ಯಡಿಯೂರಪ್ಪ ಬಹಿರಂಗ ಅಸಮಾಧಾನದ ಫಲ – ಕೊನೆಗೂ ಪರಿಹಾರದ ಕಂತು ಕೊಟ್ಟ ಪ್ರಧಾನಿ ಮೋದಿ

ನೆರೆ ಪರಿಹಾರ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ಪಂದಿಸಿಲ್ಲ ಎಂದು ತುಮಕೂರಲ್ಲಿ ಪ್ರಧಾನಿ ಎದುರೇ ಬಹಿರಂಗ ಅಸಮಾಧಾನ ಹೊರಹಾಕಿದ ನಾಲ್ಕೇ ದಿನದಲ್ಲಿ ಮೋದಿ ಸರ್ಕಾರ ಅಲ್ಪ ಪ್ರವಾಹ ಪರಿಹಾರ ಬಿಡುಗಡೆ ಮಾಡಿದೆ.

ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ ಅಡಿಯಲ್ಲಿ ಕರ್ನಾಟಕಕ್ಕೆ ಎರಡನೇ ಕಂತಲ್ಲಿ ೧೮೬೯.೮೫ ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಿದೆ. ಮೊದಲ ಕಂತಲ್ಲಿ ೧,೨೦೦ ಕೋಟಿ ರೂಪಾಯಿ ಲಭಿಸಿತ್ತು. ಈ ಮೂಲಕ ಸದ್ಯಕ್ಕೆ ೩,೦೬೯.೮೫ ಕೋಟಿ ರೂಪಾಯಿ ಕರ್ನಾಟಕದ ಪಾಲಿಗೆ ಸಿಕ್ಕತ್ತಾಂಗಿದೆ.

ಪ್ರವಾಹ ಪೀಡಿತ ಅಸ್ಸಾಂಗೆ ೬೧೬ ಕೋಟಿ, ಹಿಮಾಚಲ ಪ್ರದೇಶಕ್ಕೆ ೨೮೪ ಕೋಟಿ ರೂಪಾಯಿ, ಮಧ್ಯಪ್ರದೇಶಕ್ಕೆ ೧,೭೪೯ ಕೋಟಿ ರೂಪಾಯಿ, ಮಹಾರಾಷ್ಟ್ರಕ್ಕೆ ೯೫೬ ಕೋಟಿ ರೂಪಾಯಿ, ತ್ರಿಪುರಕ್ಕೆ ೬೩ ಕೋಟಿ ರೂಪಾಯಿ, ಉತ್ತರಪ್ರದೇಶಕ್ಕೆ ೩೬೭ ಕೋಟಿ ರೂಪಾಯಿಯಷ್ಟು ಪ್ರವಾಹ ಪರಿಹಾರ ಬಿಡುಗಡೆ ಆಗಿದೆ.

ಶತಮಾನಗಳ ಬಳಿಕ ಅಪ್ಪಳಿಸಿದ ಕಂಡುಕೇಳರಿಯದ ಪ್ರವಾಹದಲ್ಲಿ ೩೫,೧೬೦ ಕೋಟಿ ರೂಪಾಯಿಯಷ್ಟು ನಷ್ಟವಾಗಿದೆ ಎಂದು ಯಡಿಯೂರಪ್ಪ ಸರ್ಕಾರ ಅಂದಾಜು ಲೆಕ್ಕವನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿತ್ತು. ಆದರೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಕಾರ ೧ ಲಕ್ಷ ಕೋಟಿ ರೂಪಾಯಿಗೂ ಅಧಿಕ ಮೊತ್ತದ ನಷ್ಟವಾಗಿದೆ.

ಕರ್ನಾಟಕದ ೨೨ ಜಿಲ್ಲೆಗಳ ೧೦೩ ತಾಲೂಕುಗಳು ಪ್ರವಾಹದಲ್ಲಿ ನಲುಗಿದ್ದವು. ೮೦ ಮಂದಿ ಪ್ರಾಣ ಕಳೆದುಕೊಂಡಿದ್ದರು.

LEAVE A REPLY

Please enter your comment!
Please enter your name here