ಮೇ 4ರಿಂದ ಕರ್ನಾಟಕದಲ್ಲಿ ಲಾಕ್‌ಡೌನ್‌ ಲೆಕ್ಕಾಚಾರವೇ ಸಂಪೂರ್ಣ ಬದಲಾಗುತ್ತಾ..? – ಇಲ್ಲಿ ಮಾತ್ರ ಲಾಕ್‌ಡೌನ್‌ ಇರಬಹುದು

ಮೇ4ರಿಂದ ಬಳಿಕ ಲಾಕ್‌ಡೌನ್‌ನ ಸ್ವರೂಪದಲ್ಲಿ ಮಹತ್ವದ ಬದಲಾವಣೆ ಆಗುವ ಸುಳಿವು ನೀಡಿದ್ದಾರೆ ಸಿಎಂ ಯಡಿಯೂರಪ್ಪ. ಕಂಟೈನ್‌ಮೆಂಟ್‌ ಝೋನ್‌ಗಳನ್ನು ಹೊರತುಪಡಿಸಿ ಉಳಿದ ಕಡೆಗಳಲ್ಲಿ ಎಲ್ಲಾ ರೀತಿಯ ಕೈಗಾರಿಕೆಗಳಿಗೆ ಅನುಮತಿ ನೀಡಲಾಗುತ್ತದೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

ಕಂಟೈನ್‌ಮೆಂಟ್‌ ಝೋನ್‌ ಎಂದರೆ ಕೊರೋನಾ ಸೋಂಕಿತ ವ್ಯಕ್ತಿ ವಾಸವಿರುವ ಪ್ರದೇಶದ 100 ಮೀಟರ್‌‌ ಸುತ್ತಲಿನ ಪ್ರದೇಶ ಅಷ್ಟೇ. ಬೆಂಗಳೂರಲ್ಲಿ 42 ವಾರ್ಡ್‌ಗಳಲ್ಲಿ ಕೇವಲ 26 ಕಂಟೈನ್‌ಮೆಂಟ್‌ಝೋನ್‌ಗಳಿವೆ ಅಷ್ಟೇ. ಈ ಕಂಟೈನ್‌ಮೆಂಟ್‌ ಝೋನ್‌ಗಿಂತ 5 ಕಿಲೋ ಮೀಟರ್‌ ವ್ಯಾಪ್ತಿಯಲ್ಲಿ ಬಫರ್‌ಝೋನ್‌ ಎಂದು ಗುರುತಿಸಲಾಗುತ್ತದೆ.

ಸದ್ಯಕ್ಕೆ ರೆಡ್‌ಝೋನ್‌, ಯೆಲ್ಲೋ ಝೋನ್‌ ಮತ್ತು ಗ್ರೀನ್‌ಝೋನ್‌ಗಳ ಆಧಾರದಲ್ಲಿ ಆರ್ಥಿಕ ಚಟುವಟಿಕೆಗಳಿಗೆ ಅನುಮತಿ ನೀಡಲಾಗುತ್ತಿದೆ. ಕೊರೋನಾ ಕೇಸ್‌ ಆಧಾರದಲ್ಲಿ ಜಿಲ್ಲೆಗಳಲ್ಲಿ ಬಣ್ಣಗಳ ಆಧಾರದಲ್ಲಿ ವಿಂಗಡಿಸಿದರೂ ಕೊರೋನಾ ಸೋಂಕಿತರು ವಾಸ ಇರುವ ಪ್ರದೇಶವನ್ನ ಕಂಟೈನ್‌ಮೆಂಟ್‌ಝೋನ್‌ ಎಂದು ಕರೆಯಲಾಗುತ್ತದೆ.

ಮಹಾರಾಷ್ಟ್ರ ಸರ್ಕಾರವೂ ಇದೇ ವಾದವನ್ನು ಮುಂದಿಟ್ಟಿದೆ. ಕೊರೋನಾ ಕೇಸ್‌ ಪತ್ತೆ ಆದ ಇಡೀ ಜಿಲ್ಲೆಯಲ್ಲಿ ಲಾಕ್‌ಡೌನ್‌ ಹೇರುವ ಬದಲು ಎಲ್ಲಿ ಕೊರೋನಾ ಕೇಸ್‌ ಪತ್ತೆ ಆದ ಆ ಏರಿಯಾದಲ್ಲಷ್ಟೇ ಆರ್ಥಿಕ ಚಟುವಟಿಕೆಗಳಿಗೆ ನಿರ್ಬಂಧ ಹೇರಿ ಆ ಜಿಲ್ಲೆಯ ಉಳಿದ ಕಡೆ ಅವಕಾಶ ಮಾಡಿಕೊಡಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿತ್ತು.

ಬೆಂಗಳೂರಲ್ಲಿ ಮತ್ತು ರಾಜ್ಯದ ಇತರೆ ಜಿಲ್ಲೆಗಳಲ್ಲಿ ಕಂಟೈನ್‌ಮೆಂಟ್‌ ಝೋನ್‌ ಹೊರತುಪಡಿಸಿ ಉಳಿದ ಕಡೆಗಳಲ್ಲಿ ಎಲ್ಲಾ ರೀತಿಯ ಕೈಗಾರಿಕೆಗಳ ಆರಂಭಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಸಂಪುಟ ಸಭೆಯ ಬಳಿಕ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

ಬೆಂಗಳೂರು ಸೇರಿದಂತೆ ಕರ್ನಾಕಟದಲ್ಲಿ ಕೊರೋನಾ ಕೇಸ್‌ನ ಸಂಖ್ಯೆ ಕಡಿಮೆ ಆಗುತ್ತಿದೆ. ಬೆಂಗಳೂರಲ್ಲಿ ಹೆಚ್ಚೇನೂ ಕೇಸ್‌ ವರದಿ ಆಗಿಲ್ಲ. ಒಂದು ವೇಳೆ ಕೊರೋನಾ ಕೇಸ್‌ ಇಳಿಕೆ ಇದೇ ರೀತಿ ಮುಂದುವರಿದರೆ ಆಗ ನಮಗೆ ಬೆಂಗಳೂರು ಮತ್ತು ಉಳಿದ ಕಡೆಗಳಲ್ಲಿ ಕೈಗಾರಿಕೆಗಳನ್ನು ತೆರೆಯಲು ಸಹಕಾರಿ ಆಗಲಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

ಮಾಲ್‌, ಹೋಟೆಲ್‌ ತೆರೆಯುತ್ತವಾ..?

ಸದ್ಯಕ್ಕೆ ಮಾಲ್‌ ಮತ್ತು ಹೋಟೆಲ್‌ಗಳನ್ನು ತೆರೆಯುವ ನಿರ್ಧಾರ ನಮ್ಮ ಮುಂದಿಲ್ಲ. ಆದ್ರೆ ಹೋಟೆಲ್‌ಗಳಲ್ಲಿ ಪಾರ್ಸೆಲ್‌ಗೆ ಅವಕಾಶ ನೀಡಲಾಗಿದೆ. ಮದ್ಯ ಮಾರಾಟ, ಸಲೂನ್‌ ಮತ್ತು ರೆಸ್ಟೋರೆಂಟ್‌ ಮೇ ೩ರವರೆಗೆ ಬಂದ್‌ ಆಗಿರುತ್ತವೆ. ಕೇಂದ್ರದ ಆದೇಶದಂತೆ ಮೇ ೩ರ ಬಳಿಕ ನಿರ್ಧಾರ ಕೈಗೊಳ್ಳಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಎಲ್ಲ ರೀತಿಯ ಆರ್ಥಿಕ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡುತ್ತಾರೆ ಎಂಬ ನಂಬಿಕೆ ಇದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

ಪಾಸ್‌ ವ್ಯವಸ್ಥೆ:

ಕೈಗಾರಿಕೆಗಳನ್ನು ತೆರೆದಾಗ ಆಗ ಜಿಲ್ಲೆಗಳ ನಡುವೆ ಓಡಾಟಕ್ಕೆ ಕಂಪನಿಗಳ ಪ್ರಮುಖರಿಗೆ ಪಾಸ್‌ಗಳನ್ನು ನೀಡಲಾಗುತ್ತದೆ ಎಂದು ಕಾನೂನು ಸಚಿವ ಮಾಧುಸ್ವಾಮಿ ಹೇಳಿದ್ದಾರೆ.

ಸಿಲುಕಿಕೊಂಡವರು ಓಡಾಡಬಹುದು:

ಇನ್ನು ಬೇರೆ ಜಿಲ್ಲೆಗಳಲ್ಲಿ ಸಿಲುಕಿಕೊಂಡಿರುವ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು ಮತ್ತು ಇತರರು ತಮ್ಮತಮ್ಮ ಜಿಲ್ಲೆಗಳಿಗೆ ವಾಪಸ್‌ ಹೋಗಲು ಒಂದು ಬಾರಿಗೆ ಅವಕಾಶ ನೀಡಲಾಗುತ್ತದೆ ಎಂದೂ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

LEAVE A REPLY

Please enter your comment!
Please enter your name here