ಮೋದಿಯವರೇ ರೈತರನ್ನು ಬಹುರಾಷ್ಟ್ರೀಯ ಕಂಪನಿಗಳಿಗೆ ಒಪ್ಪಿಸೋದು ಲೋಕಲೈಸೇಷನ್ನಾ – ಕುಮಾರಸ್ವಾಮಿ ಪ್ರಶ್ನೆ

ಎಪಿಎಂಸಿ ಕಾಯ್ದೆಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತರುವ ಕುರಿತು ಇಂದು ಸಚಿವ ಸಂಪುಟದಲ್ಲಿ ನಿರ್ಧಾರವಾಗುತ್ತಿದೆ. ರೈತರ ಬದುಕನ್ನು ಅಭದ್ರಗೊಳಿಸುವ, ಬಹುರಾಷ್ಟ್ರೀಯ ಕಂಪನಿಗಳ ದಾಸ್ಯಕ್ಕೆ ಒಳಪಡಿಸುವ ಈ ಸುಗ್ರೀವಾಜ್ಞೆಗೆ ಸರ್ಕಾರ ಯಾವುದೇ ಕಾರಣಕ್ಕೂ ಮುಂದಾಗಬಾರದು. ಇದು ಕಡೇ ಎಚ್ಚರಿಕೆ. ಇಲ್ಲವಾದರೆ ಹೋರಾಟ ಎದುರಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ಬಹುರಾಷ್ಟ್ರೀಯ ಕಂಪನಿಗಳಿಗೆ ನಮ್ಮನ್ನು ಒಪ್ಪಿಸಿಕೊಳ್ಳುವುದು ಅಪಾಯಕಾರಿ. ಅಭದ್ರತೆಯ ಈ ವ್ಯವಸ್ಥೆಗೆ ಕೃಷಿ, ರೈತರನ್ನು ಒಳಪಡಿಸುವುದು ನಮ್ಮ ಬೆನ್ನೆಲುಬನ್ನೇ ಮುರಿದಂತೆ. 20 ಲಕ್ಷ ಕೋಟಿ ಪ್ಯಾಕೇಜ್ ಘೋಷಣೆ ವೇಳೆ ಲೋಕಲೈಷೇನ್ ಬಗ್ಗೆ ಪ್ರಧಾನಿ ಮೋದಿ ಮಾತನಾಡಿದ್ದರು. ಆದರೆ ಬಹುರಾಷ್ಟ್ರೀಯ ಕಂಪನಿಗಳಿಗೆ ರೈತರನ್ನು ಒಪ್ಪಿಸುವುದು ಯಾವ ಲೋಕಲೈಸೇಷನ್.. ಎಂದು ಹೆಚ್‌ಡಿ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.

ರೈತ ತನ್ನ ಉತ್ಪನ್ನಗಳನ್ನು ಮಾರಾಟ ಮಾಡುವಾಗ ಒಂದು ವೇಳೆ ವಂಚನೆಗೊಳಗಾದರೆ ಎಪಿಎಂಸಿ ಮೂಲಕ ವ್ಯಾಜ್ಯ ಬಗೆಹರಿಸಿಕೊಳ್ಳಲು ಅವಕಾಶವಿದೆ. ಆದರೆ ಬಹುರಾಷ್ಟ್ರೀಯ ಕಂಪನಿಗಳು ಮಾಡುವ ವಂಚನೆಗಳ ವಿರುದ್ಧ ನಮ್ಮ ರೈತರು ಹೋರಾಡಬಲ್ಲರೇ? ಅವರ ಕೂಟ ವ್ಯವಸ್ಥೆಯ ಎದುರು ಸೆಣಸಬಲ್ಲರೇ? ಕೃಷಿ ವ್ಯವಸ್ಥೆಗೆ ಕಾಯಕಲ್ಪ ತರಬೇಕು. ಆದರೆ ದಾಸ್ಯಕ್ಕೊಳಪಡಿಸಬಾರದು ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ ಆಗ್ರಹ
ಇಡೀ ರಾಜ್ಯ ಕೊರೊನಾ ವಿರುದ್ಧ ಸಮರ ನಡೆಸುತ್ತಿರುವ ಈ ಸಮಯದಲ್ಲಿ ಸುಗ್ರೀವಾಜ್ಞೆಯ ಮೂಲಕ ಎಪಿಎಂಸಿ ಕಾಯಿದೆಗೆ ತಿದ್ದುಪಡಿ ಮಾಡಲು ಹೊರಟಿರೋದು ಸರಿಯಲ್ಲ. ರೈತ ಸಮುದಾಯದ ಅಭಿಪ್ರಾಯ ಪಡೆಯದೇ ಹಾಗೂ ಈ ತಿದ್ದುಪಡಿ ಕಾಯಿದೆಯನ್ನು ಸದನದಲ್ಲಿ ಮುಂಡಿಸದೇ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲು ಮುಂದಾಗಿರುವ ನಿರ್ಧಾರವನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕು ಎಂದು ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರು ಆಗ್ರಹಿಸಿದ್ದಾರೆ.

ಈ ರೀತಿ ಏಕಾಏಕಿ ತೀರ್ಮಾನ ಕೈಗೊಂಡರೆ ರೈತರು ಸಂಕಷ್ಟಕ್ಕೀಡಾಗುವರು ಮಧ್ಯವರ್ತಿಗಳ ಕಪಿಮುಷ್ಟಿಯಿಂದ ಎಪಿಎಂಸಿ ಕಾಯ್ದೆ ರೈತರಿಗೆ ತಕ್ಕ ಮಟ್ಟಿನ ರಕ್ಷಣೆ ನೀಡಿತ್ತು ಆದರೆ ಎಪಿಎಂಸಿಯ ತಿದ್ದುಪಡಿ ಕಾಯ್ದೆ ಜಾರಿಯಾದರೆ ಬಂಡವಾಳಶಾಹಿ ಹಾಗೂ ಬಹುರಾಷ್ಟ್ರೀಯ ಕಂಪನಿಗಳಿಂದ ರೈತರು ಶೋಷಣೆಗೊಳಗಾಗುವ ಅಪಾಯವಿದೆ. ಎಪಿಎಂಸಿಯ ಕಾಯಿದೆಯನ್ನು ತಿದ್ದುಪಡಿಯ ಮೂಲಕ ದುರ್ಬಲಗೊಳಿಸಿದರೆ ರೈತರು ಶೋಷಣೆಗೊಳಗಾದಾಗ ಯಾವುದೇ ರಕ್ಷಣೆ ನೀಡಲು ಸಾಧ್ಯವಾಗದು ಎಂದು ರೈತರ ಪರವಾಗಿ ಬ್ಯಾಟ್ ಮಾಡಿದ್ದಾರೆ.

LEAVE A REPLY

Please enter your comment!
Please enter your name here