ಮೈಸೂರು ಡಿಸಿ ನಿವಾಸದಲ್ಲಿ 50 ಲಕ್ಷದ ಈಜುಕೊಳ ನಿರ್ಮಾಣ- ವರದಿ ಕೇಳಿದ ರಾಜ್ಯ ಸರ್ಕಾರ

ಮೈಸೂರು ಜಿಲ್ಲಾಧಿಕಾರಿಗಳ ಅಧಿಕೃತ ನಿವಾಸದಲ್ಲಿ 50 ಲಕ್ಷ ರೂಪಾಯಿ ವೆಚ್ಚದಲ್ಲಿ ಈಜುಕೊಳ ನಿರ್ಮಿಸಲಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ವರದಿ ಸಲ್ಲಿಸುವಂತೆ ಮೈಸೂರು ಪ್ರಾದೇಶಿಕ ಆಯುಕ್ತರಿಗೆ ರಾಜ್ಯ ಸರ್ಕಾರ ಆದೇಶಿಸಿದೆ.

50 ಲಕ್ಷ ರೂಪಾಯಿ ವೆಚ್ಚದಲ್ಲಿ ಈಜುಕೊಳ ಮತ್ತು ಜಿಮ್ ನಿರ್ಮಾಣ ಮಾಡಲಾಗುತ್ತಿದೆ ಮತ್ತು ಜಿಲ್ಲಾಧಿಕಾರಿ ಕಚೇರಿ ಪಾರಂಪರಿಕ ಕಟ್ಟಡವಾಗಿದ್ದು ಅಲ್ಲಿ ಯಾವುದೇ ಕಾಮಗಾರಿಗಳನ್ನು ನಡೆಸಲು ಅವಕಾಶವಿಲ್ಲವೆಂಬ ದೂರಿನ ಹಿನ್ನೆಲೆಯಲ್ಲಿ ತನಿಖೆಗೆ ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪೂರ್ಣ ಪ್ರಮಾಣದ ವರದಿಯನ್ನು ಸಲ್ಲಿಸುವಂತೆ ಪ್ರಾದೇಶಿಕ ಆಯುಕ್ತರಿಗೆ ಕಂದಾಯ ಇಲಾಖೆ ಆದೇಶ ನೀಡಿದೆ.

ಮೈಸೂರು ಜಿಲ್ಲಾಧಿಕಾರಿಗಳ ನಿವಾಸವಾದ ಪಾರಂಪರಿಕ ಕಟ್ಟಡಕ್ಕೆ ಧಕ್ಕೆ ಉಂಟಾಗುತ್ತಿದೆ ಎಂದು ಜೆಡಿಎಸ್ ಶಾಸಕರೂ ಆಗಿರುವ ಸಾ ರಾ ಮಹೇಶ್, ಮೈಸೂರು ಪಾಲಿಕೆ ಸದಸ್ಯ ಕೆ ವಿ ಮಲ್ಲೇಶ್ ಮತ್ತು ವಿಶ್ವ ಮಾನವ ಹಕ್ಕುಗಳ ಸೇವಾ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ಸಿದ್ದಲಿಂಗೇಗೌಡ ಎಂಬವರು ಸಲ್ಲಿಸಿದ್ದ ದೂರಿನ ಹಿನ್ನೆಲೆಯಲ್ಲಿ ವರದಿಗೆ ಸರ್ಕಾರ ಸೂಚಿಸಿದೆ.

ಇತ್ತೀಚೆಗೆ ಮೈಸೂರು ಸಂಸದ ಪ್ರತಾಪ್ ಸಿಂಹ ಕೂಡಾ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯಿAದ ಈಜುಕೊಳ ನಿರ್ಮಾಣದ ಬಗ್ಗೆ ಲೆಕ್ಕ ಕೇಳಿದ್ದರು. ಜನರ ಸಂಕಷ್ಟದ ಹೊತ್ತಲ್ಲಿ ಈಜುಕೊಳ ನಿರ್ಮಿಸುತ್ತಿರುವ ಜಿಲ್ಲಾಧಿಕಾರಿಯಿಂದ ಜನಪ್ರತಿನಿಧಿಗಳು ಬುದ್ಧಿ ಕಲಿಯುವ ಅಗತ್ಯವಿಲ್ಲ ಎಂದು ಕಿಡಿಕಾರಿದ್ದರು.

 

LEAVE A REPLY

Please enter your comment!
Please enter your name here