ಮುಖ್ಯಮಂತ್ರಿ ಉಡಿಯಲ್ಲಿ ಸಂಪುಟ ಕೆಂಡ..!

BS Yadiyurappa

ಬಿಜೆಪಿ ಹೈಕಮಾಂಡ್‍ನ ಅರೆ ಮನಸ್ಸಿನ ಅನುಮತಿಯೊಂದಿಗೆ ಜೆಡಿಎಸ್, ಕಾಂಗ್ರೆಸ್ ಪಕ್ಷದ 17 ಶಾಸಕರಿಂದ ರಾಜೀನಾಮೆ ಕೊಡಿಸಿ, ಹೆಚ್‍ಡಿ ಕುಮಾರಸ್ವಾಮಿ ನೇತೃತ್ವದ ಪತನ ಆಗುವಂತೆ ಮಾಡಿ, ಪಟ್ಟಕ್ಕೇರಿದ ಮುಖ್ಯಮಂತ್ರಿ ಯಡಿಯೂರಪ್ಪ ಹಾದಿ ಸುಗಮವಾಗಿಲ್ಲ. ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತ ಕ್ಷಣದಿಂದ ಯಾವುದೇ ನಿರ್ಧಾರ ಕೈಗೊಳ್ಳುವ ಸ್ವಾತಂತ್ರ್ಯ ಇಲ್ಲದೇ, ಪ್ರತಿಯೊಂದಕ್ಕೂ ಹೈಕಮಾಂಡ್ ಕಡೆ ನೋಡುವಂತೆ ರಾಜಾಹುಲಿ ಖ್ಯಾತಿಯ ಯಡಿಯೂರಪ್ಪರನ್ನು ರಾಷ್ಟ್ರಮಟ್ಟದಲ್ಲಿ ಬೇರೆಯ ರೀತಿ ಬಿಂಬಿಸಲು ಪಕ್ಷದ ವರಿಷ್ಠ ಅಮಿತ್ ಷಾ ಯಶಸ್ವಿ ಆಗಿದ್ದರು.

ಆದರೆ, 17 ವಿಧಾನಸಭೆ ಕ್ಷೇತ್ರಗಳ ಪೈಕಿ 15ಕ್ಕೆ ನಡೆದ ಉಪ ಚುನಾವಣೆಯಲ್ಲಿ 13 ಕ್ಷೇತ್ರಗಳಲ್ಲಿ ಗೆದ್ದ ಬಳಿಕ ಯಡಿಯೂರಪ್ಪ ಸ್ವಲ್ಪ ಉಸಿರಾಡಲು ತೊಡಗಿದರು. ಆದರೆ, ಸಂಪುಟ ವಿಸ್ತರಣೆಗೆ ಅನುಮತಿ ನೀಡದೇ, ಸರ್ಕಾರ ರಚಿಸಲು ಕಾರಣರಾದವರನ್ನು ತ್ರಿಶಂಕು ಸ್ವರ್ಗ/ನರಕದಲ್ಲಿ ನಿಲ್ಲಿಸುವಂತೆ ಹೈಕಮಾಂಡ್ ಮಾಡಿತು. ಶಾಸಕರಾದ 24 ಗಂಟೆಯಲ್ಲಿ ಮಂತ್ರಿಗಳನ್ನಾಗಿ ಮಾಡುತ್ತೇನೆ ಎಂದು ಯಡಿಯೂರಪ್ಪ ಕೊಟ್ಟಿದ್ದ ಮಾತನ್ನು ಹುಸಿ ಮಾಡಿತು.

ಇಷ್ಟೆಲ್ಲಾ ಆದರೂ, ಮುಖ್ಯಮಂತ್ರಿ ಯಡಿಯೂರಪ್ಪ ಹಲ್ಲುಕಚ್ಚಿಕೊಂಡು ಆಡಳಿತ ನಡೆಸುತ್ತಿದ್ದಾರೆ. ಸಂಪುಟ ವಿಸ್ತರಣೆ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಸಂಪುಟ ವಿಸ್ತರಣೆಗೆ ಹೈಕಮಾಂಡ್ ಅನುಮತಿ ನೀಡಿದರೂ, ಗೆದ್ದ ಎಲ್ಲಾ ಶಾಸಕರನ್ನು, ಪರಾಜಿತರಾದ ಇಬ್ಬರು ನಾಯಕರನ್ನು ಮಂತ್ರಿ ಮಾಡಲು ಅವಕಾಶ ನೀಡುವ ಸಾಧ್ಯತೆಗಳು ತುಂಬಾ ಕ್ಷೀಣ. ಪಕ್ಷದ ಮೂಲ ನಿವಾಸಿಗಳು ಅಸಮಾಧಾನಗೊಳ್ಳುತ್ತಾರೆ ಎಂಬ ನೆಪ ಹೇಳಿ ಗೆದ್ದವರ ಪೈಕಿ ಆರರಿಂದ ಏಳು ಮಂದಿಗಷ್ಟೇ ಮಂತ್ರಿಯಾಗಲು ಹೈಕಮಾಂಡ್ ಒಪ್ಪಿಗೆ ಸೂಚಿಸಬಹುದು ಎಂಬ ಮಾತು ರಾಜ್ಯ ರಾಜಕೀಯ ಪಡಸಾಲೆಯಲ್ಲಿ ದಟ್ಟವಾಗಿ ಕೇಳಿಬರುತ್ತಿದೆ. ಇದು ನಿಜವೇ ಆಗಿದ್ದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪಗೆ ಸಂಕಷ್ಟ ಕಟ್ಟಿಟ್ಟ ಬುತ್ತಿ.

ಕೇವಲ ಮಂತ್ರಿಯಾಗುವ ಮಹದಿಚ್ಚೆಯಿಂದ ಹೆಚ್‍ಡಿಕೆ ಸರ್ಕಾರವನ್ನು ಪತನ ಮಾಡಿ ಬಂದವರಿಗೆ ಅಧಿಕಾರ ಕೊಡದಿದ್ದರೇ ಸುಮ್ಮನೆ ಇರುತ್ತಾರೆಯೇ ಖಂಡಿತ ಇಲ್ಲ. ಎಲ್ಲರನ್ನು ಮಂತ್ರಿಗಳನ್ನಾಗಿ ಮಾಡದಿದ್ದರೇ, ಬಿಎಸ್‍ವೈ ಪಾಲಿಗೆ ಮಿತ್ರಮಂಡಳಿಯೇ ಸೆರಗಿನ ಕೆಂಡವಾಗಿ ಪರಿಣಮಿಸುವುದು ದಿಟ.

ಸೋತವರನ್ನು ಮಂತ್ರಿ ಮಾಡುವುದಿಲ್ಲ ಎಂದು ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟವಾಗಿ ಹೇಳಿದ್ದಾರೆ. ಮುಖ್ಯಮಂತ್ರಿಗಳ ಹೇಳಿಕೆಗೆ ಈಗಾಗಲೇ ಅಪಸ್ವರ ವ್ಯಕ್ತವಾಗಿದೆ. ಸೋತರೂ ಸಚಿವ ಸ್ಥಾನದ ನಿರೀಕ್ಷೆಯಲ್ಲಿರುವ ಹೆಚ್ ವಿಶ್ವನಾಥ್ ಮತ್ತು ಎಂಟಿಬಿ ನಾಗರಾಜ್, ನಮ್ಮನ್ನು ಮಂತ್ರಿಗಳನ್ನಾಗಿ ಮಾಡದೇ ಅದು ಹೇಗೆ ಸಂಪು ವಿಸ್ತರಣೆ ಮಾಡುತ್ತೀರಿ. ನಮಗೆ ಕೊಟ್ಟ ಮಾತು ಅಷ್ಟು ಬೇಗ ಮರೆತು ಹೋಯಿತೇ..? ಇಲ್ಲ ಅವರು ಮರೆತುಹೋಗಲು ಸಾಧ್ಯವಿಲ್ಲ. ಅವರು ನಮಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆ ಎಂಬ ನಂಬಿಕೆಯಿದೆ. ಕಾದು ನೋಡುತ್ತೇವೆ ಎನ್ನುವ ಮೂಲಕ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ. ಅಲ್ಲಿಗೆ ಸಣ್ಣದಾಗಿ ಕಿಡಿ ಹೊತ್ತಿಕೊಳ್ಳುವ ಸೂಚನೆ ಸಿಕ್ಕಂತಾಗಿದೆ.

ಗೆದ್ದ 11 ಮಂದಿ ಪೈಕಿ ಯಾರನ್ನು ಮಂತ್ರಿ ಮಾಡಲಾಗುತ್ತದೆ. ಯಾರನ್ನು ಯಾವ ಕಾರಣ/ನೆಪ ಒಡ್ಡಿ ಮಂತ್ರಿ ಕುರ್ಚಿಯಿಂದ ದೂರ ಉಳಿಸಲಾಗುತ್ತದೆ ಎನ್ನುವುದು ಖಚಿತವಾಗಿಲ್ಲ. ಅದು ಸದ್ಯಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಹೈಕಮಾಂಡ್‍ಗೆ ಅಷ್ಟೇ ಗೊತ್ತು. ಇಷ್ಟು ದಿನ ಒಗ್ಗಟ್ಟಾಗಿದ್ದ 17 ಮಂದಿ, ಮುಂದೆ ಏನು ಮಾಡುತ್ತಾರೆ ಎನ್ನುವ ವಿಚಾರ ತೀವ್ರ ಕುತೂಹಲಕಾರಿ. ಮಂತ್ರಿ ಸ್ಥಾನ ಸಿಗದ ಶಾಸಕರ ಪರವಾಗಿ ಮಂತ್ರಿ ಸ್ಥಾನ ಸಿಗೋ ಶಾಸಕರು ನಿಲ್ಲುತ್ತಾರಾ..? ಅಥವಾ ಮಂತ್ರಿ ಸ್ಥಾನ ಸಿಕ್ಕ ಕೂಡಲೇ ಮಾತು ಬದಲಿಸುತ್ತಾರಾ ಎಂಬ ಪ್ರಶ್ನೆ ಇಲ್ಲಿ ಕಾಡುತ್ತದೆ. ಮಂತ್ರಿ ಸ್ಥಾನ ಸಿಗದವರಿಗೆ ಪ್ರಬಲ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ ನೀಡಿ ಸಮಾಧಾನ ಮಾಡುವ ಪ್ರಯತ್ನವನ್ನು ಮುಖ್ಯಮಂತ್ರಿಗಳು ಮಾಡಬಹುದು. ಆದರೆ, ಇದು ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತದೆ ಎನ್ನುವ ವಿಚಾರವೂ ಅಷ್ಟೇ ಕುತೂಹಲಕಾರಿ.

ಮುಂದೆ ನಡೆಯುವುದು ಸಂಪುಟ ವಿಸ್ತರಣೆಯೋ..? ಸಂಪುಟ ಪುನಾರಚನೆಯೋ ಎನ್ನುವ ಕುತೂಹಲ ಬಿಜೆಪಿ ಪಾಳಯದಲ್ಲಿಯೇ ಇದೆ. ಡಿಸಿಎಂ ಲಕ್ಷ್ಮಣ ಸವದಿಯವರನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆಗಳೆ ಹೆಚ್ಚು. ಯಾವುದೇ ಸದನದ ಸದಸ್ಯರಲ್ಲದ ಲಕ್ಷ್ಮಣ ಸವದಿಯನ್ನು ಮಂತ್ರಿಯಾಗಿ ಮುಂದುವರೆಸುವ ಆಸಕ್ತಿಯನ್ನು ಬಿಜೆಪಿ ಹೈಕಮಾಂಡ್ ಹೊಂದಿದ್ದರೇ ಇಷ್ಟು ಹೊತ್ತಿಗೆ ರಿಜ್ವಾನ್ ಅರ್ಷದ್‍ರಿಂದ ತೆರವಾದ ಎಂಎಲ್‍ಸಿ ಸ್ಥಾನಕ್ಕೆ ಅವರೇ ಅಭ್ಯರ್ಥಿ ಎಂದು ಘೋಷಣೆ ಮಾಡಬೇಕಿತ್ತು. ಆದರೆ, ಮಹಾರಾಷ್ಟ್ರ ಚುನಾವಣೆಯ ಉಸ್ತುವಾರಿ ಹೊತ್ತು ಅದರಲ್ಲಿ ವೈಫಲ್ಯ ಕಂಡ ಸವದಿಯ ಅಧಿಕಾರಕ್ಕೆ ಕತ್ತರಿ ಹಾಕಲು ಹೈಕಮಾಂಡ್ ಚಿಂತನೆ ನಡೆಸಿದೆ. ಜೊತೆಗೆ ಇಬ್ಬರು ಸಚಿವರಿಗೆ ಕೊಕ್ ಕೊಡುವ ಮಾತು ಕೇಳಿಬರುತ್ತಿದೆ. ಇದು ನಿಜವೇ ಆದಲ್ಲಿ, ಮುಖ್ಯಮಂತ್ರಿ ಯಡಿಯೂರಪ್ಪಗೆ ಪಕ್ಷದೊಳಗಿನ ಅಸಮಾಧಾನ ನಿಭಾಯಿಸುವುದು ಕಷ್ಟ ಆಗಬಹುದು.

ಸದ್ಯ ಮುಖ್ಯಮಂತ್ರಿ ಯಡಿಯೂರಪ್ಪ ಸ್ಥಿತಿ ಅತ್ತ ದರಿ, ಇತ್ತ ಪುಲಿ ಎನ್ನುವಂತಾಗಿದೆ. ಮಿತ್ರಮಂಡಳಿಗೆ ಮುಖ್ಯಮಂತ್ರಿ ಕೊಟ್ಟ ವಚನ ಉಳಿಸಿಕೊಳ್ಳುತ್ತಾರಾ..? ಇಲ್ಲ, ವಚನ ಭ್ರಷ್ಟರಾಗುತ್ತಾರಾ..? ಎನ್ನುವುದು ಈ ಮಾಸಾಂತ್ಯದೊಳಗೆ ಗೊತ್ತಾಗಲಿದೆ. ಇದರಲ್ಲಿ ಯಾವುದೇ ಘಟಿಸಿದರೂ, ಬಿಎಸ್‍ವೈ ಉಡಿಯಲ್ಲಿ ಕೆಂಡ ಮಾತ್ರ ಉಳಿದುಕೊಂಡೇ ತೀರುತ್ತದೆ. ಆ ಕೆಂಡ ತಕ್ಷಣವೇ ಸುಡುತ್ತದೆಯೋ..? ಅಥವಾ ಮುಂದಿನ ಮೂರು ವರ್ಷಗಳ ಕಾಲವೂ ಸುಡುತ್ತಲೇ ಇರುತ್ತದೆಯೋ ಅನ್ನುವುದು ಇಲ್ಲಿ ಮಿಲಿಯನ್ ಡಾಲರ್ ಪ್ರಶ್ನೆ.

LEAVE A REPLY

Please enter your comment!
Please enter your name here