ಯಡಿಯೂರಪ್ಪ ಸರ್ಕಾರದಲ್ಲಿ ಕೊರೋನಾ ಹಗರಣ-ಸದನ ಸಮಿತಿ ಪರಿಶೀಲನೆಗೆ ಸ್ಪೀಕರ್‌ ತಡೆ- ಹೆಚ್‌ಕೆಪಿ ಆಕ್ರೋಶ

ವಿಶ್ವೇಶ್ವರ ಹೆಗಡೆ ಕಾಗೇರಿ

ಸಿಎಂ ಯಡಿಯೂರಪ್ಪ ನೇತೃತ್ವದ ಸರ್ಕಾರದ ವಿರುದ್ಧ ಪಿಪಿಇ ಕಿಟ್, ವೆಂಟಿಲೇಟರ್‌, ಟೆಸ್ಟಿಂಗ್‌ ಕಿಟ್‌, ಸ್ಯಾನಿಟೈಸರ್‌ ಖರೀದಿ ಹಗರಣದ ಆರೋಪ ಕೇಳಿ ಬಂದಿದೆ. ಆದರೆ ಸಾರ್ವಜನಿಕ ಲೆಕ್ಕ ಪತ್ರ ಸಮಿತಿಗೆ ಬಂದಿರುವ ದೂರಿನ ಬಗ್ಗೆ ತನಿಖೆ ನಡೆಸುವುದಕ್ಕೆ ವಿಧಾನ ಸಭೆ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ತಡೆ ನೀಡಿದ್ದಾರೆ.

ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಆಸ್ಪತ್ರೆ, ಏರ್‌ಪೋರ್ಟ್‌,ಬಸ್‌ ನಿಲ್ದಾಣಗಳಿಗೆ ಭೇಟಿ ನೀಡಿ ಪರಿಶೀಲಿಸದಂತೆ ಸ್ಪೀಕರ್‌ ಸೂಚಿಸಿದ್ದಾರೆ.

ಸ್ಪೀಕರ್‌ ಆದೇಶದ ಬಗ್ಗೆ ಸಾರ್ವಜನಿಕ ಲೆಕ್ಕಪತ್ರದ ಮುಖ್ಯಸ್ಥ, ಕಾಂಗ್ರೆಸ್‌ ಶಾಸಕರೂ ಆಗಿರುವ ಹೆಚ್.ಕೆ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾಸನ ಸಭೆಯ ಸಮಿತಿಗಳ ಸಂವಿಧಾನಾತ್ಮಕ ಬಾಧ್ಯತೆಯನ್ನು ಪ್ರಶ್ನಿಸುವ ವಿಧಾನ ಮಂಡಲದ ಸಮಿತಿಗಳ ಅಧಿಕಾರ ಮೊಟಕುಗೊಳಿಸುವ ಲಘು ಪ್ರಕಟಣೆ 104ನ್ನು ಹಿಂಪಡೆದು ಭ್ರಷ್ಠಾಚಾರವನ್ನು ತನಿಖೆ ಮಾಡುವ ನಿರ್ಭಯ ನಿರ್ದಾಕ್ಷಿಣ್ಯ ವಾತಾವರಣ ಸೃಷ್ಠಿಸುವಂತೆ ಹೆಚ್‌ಕೆಪಿ ಹೇಳಿದ್ದಾರೆ.

ಸಾರ್ವಜನಿಕ ಲೆಕ್ಕಪತ್ರ ಸಮಿತಿ ಆಸ್ಪತ್ರೆ, ಏರ್‌ಪೋರ್ಟ್, ಬಸ್ ನಿಲ್ದಾಣಕ್ಕೆ ಭೇಟಿ ನೀಡಲು ತೀರ್ಮಾನ ಮಾಡಿದ್ದೆವು. ಇಂದು ಆಸ್ಪತ್ರೆಗಳಿಗೆ ಭೇಟಿ ಮಾಡಿ ಕೇಳಿ ಬರುತ್ತಿರುವ ಆರೋಪಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಮುಂದಾಗಿ ತನಿಖೆ ಮಾಡಿ ನಿರ್ಣಯ ಮಾಡಲು ತೀರ್ಮಾನಿಸಿದ್ದೆವು. ಆದರೆ ಈ ಮಧ್ಯೆ ಸ್ಪೀಕರ್ ಕಚೇರಿಯಿಂದ ಅಧಿಸೂಚನೆ ಹೊರಬಿದ್ದಿದೆ.ಲೆಕ್ಕಪತ್ರ ಸಮಿತಿ ಸದಸ್ಯರು ಭೇಟಿ ನೀಡಬಾರದು, ಯಾವುದೇ ಸ್ಥಳಗಳಿಗೆ ಹೋಗಬಾರದು ಎಂದು ಆದೇಶ ನೀಡಿದ್ದಾರೆ. ತಪಾಸಣೆ ಅಡ್ಡಿಪಡಿಸುವ ಸ್ಪೀಕರ್ ತೀರ್ಮಾನ ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಭ್ರಷ್ಟಾಚಾರಕ್ಕೆ ಬೆಂಬಲ ನೀಡಲು ಸ್ಪೀಕರ್ ತೀರ್ಮಾನ ಮಾಡಿದಂತಾಗುತ್ತದೆ. ಸ್ಪೀಕರ್ ನೋಟಿಫಿಕೇಷನ್ ಜನದ್ರೋಹಿ ತೀರ್ಮಾನವಾಗಿದೆ. ಬರ ಬಂದರೆ ಸಾಕು ಅಂತ ಹೇಳುತ್ತಿದ್ದ ಒಂದು ಕಾಲವಿತ್ತು. ಆದರೆ ಈಗ ಕೊರೋನ ಬಂದ್ರೆ ಸಾಕು ಎಂಬ ಕಾಲ ಬಂದಿದೆ.

ಕೊರೋನ ಸಂಕಷ್ಟದಲ್ಲೂ ಭ್ರಷ್ಟಾಚಾರದ ವಾಸನೆ ಕಾಣುತ್ತಿದೆ. ಇಂತಹ ಸಂದರ್ಭದಲ್ಲಿ ನಮ್ಮ ಲೆಕ್ಕಪತ್ರ ಸಮಿತಿ ಭೇಟಿ ಮಾಡುವುದು ಅಗತ್ಯ. ಅಲ್ಲದೇ ಸಂವಿಧಾನದ ಅಡಿಯಲ್ಲಿ ಸಮಿತಿ ವಿಚಾರದಲ್ಲಿ ಸ್ಪೀಕರ್ ಮಧ್ಯಪ್ರವೇಶ ಸರಿಯಲ್ಲ. ಕೂಡಲೇ ಸ್ಪೀಕರ್ ಆದೇಶ ಹಿಂಪಡೆಯಬೇಕು ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಹೆಚ್.ಕೆ.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

LEAVE A REPLY

Please enter your comment!
Please enter your name here