ರಾಮನ ಬಂಟ ಹನುಮಂತ.. ಕೋಟ್ಯನುಕೋಟಿ ಭಕ್ತರು ಪೂಜಿಸುವ ಅಂಜನೀಸುತ ಹುಟ್ಟಿದ್ದು ಎಲ್ಲಿ..? ಸಾಮಾನ್ಯವಾಗಿ ಯಾರನ್ನು ಕೇಳಿದರು ಸಿಗುವುದು ಒಂದೇ ಉತ್ತರ.. ಅದು ಕಿಷ್ಕಿಂದೆಯಲ್ಲಿ ಎಂಬುದು..
ಪುರಾಣೈತಿಹಾಸಗಳ ಪ್ರಕಾರ ಕಿಷ್ಕಿಂದೆ ಇರುವುದು ಈಗಿನ ಕೊಪ್ಪಳದ ಗಂಗಾವತಿಯಲ್ಲಿ.. ಇಲ್ಲಿನ ಅಂಜನಾದ್ರಿ ಬೆಟ್ಟವೇ ಹನುಮಂತನ ಜನಸ್ಥಾನ ಎಂಬುದು ಈವರೆಗಿನ ನಿರ್ವಿವಾದದ ಸಂಗತಿ.
ಇದನ್ನೇ ರಾಮಾಯಣ, ಮಾಹಾಭಾರತ, ಗೂಗಲ್ ಕೂಡ ಹೇಳುತ್ತೆ. ವೀಕಿಪಿಡಿಯಾ ಸಹ ಹೇಳುತ್ತೆ. ಆದರೆ, ಈಗ ಹನುಮಂತನ ಜನ್ಮಸ್ಥಳ ಗಂಗಾವತಿಯ ಅಂಜನಾದ್ರಿ ಬೆಟ್ಟವಲ್ಲ.. ಅದು ಬೇರೆಯೇ ಇದೆ ಎಂಬ ಮಾತು ಕೇಳಿಬರುತ್ತಿದೆ. ಅದು ಯಾವ ಸ್ಥಳ ಎಂಬುದನ್ನು ಕೇಳಿದರೇ ನಿಮಗೆ ಶಾಕ್ ಆಗುತ್ತೆ. ಯಾವಾಗಪ್ಪ ಅಲ್ಲಿ ಹನುಮಂತ ಹುಟ್ಟಿದ.. ಇಷ್ಟು ದಿನ ಏಕೆ ಯಾರು ಹೇಳಲಿಲ್ಲ .. ಇದರ ಹಿಂದೇ ಬೇರೇನಾದರೂ ಇದೆಯಾ ಎಂಬ ಪ್ರಶ್ನೆಗಳು ಹನುಮಂತನ ಭಕ್ತವೃಂದದಿಂದ ಕೇಳಿ ಬರದೇ ಇರದು.
ಸದ್ಯ ಕಲಿಯುಗದ ಪ್ರತ್ಯಕ್ಷ ದೈವ ಎನಿಸಿರುವ ಸಾಕ್ಷತ್ ಶ್ರೀ ವೆಂಕಟೇಶ್ವರ ಸ್ವಾಮಿ ನೆಲೆಸಿರುವ ತಿರುಪತಿ ತಿರುಮಲ ಕ್ಷೇತ್ರ ಹನುಮಂತನ ಜನ್ಮಸ್ಥಳ ಎಂದು ಸ್ವತಃ ಟಿಟಿಡಿ ಹೇಳುತ್ತಿದೆ.
ನಾವು ಸುಮ್ಮನೇ ಈ ಮಾತನ್ನು ಹೇಳುತ್ತಿಲ್ಲ. ಯುಗಾದಿ ಹಬ್ಬದ ದಿನ ಇದನ್ನು ಪುರಾಣಗಳು, ಶಾಸನಗಳು, ಶಾಸ್ತ್ರೀಯ ಆಧಾರಗಳ ಸಮೇತ ಸಾಬೀತು ಮಾಡುತ್ತೇವೆ ಎಂದು ಟಿಟಿಡಿ ಹೇಳುತ್ತಿದೆ
ಇದಕ್ಕೆ ಪೂರ್ವಭಾವಿಯಾಗಿ ಗುರುವಾರ ತಿರುಪತಿಯಲ್ಲಿನ ಟಿಟಿಡಿ ಆಡಳಿತ ಭವನದಲ್ಲಿ ಈಓ ಡಾ.ಕೆ ಎಸ್ ಜವಾಹರ್ ರೆಡ್ಡಿ, 2020ರ ಡಿಸೆಂಬರ್ ನಲ್ಲಿ ರಚಿಸಿದ ಸಮಿತಿ ಸದಸ್ಯರ ಜೊತೆ ಸುದೀರ್ಘ ಚರ್ಚೆ ನಡೆಸಿದ್ದಾರೆ. ಸಭೆ ಬಳಿಕ ಮಾತನಾಡಿದ ಅವರು,ಸಮಿತಿಯ ಸದಸ್ಯರು, ಜ್ಯೋತಿಷ್ಯ ಶಾಸ್ತ್ರ, ಪುರಾಣಗಳು, ಶಾಸನಗಳು, ಶಾಸ್ತ್ರೀಯ ಆಧಾರಗಳ ಸಮೇತ ಯುಗಾದಿಯ ಪರ್ವ ದಿನದಂದು ಹನುಮಂತನ ಜನ್ಮಸ್ಥಳ ತಿರುಪತಿ ಏಳು ಬೆಟ್ಟಗಳಲ್ಲಿ ಒಂದಾದ ಅಂಜನಾದ್ರಿ ಎಂಬುದನ್ನು ಸಾಬೀತುಪಡಿಸುತ್ತೇವೆ. ಶೀಘ್ರವೇ ಇದಕ್ಕೆ ಸಂಬಂಧಿಸಿದ ಪುಸ್ತಕವನ್ನು ಕೂಡ ಹೊರತರುತ್ತೇವೆ ಎಂದು ಜವಾಹರ್ ರೆಡ್ಡಿ ತಿಳಿಸಿದ್ದಾರೆ.
2020ರ ಡಿಸೆಂಬರ್ ನಲ್ಲಿ ಟಿಟಿಡಿ ರಚಿಸಿದ್ದ ಸಮಿತಿಯಲ್ಲಿ ಶ್ರೀ ವೆಂಕಟೇಶ್ವರ ವೇದ ವಿಶ್ವವಿದ್ಯಾಲಯದ ಉಪಕುಲಪತಿ ಆಚಾರ್ಯ ಸನ್ನಿದಾನಂ ಸುದರ್ಶನ ಶರ್ಮಾ, ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯ ದ ಉಪ ಕುಲಪತಿ ಆಚಾರ್ಯ ಮುರಳೀಧರ ಶರ್ಮಾ,ಆಚಾರ್ಯ ರಾಣಿ ಸದಾಶಿವಮೂರ್ತಿ, ಆಚಾರ್ಯ ಜಾನಮದ್ದಿ ರಾಮಕೃಷ್ಣ, ಆಚಾರ್ಯ ಶಂಕರನಾರಾಯಣ, ಇಸ್ರೋ ವಿಜ್ಞಾನಿ ರೆಮಳ್ಳ ಮೂರ್ತಿ, ರಾಜ್ಯ ಪುರಾತತ್ವ ಇಲಾಖೆಯ ಉಪ ನಿರ್ದೇಶಕ ವಿಜಯ್ ಕುಮಾರ್ ಸದಸ್ಯರಾಗಿದ್ದಾರೆ.
ಟಿಟಿಡಿಯ ಎಸ್ ವಿ ಉನ್ನತ ವೇದಾಧ್ಯಯನ ಸಂಸ್ಥೆಯ ಪ್ರಾಜೆಕ್ಟ್ ಅಧಿಕಾರಿ ಡಾ. ಆಕೆಳ್ಳ ವಿಭೀಷಣ ಶರ್ಮಾ ಸಂಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಮಿತಿಯ ಸದಸ್ಯರು ಹಲವು ಬಾರಿ ಸಭೆ ಸೇರಿ
ಹನುಮಂತನೂ ತಿರುಪತಿಯ ಅಂಜನಾದ್ರಿ ಪರ್ವತದಲ್ಲಿ ಜನಿಸಿದ್ದ ಎಂಬುದಕ್ಕೆ ಬಲವಾದ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ ಎನ್ನಲಾಗಿದೆ.
ಶಿವ, ಬ್ರಹ್ಮ, ಬ್ರಹ್ಮಾಂಡ, ವರಹಾ,ಮತ್ಸ್ಯ ಪುರಾಣಗಳಲ್ಲಿ, ವೆಂಕಟಾಚಲ ಮಹಾತ್ಯಂ, ವರಹಾಮಿಹಿರುವಿನ ಬೃಹತ್ ಸಂಹಿತೆಯಲ್ಲಿರುವ ಪ್ರಕಾರ,ವೆಂಕಟೇಶ್ವರ ಸ್ವಾಮಿ ನೆಲೆಸಿರುವ ಸಪ್ತಗಿರಿಗಳ ಪೈಕಿ ನಾಲ್ಕನೆಯದಾದ ಅಂಜನಾದ್ರಿ ಪರ್ವತವೇ ಆಂಜನೇಯನ ಜನ್ಮಸ್ಥಳ ಎಂಬ ನಿರ್ಧಾರಕ್ಕೆ ಯುಗದ ಪ್ರಕಾರ, ದಿನಾಂಕದ ಪ್ರಕಾರ ಬಂದಿದ್ದಾರೆ ಎನ್ನಲಾಗಿದೆ.
ಈ ಬೆಳವಣಿಗೆ ಮುಂದಿನ ದಿನಗಳಲ್ಲಿ ಭಾರೀ ವಿವಾದಕ್ಕೆ ಎಡೆ ಮಾಡಿಕೊಡುವುದಂತೂ ಸತ್ಯ. ಯುಗಾದಿ ಪರ್ವ ದಿನ ಟಿಟಿಡಿ ಒದಗಿಸುವ ಸಾಕ್ಷ್ಯದ ಮೇಲೆ ಎಲ್ಲವೂ ಅವಲಂಬಿಸಿದೆ.
ಹನುಮಂತನನ್ನು ಕರ್ನಾಟಕದಿಂದ ಹೈಜಾಕ್ ಮಾಡುವ ಹುನ್ನಾರನಾ ಇದು.. ಗೊತ್ತಿಲ್ಲ.
ಅಂದ ಹಾಗೇ ತಿರುಪತಿ ತಿಮ್ಮಪ್ಪ ನೆಲೆಸಿರುವ ಏಳುಬೆಟ್ಟಗಳ ಮೇಲೆ. ಶೇಷಾದ್ರಿ, ನೀಲಾದ್ರಿ, ಗರುಡಾದ್ರಿ , ಅಂಜನಾದ್ರಿ, ವೃಷುಭಾದ್ರಿ, ನಾರಾಯಣಾದ್ರಿ ಮತ್ತು ವೆಂಕಟಾದ್ರಿಗಳಿವೆ ಇವುಗಳ ಪೈಕಿ ಮೇಲೆ ಇರುವುದು ವೆಂಕಟಾದ್ರಿ. ಶ್ರೀನಿವಾಸ ಸ್ವಾಮಿ ಇಲ್ಲಿಯೇ ನೆಲೆಸಿದ್ದಾನೆ.