ಮೈಶುಗರ್‌ ಕಾರ್ಖಾನೆ ಅಭಿವೃದ್ಧಿಗೆ ಪಟ್ಟಭದ್ರ ಹಿತಾಸಕ್ತಿ, ರಾಜಕೀಯ ಒತ್ತಡಗಳೇ ಅಡ್ಡಿ – ಸಂಸದೆ ಸುಮಲತಾ ಆಕ್ರೋಶ

ಪಟ್ಟಭದ್ರ ಹಿತಾಸಕ್ತಿಗಳಿಂದ ಮತ್ತು ಈಗಿನ ರಾಜಕೀಯ ಒತ್ತಡಗಳ ಕಾರಣದಿಂದ ಮಂಡ್ಯದಲ್ಲಿರುವ ಮೈಶುಗರ್‌ ಕಾರ್ಖಾನೆಯ ಖಾಸಗೀಕರಣದ ಗೊಂದಲ ಉಂಟಾಗಿದೆ. ಸರ್ಕಾರದಿಂದ 428 ಕೋಟಿಗೂ ಮೇಲ್ಪಟ್ಟು ಹಣ ಬಿಡುಗಡೆಯಾಗಿದ್ದರೂ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್‌ ಆಕ್ರೋಶ ಹೊರಹಾಕಿದ್ದಾರೆ.

ಮೈಶುಗರ್‌ ಸಕ್ಕರೆ ಕಾರ್ಖಾನೆಯ ಪುನಶ್ಚೇತನ ಸಂಬಂಧ ವಿಧಾಸಸೌಧದಲ್ಲಿ ಸಕ್ಕರೆ ಸಚಿವ ಶಿವರಾಂ ಹೆಬ್ಬಾರ್‌ ನೇತೃತ್ವದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಮಂಡ್ಯ ಉಸ್ತುವಾರಿ ಸಚಿವ ಕೆ ಸಿ ನಾರಾಯಣಗೌಡ, ಸಂಸದೆ ಸುಮಲತಾ ಅಂಬರೀಶ್‌ ಮತ್ತು ರೈತ ಮುಖಂಡರು ಭಾಗವಹಿಸಿದ್ದರು.

ಸರ್ಕಾರ ಅಥವಾ ಖಾಸಗಿ ಯಾರು ಬೇಕಾದರೂ ಕಾರ್ಖಾನೆ ನಡೆಸಲಿ. ಆದರೆ ಬೆಳೆದ ಕಬ್ಬುಗಳನ್ನು ಖರೀದಿಸಿ ನಿಗದಿತ ಸಮಯದೊಳಗೆ ರೈತರಿಗೆ ಹಣ ಪಾವತಿಸಬೇಕು ಎಂದು ಆಗ್ರಹಿಸಿದರು.

ಸಕ್ಕರೆ ಕಾರ್ಖಾನೆಯನ್ನು ಪುನರಾರಂಭಿಸುವ ಸಂದರ್ಭದಲ್ಲಿ ಗುತ್ತಿಗೆ ರೂಪದಲ್ಲಿ ಕಾರ್ಖಾನೆ ಆವರಣದಲ್ಲಿರುವ ಕಬ್ಬು ಅರೆಯುವ ಘಟಕ, ಡಿಸ್ಟಿಲರಿ ಘಟಕ,  ವಿದ್ಯುತ್ ಉತ್ಪಾದನಾ ಘಟಕ ಇವುಗಳನ್ನು ಒಳಗೊಂಡಂತೆ ಇರುವ ಆವರಣವನ್ನು ಮಾತ್ರ ಗುತ್ತಿಗೆ ನೀಡಬೇಕು. ಕಾರ್ಖಾನೆಯ ಉಳಿದ ಆಸ್ತಿಯನ್ನು ಗುತ್ತಿಗೆ ನೀಡಬಾರದು ಎಂದು ಸುಮಲತಾ ಹೇಳಿದ್ದಾರೆ.

ಒಂದು ವೇಳೆ ಸಕ್ಕರೆ ಕಾರ್ಖಾನೆ ಬ್ಯಾಂಕ್ ಹಾಗೂ ಕಬ್ಬು ಬೆಳೆಗಾರರ ನಡುವೆ ತ್ರಿಪಕ್ಷೀಯ ಒಪ್ಪಂದ ಮಾಡಿದ್ದಲ್ಲಿ ಕಬ್ಬು ಬೆಳೆಗಾರರಿಗೆ ಕಚ್ಚಾ ಕಬ್ಬಿನ ಮೊದಲೇ ನಿಗದಿಪಡಿಸಿ ಪಾವತಿಸಬೇಕು ಎಂದು ಸಲಹೆ ನೀಡಿದ್ದಾರೆ.

ಖಾಸಗೀಕರಣ ಮಾಡಿದ್ದಲ್ಲಿ ಟೆಂಡರ್ ಅನುಷ್ಠಾನಕ್ಕೆ ತಾಂತ್ರಿಕವಾಗಿ ಹೆಚ್ಚು ಕಾಲಾವಕಾಶ ಬೇಕಾಗಿದ್ದು, ಈ ವರ್ಷ ಕಬ್ಬು ಅರೆಯುವ ವೇಳೆ ಸರ್ಕಾರದಿಂದ ವಿಶೇಷ ಅನುದಾನ ಕಲ್ಪಿಸಿ ಕಾರ್ಖಾನೆ ಪುನರ್  ಚಾಲನೆಗೊಳಿಸಬೇಕು ಎಂದು ಸಂಸದೆ ಸುಮಲತಾ ಆಗ್ರಹಿಸಿದ್ದಾರೆ.

ಪುನರ್ ಪರಿಶೀಲನಾ ಸಭೆಗಳನ್ನು ನಡೆಸುತ್ತಾ ಬಂದರೂ ಇದುವರೆಗೆ ಸೂಕ್ತ ನಿರ್ಧಾರ ಕೈಗೊಂಡಿಲ್ಲ. ಆದರೆ ಕಾರ್ಖಾನೆ ಆರಂಭಕ್ಕೆ ಇನ್ನೆರಡು ತಿಂಗಳು ಉಳಿದಿದ್ದು, ಈ ಹಿನ್ನೆಲೆಯಲ್ಲಿ ಮತ್ತೆ ಪುನರ್‌ ಪರಿಶೀಲನಾ ಸಭೆ ನಡೆಸುವುದರ ಬದಲು ಕಾರ್ಖಾನೆ ಆರಂಭಿಸಲು ಅಂತಿಮ ನಿರ್ಧಾರ ಕೈಗೊಳ್ಳಬೇಕು ಎಂದು ಮಂಡ್ಯ ಸಂಸದೆ ಸುಮಲತಾ ಸಭೆಯಲ್ಲಿ ಆಗ್ರಹಿಸಿದ್ದಾರೆ.

ಸಭೆಯಲ್ಲಿ ಮಾತಾಡಿದ ಸಕ್ಕರೆ ಸಚಿವರಾದ ಹೆಬ್ಬಾರ್ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸೂಕ್ತ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

LEAVE A REPLY

Please enter your comment!
Please enter your name here