ಮೂರು ತಿಂಗಳು ಸಾಲ ಕಟ್ಬೇಕಾ..? ಬೇಡ್ವಾ..? ಯಾವುದರಿಂದ ಲಾಭ..? ಸಂಪೂರ್ಣ ಓದಿದ ಮೇಲೆ ನೀವೇ ಡಿಸೈಡ್‌ ಮಾಡಿ

ಶುಕ್ರವಾರ ಅಂದರೆ ಮಾರ್ಚ್‌ 27ರಂದು ಆರ್‌ಬಿಐ ಮಹತ್ವದ ಸುದ್ದಿಗೋಷ್ಢಿಯನ್ನು ನಡೆಸಿ ಬಹುನಿರೀಕ್ಷಿತ ಘೋಷಣೆಯೊಂದನ್ನು ಮಾಡಿತ್ತು. ಮಾರ್ಚ್‌ 24ರಂದು ಪ್ರಧಾನಿ ನರೇಂದ್ರ ಮೋದಿ ರಾತ್ರಿ 8 ಗಂಟೆಗೆ ಘೋಷಿಸಿದ್ದ 21 ದಿನಗಳ ದೇಶವ್ಯಾಪಿ ಲಾಕ್‌ಡೌನ್‌ನಿಂದ ಮನೆಯಲ್ಲಿ ಕೂತು ಟಿವಿ ನೋಡುತ್ತಿದ್ದ ಜನರಿಗೆ ಆರ್‌ಬಿಐ ಮುಖ್ಯಸ್ಥ ಶಕ್ತಿಕಾಂತ್‌ ದಾಸ್‌ರ ಘೋಷಣೆ ನೆಮ್ಮದಿ ನೀಡಿ ನಿರಾಳರನ್ನಾಗಿ ಮಾಡಿತ್ತು. ಆದರೆ ಐದೇ ದಿನದಲ್ಲಿ ಆ ಖುಷಿಯೆಲ್ಲವೂ ಧುತ್ತೆಂದು ಮಳೆಯಂತೆ ಬಂದು ಹೋಗಿ ಇಷ್ಟೇನಾ ಎನ್ನುವ ಪರಿಸ್ಥಿತಿಗೆ ಬಂದು ನಿಂತಿದೆ.

ಹೌದು ಮಾರ್ಚ್‌ 1ರಿಂದ ಶುರುವಾಗಿ ಮೇ 31ರವರೆಗೆ ಸಾಲ ಕಟ್ಟುವ ಅಗತ್ಯವಿಲ್ಲವೆಂದು ಆರ್‌ಬಿಐ ಕೊಟ್ಟಿದ್ದ ವಾಗ್ದಾನದ ಸ್ಪಷ್ಟ ಚಿತ್ರಣ ಈಗ ಸಿಕ್ಕಿದೆ.

ಆರ್‌ಬಿಐ ಹೇಳಿದ್ದೇನು..?

ಆರ್‌ಬಿಐ ಮಾರ್ಗಸೂಚಿ ಪ್ರಕಾರ ರಾಷ್ಟ್ರೀಕೃತ-ಖಾಸಗಿ ಮತ್ತು ಶೆಡ್ಯೂಲ್ಡ್‌ ಒಳಗೊಂಡಂತೆ ವಾಣಿಜ್ಯಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು, ಗೃಹ ಹಣಕಾಸು ಕಂಪನಿಗಳು ಮತ್ತು ಸೂಕ್ಷ್ಮ ಹಣಕಾಸು ಕಂಪನಿಗಳು ಒಳಗೊಂಡಂತೆ ಎಲ್ಲ ರೀತಿಯ ಬ್ಯಾಂಕೇತರ ಹಣಕಾಸು ಸಂಸ್ಥೆ(NBFC) ಗಳಲ್ಲಿ ಪಡೆದಿರುವ ಸಾಲವನ್ನು ಮೂರು ತಿಂಗಳ ಮಟ್ಟಿಗೆ ಪಾವತಿಸುವ ಅಗತ್ಯವಿಲ್ಲ, ಮೂರು ತಿಂಗಳ ಬಳಿಕ ಪಾವತಿಸಬಹುದು ಎಂದಿತ್ತು.

ಯಾವೆಲ್ಲ ಸಾಲಗಳು..?

ಆರ್‌ಬಿಐ ಹೇಳಿದ ಪ್ರಕಾರ ವೈಯಕ್ತಿಕ ಸಾಲ, ಕೃಷಿ ಸಾಲ, ಬೆಳೆ ಸಾಲ, ವಾಹನ ಸಾಲ, ಗೃಹ ಸಾಲ, ಆಭರಣ ಸಾಲ, ಚಿಲ್ಲರೆ ಸಾಲ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳಿಗೆ ನೀಡಲಾದ ಸಾಲಗಳ ಕಂತಿನ ಪಾವತಿಯನ್ನು ಮೂರು ತಿಂಗಳ ಮಟ್ಟಿಗೆ ಕಟ್ಟದೇ ಇರಬಹುದು. ಅಂದರೆ ಮೇ 31ರವರೆಗೆ.

ಬ್ಯಾಂಕುಗಳು ಹೇಳುತ್ತಿರುವುದು ಏನು..?

ಇವತ್ತು ಎಸ್‌ಬಿಐ, ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌, ಕೆನರಾ ಬ್ಯಾಂಕ್, ಬ್ಯಾಂಕ್‌ ಆಫ್‌ ಬರೋಡಾ, ಸಿಂಡಿಕೇಟ್‌ ಬ್ಯಾಂಕ್‌, ಕಾಪೋರೇಷನ್‌ ಬ್ಯಾಂಕ್‌ ಒಳಗೊಂಡಂತೆ ಎಲ್ಲ ರಾಷ್ಟ್ರೀಕೃತ ಬ್ಯಾಂಕುಗಳ ಆರ್‌ಬಿಐ ನೀಡಿದ್ದ ಮಾರ್ಗಸೂಚಿಯನ್ನು ಪಾಲಿಸುವುದಾಗಿ ಘೋಷಿಸಿವೆ.

ಬ್ಯಾಂಕುಗಳ ಪ್ರಕಟಣೆ ಪ್ರಕಾರ ಮಾರ್ಚ್‌ 1ರಿಂದ ಮೇ 31ರವರೆಗೆ ವೈಯಕ್ತಿಕ ಸಾಲ, ಕೃಷಿ ಸಾಲ, ಬೆಳೆ ಸಾಲ, ವಾಹನ ಸಾಲ, ಗೃಹ ಸಾಲ, ಆಭರಣ ಸಾಲ, ಚಿಲ್ಲರೆ ಸಾಲ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳಿಗೆ ನೀಡಲಾದ ಸಾಲಗಳ ಕಂತನ್ನು ಕಡ್ಡಾಯವಾಗಿ ಪಾವತಿಸಬೇಕಿಲ್ಲ.

ಜೊತೆಗೆ ಕ್ರೆಡಿಟ್‌ ಕಾರ್ಡ್‌ ಬಾಕಿ ಪಾವತಿಯನ್ನೂ ಮೂರು ತಿಂಗಳು ಮುಂದೂಡಬಹುದು.

ಸಾಲ ಪಾವತಿ ಮುಂದೂಡಿಕೆ ಎಂದರೆ ಏನು..?

ಬ್ಯಾಂಕುಗಳ ಪ್ರಕಟಣೆ ಪ್ರಕಾರ ಮೇ 31ರ ಬಳಿಕ ಸಾಲದ ಕಂತನ್ನು ಪಾವತಿಸಬಹುದು. ಅಂದರೆ ಜೂನ್‌ನಲ್ಲಿ ಪಾವತಿಸುವುದು ಕಡ್ಡಾಯವಾಗಿದೆ.

ಬಡ್ಡಿ ಕಥೆ ಏನು..?

ಆದರೆ ಕಂತಿನ ಪಾವತಿಯನ್ನಷ್ಟೇ ಮುಂದೂಡಿಕೆ ಮಾಡಲಾಗುತ್ತದೆ. ಅಂದರೆ ಒಂದು ವೇಳೆ ನೀವು ಕಂತು ಪಾವತಿಸದೇ ಇದ್ದರೂ ತಿಂಗಳಿಗೆ ಸಾಲದ ಮೇಲೆ ಬಡ್ಡಿ ಬೀಳುತ್ತದೆ. ಒಂದು ವೇಳೆ ಮೂರು ತಿಂಗಳ ಬಳಿಕ ಸಾಲದ ಕಂತನ್ನು ಕಟ್ಟಿದರೆ ಆಗ ಮಾರ್ಚ್‌ 1ರಿಂದ ಮೇ 31ರವರೆಗೆ ಹಾಕಲಾಗುವ ಬಡ್ಡಿ, ಬಡ್ಡಿ ಮೇಲಿನ ಚಕ್ರಬಡ್ಡಿ, ಸುಸ್ತಿಬಡ್ಡಿಯನ್ನೂ ಜೂನ್‌ ಬಳಿಕ ಕಟ್ಟುವುದು ಅನಿವಾರ್ಯ.

ಕ್ರೆಡಿಟ್‌ ಕಾರ್ಡ್ ಇದ್ದರೆ..?

ತಜ್ಞರ ಪ್ರಕಾರ ಕ್ರೆಡಿಟ್‌ ಕಾರ್ಡ್‌ ಉಳ್ಳವರು ಇಎಂಐ ಕಟ್ಟುವುದು ಒಳ್ಳೆದು. ಯಾಕೆಂದರೆ ಮೂರು ತಿಂಗಳ ವಿನಾಯಿತಿ ತೆಗೆದುಕೊಂಡು ಇಎಂಐ ಕಟ್ಟದೇ ಇದ್ದರೆ ಮೂರು ತಿಂಗಳ ಬಳಿಕ ನೀವು ಕಟ್ಟಬೇಕಾದ ಮೊತ್ತದ ಜಾಸ್ತಿ ಆಗುತ್ತದೆ. ಯಾಕೆಂದರೆ ಕ್ರೆಡಿಟ್‌ ಕಾರ್ಡ್‌ ಮೇಲೆ ಅಸಲಿ ಮೊತ್ತ ಕಟ್ಟುವುದರಿಂದಷ್ಟೇ ವಿನಾಯಿತಿ ನೀಡಲಾಗಿದೆಯೇ ಹೊರತು ಬಡ್ಡಿಯಿಂದಲ್ಲ. ಸಾಮಾನ್ಯವಾಗಿ ತಡವಾಗಿ ಕ್ರೆಡಿಟ್‌ ಬಿಲ್‌ ಕಟ್ಟಿದರೆ ಆಗ ಬಾಕಿ ಇರುವ ಮೊತ್ತದ ಶೇಕಡಾ 5ರಷ್ಟನ್ನು ಕಟ್ಟಬೇಕಾಗುತ್ತದೆ. ಹೀಗಾಗಿ ಮೂರು ತಿಂಗಳು ನೀವು ಕ್ರೆಡಿಟ್‌ ಕಾರ್ಡ್‌ ಬಿಲ್‌ ಕಟ್ಟದೇ ಹೋದರೆ ಆಗ ಶೇಕಡಾ 6ರಿಂದ 12ರಷ್ಟು ಹೆಚ್ಚುವರಿ ಬಡ್ಡಿಯನ್ನು ಕಟ್ಟಬೇಕಾಗುತ್ತದೆ.

ಲಾಭ ಇಷ್ಟೇ.!

ಅಂದಹಾಗೆ ಆರ್‌ಬಿಐ ಘೋಷಿಸಿರುವ ಮತ್ತು ಈಗ ಬ್ಯಾಂಕ್‌ಗಳು ಜಾರಿಗೊಳಿಸಿರುವ ಸಾಲದ ಕಂತು ಪಾವತಿ ಮುಂದೂಡಿಕೆ ಇಷ್ಟೇ. 1) ಸಾಲದ ಕಂತಿನ ವಿಳಂಬ ಪಾವತಿಗೆ ಬ್ಯಾಂಕುಗಳು ದಂಡವನ್ನು ಹಾಕುವುದಿಲ್ಲ. 2) ಕಂತಿನ ಪಾವತಿ ವಿಳಂಬ ನಿಮ್ಮ ಕ್ರೆಡಿಟ್‌ ಸ್ಕೋರ್‌ ಕಮ್ಮಿ ಮಾಡಲ್ಲ (ಸಾಮಾನ್ಯವಾಗಿ ಗ್ರಾಹಕರ ಕ್ರೆಡಿಟ್‌ ಸ್ಕೋರ್‌ ನೋಡಿಕೊಂಡು ಈತ ಸಾಲ ಮರುಪಾವತಿಯಲ್ಲಿ ಎಷ್ಟು ಪ್ರಾಮಾಣಿಕ ಎಂಬುದನ್ನು ನಿರ್ಧರಿಸಿ ಭವಿಷ್ಯದಲ್ಲಿ ಸಾಲ ಮಂಜೂರು ಮಾಡುತ್ತವೆ).

ವಿ.ಸೂ: ಅಂದಹಾಗೆ ಈ ಎರಡು ಲಾಭ ನೀವು ಕಂತು ಕಟ್ಟಿಲ್ಲ ಅಂದ್ರೂ ಸಿಗುತ್ತದೆ, ಕಟ್ಟಿದರೂ ಸಿಗುತ್ತದೆ.

1 COMMENT

LEAVE A REPLY

Please enter your comment!
Please enter your name here