ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧದ ಶಮನಕ್ಕಾಗಿ ಸಂಧಾನಕ್ಕೆ ತೆರಳಿದ್ದ ರಷ್ಯಾದ ಅಗರ್ಭ ಶ್ರೀಮಂತ ಮತ್ತು ಉಕ್ರೇನ್ನ ಇಬ್ಬರು ಸಂಧಾನಕಾರರಿಗೆ ವಿಷ ಉಣಿಸಲಾಗಿತ್ತು ಎಂದು ಅಮೆರಿಕದ ಪ್ರಮುಖ ದೈನಿಕ ವಾಲ್ ಸ್ಟ್ರೀಟ್ ಜನರಲ್ ವರದಿ ಮಾಡಿದೆ.
ರಷ್ಯಾದ ಶ್ರೀಮಂತ ಉದ್ಯಮಿ ರೋಮನ್ ಅಬ್ರಾಮೋವಿಚ್ ಮತ್ತು ಉಕ್ರೇನ್ ಇಬ್ಬರು ಸಂಧಾನಕಾರರಿಗೆ ರಷ್ಯಾದವರೇ ವಿಷವಿಕ್ಕಿರುವ ಸಾಧ್ಯತೆ ಇದೆ ಪತ್ರಿಕೆ ವರದಿ ಮಾಡಿದೆ.
ಸಂಧಾನಕ್ಕೆ ತೆರಳಿದ್ದ ಈ ಮೂವರಲ್ಲಿ ವಿಷಪ್ರಾಶನದ ಬಳಿಕ ಕಾಣಿಸಿಕೊಳ್ಳುವ ಅನಾರೋಗ್ಯದ ಲಕ್ಷಣಗಳು ಕಾಣಿಸಿಕೊಂಡಿದ್ದವು. ಕಣ್ಣು ಕೆಂಪಾಗುವಿಕೆ, ನೋವಿನಿಂದ ಕಣ್ಣಲ್ಲಿ ನೀರು ಬರುವುದು, ಮುಖ ಮತ್ತು ಕೈಯ ಚರ್ಮದ ವಿರೂಪಕ್ಕೆ ತಿರುಗಿತ್ತು. ಸದ್ಯಕ್ಕೆ ಇವರೆಲ್ಲರೂ ಚಿಕಿತ್ಸೆ ಪಡೆದು ಗುಣಮುಖರಾಗುತ್ತಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ.
ರಷ್ಯಾದ ಮೂಲಭೂತವಾದಿಗಳೇ ವಿಷಪ್ರಾಶನ ಮಾಡಿರುವ ಅನುಮಾನ ಇದ್ದು, ಆ ಮೂಲಕ ಯುದ್ಧ ನಿಲ್ಲಿಸುವ ಸಂಧಾನ ಯತ್ನವನ್ನು ಹಾದಿ ತಪ್ಪಿಸುವ ಪ್ರಯತ್ನ ನಡೆದಿತ್ತು ಎಂದು ವರದಿ ಆಗಿದೆ.
ರಷ್ಯಾದ ಶ್ರೀಮಂತ ಅಬ್ರಾಮೋವಿಚ್ ಮೇಲೆ ಪಾಶ್ಚಿಮಾತ್ಯ ರಾಷ್ಟ್ರಗಳು ಆರ್ಥಿಕ ದಿಗ್ಬಂಧನಗಳನ್ನು ಹಾಕಿದ್ದು, ಯುದ್ಧ ನಿಲ್ಲಿಸುವಂತೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮೇಲೆ ಒತ್ತಡ ಹೇರುವ ಪ್ರಯತ್ನವನ್ನು ಈ ಉದ್ಯಮಿ ಮೂಲಕ ಮಾಡಲಾಗಿತ್ತು.