ತನ್ನ ಸಂಸಾರ ಸರಿಪಡಿಸಿಕೊಳ್ಳುವಂತೆ ಬುದ್ದಿ ಹೇಳಲು ಬಂದ ನಾಲ್ವರಿಗೆ ವ್ಯಕ್ತಿಯೊಬ್ಬ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ನಾರಾಯಣಪುರದಲ್ಲಿ ನಡೆದಿದೆ. ಘಟನೆಯಲ್ಲಿ ನಾಗಪ್ಪ ಎಂಬವರು ಮೃತಪಟ್ಟಿದ್ದು, ಉಳಿದ ಮೂವರ ಸ್ಥಿತಿ ಗಂಭೀರವಾಗಿದೆ.
ಹುಣಸಗಿ ತಾಲೂಕಿನ ನಾರಾಯಣಪುರದ ನಿವಾಸಿ ಶರಣಪ್ಪ ಹಾಗೂ ಪತ್ನಿ ಹುಲಿಗೆಮ್ಮ ಇಬ್ಬರು ಹಲವು ಪ್ರತಿದಿನ ಜಗಳವಾಡುತ್ತಿದ್ದರು. ಹುಲಿಗೆಮ್ಮ ತವರು ಮನೆಯವರೊಂದಿಗೆ ತನ್ನ ಸಂಕಟ ಹೇಳಿಕೊಳ್ಳುತ್ತಿದ್ದಳು.
ದಿನವೂ ಗಂಡನೊಂದಿಗೆ ಜಗಳವಾಡುತ್ತಿದ್ದರಿಂದ ಬೇಸತ್ತು ಹುಲಿಗಮ್ಮ 14 ತಿಂಗಳಿನಿಂದ ಬೇರೆಡೆ ಮನೆ ಮಾಡಿಕೊಂಡು ವಾಸವಾಗಿದ್ದರು. ಲಿಂಗಸೂರಿನ ಕೆಎಸ್ಆರ್ಟಿಸಿಯಲ್ಲಿ ಮೆಕ್ಯಾನಿಕಲ್ ಕೆಲಸ ಮಾಡಿಕೊಂಡಿದ್ದರು. ವಿಚ್ಛೇದನ ಕೇಳಿದರೂ ಶರಣಪ್ಪ ನಿರಾಕರಿಸಿದ್ದನು. ಸಮಸ್ಯೆಯನ್ನು ಬಗೆಹರಿಸಲೇಬೇಕೆಂದು ಹೆಂಡತಿ ತವರು ಮನೆಯವರಾದ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದ ಇಬ್ಬರು ಹಾಗೂ ಸರೂರಿನ ಸಿದ್ರಾಮಪ್ಪ, ಮುತ್ತಪ್ಪ ಅವರು ಶರಣಪ್ಪನಿಗೆ ಬುದ್ದಿ ಹೇಳಲು ಬಂದಿದ್ದರು.
ಮನೆಗೆ ಬಂದು ಬುದ್ದಿ ಮಾತು ಹೇಳಲು ಮುಂದಾದ ಕೂಡಲೇ ಬಾಗಿಲು ಹಾಕಿಕೊಂಡ ಶರಣಪ್ಪ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಘಟನೆಯಲ್ಲಿ ನಾಗಪ್ಪ ಮೃತಪಟ್ಟಿದ್ದು, ಗಂಭೀರ ಗಾಯಗೊಂಡ ಮೂವರನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ವಿರುದ್ಧ ಎಫ್ಐಆರ್ ದಾಖಲಿಸಿ, ತನಿಖೆ ಕೈಗೊಳ್ಳಲಾಗಿದೆ ಎಂದು ಯಾದಗಿರಿ ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ಮಾಹಿತಿ ನೀಡಿದ್ದಾರೆ.