ದೇಶ ನಾಲ್ಕನೇ ಲಾಕ್‌ಡೌನ್‌ ದಾಟಿ ಐದನೇ ಲಾಕ್‌ಡೌನ್‌ಗೆ ಕಾಲಿಟ್ಟಿದೆ. ಶನಿವಾರ ಸಂಜೆ ಹೊರಬಿದ್ದ ಮಾರ್ಗಸೂಚಿಯನ್ನು ನೋಡಿದ ಮೇಲೆ ನಿಜಕ್ಕೂ ಲಾಕ್‌ಡೌನ್‌ ಇದೆಯೇ ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡಬಹುದು. 70 ದಿನಗಳ ಸುದೀರ್ಘ ಲಾಕ್‌ಡೌನ್‌ ಕೊರೋನಾ ವಿರುದ್ಧದ ಹೋರಾಟದಲ್ಲಿ ಸಾಧಿಸಿದ್ದೇನು ಎನ್ನುವ ಗಂಭೀರ ಪ್ರಶ್ನೆಯನ್ನೂ ಹುಟ್ಟುಹಾಕಿದೆ. ಎಲ್ಲವನ್ನೂ ಸ್ಥಗಿತಗೊಳಿಸಿ ಗೆದ್ದೇ ಬಿಟ್ಟೆವು ಎಂಬ ಭ್ರಮೆಯಲ್ಲಿದ್ದ ನಮಗೆ ಈಗ ಕೊರೋನಾ ಸೋಂಕಿನ ಅಬ್ಬರಕ್ಕಿಂತ ಭವಿಷ್ಯದ ಬದುಕಿನ ಗತಿ ಹೇಗೆ ಎಂಬ ಆತಂಕವೇ ಬೆನ್ನೇರಿದೆ.

ಇವತ್ತು ಬೆಳಗ್ಗೆ 11 ಗಂಟೆಗೆ ರಾಷ್ಟ್ರೀಯ ವಾರ್ತಾ ವಾಹಿನಿ ಆಲ್‌ ಇಂಡಿಯಾ ರೇಡಿಯೋ ಮೂಲಕ ತಮ್ಮ ಭಾನುವಾರದ ಮನದ ಮಾತು ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ ಆರಂಭದಲ್ಲಿ ಹೇಳಿದ್ದು ಕೊರೋನಾ ಕೇಸ್‌ ಹಬ್ಬುತ್ತಿರುವ ಬಗ್ಗೆಯೇ. ಆದರೆ ಇಲ್ಲಿವರೆಗಿನ ಭಾಷಣದಲ್ಲಿ ಹೇಳದ ಇವತ್ತಿನ ಮಾತಲ್ಲಿ ಹೇಳಿದ ಪ್ರಮುಖ ಅಂಶವೆಂದರೆ ನಮ್ಮ ದೇಶದ ಜನಸಂಖ್ಯೆಯ ಕುರಿತು. ಉಳಿದ ದೇಶಗಳಿಗೆ ಹೋಲಿಸಿದರೆ ನಮ್ಮಲ್ಲಿ ಜನಸಂಖ್ಯೆ ಅತ್ಯಧಿಕವಾಗಿದೆಯೆಂದೂ, ನಮ್ಮಲ್ಲಿನ ಸವಾಲುಗಳು ಭಿನ್ನವೆಂದೂ, ಉಳಿದ ದೇಶಗಳಲ್ಲಿ ಕೊರೋನಾ ಸೋಂಕು ಎಷ್ಟು ಹಬ್ಬಿದೆಯೋ ಅಷ್ಟು ನಮ್ಮಲ್ಲಿ ಹಬ್ಬಿಲ್ಲವೆಂದೂ, ಕೊರೋನಾದಿಂದ ಆಗುತ್ತಿರುವ ಸಾವಿನ ಪ್ರಮಾಣವೂ ಇಳಿದಿದೆಯೆಂದು ಎಂದು ಪ್ರಧಾನಿ ಹೇಳಿದ್ದಾರೆ.

ಪ್ರಧಾನಿಯವರು ರೇಡಿಯೋ ಭಾಷಣ ಮಾಡುವುದಕ್ಕೂ ಎರಡು ಗಂಟೆಗೂ ಮೊದಲು ಕೇಂದ್ರ ಆರೋಗ್ಯ ಸಚಿವಾಲಯ 24 ಗಂಟೆಗಳಲ್ಲಿ ದೇಶದಲ್ಲಿನ ಕೊರೋನಾ ಕೇಸ್‌ನ ಬಗ್ಗೆ ವರದಿ ಪ್ರಕಟಿಸಿತು. ಆ ಅಂಕಿಅಂಶ ಪ್ರಕಾರ ಶನಿವಾರ ಬೆಳಗ್ಗೆ 9 ಗಂಟೆಯಿಂದ ಭಾನುವಾರ ಬೆಳಗ್ಗೆ 9 ಗಂಟೆಯವರೆಗೆ 8,380 ಹೊಸ ಸೋಂಕಿತರು ಪತ್ತೆ ಆಗಿದ್ದಾರೆ. (ಇದುವರೆಗಿನ ದಾಖಲೆ ಪ್ರಮಾಣದ ಏರಿಕೆ). ಒಟ್ಟು ಸೋಂಕಿತರ ಸಂಖ್ಯೆ 1 ಲಕ್ಷದ 82 ಸಾವಿರದ 143ಕ್ಕೆ ಏರಿ 2 ಲಕ್ಷದ ಸನಿಹದಲ್ಲಿ ಬಂದು ನಿಂತಿದೆ. 24 ಗಂಟೆಗಳಲ್ಲಿ 193 ಮಂದಿ ಕೊರೋನಾಗೆ ಬಲಿ ಆಗಿದ್ದಾರೆ. ಸಾವಿನ ಸಂಖ್ಯೆಯೂ ಐದು ಸಾವಿರದ ಗಡಿ ದಾಟಿ 5,194 ತಲುಪಿದೆ.

ಲಾಕ್‌ಡೌನ್‌ನಿಂದಾಗಿ ಕೊರೋನಾ ನಿಯಂತ್ರಣದಲ್ಲಿದೆ ಎಂದೇ ಸರ್ಕಾರಗಳು ಹೇಳುತ್ತಿವೆ. ಆದರೆ ಜನವರಿ 30ರಂದು ಪತ್ತೆ ಆದ ಮೊದಲ ಪ್ರಕರಣದಿಂದ ಹಿಡಿದು ಇವತ್ತಿನವರೆಗಿನ ಕೊರೋನಾ ಅಂಕಿ ಅಂಶಗಳನ್ನು ನೋಡಿದರೆ ಸರ್ಕಾರದ ಮಾತುಗಳು ನಿಜವಲ್ಲವೆಂದು ಸಾಧಿತವಾಗುತ್ತದೆ.

ಮೇ ತಿಂಗಳ ದಾಖಲೆಗಳನ್ನೇ ನೊಡೋಣ. ಮೇ 1ರಂದು ದೇಶದಲ್ಲಿದ್ದ ಒಟ್ಟು ಕೊರೋನಾ ಸೋಂಕಿತರ ಸಂಖ್ಯೆ ಕೇವಲ 37,262. ಇದು ಈಗ 1 ಲಕ್ಷದ 82 ಸಾವಿರದ 143ಕ್ಕೆ ಏರಿದೆ. ಅಂದರೆ ಬರೀ ಈ ತಿಂಗಳಲ್ಲೇ 1 ಲಕ್ಷದ 44 ಸಾವಿರದ 881ಕ್ಕೆ ಏರಿದೆ. ಅಂದರೆ ಒಂದೂವರೆ ಲಕ್ಷದಷ್ಟು ಹೆಚ್ಚಳ ಕಂಡಿದೆ.

ದಿನಾವಾರು ಕೊರೋನಾ ಕೇಸ್‌ ಹೆಚ್ಚಳ ಪರಿಪ್ರಮಾಣವೂ ಅಗಾಧವಾಗಿದೆ. ಮೇ ಆರಂಭದಲ್ಲಿ ದಿನವೊಂದಕ್ಕೆ 2-3 ಸಾವಿರದ ಅಸುಪಾಸಲ್ಲಿ ಜಿಗಿಯುತ್ತಿದ್ದ ಸೋಂಕಿತರ ಸಂಖ್ಯೆ ಶನಿವಾರ ಮತ್ತು ಭಾನುವಾರ ಬಿಡುಗಡೆ ಅಂಕಿ ಅಂಶಗಳಲ್ಲಿ 8 ಸಾವಿರ ಮೀರಿದೆ.

ದಿಢೀರ್‌ ಕೊರೋನಾ ಕೇಸ್‌ ಹೆಚ್ಚಳಕ್ಕೆ ಸರ್ಕಾರಗಳು ಕೊಡುತ್ತಿರುವ ಕಾರಣ ಕೊರೋನಾ ಪರೀಕ್ಷೆಯಲ್ಲಿ ಹೆಚ್ಚಳ ಆಗಿದೆ ಎನ್ನುವುದು. ಐಸಿಎಂಆರ್‌ ಮಾಹಿತಿ ಪ್ರಕಾರ ಮಾರ್ಚ್‌ ತಿಂಗಳಲ್ಲಿ ಇಡೀ ದೇಶದಲ್ಲಿ ನಡೆದಿದ್ದ ಕೊರೋನಾ ಪತ್ತೆ ಪರೀಕ್ಷೆ ಕೇವಲ 47,852. ಏಪ್ರಿಲ್‌ ತಿಂಗಳ ಕೊನೆಗೆ ಈ ಸಂಖ್ಯೆ 9 ಲಕ್ಷದ 2 ಸಾವಿರದ 654ಕ್ಕೆ ಏರಿಕೆ ಆಯಿತು. ಮೇ ತಿಂಗಳ ಕೊನೆಗೆ ಕೊರೋನಾ ಪತ್ತೆ ಪರೀಕ್ಷೆಯ ಒಟ್ಟು ಸಂಖ್ಯೆ 37 ಲಕ್ಷದ 37 ಸಾವಿರದ 027 ಏರಿದೆ. ಮೇ 31ರ ಬೆಳಗ್ಗೆ 9 ಗಂಟೆವರೆಗೆ 24 ಗಂಟೆಯಲ್ಲಿ 1 ಲಕ್ಷದ 25 ಸಾವಿರದ 428.

130 ಕೋಟಿ ಪ್ರಜೆಗಳಿರುವ ದೇಶದಲ್ಲಿ ಸರ್ಕಾರಗಳು ಇಲ್ಲಿಯವರೆಗೆ ಕೊರೋನಾ ಪತ್ತೆ ನಡೆಸಿದ್ದು ಕೇವಲ 37 ಲಕ್ಷ ಮಂದಿಗಷ್ಟೇ. ಅದೂ 120 ದಿನಗಳಲ್ಲಿ ಅಂದರೆ ನಾಲ್ಕು ತಿಂಗಳಲ್ಲಿ.

ಕರ್ನಾಟಕದಲ್ಲೂ ಪರಿಸ್ಥಿತಿ ಏನೂ ಭಿನ್ನವಾಗಿಲ್ಲ. ರಾಜ್ಯದಲ್ಲಿ ಇವತ್ತಿನವರೆಗೆ ಕೊರೋನಾ ಪರೀಕ್ಷೆ ನಡೆದಿದ್ದು 2 ಲಕ್ಷದ 93 ಸಾವಿರದ 573 ಜನಕ್ಕಷ್ಟೇ. ಕರ್ನಾಟಕದ ಜನಸಂಖ್ಯೆ 7 ಕೋಟಿ. ಕೊರೋನಾ ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಲ್ಲಿ ಬರುವ ಮಂದಿಗೂ ಕೊರೋನಾ ಪರೀಕ್ಷೆ ನಡೆಸಲಾಗುತ್ತದೆ. ಅದೂ ಈ ಅಂಕಿಯಲ್ಲಿ ಒಳಗೊಂಡಿದೆ.

ಕೊರೋನಾ ತಡೆಗೆ ಲಾಕ್‌ಡೌನ್ ಶಾಶ್ವತ ಪರಿಹಾರ ಅಲ್ಲ. ಇದು ಪ್ರಧಾನಿ ನರೇಂದ್ರ ಮೋದಿಯವರಿಗೂ ಗೊತ್ತಿರದ ವಿಶೇಷವೇನಲ್ಲ.  ಆರಂಭದಲ್ಲಿ ಲಾಕ್‌ಡೌನ್‌ ಹೇರುವ ಉದ್ದೇಶ ಇದ್ದಿದ್ದು ಕೊರೋನಾ ಸೋಂಕು ಹಬ್ಬಬಾರದು ಎಂಬುದಕ್ಕೆ. ಆದರೆ ಇಲ್ಲಿ ಜನರ ಓಡಾಟಕ್ಕೆ ನಿರ್ಬಂಧ ಹೇರುವುದು ಮಾತ್ರ ಉದ್ದೇಶವಾಗಿರಲಿಲ್ಲ. ಲಾಕ್‌ಡೌನ್‌ ಸಡಿಲಿಕೆಗೂ ಮೊದಲು ಕೊರೋನಾ ಸೋಂಕಿರುವ ಪ್ರದೇಶಗಳಲ್ಲಿ ಪೂರ್ಣ ಪ್ರಮಾಣದ ಕೊರೋನಾ ಪತ್ತೆ ಪರೀಕ್ಷೆಯನ್ನು ನಡೆಸಿ ಆ ಪ್ರದೇಶಗಳನ್ನು ಕೊರೋನಾ ಸೋಂಕಿನ ವಿಮುಕ್ತ ಪ್ರದೇಶಗಳೆಂದು ಸ್ಥಾಪಿಸುವುದು. ಜೊತೆಗೆ ಕೊರೋನಾ ಸೋಂಕಿಗೆ ಸುಲಭದಲ್ಲಿ ತುತ್ತಾಗುವವರ ಪತ್ತೆಗೆ ಆರೋಗ್ಯ ತಪಾಸಣೆಯನ್ನು ತೀವ್ರಗೊಳಿಸಿ ಅವರ ಮೇಲೆ ಹೆಚ್ಚಿನ ನಿಗಾವಹಿಸುವುದು.

ಆದರೆ ಮೂರು ಲಾಕ್‌ಡೌನ್‌ ಮುಗಿದು ನಯಾಲಾಕ್‌ಡೌನ್‌ನ ಮೊದಲ ಹಂತ ಕೊನೆ ಆಗಿ ಅನ್‌ಲಾಕ್‌ನ ಮೊದಲ ಹಂತ ಶುರುವಾಗಷ್ಟೊತ್ತಿಗೆ ದೇಶದಲ್ಲಿ ಆಗಿರುವ ಕೊರೋನಾ ಪತ್ತೆ ಪರೀಕ್ಷೆ ಅಂಕಿ ಕೇವಲ 37 ಲಕ್ಷವೆಂದರೆ ಲಾಕ್‌ಡೌನ್‌ ಹೊತ್ತಲ್ಲಿ ನಮ್ಮ ಸಾಧನೆ ಏನಿತ್ತು ಎನ್ನುವುದು ಅರಿವಾಗುತ್ತದೆ. ಇತರೆ ದೇಶಗಳಿಗೆ ಹೋಲಿಸಿಕೊಂಡರೆ ನಮ್ಮಲ್ಲಿ ಜನಸಂಖ್ಯೆವಾರು ಕೊರೋನಾ ಪತ್ತೆ ಪರೀಕ್ಷೆ ಅತ್ಯಂತ ಕಡಿಮೆ ಇದೆ.

ಈ ಲೇಖನವನ್ನು ಬರೆದು ಮುಗಿಸುವ ವೇಳೆ ಸಿಕ್ಕ ಅಂಕಿಗಳ ಪ್ರಕಾರ ಕೊರೋನಾ ಕೇಸ್‌ನಲ್ಲಿ ಭಾರತ 9ರಿಂದ 7ನೇ ಸ್ಥಾನಕ್ಕೆ ಏರಿದೆ. ರಷ್ಯಾ ಬಳಿಕ ದಿನಾವಾರು ಅತ್ಯಧಿಕ ಕೊರೋನಾ ಕೇಸ್‌ ಪತ್ತೆ ಆಗಿರುವುದು ಭಾರತದಲ್ಲೇ. ಕೊರೋನಾಗೆ ದಿನಾವಾರು ಸಾವನ್ನಪುತ್ತಿರುವವರ ಸಂಖ್ಯೆ ಭಾರತದಲ್ಲೇ ಅತ್ಯಧಿಕವಾಗಿದೆ.

ಹಾಗಾದ್ರೆ ಲಾಕ್‌ಡೌನ್‌ ಸಾಧಿಸಿದ್ದೇನು..? ಎಂಬ ಪ್ರಶ್ನೆಗೆ ಸರ್ಕಾರವೇ ಉತ್ತರಿಸಬೇಕು. ಆದರೆ ಸರ್ಕಾರದಿಂದ ಉತ್ತರ ನಿರೀಕ್ಷಿಸಬಹುದೇ..?

LEAVE A REPLY

Please enter your comment!
Please enter your name here