ರೈಲು ಯೋಜನೆಗೆ ಕೊಟ್ಟಿದ್ದು ಬರೀ 1 ಕೋಟಿ ರೂಪಾಯಿ – ಬಿಜೆಪಿ ನಾಯಕರು ಬೊಬ್ಬೆ ಹೊಡೆದಿದ್ದು ಊರೆಲ್ಲ..!

ಮಂತ್ರಕ್ಕಿಂತ ಉಗುಳೇ ಜಾಸ್ತಿ ಎನ್ನುವ ಗಾದೆ ಇದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿದ ಬಜೆಟ್‌ ಕಥೆಯೂ ಅಷ್ಟೇ. ಕೊಟ್ಟಿದ್ದು ಬಿಡಿಗಾಸು 1 ಕೋಟಿ ರೂಪಾಯಿ ಆದರೂ ಬೊಬ್ಬೆ ಹೊಡೆದಿದು ಊರಿಡೀ.

ಮಹಾನಗರಿ ಬೆಂಗಳೂರಿಗೆ ಉಪನಗರ ರೈಲು ಆಗಬೇಕೆಂದು 37 ವರ್ಷಗಳಿಂದ ಹೋರಾಟ ನಡೆಯುತ್ತಿದ್ದು ಸದ್ಯಕ್ಕೆ 146 ಕಿಲೋ ಮೀಟರ್‌ ದೂರದ ಯೋಜನೆಯ ವೆಚ್ಚವನ್ನು 18,600 ಕೋಟಿ ರೂಪಾಯಿ. ಈ ಯೋಜನೆಯ ಬಗ್ಗೆ ತಮ್ಮ ಬಜೆಟ್‌ನಲ್ಲಿ ಪ್ರಸ್ತಾಪ ಮಾಡಿದ್ದ ನಿರ್ಮಲಾ ಸೀತಾರಾಮನ್‌ ಶೇಕಡಾ 20ರಷ್ಟು ಕೇಂದ್ರ ಸರ್ಕಾರದ ಪಾಲಿನ ಘೋಷಣೆ ಮಾಡಿದ್ದರು. ಅಲ್ಲದೇ ಶೇಕಡಾ 60ರಷ್ಟು ಬಾಹ್ಯ ಹಣಕಾಸು ನೆರವಿನ ಬಗ್ಗೆ ಹೇಳಿದ್ದರು.

ಈ ಘೋಷಣೆಯ ಬಳಿಕ ಬೆಂಗಳೂರು ಉತ್ತರ ಸಂಸದರೂ ಆಗಿರುವ ಕೇಂದ್ರ ಸಚಿವ ಸದಾನಂದ ಗೌಡ, ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿಸೂರ್ಯ, ಬೆಂಗಳೂರು ಕೇಂದ್ರ ಸಂಸದ ಪಿ ಸಿ ಮೋಹನ್‌ ಮತ್ತು ಬಿಜೆಪಿ ಕರ್ನಾಟಕ ಘಟಕ ಯೋಜನೆಗೆ 18,600 ಕೋಟಿ ರೂಪಾಯಿಯನ್ನು ಕೊಡಲಾಗಿದೆ ಎಂದು ಟ್ವೀಟಿಸಿದ್ದೇ ಟ್ವೀಟಿಸಿದ್ದು.

ಆದರೆ ಅಸಲಿ ವಿಷಯವೇ ಬೇರೆ. ಯೋಜನೆ ಕೊಟ್ಟಿರುವುದು ಮಾನ್ಯ ಹಣಕಾಸು ಸಚಿವರು ಮೀಸಲಿಟ್ಟಿರುವುದು ಕೇವಲ 1 ಕೋಟಿ ಅಷ್ಟೇ. ರೈಲ್ವೆ ಇಲಾಖೆಯ ಗುಲಾಬಿ ಪುಸಕ್ತದಲ್ಲಿ (ಅನುದಾನ ಹಂಚಿಕೆ ಬಗ್ಗೆ ಹೇಳುವ ಪುಸ್ತಕ) ಉಪನಗರ ರೈಲು ಯೋಜನೆಗೆ ಕೇವಲ 1 ಕೋಟಿ ರೂಪಾಯಿಯನ್ನಷ್ಟೇ ತೋರಿಸಲಾಗಿದೆ.

2018-19ರಲ್ಲಿ ಬಜೆಟ್‌ ಮಂಡಿಸಿದ್ದ ಅರುಣ್‌ ಜೇಟ್ಲಿ ಯೋಜನೆಯ ವೆಚ್ಚವನ್ನು 17 ಸಾವಿರ ಕೋಟಿ ರೂಪಾಯಿ ಎಂದು ಅಂದಾಜಿಸಿದ್ದರು. ಆದ್ರೆ ಆಗಲೂ ಕೊಟ್ಟಿದ್ದು ಬಿಡಿಗಾಸು ಅಂದರೆ 1 ಕೋಟಿ ರೂಪಾಯಿ. 2019-20ರ ಬಜೆಟ್‌ನಲ್ಲಿ ಮೀಸಲಾಗಿದ್ದು 10 ಕೋಟಿ. ಅಂದರೆ ಮೂರು ಬಜೆಟ್‌ಗಳಲ್ಲಿ ಉಪನಗರ ರೈಲು ಯೋಜನೆ ಬಗ್ಗೆ ಪದೇ ಪದೇ ಪ್ರಸ್ತಾಪ ಆದರೂ ಇಲ್ಲಿಯವರೆಗೆ ದಕ್ಕಿದ್ದು ಕೇವಲ 12 ಕೋಟಿ ರೂಪಾಯಿ.

ಉಪನಗರ ರೈಲು ಯೋಜನೆಗೆ ಇನ್ನೂ ಕೇಂದ್ರ ಸರ್ಕಾರ ಅನುಮೋದನೆಯನ್ನೇ ನೀಡಿಲ್ಲ. ರೈಲು ಮಂಡಳಿಯಷ್ಟೇ ಪ್ರಸ್ತಾಪ ಅಂಗೀಕರಿಸಿದೆ. ಬಜೆಟ್‌ ಬಳಿಕ ಭಾನುವಾರ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಮೂರು ವರ್ಷಗಳಲ್ಲಿ ಯೋಜನೆ ಮುಗಿಯಲಿದೆ ಎಂದಿದ್ದರು.

LEAVE A REPLY

Please enter your comment!
Please enter your name here