ಯಡಿಯೂರಪ್ಪ ವರ್ಸಸ್ ಬಿಜೆಪಿ ಹೈಕಮಾಂಡ್..! ಬಿಕ್ಕಟ್ಟು ಉಲ್ಬಣ..!

ರಾಜ್ಯ ಬಿಜೆಪಿಯಲ್ಲಿ 2012-13ರ ಆ ದಿನಗಳು ಮರುಕಳಿಸುತ್ತಾ ಎಂಬ ಅನುಮಾನಗಳು ಮೂಡತೊಡಗಿವೆ. ಯಾಕೆಂದರೆ, ಬಿಜೆಪಿಯಲ್ಲಿ ಯಡಿಯೂರಪ್ಪ ವರ್ಸಸ್ ಹೈಕಮಾಂಡ್ ನಡುವೆ ಅಧಿಕಾರ ಗುದ್ದಾಟ ನಡೆಯುತ್ತಿದೆ.

ಇದು ಮುಖ್ಯಮಂತ್ರಿ ಯಡಿಯೂರಪ್ಪಗೆ ಪಾಲಿಗೆ ಅಳಿವು ಉಳಿವಿನ ಪ್ರಶ್ನೆಯಾಗಿದೆ. ರಾಜ್ಯ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆಗೆ ಅನುಮತಿ ನೀಡದೇ ಸತಾಯಿಸುತ್ತಿರುವ ಬಿಜೆಪಿ ಹೈಕಮಾಂಡ್ ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ಪ್ರಯತ್ನ ನಡೆಸುತ್ತಿರುವಂತೆ ತೋರುತ್ತಿದೆ.

ಆದರೆ, ಹೈಕಮಾಂಡ್ ನ ಈ ತಂತ್ರಕ್ಕೆ ಪ್ರತಿಯಾಗಿ ಮುಖ್ಯಮಂತ್ರಿ ಯಡಿಯೂರಪ್ಪ ರಣತಂತ್ರಗಳನ್ನು ರೂಪಿಸುತ್ತಿದ್ದು, ತಮ್ಮ ಸ್ಥಾನವನ್ನು ಗಟ್ಟಿ ಮಾಡಿಕೊಳ್ಳುವ ಸಂಬಂಧ ದಾಳಗಳನ್ನು ಉರುಳಿಸುತ್ತಿದ್ದಾರೆ.

ಅದರಲ್ಲಿಯೂ ತಮ್ಮ ಶಕ್ತಿಯಾಗಿರುವ ವೀರಶೈವ ಲಿಂಗಾಯತ ಸಮುದಾಯವನ್ನು ಜೊತೆಯಲ್ಲಿಯೇ ಇಟ್ಟುಕೊಳ್ಳಲು ಏನು ಬೇಕೋ ಎಲ್ಲವನ್ನು ಮಾಡುತ್ತಾ ಹೈಕಮಾಂಡ್ ಗೆ ಸೆಡ್ಡು ಹೊಡೆಯುತ್ತಿದ್ದಾರೆ. ಜೊತೆಗೆ ಮತ್ತಷ್ಟು ಶಾಸಕರ ಬೆಂಬಲ ಗಿಟ್ಟಿಸಲು ಪ್ರಯತ್ನ ಮಾಡುತ್ತಿದ್ದಾರೆ.ಇದು ಪಕ್ಷದ ಆಂತರಿಕ ಬೇಗುದಿಯನ್ನು ಹೆಚ್ಚು ಮಾಡಿದೆ. ಹೈಕಮಾಂಡ್ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಇಂದು ಏನು ಘೊಷಿಸ್ತಾರೆ ಮುಖ್ಯಮಂತ್ರಿ ಯಡಿಯೂರಪ್ಪ..?

ಸಾಮಾನ್ಯವಾಗಿ ಸಚಿವ ಸಂಪುಟ ಸಭೆ ಬಳಿಕ ಸಚಿವ ಮಾಧುಸ್ವಾಮಿ ಸುದ್ದಿಗೋಷ್ಠಿ ನಡೆಸುವುದು ಇದುವರೆಗಿನ ರೂಢಿ. ಫಾರ್ ಎ ಚೇಂಜ್.. ಇಂದು ಸ್ವತಃ ಮುಖ್ಯಮಂತ್ರಿಯೇ ಸುದ್ದಿಗೋಷ್ಠಿ ನಡೆಸಲು ತೀರ್ಮಾನಿಸಿದ್ದಾರೆ. ಮಹತ್ವದ ತೀರ್ಮಾನವೊಂದನ್ನು ಪ್ರಕಟಿಸಲಿದ್ದಾರೆ. ಇದರ ರಹಸ್ಯ ಯಡಿಯೂರಪ್ಪನವರ ಅತ್ಯಾಪ್ತ ಸಚಿವರಿಬ್ಬರಿಗೆ ಬಿಟ್ಟು ಬೇರೆ ಯಾರಿಗೂ ಗೊತ್ತಿಲ್ಲ. ಇದು ರಾಜಕೀಯ ವಲಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ.

LEAVE A REPLY

Please enter your comment!
Please enter your name here