ಯುದ್ಧಕ್ಕಿಂತ ಭೀಕರ ಕೊರೋನಾ ಸಾವು ನೋವು..

ಅಮೆರಿಕಾದಲ್ಲಿ ಕೊರೋನಾ ಮೃತ್ಯು ತಾಂಡವ ಮುಂದುವರೆದಿದ್ದು, ಇದುವರೆಗೂ 59,266 ಮಂದಿ ಬಲಿ ಆಗಿದ್ದಾರೆ. ಇದು ವಿಯೆಟ್ನಾಂ ವಿರುದ್ಧ ಎರಡು ದಶಕಗಳ ಕಾಲ ನಡೆದ ಯುದ್ಧದಲ್ಲಿ ಬಲಿಯಾದ ಅಮೆರಿಕಾ ಸೈನಿಕರ ಸಂಖ್ಯೆಗಿಂತ ಹೆಚ್ಚು ಎಂದು ದಾಖಲೆಗಳು ಹೇಳುತ್ತಿವೆ.

1955ರಿಂದ 1975ರವರೆಗೂ ಎರಡು ದೇಶಗಳ ನಡುವೆ ನಡೆದ ಯುದ್ಧದಲ್ಲಿ ಅಮೆರಿಕಾದ 58,220 ಸೈನಿಕರು ಹುತಾತ್ಮರಾಗಿದ್ದರು.

ಕೊರೋನಾ ಸೋಂಕಿಗೆ ತುತ್ತಾದ ಅಮೆರಿಕನ್ನರ ಸಂಖ್ಯೆ 10 ಲಕ್ಷದ ಗಡಿಯನ್ನು ದಾಟಿದೆ. ಜಗತ್ತಿನಾದ್ಯಂತ ದಾಖಲಾದ ಪ್ರಕರಣಗಳ ಪೈಕಿ 1/3ರಷ್ಟು ಪ್ರಕರಣಗಳು ಕೇವಲ ಅಮೆರಿಕಾದಲ್ಲಿಯೇ ಇವೆ. ಅಮೆರಿಕಾದಲ್ಲಿ ಸಂಭವಿಸಿದ ಸಾವುಗಳ ಪ್ರಮಾಣ ಜಗತ್ತಿನ 1/4ರಷ್ಟು.

ನ್ಯೂಯಾರ್ಕ್ ಮತ್ತು ನ್ಯೂಜೆರ್ಸಿಯಲ್ಲಿ ಕೊರೋನಾ ಸೋಂಕು ತೀವ್ರತೆ ಕಡಿಮೆಯಾಗುತ್ತಿದೆ. ಮತ್ತೊಂದು ಕಡೆ ಸೋಂಕು ನಿಯಂತ್ರಣಕ್ಕೆ ಬಂದಿರುವ ಪ್ರದೇಶಗಳಲ್ಲಿ ಹಂತ ಹಂತವಾಗಿ ನಿರ್ಬಂಧಗಳನ್ನು ಸಡಿಲಿಸಲಾಗುತ್ತಿದೆ.

ಅಮೆರಿಕಾದಲ್ಲಿ ಕಠಿಣ ದಿನಗಳು ಮುಗಿದಂತೆ ಕಾಣುತ್ತಿದೆ. ಅಮೆರಿಕಾ ಜನತೆ ಮಾಡಿದ ತ್ಯಾಗಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಶೀಘ್ರದಲ್ಲಿಯೇ ಕೊರೋನಾ ವಿರುದ್ಧ ಗೆಲುವು ಸಾಧಿಸುತ್ತೇವೆ. ಆರ್ಥಿಕ ವ್ಯವಸ್ಥೆಯನ್ನು ಸರಿ ದಾರಿಗೆ ತರಲಾಗುತ್ತದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನ್ಯೂಜಿಲೆಂಡ್‍ನಲ್ಲಿ ಕೊರೋನಾ ನಿಯಂತ್ರಣಕ್ಕೆ ಬಂದಂತೆ ಕಾಣುತ್ತಿದೆ. ಮಂಗಳವಾರ ದೇಶದಲ್ಲಿ ಕೇವಲ 3 ಹೊಸ ಪ್ರಕರಣಗಳು ಪತ್ತೆಯಾಗಿವೆ. ಆಸ್ಟ್ರೇಲಿಯಾದಲ್ಲಿ 11 ಹೊಸ ಪಾಸೀಟೀವ್ ಪ್ರಕರಣ ಬೆಳಕಿಗೆ ಬಂದಿವೆ. ಫ್ರಾನ್ಸ್‍ನಲ್ಲಿ ಮೇ 11ರಿಂದ ಶಾಲೆ ಕಾಲೇಜುಗಳು ಪುನಾರಂಭವಾಗಲಿವೆ.

ಬ್ರೆಜಿಲ್‍ನಲ್ಲಿ 67 ಸಾವಿರಕ್ಕೂ ಹೆಚ್ಚು ಮಂದಿಯಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಆದರೆ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸೆನಾರೋ ಮಾತ್ರ, ಇದೊಂದು ಚಿಕ್ಕ ಫ್ಲೂ ಅಷ್ಟೇ.. ಲಾಕ್‍ಡೌನ್ ಅವಶ್ಯಕತೆ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ.

LEAVE A REPLY

Please enter your comment!
Please enter your name here