ರಾಜ್ಯದಲ್ಲಿ ಹೊಸ ಅಧ್ಯಾಯ ಶುರು.. ಮುಕ್ಕಾಲು ಕರ್ನಾಟಕ ಲಾಕ್‌ಡೌನ್‌ನಿಂದ ಮುಕ್ತ..

ಲಾಕ್‌ಡೌನ್ 2 ಮುಕ್ತಾಯವಾಗಿದೆ. ಲಾಕ್‌ಡೌನ್ 3 ಶುರುವಾಗಿದೆ. ಆದರೆ, ಮುಕ್ಕಾಲು ಭಾಗ ಕರ್ನಾಟಕ ಹೆಚ್ಚುಕಡಿಮೆ ಲಾಕ್‌ಡೌನ್‌ನಿಂದ ಮುಕ್ತವಾಗಿದೆ. 40 ದಿನಗಳ ಅಜ್ಞಾತವಾಸ ಮುಗಿದು ಇಂದಿನಿಂದ ಹೊಸ ಅಧ್ಯಾಯ ಶುರುವಾಗಿದೆ. ಇಷ್ಟು ದಿನಗಳ ಕಾಲ ಮನೆಯಲ್ಲಿದ್ದುಕೊಂಡು ಕೋವಿಡ್-19 ವಿರುದ್ಧ ಹೋರಾಟ ನಡೆಸಲಾಗಿತ್ತು. ಆದರೆ, ಇಂದಿನಿಂದ ಕೋವಿಡ್ ಜೊತೆ ಜೊತೆಗೆ ಬದುಕು ಕಟ್ಟಿಕೊಳ್ಳಲು ಕದನ ನಡೆಸಬೇಕಿದೆ.

ರಾಜ್ಯದ 30 ಜಿಲ್ಲೆಗಳಲ್ಲಿ ಬೆಂಗಳೂರು, ಬೆಂಗಳೂರು ಗ್ರಾಮಾಂತರ ಮತ್ತು ಮೈಸೂರಷ್ಟೇ ರೆಡ್‌ಝೋನ್‌ನಲ್ಲಿದೆ. ಕರ್ನಾಟಕದ ಹದಿನಾಲ್ಕು ಜಿಲ್ಲೆಗಳು ಆರೆಂಜ್‌ಝೋನ್‌ನಲ್ಲೂ 13 ಜಿಲ್ಲೆಗಳು ಗ್ರೀನ್‌ಝೋನ್‌ನಲ್ಲೂ ಇವೆ.

ಇಂದಿನಿಂದ ರೆಡ್‌ಝೋನ್, ಆರೆಂಜ್‌ಝೋನ್ ಮತ್ತು ಗ್ರೀನ್‌ಝೋನ್ ಜಿಲ್ಲೆಗಳಲ್ಲಿ ಕಂಟೈನ್‌ಮೆoಟ್ ಝೋನ್ ಹೊರತುಪಡಿಸಿ ಉಳಿದ ಕಡೆ ಎಲ್ಲಾ ರೀತಿಯ ಆರ್ಥಿಕ ಚಟುವಟಿಕೆಗಳು ಶುರುವಾಗಿವೆ. ಈ ಮೂಲಕ 40 ದಿನಗಳ ಬಿಗಿ ಲಾಕ್‌ಡೌನ್ ಬಳಿಕ ಕರ್ನಾಟಕ ಬಹುತೇಕ ಸಹಜ ಸ್ಥಿತಿಗೆ ಬಂದಿದೆ. ಎಲ್ಲಾ ಕಡೆ ಜನಸಂದಣಿ ಕಂಡುಬರುತ್ತಿದೆ. ಅಂಗಡಿ ಮುಂಗಟ್ಟುಗಳು ಓಪನ್ ಆಗಿವೆ. ಖಾಸಗಿ ವಾಹನಗಳು ರಸ್ತೆಗೆ ಇಳಿದಿವೆ.

ಸುರಪಾನಕ್ಕಾಗಿ ಮದ್ಯಪ್ರಿಯರ ಸರತಿ ಸಾಲು

ಕಂಟೈನ್‌ಮೆಂಟ್ ಝೋನ್ ಹೊರತುಪಡಿಸಿ ಉಳಿದ ಕಡೆಯೆಲ್ಲಾ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಮದ್ಯ ಪ್ರಿಯರು ನಸುಕಿನ ಜಾವದಿಂದಲೇ ಸರತಿ ಸಾಲಿನಲ್ಲಿ ಕಾದು ನಿಂತು, ಬೆಳಗ್ಗೆ 9ಕ್ಕೆ ವೈನ್‌ಶಾಪ್ ಓಪನ್ ಮಾಡಿದ ಕೂಡಲೇ ಮದ್ಯ ಖರೀದಿಸಿದ್ದಾರೆ. ಬೆಳಗ್ಗೆ 9 ಗಂಟೆಯಿಂದ ಸಂಜೆ 7 ಗಂಟೆವರೆಗೆ ಮದ್ಯ ಮಾರಾಟ ಇರಲಿದೆ. ಆದರೆ, ಬಹುತೇಕ ಕಡೆ ಮೊದಲ ದಿನ ಹಳೆಯ ಸ್ಟಾಕ್ ಬಿಕರಿ ಮಾಡಲಾಗುತ್ತಿದ್ದು, ಮಧ್ಯಾಹ್ನಕ್ಕೆಲ್ಲಾ ಸ್ಟಾಕ್ ಖಾಲಿ ಆಗಲಿದೆ.

 

ಆದರೆ ಕೆಲವು ಜಿಲ್ಲೆಗಳು ಮದ್ಯ ಮಾರಾಟಕ್ಕೆ ತಮ್ಮದೇ ಸಮಯವನ್ನು ನಿಗದಿಪಡಿಸಿವೆ. ಉಡುಪಿ ಜಿಲ್ಲೆಯಲ್ಲಿ ಬೆಳಗ್ಗೆ 9 ಗಂಟೆಯಿoದ ಮಧ್ಯಾಹ್ನ 1 ಗಂಟೆವರೆಗೆ ಮಾತ್ರ ಅವಕಾಶ ನೀಡಲಾಗಿದೆ. ಹಾಸನ ಜಿಲ್ಲೆಯಲ್ಲಿ ವಾರದ ಮೂರು ದಿನ ಅಂದರೆ ಮಂಗಳವಾರ, ಗುರುವಾರ ಮತ್ತು ಶನಿವಾರ ಮಾತ್ರ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಮೊದಲ ದಿನವಾದ ಇಂದು ಹಾಸನದಲ್ಲಿ ಮದ್ಯ ಮಳಿಗೆಗಳು ಓಪನ್ ಇರಲಿಲ್ಲ.

ಕೈಗಾರಿಕೆಗಳು ಓಪನ್; ಕಾರ್ಮಿಕರೇ ಇಲ್ಲ..!

ಬೆಂಗಳೂರಿನ ಪೀಣ್ಯಾ ಇಂಡಸ್ಟ್ರಿಯಲ್ ಏರಿಯಾದಲ್ಲಿ 40 ದಿನಗಳ ಬಳಿಕ ಯಂತ್ರಗಳು ಸದ್ದು ಮಾಡುತ್ತಿವೆ. ಗಾರ್ಮೆಂಟ್ಸ್ ಓಪನ್ ಆಗಿವೆ. ವಿಶೇಷ ಆರ್ಥಿಕ ವಲಯ, ಇಂಡಸ್ಟ್ರೀಯಲ್ ಎಸ್ಟೇಟ್, ಇಂಡಸ್ಟ್ರೀಯಲ್ ಟೌನ್, ಇಂಡಸ್ಟ್ರೀಯಲ್ ಟೌನ್‌ಶಿಪ್‌ಗಳಲ್ಲಿ ಬರುವ ಕೈಗಾರಿಕೆಗಳು, ಉತ್ಪಾದಕ ಘಟಕಗಳು, ಕಚ್ಚಾ ವಸ್ತು ಉತ್ಪಾದಕ ಘಟಕಗಳು, ಐಟಿ ಮತ್ತು ಹಾರ್ಡ್ವೇರ್ ಹೀಗೆ ಎಲ್ಲಾ ರೀತಿಯ ಕೈಗಾರಿಕೆಗಳನ್ನು ಆರಂಭಿಸಲಾಗಿದೆ. ಆದರೆ, ಕಾರ್ಮಿಕರಲ್ಲಿ ಬಹುತೇಕರು ತಮ್ಮ ತಮ್ಮ ಊರುಗಳಲ್ಲಿ ಇರುವುದರಿಂದ ಕೈಗಾರಿಕೆಗಳು ಪೂರ್ಣಪ್ರಮಾಣದಲ್ಲಿ ಇನ್ನೂ ಆರಂಭ ಆಗಿಲ್ಲ.

ಸಂಜೆ ಏಳರ ಮೇಲೆ ಓಡಾಟ ಬಂದ್

ಇಂದಿನಿಂದ ಇಡೀ ಕರ್ನಾಟಕದಲ್ಲಿ ಸಂಜೆ ಏಳು ಗಂಟೆಯಿಂದ ಮರು ದಿನ ಬೆಳಗ್ಗೆ 7 ಗಂಟೆವರೆಗೆ ಯಾರೂ ಕೂಡಾ ಅನಗತ್ಯವಾಗಿ ಓಡಾಟ ಮಾಡುವಂತಿಲ್ಲ. ಹೀಗಾಗಿ ಎಲ್ಲಾ ಆರ್ಥಿಕ ಚಟುವಟಿಕೆಗಳನ್ನು ಸಂಜೆ ಆರು ಗಂಟೆ ವೇಳೆಗೆ ಮುಗಿಸಿಕೊಂಡು ಮನೆ ಸೇರಿಕೊಳ್ಳುವುದು ಒಳ್ಳೆಯದು.

ರೆಡ್, ಆರೆಂಜ್ ಮತ್ತು ಗ್ರೀನ್‌ಝೋನ್‌ಗಳಲ್ಲಿ ಇವೆಲ್ಲದ್ದಕ್ಕೂ ಅವಕಾಶ ಕಲ್ಪಿಸಲಾಗಿದೆ:

1) ಅನುಮತಿ ನೀಡಲಾದ ಚಟುವಟಿಕೆಗೆ ಕಾರು ಮತ್ತು ಬೈಕ್‌ನಲ್ಲಿ ಪ್ರಯಾಣಿಸಲು ಅವಕಾಶ. ಕಾರಲ್ಲಿ ಡ್ರೈವರ್ ಜೊತೆಗೆ ಇಬ್ಬರು ಹಾಗೂ ಬೈಕ್‌ನಲ್ಲಿ ಒಬ್ಬರಷ್ಟೇ ಓಡಾಡಬೇಕು.

2) ನಗರ ಮತ್ತು ಗ್ರಾಮೀಣ ಭಾಗದಲ್ಲೂ ಎಲ್ಲಾ ರೀತಿಯ ನಿರ್ಮಾಣ ಕಾಮಗಾರಿಗಳು (ಕಟ್ಟಡ, ರಸ್ತೆ, ನೀರಾವರಿ ಒಳಗೊಂಡು) ಈ ಹಿನ್ನೆಲೆಯಲ್ಲಿ ಸಿಮೆಂಟ್ ಅಂಗಡಿ, ಕ್ರಷರ್, ಜಲ್ಲಿ, ಹಾರ್ಡ್ವೇರ್ ಅಂಗಡಿಗಳು, ಮರಳುಗಾರಿಕೆ, ಕಬ್ಬಿಣದಂಗಡಿ, ಎಲೆಕ್ಟ್ರಿಕಲ್ ಶಾಪ್, ಟೈಲ್ಸ್ ಮತ್ತು ಸ್ಯಾನಿಟರಿ ಅಂಗಡಿಗಳನ್ನು ತೆರೆಯಬಹುದು.

3) ಗ್ರಾಮೀಣ ಭಾಗದಲ್ಲಿರುವ ಎಲ್ಲಾ ರೀತಿಯ ಕೈಗಾರಿಕೆಗಳು

4) ಅಗತ್ಯ ಮತ್ತು ಅವಶ್ಯಕವಲ್ಲದ ಅಂಗಡಿಗಳನ್ನು ತೆರೆಯಬಹುದಾಗಿದೆ.

5) ಗ್ರಾಮೀಣ ಭಾಗದಲ್ಲಿ ಮಾಲ್‌ಗಳನ್ನು ಹೊರತುಪಡಿಸಿ ಎಲ್ಲ ರೀತಿಯ ಅಂಗಡಿಗಳನ್ನು ತೆರೆಯಬಹುದಾಗಿದೆ.

6) ಇ-ಕಾರ್ಮಸ್‌ಗಳಿಗೆ (ಅಮೆಜಾನ್, ಫ್ಲಿಪ್‌ಕಾರ್ಟ್ ಇತ್ಯಾದಿ) ಕೇವಲ ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಆದರೆ ಆರೆಂಜ್‌ಝೋನ್ ಮತ್ತು ಗ್ರೀನ್‌ಝೋನ್ ಅವಶ್ಯಕವಲ್ಲದ ಇ-ಕಾರ್ಮಸ್ ಸೇವೆಗಳಿಗೆ ಅನುಮತಿ ನೀಡಲಾಗಿದೆ.

7) ಖಾಸಗಿ ಕಚೇರಿಗಳಿಗೆ ಗರಿಷ್ಠ ಶೇಕಡಾ 33 ರಷ್ಟು ನೌಕರರೊಂದಿಗೆ ತೆರೆಯಲು ಅವಕಾಶ ನೀಡಲಾಗಿದೆ. ಉಳಿದವರು ಮನೆಯಿಂದಲೇ ಕೆಲಸ ಮಾಡಬೇಕು.

8) ಉಳಿದಂತೆ ಎಲ್ಲಾ ರೀತಿಯ ಸೇವೆಗಳು, ಕೃಷಿ, ಸರ್ಕಾರಿ ಕಚೇರಿಗಳು (ಶೇಕಡಾ 33 ರಷ್ಟು ನೌಕರರು ಮಾತ್ರ), ಬ್ಯಾಂಕ್, ಅಂಚೆ ಕಚೇರಿ, ಜಲ ಮಂಡಳಿ, ಎಸ್ಕಾಂಗಳು, ಕೋರಿಯರ್ ಸೇವೆ, ಕೇಬಲ್, ಇಂಟರ್‌ನೆಟ್, ಎಪಿಎಂಸಿ, ಮಾಂಸ ಮಾರಾಟ, ಮೀನುಗಾರಿಕೆ, ಹೈನುಗಾರಿಕೆ, ರಸಗೊಬ್ಬರ ಮತ್ತು ಬಿತ್ತನೆ ಬೀಜ ಮಾರುವ ಅಂಗಡಿಗಳು

9) ಅಗತ್ಯ ಸೇವೆ ವಾಹನಗಳ ಓಡಾಟ (ಈ ಹಿಂದಿನ ನಿಯಮವೇ ಮುಂದುವರಿಯುತ್ತೆ, ನಿರ್ಬಂಧ ಇಲ್ಲ)

10) ಮದ್ಯ ಮಾರಾಟವೂ ಇರಲಿದೆ.

11) ರೆಡ್‌ಝೋನ್‌ನಲ್ಲಿ ಸಲೂನ್, ಸ್ಪಾ, ಬ್ಯೂಟಿ ಪಾರ್ಲರ್ ಬಂದ್

12) ರೆಡ್‌ಝೋನ್‌ನಲ್ಲಿ ಓಲ್, ಊಬರ್ ಸೇವೆ ಇರಲ್ಲ

13) ರೆಡ್‌ಝೋನ್‌ನಲ್ಲಿ ಆಟೋ ರಿಕ್ಷಾ ಓಡಾಡಲ್ಲ

14) ಆಟೋ ಮೆಕ್ಯಾನಿಕ್, ಪ್ಲಂಬರ್, ರಿಪೇರಿ ಅಂಗಡಿಗಳು ಹೀಗೆ ಸ್ವಯಂ ಉದ್ಯೋಗದ ಸೇವೆಗಳಿಗೆ ಅನುಮತಿ ನೀಡಲಾಗಿದೆ.

ಆರೆಂಜ್‌ಝೋನ್ ಮತ್ತು ಗ್ರೀನ್‌ಝೋಲ್ ಜಿಲ್ಲೆಗಳಲ್ಲಿ ಏನಿರುತ್ತೆ..?
ರೆಡ್‌ಝೋನ್ ಜಿಲ್ಲೆಗಳಲ್ಲಿ ಯಾವುದಕ್ಕೆಲ್ಲ ಅನುಮತಿ ನೀಡಲಾಗಿದ್ಯೋ ಅದೆಲ್ಲವೂ ಆರೆಂಜ್‌ಝೋನ್ ಮತ್ತು ಗ್ರೀನ್‌ಝೋನ್ ಜಿಲ್ಲೆಯಲ್ಲಿ ಇರುತ್ತೆ. ಆರೆಂಜ್‌ಝೋನ್ ಜಿಲ್ಲೆಯಲ್ಲಿ ಹೆಚ್ಚುವರಿ ನೀಡಲಾಗಿರುವ ವಿನಾಯ್ತಿ ಗ್ರೀನ್‌ಝೋನ್ ಜಿಲ್ಲೆಯಲ್ಲೂ ಇರುತ್ತದೆ.

ಇದರ ಜೊತೆಗೆ ಆರೆಂಜ್‌ಝೋನ್ ಜಿಲ್ಲೆಗಳಲ್ಲಿ ಆಟೋ ರಿಕ್ಷಾಗಳ ಓಡಾಟ, ಸ್ಪಾ, ಸಲೂನ್ ತೆರೆಯಲು ಅನುಮತಿ ನೀಡಲಾಗಿದೆ. ಅನುಮತಿ ನೀಡಲಾದ ಚಟುವಟಿಕೆಗಳಿಗಾಗಿ ಜನ ಆರೆಂಜ್‌ಝೋನ್ ಜಿಲ್ಲೆಗಳಲ್ಲಿ ಜಿಲ್ಲೆಗಳ ನಡುವೆ ಓಡಾಡಬಹುದು. ಈ ಜಿಲ್ಲೆಗಳಲ್ಲಿ ಕಾರು ಮತ್ತು ಕ್ಯಾಬ್ ಸೇವೆಗೂ ಅನುಮತಿ ನೀಡಲಾಗಿದೆ.

ಇನ್ನು ಗ್ರೀನ್‌ಝೋನ್ ಜಿಲ್ಲೆಗಳಲ್ಲಿ ಶೇಕಡಾ ೫೦ರಷ್ಟು ಬಸ್‌ಗಳ ಓಡಾಟಕ್ಕೆ ಅನುಮತಿ ನೀಡಲಾಗಿದೆ. ಆದರೆ ಶೇಕಡಾ 50ರಷ್ಟು ಪ್ರಯಾಣಿಕರು ಮಾತ್ರ ಇರಬೇಕು.

ಗ್ರೀನ್‌ಝೋನ್ ಜಿಲ್ಲೆಗಳಲ್ಲಿ ಸೋಮವಾರದಿಂದ ಬೆಳಗ್ಗೆ ಜಿಲ್ಲೆಗಳ ಒಳಗೆ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಆರಂಭವಾಗಲಿದೆ. ಖಾಸಗಿ ಬಸ್ ಸಂಚಾರವೂ ಆರಂಭವಾಗುವ ನಿರೀಕ್ಷೆ ಇದೆ.

ಆದರೆ ಗ್ರೀನ್‌ಝೋನ್ ಜಿಲ್ಲೆ ಆಗಿರುವ ಉಡುಪಿ ಜಿಲ್ಲೆಯಲ್ಲಿ ಸಾರ್ವಜನಿಕ ಸಾರಿಗೆ ಅಂದರೆ ಬಸ್‌ಗಳ ಓಡಾಟಕ್ಕೆ ನಿಷೇಧ ಹೇರಲಾಗಿದೆ.

ಆರೆಂಜ್‌ಝೋನ್ ಜಿಲ್ಲೆಗಳು:

1) ಬಾಗಲಕೋಟೆ 2) ಬಳ್ಳಾರಿ 3) ಕಲ್ಬುರ್ಗಿ 4) ಬೀದರ್ 5) ಬೆಳಗಾವಿ 6) ಚಿಕ್ಕಬಳ್ಳಾಪುರ 7) ದಾವಣಗೆರೆ 8) ಧಾರವಾಡ 9) ಗದಗ 10) ಮಂಡ್ಯ 11) ದಕ್ಷಿಣ ಕನ್ನಡ 12) ತುಮಕೂರು 13) ಉತ್ತರ ಕನ್ನಡ 14) ವಿಜಯಪುರ

ಗ್ರೀನ್‌ಝೋನ್ ಜಿಲ್ಲೆಗಳು:

1) ಕೋಲಾರ 2) ರಾಮನಗರ 3) ಚಾಮರಾಜನಗರ 4) ಕೊಡಗು 5) ಹಾಸನ 6) ಚಿತ್ರದುರ್ಗ 7) ಚಿಕ್ಕಮಗಳೂರು 8) ಶಿಮೊಗ್ಗ 9) ಹಾವೇರಿ 10 ) ಉಡುಪಿ 11) ಕೊಪ್ಪಳ 12) ರಾಯಚೂರು 13)ಯಾದಗಿರಿ

LEAVE A REPLY

Please enter your comment!
Please enter your name here