋದವರು ಮತ್ತು ಇತರರಿಗೆ ಮಾತ್ರ ಅನ್ವಯ.

ಇತರರು ಎಂದರೆ ಲಾಕ್‌ಡೌನ್‌ನಿಂದಾಗಿ ರಸ್ತೆ, ರೈಲು ಸಂಚಾರ ಬಂದ್‌ ಆಗಿ ತಮ್ಮ ತಮ್ಮ ತವರು ರಾಜ್ಯಗಳಿಗೆ ಹೋಗಲಾಗದೇ ಬೇರೆ ರಾಜ್ಯಗಳಲ್ಲಿ ಸಿಲುಕಿಕೊಂಡವರು ಎಂದು ಅರ್ಥ.

ಹೀಗಾಗಿ ಜನಸಾಮಾನ್ಯರು ಬೇರೆ ರಾಜ್ಯಗಳಿಗೆ ಓಡಾಡಲು ಅಥವಾ ರಾಜ್ಯದೊಳಗೆ ಅಥವಾ ಜಿಲ್ಲೆಗಳ ನಡುವೆ ಓಡಾಡಲು ಕೊಟ್ಟಿರುವ ಅನುಮತಿ ಅಲ್ಲವೇ ಅಲ್ಲ.

ಈಗಾಗಲೇ ಕರ್ನಾಟಕದೊಳಗೆ ಬೇರೆ ಜಿಲ್ಲೆಗಳಲ್ಲಿ ಸಿಲುಕಿರುವ ವಲಸೆ ಕಾರ್ಮಿಕರನ್ನು ಅವರ ತವರು ಜಿಲ್ಲೆಗಳಿಗೆ ಕಳುಹಿಸಿ ಕೊಡಲು ಸರ್ಕಾರ ಅನುಮತಿ ನೀಡಿದೆ. ಇದರ ವ್ಯವಸ್ಥೆಯನ್ನು ನೇರವಾಗಿ ಆಯಾಯ ಜಿಲ್ಲಾಡಳಿತವೇ ನೋಡಿಕೊಳ್ತಿದೆ. ಉದಾಹರಣೆಗೆ: ಚಿತ್ರದುರ್ಗದಲ್ಲಿ ಸಿಲುಕಿದ್ದ ಉತ್ತರ ಕರ್ನಾಟಕ ಭಾಗದ ಜಿಲ್ಲೆಯ ವಲಸೆ ಕಾರ್ಮಿಕರನ್ನು ಚಿತ್ರದುರ್ಗ ಜಿಲ್ಲಾಡಳಿತ ಕೆಎಸ್‌ಆರ್‌ಟಿಸಿ ಬಸ್‌ಗಳ ಮೂಲಕ ಅವರವರ ಜಿಲ್ಲೆಗಳಿಗೆ ರವಾನಿಸಿತ್ತು.

ಇವತ್ತು ಹೊರಡಿಸಿರುವ ಹೊಸ ಆದೇಶದಲ್ಲಿ ಲಾಕ್‌ಡೌನ್‌ನಲ್ಲಿ ಸಿಲುಕಿಕೊಂಡವರಿಗೆ ರಾಜ್ಯಗಳ ನಡುವಿನ ಓಡಾಟಕ್ಕೆ ಕೇಂದ್ರ ಸರ್ಕಾರ ಕೆಲವೊಂದಿಷ್ಟು ಷರತ್ತುಗಳನ್ನು ಹಾಕಿದೆ.

೧) ಲಾಕ್‌ಡೌನ್‌ನಲ್ಲಿ ಸಿಲುಕಿರುವ ವ್ಯಕ್ತಿಗಳನ್ನು ಕಳುಹಿಸಲು ಮತ್ತು ಕರೆಸಿಕೊಳ್ಳುವ ಸಲುವಾಗಿ ಅಗತ್ಯವಾದ ಕ್ರಮಗಳನ್ನು ರಾಜ್ಯ ಸರ್ಕಾರಗಳು ನಿರ್ಧರಿಸಬೇಕು.

ಇದಕ್ಕಾಗಿ ಆಯಾಯ ರಾಜ್ಯ ಸರ್ಕಾರಗಳು ನೋಡಲ್‌ ಅಧಿಕಾರಿಯನ್ನು ನೇಮಿಸಬೇಕು. ತಮ್ಮ ರಾಜ್ಯದಲ್ಲಿ ಸಿಲುಕಿರುವ ಬೇರೆ ರಾಜ್ಯಗಳ ವ್ಯಕ್ತಿಗಳ ಮಾಹಿತಿಯನ್ನು ಆ ನೋಡಲ್‌ ಅಧಿಕಾರಿಗಳು ನಮೂದಿಸಿಕೊಳ್ಳಬೇಕು.

೨) ಲಾಕ್‌ಡೌನ್‌ನಲ್ಲಿ ಸಿಲುಕಿರುವವರನ್ನು ಕಳುಹಿಸಿಕೊಡುವ ಅಥವಾ ಸ್ವೀಕರಿಸುವ ವೇಳೆ ಸಂಬಂಧಪಟ್ಟ ರಾಜ್ಯಗಳು ರಸ್ತೆಗಳ ಮೂಲಕವೇ ಸಂಚರಿಸುವ ಬಗ್ಗೆ ಪರಸ್ಪರ ಒಪ್ಪಿಕೊಳ್ಳಬೇಕು.

೩) ಹೀಗೆ ಸಂಚರಿಸುವ ವ್ಯಕ್ತಿಗಳ ಆರೋಗ್ಯ ತಪಾಸಣೆ ಮಾಡಬೇಕು.

೪) ಬಸ್‌ಗಳ ಮೂಲಕವೇ ಕಳುಹಿಸಿಕೊಡಬೇಕು. ಬಸ್‌ಗಳಿಗೆ ಸ್ಯಾನಿಟೈಸ್‌ ಮಾಡುವುದು ಕಡ್ಡಾಯ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ.

೫) ತವರು ರಾಜ್ಯಕ್ಕೆ ಬಂದ ಬಳಿಕ ಅಂತಹ ವ್ಯಕ್ತಿಗಳ ಆರೋಗ್ಯ ತಪಾಸಣೆ ಮಾಡುವುದು ಕಡ್ಡಾಯ. ಹೋಂ ಕ್ವಾರಂಟೈನ್‌ ಕಡ್ಡಾಯ. ನಿರಂತರವಾಗಿ ಅವರಿಗೆ ಆರೋಗ್ಯ ತಪಾಸಣೆ ಮಾಡಬೇಕು.

ಪ್ರಧಾನಿ ನರೇಂದ್ರ ಮೋದಿ ಜೊತೆಗೆ ನಡೆದಿದ್ದ ಸಭೆಯಲ್ಲಿ ಮುಖ್ಯಮಂತ್ರಿಗಳು ವಲಸೆ ಕಾರ್ಮಿಕರನ್ನು ಅವರವರ ರಾಜ್ಯಗಳಿಗೆ ಕಳುಹಿಸಿಕೊಡಲು ಅನುಮತಿ ನೀಡುವಂತೆ ಮನವಿ ಮಾಡಿದ್ದರು.

ಈಗಾಗಲೇ ರಾಜಸ್ಥಾನದಲ್ಲಿ ಕೋಟಾದಲ್ಲಿ ಸಿಲುಕಿದ್ದ ತಮ್ಮ ತಮ್ಮ ರಾಜ್ಯಗಳ ವಿದ್ಯಾರ್ಥಿಗಳನ್ನು ಆಯಾಯ ರಾಜ್ಯಗಳೇ ಬಸ್‌ ವ್ಯವಸ್ಥೆ ಮಾಡಿ ವಾಪಸ್‌ ಕರೆಸಿಕೊಳ್ಳುತ್ತಿವೆ. ಛತ್ತೀಸ್‌ಗಢ ಕೋಟಾದಲ್ಲಿದ್ದ ತನ್ನ ರಾಜ್ಯದ ವಿದ್ಯಾರ್ಥಿಗಳನ್ನು ಬಸ್‌ಗಳ ಮೂಲಕ ಕರೆಸಿಕೊಂಡಿದೆ.

ಇತ್ತ ಉತ್ತರಪ್ರದೇಶ, ಬಿಹಾರ, ಮಧ್ಯಪ್ರದೇಶ ಒಳಗೊಂಡು ಹಲವು ರಾಜ್ಯಗಳು ಬೇರೆ ರಾಜ್ಯಗಳಲ್ಲಿರುವ ತಮ್ಮ ರಾಜ್ಯದ ವಲಸೆ ಕಾರ್ಮಿಕರನ್ನು ವಾಪಸ್‌ ಕರೆಸಿಕೊಳ್ಳಲು ಮುಂದಾಗಿದ್ದವು.

LEAVE A REPLY

Please enter your comment!
Please enter your name here