ರಿವಾಲ್ವರ್ ಇದೆ ಅಂತ ದಿನಕ್ಕೊಬ್ಬನನ್ನು ಕೊಲ್ಲುತ್ತೀರಾ..? – ಸಿದ್ದರಾಮಯ್ಯ ಪ್ರಶ್ನೆ

ಹಿಂಸಾಚಾರ ಘಟಿಸಿದ್ದ ಮಂಗಳೂರಿಗೆ ಭೇಟಿ ನೀಡಲು ಮುಂದಾಗಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಇವತ್ತು ಮಂಗಳೂರು ಪೊಲೀಸ್‌ ಆಯುಕ್ತರು ಅನುಮತಿ ನಿರಾಕರಿಸಿದ್ದಾರೆ. ವಾಹನ,ರೈಲು,ವಿಮಾನ ಯಾವುದರ ಮೂಲಕವೂ ನಾನು ಮಂಗಳೂರು ಪ್ರವೇಶ ಮಾಡಬಾರದೆಂದು ಪೊಲೀಸ್‌ ಆಯುಕ್ತ ಹರ್ಷ ಸಿದ್ದರಾಮಯ್ಯಗೆ ನೋಟಿಸ್‌ ನೀಡಿದ್ದರು.

ನಿನ್ನೆಯಷ್ಟೇ ಮಧ್ಯಾಹ್ನ ಚಾರ್ಟೆಡ್‌ ವಿಮಾನ ಮೂಲಕ ಸಿದ್ದರಾಮಯ್ಯ ಮಂಗಳೂರಿಗೆ ಭೇಟಿ ನೀಡಲು ನಿರ್ಧರಿಸಿದ್ದರು. ಆದರೆ ವಿಮಾನದ ಲ್ಯಾಂಡಿಂಗ್‌ಗೆ ಅನುಮತಿ ನಿರಾಕರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಭೇಟಿಯನ್ನು ಇವತ್ತಿಗೆ ಮುಂದೂಡಲಾಗಿತ್ತು.

ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಸರ್ಕಾರದ ವಿರುದ್ಧ ಗುಡುಗಿದ್ದ ಸಿದ್ದರಾಮಯ್ಯ ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಹೇರಿ ನಮ್ಮನ್ನೆಲ್ಲ ಜೈಲಿಗೆ ಹಾಕಿ ನೀವೇ ಮನಸೋಇಚ್ಛೆ ರಾಜ್ಯಭಾರ ಮಾಡಿ ಎಂದು ಕಿಡಿಕಾರಿದ್ದಾರೆ.

ಮಂಗಳೂರಿಗೆ ಭೇಟಿ ನೀಡಲು ಪ್ರವೇಶ ನಿರಾಕರಿಸಿದ ಬಳಿಕ ಸಿದ್ದರಾಮಯ್ಯ ತಮ್ಮ ನಿವಾಸದಲ್ಲಿ ಮಾಧ್ಯಮಗೋಷ್ಠಿ ನಡೆಸಿದರು.

ಮುಖ್ಯಮಂತ್ರಿಗಳು, ಗೃಹ ಸಚಿವರು ಮಂಗಳೂರಿಗೆ ಭೇಟಿ ನೀಡಬಹುದು ಆದರೆ ಪ್ರತಿಪಕ್ಷ ನಾಯಕನಾದ ನನಗೆ ಭೇಟಿ ನೀಡಲು ಅವಕಾಶವಿಲ್ಲ. ಇದು ಪ್ರಜಾಪ್ರಭುತ್ವದ ಕಗ್ಗೊಲೆ. ಸರ್ಕಾರದ ವೈಫಲ್ಯ ಮತ್ತು ಪೊಲೀಸರ ಅಮಾನವೀಯತೆ ಜನರಿಗೆ ಗೊತ್ತಾಗುತ್ತದೆ ಎಂಬ ಕಾರಣಕ್ಕೆ ನನಗೆ ಭೇಟಿ ನೀಡಲು ಅವಕಾಶ ನಿರಾಕರಿಸುತ್ತಿದ್ದಾರೆ.

ನೊಂದವರ ಧ್ವನಿಯಾಗಿ, ಸರ್ಕಾರದ ಅನ್ಯಾಯವನ್ನು ಎತ್ತಿ ತೋರಿಸಲು ಅವಕಾಶವಿಲ್ಲ ಎಂದಾದರೆ ವಿರೋಧ ಪಕ್ಷ ಏಕೆ ಬೇಕು? ಕಾನೂನು ಸುವ್ಯವಸ್ಥೆ ಬಗ್ಗೆ ಎರಡೆರಡು ಬಾರಿ ಗೋಲಿಬಾರ್ ಮಾಡಿಸಿ ಅಮಾಯಕರನ್ನು ಕೊಂದ ಬಿಜೆಪಿಯವರಿಂದ ಪಾಠ ಹೇಳಿಸಿಕೊಳ್ಳಬೇಕಾದ ಅಗತ್ಯ ನನಗಿಲ್ಲ. ಕೇಂದ್ರ ಸಚಿವರೊಬ್ಬರು ‘ರಿವಾಲ್ವರ್‌ಗಳಿರುವುದು ಪೂಜೆ ಮಾಡೋಕೆ ಅಲ್ಲ’ ಎಂದು ಹೇಳುತ್ತಾರೆ. ಇಂಥ ಮಾತುಗಳು ಗಲಭೆಗೆ ಪ್ರಚೋದನೆ ನೀಡದಂತೆ ಆಗುವುದಿಲ್ಲವೇ? ರಿವಾಲ್ವರ್ ಇದೆ ಅಂತ ದಿನಕ್ಕೊಬ್ಬನನ್ನು ಕೊಲ್ಲುತ್ತೀರ? ಕೇಂದ್ರದ ಬಿಜೆಪಿ ನಾಯಕರೇ ನಾಚಿಕೆಯಾಗಲ್ವ ನಿಮಗೆ? ಇಂಥವರನ್ನು ಇನ್ನೂ ಮಂತ್ರಿಯಾಗಿ ಉಳಿಸಿಕೊಂಡಿದ್ದೀರಲ್ಲ?

ಸಮಯ ಸಂದರ್ಭ ನೋಡಿ ಪೊಲೀಸರೆ ಲಾಠಿ ಚಾರ್ಜ್, ಗೋಲಿಬಾರ್ ಮಾಡಬಹುದು ಅಂತ ಗೃಹಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಎಲ್ಲವನ್ನೂ ಪೊಲೀಸರೇ ತೀರ್ಮಾನ ಮಾಡುವುದಾದರೆ ಗೃಹ ಸಚಿವರಾಗಿ ನೀಮಗೇನು ಕೆಲಸ? ಇನ್ನೂ ಯಾಕೆ ಆ ಹುದ್ದೆಯಲ್ಲಿದ್ದೀರ, ಎಲ್ಲವನ್ನೂ ಅವರಿಗೇ ನಿರ್ಧರಿಸಲು ಬಿಟ್ಟು ರಾಜೀನಾಮೆ ನೀಡಿ ಮನೆಗೆ ಹೋಗಿ.

ಹೈಕೋರ್ಟ್‌ನ ಹಾಲಿ ನ್ಯಾಯಾಧೀಶರಿಂದ ಗೋಲಿಬಾರ್ ಪ್ರಕರಣದ ನ್ಯಾಯಾಂಗ ತನಿಖೆಯಾಗಿ, ಅಪರಾಧಿಗಳನ್ನು ಪತ್ತೆಹಚ್ಚಿ ಸೂಕ್ತ ಶಿಕ್ಷೆ ನೀಡಬೇಕು. ಪ್ರತಿಯೊಬ್ಬರ ಜೀವವೂ ಅಮೂಲ್ಯ, ಗೋಲಿಬಾರ್‌ನಲ್ಲಿ ಪ್ರಾಣ ಕಳೆದುಕೊಂಡ ಅಮಾಯಕರ ಬಲಿದಾನಕ್ಕೆ ನ್ಯಾಯ ಸಿಗುವವರೆಗೆ ಹೋರಾಟ ಕೈಬಿಡುವ ಪ್ರಶ್ನೆಯೇ ಇಲ್ಲ.

LEAVE A REPLY

Please enter your comment!
Please enter your name here