ನಗರದ ರಿಮ್ಸ್ ವೈದ್ಯಕೀಯ ವಿಜ್ಞಾನಗಳ ಬೋಧಕ ಆಸ್ಪತ್ರೆಯಲ್ಲಿ ಚೆನ್ನಾಗಿದ್ದ ನವಜಾತ ಶಿಶು ಏಕಾಏಕಿ ಸಾವನ್ನಪ್ಪಿದ ಹಿನ್ನೆಲೆ ಶಿಶುವಿನ ಪೋಷಕರು ಹಾಗೂ ಸಂಬಂಧಿಕರು ಆಸ್ಪತ್ರೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ರೋಗಿಗಳು ಸಾವನ್ನಪ್ಪುತ್ತಿದ್ದಾರೆ. ಬೆಳಿಗ್ಗೆ ಎಲ್ಲಾ ಚೆನ್ನಾಗಿದ್ದ ಮಗು ರಾತ್ರಿ ವೇಳೆಗೆ ಏಕಾಏಕಿ ಸಾವನ್ನಪ್ಪಿರುವುದಕ್ಕೆ ವೈದ್ಯರ ಹಾಗೂ ನರ್ಸ್ಗಳ ನಿರ್ಲಕ್ಷ್ಯವೇ ಕಾರಣ ಅಂತ ಆರೋಪಿಸಲಾಗಿದೆ. ನಾಲ್ಕು ದಿನಗಳ ಕೆಳಗೆ ತಾಯಿ ರೇಣುಕಾಗೆ ನಾರ್ಮಲ್ ಡೆಲಿವರಿಯಾಗಿತ್ತು. ನಾಲ್ಕು ದಿನದಿಂದ ಆರೋಗ್ಯವಾಗಿದ್ದ ಮಗು ಏಕಾಏಕಿ ಸಾವನ್ನಪ್ಪಿದೆ. ಮಗುವಿನ ಸಮಸ್ಯೆ ಬಗ್ಗೆ ಮೊದಲೇ ಹೇಳಿದ್ದರೆ ಬೇರೆ ಆಸ್ಪತ್ರೆಗೆ ಹೋಗುತ್ತಿದ್ದೇವು ಎಂದು ಪೋಷಕರು ಕಿಡಿಕಾರಿದ್ದಾರೆ.
ಮಗುವಿನ ಸಾವಿನ ಬಗ್ಗೆ ವೈದ್ಯರು ನಿಖರ ಕಾರಣ ಹೇಳಿಲ್ಲ. ಹೀಗಾಗಿ ಆಸ್ಪತ್ರೆಯಲ್ಲಿ ಶಿಶು ಪೋಷಕರ ಕಡೆಯವರಿಂದ ಆಕ್ರೋಶ ವ್ಯಕ್ತವಾಗಿದೆ. ತಾಯಿಗೆ ಮದುವೆಯಾಗಿ ಒಂಭತ್ತು ವರ್ಷಗಳ ಬಳಿಕ ಮಗುವಾಗಿದ್ದು, ತಾಯಿ ರಕ್ತದೊತ್ತಡ ಸಮಸ್ಯೆ ಎದುರಿಸುತ್ತಿದ್ದರು. ಹೀಗಾಗಿ ಹೆರಿಗೆ ಬಳಿಕ ಆಸ್ಪತ್ರೆಯಲ್ಲಿ ಉಳಿದಿದ್ದರು. ತಾಯಿ ಮಗುವಿಗೆ ಹಾಲುಣಿಸುವಾಗ ಸಮಸ್ಯೆಯಾಗಿರಬಹುದು. ಇಲ್ಲವಾದಲ್ಲಿ ಸಡನ್ ಇನ್ಫಾಂಟ್ ಡೆತ್ ಸಿಂಡ್ರೋಮ್ಗೆ ಮಗು ಬಲಿಯಾಗಿರಬಹುದು ಎಂದು ವೈದ್ಯರು ತಿಳಿಸಿದ್ದಾರೆ.