ಮುಖ್ಯಮಂತ್ರಿ ಯಡಿಯೂರಪ್ಪಗೆ ಫೆಬ್ರವರಿ ತಲೆನೋವು..!

BS Yadiyurappa

ವಿಧಾನಸಭೆಯಿಂದ ವಿಧಾನಪರಿಷತ್‌ನ ಖಾಲಿ ಇರುವ ಒಂದು ಸ್ಥಾನಕ್ಕೆ ಚುನಾವಣೆ ಘೋಷಣೆ ಆಗಿದ್ದು, ಸಂಪುಟ ವಿಸ್ತರಣೆಯ ಯಾವಾಗ ಮಾಡ್ಬೇಕೋ ಯಾರನ್ನು ಮಂತ್ರಿಗಳನ್ನಾಗಿ ಮಾಡಬೇಕು ಎನ್ನುವ ಗೊಂದಲದಲ್ಲೇ ಇರುವ ಮುಖ್ಯಮಂತ್ರಿ ಯಡಿಯೂರಪ್ಪಗೆ ಈಗ ಹೊಸ ತಲೆನೋವು ಶುರುವಾಗಿದೆ.

ಪರಿಷತ್‌ ಸದಸ್ಯರಾಗಿದ್ದ ಕಾಂಗ್ರೆಸ್‌ನ ರಿಜ್ವಾನ್‌ ಅರ್ಷದ್‌ ಶಿವಾಜಿನಗರ ವಿಧಾನಸಭಾ ಕ್ಷೇತ್ರಕ್ಕೆ ನಡೆದಿದ್ದ ಉಪ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆ ಆಗಿದ್ದರು. ಹೀಗಾಗಿ ಅವರು ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈಗ ಆ ಸ್ಥಾನಕ್ಕೆ ಕೇಂದ್ರ ಚುನಾವಣಾ ಆಯೋಗ ಚುನಾವಣೆ ಘೋಷಿಸಿದೆ.

ಫೆಬ್ರವರಿ ೧೭ರಂದು ಮತದಾನ ನಡೆಯಲಿದ್ದು, ಅವತ್ತೇ ಫಲಿತಾಂಶ ಪ್ರಕಟವಾಗಲಿದೆ. ಜನವರಿ ೩೦ರಂದು ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಫೆಬ್ರವರಿ ೬ ನಾಮಪತ್ರ ಸಲ್ಲಿಕೆಗೆ ಕಡೆಯ ದಿನ. ಫೆಬ್ರವರಿ ೭ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಫೆಬ್ರವರಿ ೧೦ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನ.

ಫೆಬ್ರವರಿ ೨೩ಕ್ಕೆ ಉಪ ಮುಖ್ಯಮಂತ್ರಿ ಆಗಿರುವ ಕೃಷಿ ಸಚಿವ ಲಕ್ಷ್ಮಣ ಸವದಿ ಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿ ಆರು ತಿಂಗಳಾಗುತ್ತದೆ. ಕಾನೂನಿನ ಪ್ರಕಾರ ಸದನದ ಸದಸ್ಯರಲ್ಲದವರು ಮುಖ್ಯಮಂತ್ರಿ ಅಥವಾ ಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿದರೆ ಆರು ತಿಂಗಳ ಒಳಗಾಗಿ ವಿಧಾನಸಭೆ ಅಥವಾ ಪರಿಷತ್‌ಗೆ ಆಯ್ಕೆ ಆಗಲೇಬೇಕು. ಇಲ್ಲವಾದರೆ ಹುದ್ದೆಯನ್ನು ಕಳೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಒಂದು ವೇಳೆ ಸವದಿಗೆ ಬಿಜೆಪಿ ಕೊಡದೇ ಹೋದಲ್ಲಿ ಆಗ ಅವರು ರಾಜೀನಾಮೆ ನೀಡುವುದು ಅನಿವಾರ್ಯ ಆಗಲಿದೆ.

ಇನ್ನು ಆರ್‌ ಶಂಕರ್‌. ರಾಣೇಬೆನ್ನೂರಿಂದ ಸೋಲಬಹುದು ಎನ್ನುವ ಕಾರಣಕ್ಕಾಗಿ ಟಿಕೆಟ್‌ ಕೊಡದ ಯಡಿಯೂರಪ್ಪ ಶಂಕರ್‌ರನ್ನು ವಿಧಾನಪರಿಷತ್‌ ಸದಸ್ಯರನ್ನಾಗಿ ಆಯ್ಕೆ ಮಾಡಿ ಸಚಿವರನ್ನಾಗಿ ಮಾಡುವ ವಾಗ್ದಾನ ಮಾಡಿದ್ದರು. ಮೊನ್ನೆಯಷ್ಟೇ ಖಾಸಗಿ ನ್ಯೂಸ್‌ಚಾನೆಲ್‌ಗೆ ಪ್ರತಿಕ್ರಿಯಿಸಿದ್ದ ಶಂಕರ್‌ ಖಾಲಿ ಇರುವ ಪರಿಷತ್‌ ಸ್ಥಾನಕ್ಕೆ ತಮ್ಮನ್ನು ಆಯ್ಕೆ ಮಾಡಿ ಸಚಿವರನ್ನಾಗಿ ಮಾಡುವಂತೆ ಆಗ್ರಹಿಸಿದ್ದರು.

ಇನ್ನು ಎಚ್‌ ವಿಶ್ವನಾಥ್‌ ಮತ್ತು ಎಂ ಟಿ ಬಿ ನಾಗರಾಜ್‌. ಇಬ್ಬರೂ ಉಪ ಚುನಾವಣೆಯಲ್ಲಿ ಸೋತವರು. ವಿಶ್ವನಾಥ್‌ ಸೋಲಿಗೆ ಅವರ ಹಠಮಾರಿತನವೇ ಕಾರಣ ಎಂದು ಮಾತುಗಳು ಕೇಳಿಬರುತ್ತಿದೆ. ಆದ್ರೆ ಎಂಟಿಬಿ ಸೋಲಿಗೆ ಬಿಜೆಪಿ ಬಂಡಾಯವೇ ಕಾರಣ ಎನ್ನುವುದು ಸ್ಪಷ್ಟ. ಹೀಗಾಗಿ ಎಂಟಿಬಿಯನ್ನ ಸಚಿವರನ್ನಾಗಿ ಮಾಡಲು ಪರಿಷತ್‌ ಟಿಕೆಟ್‌ ಕೊಡುತ್ತಾ ಬಿಜೆಪಿ..?

LEAVE A REPLY

Please enter your comment!
Please enter your name here