ರಾಜಧಾನಿಗೂ ಕಾಲಿಟ್ಟ ಹಿಜಾಬ್ ವಿವಾದ : ಹೈಕೋರ್ಟ್​ ಮಧ್ಯಂತರ ಆದೇಶಕ್ಕೂ ಬೆಲೆ ಇಲ್ಲ

ಇಷ್ಟು ದಿನದ ಹಿಜಾಬ್ ವಿವಾದದಲ್ಲಿ ಬೆಂಗಳೂರು ನಗರ ದೂರವುಳಿದಿತ್ತು. ಇದೀಗ, ರಾಜ್ಯ ರಾಜಧಾನಿ ಬೆಂಗಳೂರಿಗೂ ಹಿಜಾಬ್ ವಿವಾದ ಕಾಲಿಟ್ಟಿದೆ. ಈಗಾಗಲೇ ಹೈಕೋರ್ಟ್​ ಮಧ್ಯಂತರ ಆದೇಶ ನೀಡಿದ್ದರೂ, ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಶಾಲೆಗೆ ಬರುವ ಮೂಲಕ ಹೈಕೋರ್ಟ್ ಆದೇಶಕ್ಕೆ ಡೋಂಟ್ ಕೇರ್ ಎಂದಿದ್ದಾರೆ.

ಇಂದು ಚಂದ್ರಾ ಲೇ ಔಟ್ ನ ವಿದ್ಯಾಸಾಗರ್ ಪ್ರಾಥಮಿಕ ಶಾಲೆಯಲ್ಲಿ ಕೆಲವು ಮಕ್ಕಳು ಹಿಜಾಬ್ ಧರಿಸಿ ಬಂದಾಗ ಶಿಕ್ಷಕರು ಅದನ್ನು ತೆಗೆಯುವಂತೆ ಸೂಚಿಸಿದ್ದಾರೆ. ಅನಂತರ, ಶಿಕ್ಷಕಿಯೊಬ್ಬರು ತರಗತಿಯ ಬೋರ್ಡ್ ನಲ್ಲಿ ಹಿಜಾಬ್ ಮತ್ತು ಮುಸ್ಲಿಂ ಜನಾಂಗಕ್ಕೆ ಸಂಬಂಧಿಸಿದಂತೆ ಅವಾಚ್ಯ ಶಬ್ದಗಳನ್ನು ಬರೆದಿದ್ದಾರೆ ಎಂದು ವಿದ್ಯಾರ್ಥಿಗಳು ಮತ್ತು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾಲೆಯ ಬಳಿ ಪೋಷಕರು ದೌಡಾಯಿಸಿದ್ದು, ಶಾಲೆ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಚಂದ್ರ ಲೇಔಟ್‌ನಲ್ಲಿರುವ ಶಾಲೆ ಬಳಿ ಬಂದ ಪೋಷಕರು ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಆಡಳಿತ ಮಂಡಳಿ ಮತ್ತು ಪೋಷಕರ ನಡುವಿನ ವಾಗ್ವಾದದಿಂದ ಮತ್ತಷ್ಟು ಗೊಂದಲ ಸೃಷ್ಟಿಯಾಗಿದ್ದು, ಪರಿಸ್ಥಿತಿ ತಿಳಿಗೊಳಿಸುವ ನಿಟ್ಟಿನಲ್ಲಿ ಪೊಲೀಸರು ಚರ್ಚೆ ನಡೆಸುತ್ತಿದ್ದಾರೆ.

ಮುಸ್ಲಿಂ ವಿದ್ಯಾರ್ಥಿಗಳು ಹಾಗೂ ಪೋಷಕರ ಆರೋಪದ ಮೇರೆಗೆ ಪ್ರಾಂಶುಪಾಲರು ಶಿಕ್ಷಕಿಯನ್ನು ಸೇವೆಯಿಂದ ವಜಾ ಮಾಡಿದ್ದಾರೆ. ಸ್ಥಳಕ್ಕೆ ಬೆಂಗಳೂರು ದಕ್ಷಿಣ ವಿಭಾಗದ ಡಿಡಿಪಿಐ ರಾಜೇಂದ್ರ ಭೇಟಿ ನೀಡಿದ್ದು, ರಾಜಿ ಸಂಧಾನ ನಡೆಸುತ್ತಿದ್ದಾರೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ, ಶಿಕ್ಷಕಿಯೊಂದಿಗೆ ನಾನು ಮಾತನಾಡಿದ್ದೇನೆ. ಶಾಲೆಯಲ್ಲಿ ಪಾಠವನ್ನು ಬಿಟ್ಟು ಬೇರೆ ಏನನ್ನೂ ಹೇಳಿಲ್ಲ. ಹಿಜಾಬ್ ವಿಷಯದ ಬಗ್ಗೆ ತರಗತಿಯಲ್ಲಿ ಮಾತನಾಡಿಯೇ ಇಲ್ಲ ಎಂಬುದಾಗಿ ಶಿಕ್ಷಕಿ ಹೇಳಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬೈಲಾಂಜನಪ್ಪ ಸ್ಪಷ್ಟನೆ ನಿಡಿದ್ದಾರೆ.

ಹಿಜಾಬ್ ವಿವಾದ ಈಗಾಗಲೇ ಹೈಕೋರ್ಟ್ ಅಂಗಳದಲ್ಲಿದೆ. ಮದ್ಯಂತರ ಆದೇಶವನ್ನು ನೀಡಿರುವ ಹೈಕೋರ್ಟ್​ನ ಮುಖ್ಯ ನ್ಯಾಯಾಧೀಶರನ್ನು ಒಳಗೊಂಡಿರುವ ಪೀಠ, ಮುಂದಿನ ಆದೇಶದವರೆಗೆ ಯಾವ ಮಕ್ಕಳೂ ಶಾಲಾ-ಕಾಲೇಜುಗಳಿಗೆ ಧಾರ್ಮಿಕ ಗುರುತು ಹೊಂದಿರುವ ಬಟ್ಟೆಗಳನ್ನು ಧರಿಸಿಕೊಂಡು ಹೋಗಬಾರದು, ಕೇವಲ ಸಮವಸ್ತ್ರ ಮಾತ್ರ ಧರಿಸಿಕೊಂಡು ಹೋಗಬೇಕು ಎಂದು ಮಧ್ಯಂತರ ಆದೇಶ ನೀಡಿತ್ತು. ಊಗಲೂ ವಿದ್ಯಾರ್ಥಿಗಳು ಶಾಲೆಗೆ ಹಿಜಾಬ್ ಧರಿಸಿ ಹೋಗುತ್ತಿರುವುದು ನ್ಯಾಯಾಲಯದ ಆದೇಶಕ್ಕೆ ಬೆಲೆ ಇಲ್ಲ ಎನ್ನುವಂತಾಗಿದೆ.

ಇನ್ನು, ಇಂದು ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಹಾಗೂ ಬಾಗಲಕೋಟೆಯ ಶಾಲೆಯೊಂದರ ಪ್ರಾಥಮಿಕ ತರಗತಿ ಓದುತ್ತಿರುವ ಮಕ್ಕಳು ನಮಾಜ್ ಮಾಡುತ್ತಿರುವ ವೀಡಿಯೋ ವೈರಲ್ ಆಗಿವೆ.

LEAVE A REPLY

Please enter your comment!
Please enter your name here