ರೈಲು, ವಿಮಾನ ಪ್ರಯಾಣಿಕರಿಗೆ ಖಾಸಗಿ ಲ್ಯಾಬ್‌ಗಳಲ್ಲಿ ಮಾತ್ರ ಕೊರೋನಾ ಪತ್ತೆ ಪರೀಕ್ಷೆ – ಒಬ್ಬರಿಗೆ 650 ರೂ. ಫಿಕ್ಸ್‌..!

ಕೊರೋನಾ ಸೋಂಕಿನ ಪತ್ತೆ ಪರೀಕ್ಷೆ ಸಂಬಂಧ ಸಿಎಂ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಹೊರಡಿಸಿರುವ ಹೊಸ ಆದೇಶ ಹೊರರಾಜ್ಯಗಳಿಂದ ಬರುವ ರೈಲು ಪ್ರಯಾಣಿಕರು ಮತ್ತು ವಿಮಾನ ಪ್ರಯಾಣಿಕರಿಗೆ ಆಘಾತ ನೀಡಿದೆ.

ಹೊರರಾಜ್ಯದಿಂದ ಬರುವ ರೈಲು ಮತ್ತು ವಿಮಾನ ಪ್ರಯಾಣಿಕರಿಗೆ ಇನ್ಮುಂದೆ ಸರ್ಕಾರ ಕೊರೋನಾ ಸೋಂಕು ಪತ್ತೆ ಪರೀಕ್ಷೆ ನಡೆಸಲ್ಲ. ಬದಲಿಗೆ ಆ ಪ್ರಯಾಣಿಕರು ಖಾಸಗಿ ಲ್ಯಾಬ್‌ಗಳಲ್ಲಿ ಪರೀಕ್ಷೆ ನಡೆಸಬೇಕಾಗುತ್ತದೆ. ಪ್ರತಿಯೊಬ್ಬರು ಕೊರೋನಾ ಪತ್ತೆ ಪರೀಕ್ಷೆಗಾಗಿ ಖಾಸಗಿ ಲ್ಯಾಬ್‌ಗೆ 650 ರೂಪಾಯಿಗಳನ್ನು ನೀಡುವಂತೆ ಸರ್ಕಾರವೇ ಸೂಚಿಸಿದೆ.

ಅಂದರೆ ದಂಪತಿ ಮತ್ತು ಇಬ್ಬರು ಮಕ್ಕಳು ರೈಲಿನಲ್ಲಿ ಬಂದರೆ ಆಗ ಆ ಕುಟುಂಬ ಒಟ್ಟು 2,600 ರೂಪಾಯಿಗಳನ್ನು ಭರಿಸಬೇಕಾಗುತ್ತದೆ.

ಎಲ್ಲಾ ಅಂತಾರಾಷ್ಟ್ರೀಯ ವಿಮಾನ ಪ್ರಯಾಣಿಕರು, ದೇಶೀಯ ವಿಮಾನ ಪ್ರಯಾಣಿಕರು ಮತ್ತು ಎಲ್ಲಾ ರೈಲು ಪ್ರಯಾಣಿಕರಿಗೆ ಈ ಆದೇಶ ಅನ್ವಯ ಆಗಲಿದೆ.

ಕೋವಿಡ್‌ ಶಂಕಿತರನ್ನು ಶೀಘ್ರಗತಿಯಲ್ಲಿ ಪರೀಕ್ಷೆ ಮಾಡಲು ಖಾಸಗಿ ಲ್ಯಾಬ್‌ಗಳ ಸಾಮರ್ಥ್ಯವನ್ನು ಬಳಸಿಕೊಳ್ಳುವ ಸಂಬಂಧ ರಾಜ್ಯ ಆರೋಗ್ಯ ಇಲಾಖೆ ಈ ಆದೇಶ ಹೊರಡಿಸಿದೆ.

ಕೊರೋನಾ ಸೋಂಕಿನ ಪತ್ತೆ ಪರೀಕ್ಷೆ ವೇಳೆ ಲ್ಯಾಬ್‌ ವರದಿ ನೆಗೆಟಿವ್‌ ಇರಲಿ ಅಥವಾ ಪಾಸಿಟಿವ್‌ ಇರಲಿ ಖಾಸಗಿ ಲ್ಯಾಬ್‌ಗೆ 650 ರೂಪಾಯಿ ನೀಡಬೇಕಾಗುತ್ತದೆ ಎಂದು ಆದೇಶದಲ್ಲಿ ಹೇಳಲಾಗಿದೆ. ಪೂಲಿಂಗ್‌ ವಿಧಾನದಲ್ಲಿ ಅಂದರೆ ಏಕಕಾಲಕ್ಕೆ ಐವರ ಮಾದರಿಗಳನ್ನು ಸಂಗ್ರಹಿಸಲು ಖಾಸಗಿ ಲ್ಯಾಬ್‌ಗಳಿಗೆ ಸರ್ಕಾರ ಅನುಮತಿಸಿದೆ.

LEAVE A REPLY

Please enter your comment!
Please enter your name here