ಪೂರ್ವ ಲಡಾಖ್ ಗಲ್ವಾನ್ ಕಣಿವೆಯಲ್ಲಿ ಭಾರತದ ಸುಮಾರು 60 ಚದರ ಕಿಲೋಮೀಟರ್ ಭೂಪ್ರದೇಶವನ್ನು ಕಳೆದೊಂದು ತಿಂಗಳಿಂದ ಚೀನಾ ಸೇನಾ ಪಡೆಗಳು ಅತಿಕ್ರಮಿಸಿವೆ. ಈ ಭೂಭಾಗವನ್ನು ಹಿಂದಕ್ಕೆ ಪಡೆಯಲು ಭಾರತ ಚೀನಾದೊಂದಿಗೆ ಜೂನ್ ಆರರಂದು ಸೇನಾಧಿಕಾರಿಗಳ ಮಟ್ಟದ ಮಾತುಕತೆ ನಡೆಸಿತ್ತು. ಆದ್ರೆ ಸಂಪೂರ್ಣ ಫಲಪ್ರದ ಆಗಿರಲಿಲ್ಲ. ಹೀಗಾಗಿ ಸೋಮವಾರ ರಾತ್ರಿ ಮಾತುಕತೆಗೆ ಬನ್ನಿ ಎಂದು ಚೀನಾ ಪಡೆಗಳು ಗಾಲ್ವಾನ್ ಕಣಿವೆಯಲ್ಲಿ ಪಹರೆ ಕಾಯುತ್ತಿರುವ 16 ಬಿಹಾರ ರೆಜಿಮೆಂಟ್ಗೆ ಆಹ್ವಾನ ನೀಡಿತ್ತು.
ಈ ಆಹ್ವಾನವನ್ನು ಮನ್ನಿಸಿ ಮಾತುಕತೆ ಹೋಗಿದ್ದ 16 ಬಿಹಾರ್ ರೆಜಿಮೆಂಟ್ನ ಕರ್ನಲ್ ಸಂತೋಷ್ ಬಾಬು, ಭಾರತದ ಭೂಭಾಗ ಬಿಟ್ಟು ಹಿಂದೆ ಸರಿಯುವಂತೆ ಮನವಿ ಮಾಡಿದ್ದರು. ಆದರೆ, ಇದಕ್ಕೆ ಸ್ಪಂದಿಸದ ಚೀನಾ ಕ್ಯಾತೆ ತೆಗೆಯಿತು. ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಭಾರತ, ಚೀನಾ ಪಡೆಗಳ ನಡುವೆ ಪರಸ್ಪರ ಹೊಡೆದಾಟ ಸಂಭವಿಸಿತು.
ಮೊದಲು ಕ್ಯಾತೆ ತೆಗೆದ ಚೀನಾದ ಸೈನಿಕರು, ಭಾರತೀಯ ಸೈನಿಕರ ಮೇಲೆ ಅನಿರೀಕ್ಷಿತವಾಗಿ ದೊಣ್ಣೆ, ಕಲ್ಲು ಮತ್ತು ಹರಿತವಾದ ಆಯುಧ ಹೊಂದಿದ್ದ ಬಿದಿರು ಕೋಲುಗಳಿಂದ ದಾಳಿ ನಡೆಸಿತು. ಇದನ್ನು ನಿರೀಕ್ಷಿಸಿರದ ಭಾರತೀಯ ಸೇನೆ ಕೂಡಲೇ ಎಚ್ಚೆತ್ತು ಪ್ರತಿದಾಳಿ ನಡೆಸಿತು.
ಸತತವಾಗಿ ಮೂರು ಗಂಟೆಗಳಿಗೂ ಹೆಚ್ಚು ಕಾಲ ಭಾರತ-ಚೀನಾ ಸೈನಿಕರ ನಡುವೆ ಭೀಕರ ಸಂಘರ್ಷ ನಡೆಯಿತು. ಘರ್ಷಣೆ ನಡೆದ ವೇಳೆ ಚೀನಾ ಮತ್ತು ಭಾರತೀಯ ಸೈನಿಕರ ಸಂಖ್ಯೆಯ ಅಂತರ 3:1 ಇತ್ತು ಎಂದು ತಿಳಿದುಬಂದಿದೆ.
ರಣಭೀಕರ ಸಂಘರ್ಷದಲ್ಲಿ ತೀವ್ರ ಇರಿತದ ಗಾಯಗಳೊಂದಿಗೆ ಕರ್ನಲ್ ಸಂತೋಷ್ ಬಾಬು ಸೇರಿ ಸ್ಥಳದಲ್ಲೇ ಮೂವರು ಹುತಾತ್ಮರಾದರು. ಹುತಾತ್ಮರ ಪಾರ್ಥಿವ ಶರೀರಗಳ ಮೇಲೆ ಭಾರೀ ಪ್ರಮಾಣದ ಗಾಯಗಳ ಗುರುತುಗಳು ಕಂಡುಬಂದಿವೆ ಎನ್ನಲಾಗಿದೆ. ಅಲ್ಲದೇ, ಸಂಘರ್ಷದಲ್ಲಿ 17ಕ್ಕೂ ಹೆಚ್ಚು ಭಾರತೀಯ ಯೋಧರಿಗೆ ತೀವ್ರ ಗಾಯಗಳಾದವು. ಇವರಲ್ಲಿ ಘರ್ಷಣೆ ವೇಳೆ ಹಲವು ಭಾರತೀಯ ಯೋಧರು, ಗಾಲ್ವಾನ್ ನದಿಗೆ ಚೀನಾ ಸೈನಿಕರಿಂದ ತಳ್ಳಲ್ಪಟ್ಟಿದ್ದರು. ನಿನ್ನೆ ಅವರ ಶವಗಳು ನದಿಯಲ್ಲಿ ಗಾಯದ ಗುರುತುಗಳೊಂದಿಗೆ ಪತ್ತೆಯಾಗಿವೆ. ಹೈಪೋಥೆರ್ಮಿಯಾದಿಂದಲೂ ಹಲವು ಯೋಧರು ಹುತಾತ್ಮರಾಗಿದ್ದಾರೆ.
ಇನ್ನು ಭಾರತೀಯ ಸೇನೆಯ 50ಕ್ಕೂ ಹೆಚ್ಚು ಯೋಧರನ್ನು ಚೀನಾ ಪಡೆಗಳು ಒತ್ತೆಯಾಳುಗಳಾಗಿ ಇರಿಸಿಕೊಂಡಿತ್ತು. ನಂತರ ಭಾರತದ ಒತ್ತಡಕ್ಕೆ ತಲೆಬಾಗಿ ಎಲ್ಲರನ್ನು ರಿಲೀಸ್ ಮಾಡಿದೆ. ಅವರಲ್ಲಿ ಹಲವರು ಗಾಯಗೊಂಡಿದ್ದಾರೆ.
ಇನ್ನು ಚೀನಾದ ಪಿಎಲ್ಎ ಪಡೆಗಳ 43 ಯೋಧರನ್ನು ಭಾರತೀಯ ಸೇನೆ ಬಲಿ ಪಡೆದಿದೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಚೀನಾ ಇದುವರೆಗೂ ಎಲ್ಲಿಯೂ ಅಧಿಕೃತವಾಗಿ ಹೇಳಿಕೊಂಡಿಲ್ಲ.