ಲಾಕ್‌ಡೌನ್‌ಗೂ ಮೊದಲೇ ಪಾತಾಳಕ್ಕೆ ಕುಸಿದಿದ್ದ ದೇಶದ ಆರ್ಥಿಕ ಅಭಿವೃದ್ಧಿ – ಜಿಡಿಪಿ ಶೇಕಡಾ 4.2ಕ್ಕೆ ಕುಸಿತ

ಲಾಕ್‌ಡೌನ್‌ ಘೋಷಣೆ ಆದ ಬಳಿಕ ದೇಶದ ಜಿಡಿಪಿಯ ಮೊದಲ ಅಂಕಿ ಅಂಶ ಪ್ರಕಟವಾಗಿದ್ದು, ಜನವರಿಯಿಂದ ಮಾರ್ಚ್‌ ತಿಂಗಳ ಅವಧಿಯಲ್ಲಿ ಆರ್ಥಿಕ ಬೆಳವಣಿಗೆ ದರ ಶೇಕಡಾ 3.1ಕ್ಕೆ ಕುಸಿದಿದೆ.

ಮಾರ್ಚ್‌ 22ರಂದು ಜನತಾ ಕರ್ಫ್ಯೂ ಮತ್ತು ಮಾರ್ಚ್‌ 25ರಿಂದ ಘೋಷಣೆ ಆದ ಮೊದಲ ಲಾಕ್‌ಡೌನ್‌ ಘೋಷಣೆ ಆಗಿತ್ತು. ಮಾರ್ಚ್‌ ತಿಂಗಳಲ್ಲಿ 7 ದಿನಗಳವರೆಗೆ ದೇಶದಲ್ಲಿ ಎಲ್ಲಾ ರೀತಿಯ ಆರ್ಥಿಕ ಚಟುವಟಿಕೆಗಳು ಸ್ಥಬ್ಧಗೊಂಡಿದ್ದವು.

ಇದರೊಂದಿಗೆ 2019-20ರಲ್ಲಿ ದೇಶದ ಆರ್ಥಿಕ ಬೆಳವಣಿಗೆಯ ದರ ಕೇವಲ ಶೇಕಡಾ 4.2ರಷ್ಟಾಗಿದೆ. 2018-19ರ ಅವಧಿಯಲ್ಲಿ ಜಿಡಿಪಿ ದರ ಶೇಕಡಾ 6.1ರಷ್ಟಿತ್ತು. ಅಂದರೆ 2018ರ ಆರ್ಥಿಕ ವರ್ಷದ ಬೆಳವಣಿಗೆಗೆ ಹೋಲಿಸಿದರೆ ಶೇಕಡಾ 1.9ರಷ್ಟು ನೆಲಕಚ್ಚಿದೆ.

11 ವರ್ಷಗಳಲ್ಲೇ ದೇಶದ ಆರ್ಥಿಕ ಬೆಳವಣಿಗೆ ಪಾತಾಳಕ್ಕೆ ಕುಸಿದಿದ್ದು, 2019-20ರಲ್ಲಿ ವಾರ್ಷಿಕ ಜಿಡಿಪಿ ದರ ಶೇಕಡಾ 4.2ಕ್ಕೆ ಕುಸಿದಿದೆ.

ಗಮನಿಸಬೇಕಾದ ಅಂಶವೆಂದರೆ 2019ರಿಂದ ಈ ವರ್ಷದ ಮಾರ್ಚ್‌ 31ರವರೆಗೆ ಕೇವಲ 7 ದಿನಗಳ ಕಾಲವಷ್ಟೇ ಎಲ್ಲಾ ಆರ್ಥಿಕ ಚಟುವಟಿಕೆಗಳು ಸ್ಥಬ್ಧಗೊಂಡಿದ್ದವು. 2018-2019ರ ಆರ್ಥಿಕ ವರ್ಷದಲ್ಲಿ ಜನವರಿಯಿಂದ ಮಾರ್ಚ್‌ವರೆಗೆ ತ್ರೈಮಾಸಿಕ ಜಿಡಿಪಿ ದರ ಶೇಕಡಾ 5.7ರಷ್ಟಿತ್ತು. ಅಂದರೆ 2019-20ರಲ್ಲಿ 4ನೇ ತ್ರೈಮಾಸಿಕ ಅವಧಿಯಲ್ಲೂ ಜಿಡಿಪಿ ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 2.6ರಷ್ಟು ಕುಸಿತ ಇತ್ತು.

LEAVE A REPLY

Please enter your comment!
Please enter your name here