ಮಾಸ್ಕ್​ ಮತ್ತು ಸಾಮಾಜಿಕ ಅಂತರ – ಜನಸಾಮಾನ್ಯರು ಮತ್ತು ರಾಜಕಾರಣ..!

ಕೋವಿಡ್​ ಎಂಬ ಮಹಾಮಾರಿ ಹೋಯ್ತಾ..? ನಿಮಗೆ ಕೊರೋನಾ ಎಂದರೆ ಭಯವೇ ಇಲ್ವಾ..? ದಿನಾ ಬೆಳಗಾದರೆ ಟಿವಿ ಮಾಧ್ಯಮಗಳು ಜನರ ಬಾಯಿಗೆ ಮೈಕ್​ ಹಿಡಿದು ಕೇಳುವ ಪ್ರಶ್ನೆಗಳಿವು. ಹೂ-ಹಣ್ಣು, ತರಕಾರಿ, ದಿನಸಿ ಖರೀದಿಗೆ ಮಾರುಕಟ್ಟೆಗೆ ಬರುವ ಜನರನ್ನು, ಅಲ್ಲಿನ ವ್ಯಾಪಾರಸ್ಥರನ್ನು, ಬೆನ್ನುಬಗ್ಗಿಸಿ ದುಡಿಯುವ ಕಾರ್ಮಿಕರನ್ನು ನಿಮ್ಮ ಮಾಸ್ಕ್​ ಎಲ್ಲಿ, ಸಾಮಾಜಿಕ ಅಂತರ ಎಲ್ಲಿ ಎಂದು ಪ್ರಶ್ನಿಸುವ ಧಾರವಾಹಿಗಳು ನಿತ್ಯದ ಕರ್ಮಗಳಾಗಿ ಬಿಟ್ಟಿವೆ. ಬಸ್​ನಲ್ಲಿ ಹೋದರೆ ಅಕ್ಕ-ಪಕ್ಕ ಕೂತ ಪ್ರಯಾಣಿಕರು ಟಿವಿಯ ಪರದೆಗಳಲ್ಲಿ ಆ ದಿನದ ಆರೋಪಿಗಳು. ಜೀವನೋಪಾಯಕ್ಕಾಗಿ ಓಡಾಡುವ ಮಂದಿಯನ್ನು ದಾರಿಯಲ್ಲಿ ಅಡ್ಡ ನಿಲ್ಲಿಸಿ ಅವರಿಗೆ ಕೋವಿಡ್​ ಕಾಳಜಿಯ ಪ್ರಶ್ನೆಗಳನ್ನು ಎಸೆದರೆ ಏನೂ ಹೇಳಲು ತೋಚದೇ ತಬ್ಬಿಬ್ಬಾಗುವ ಪರಿಸ್ಥಿತಿ.

ನಮ್ಮ Facebook ಪೇಜ್​ ಫಾಲೋ ಮಾಡಿ. ನಮ್ಮ YouTube ಸಬ್​ಸ್ಕ್ರೈಬ್​ ಮಾಡಿ ಶೇರ್​ ಮಾಡಿ.

ಆದರೆ ಜೀವವೇ ಮುಖ್ಯ ಎಂದು ಪ್ರಧಾನಿ ನರೇಂದ್ರ ಮೋದಿಯವರೇ ಆರಂಭದಲ್ಲಿ ತಾವು ಆಡಿದ್ದ ಮಾತನ್ನು ಆಮೇಲೆ ಅವರೇ ಜೀವದ ಜೊತೆಗೆ ಜೀವನವೂ ಮುಖ್ಯ ಎಂದು ಬದಲಾಯಿಸಿಕೊಂಡರು.

ಜೀವದ ಜೊತೆಗೆ ಜೀವನವೂ ಮುಖ್ಯ ಎಂಬ ಬದಲಾದ ಘೋಷ ವಾಕ್ಯಕ್ಕೆ ತಕ್ಕಂತೆ ಕಾಲಕ್ಕನುಗುಣವಾಗಿ ಅನ್​​​ಲಾಕ್​​ ಪ್ರಕ್ರಿಯೆಗಳು ಆರಂಭವಾದವು. ಆರ್ಥಿಕತೆ ಮುಖ್ಯ ಎಂಬ ಕಾರಣಕ್ಕಾಗಿ ಎಲ್ಲ ಆರ್ಥಿಕ ಚಟುವಟಿಕೆಗಳಿಗೆ ಅನುಮತಿಸಲಾಯಿತು. ಮಾರುಕಟ್ಟೆಗಳು ತೆರೆದವು. ಮದ್ಯದಂಗಡಿಗಳು ತೆರೆದವು. ಮಾಲ್​ಗಳು ತೆರೆದವು. ರೈಲು, ವಿಮಾನ, ಬಸ್​ಗಳ ಓಡಾಟವೂ ಮೊದಲಾಯಿತು. ದೇವಸ್ಥಾನ, ಮಸೀದಿ, ಚರ್ಚ್​ಗಳೂ ತೆರೆದವು. ಕಚೇರಿಗಳು ತೆರೆದವು. ಹೋಟೆಲ್​, ರೆಸಾರ್ಟ್​ಗಳು ತೆರೆದವು. ಪ್ರವಾಸಿ ತಾಣಗಳಿಗೆ ಜನ ಮೊದಲಿನಂತೆ ಹೋಗಲು ಅನುಮತಿ ನೀಡಲಾಯಿತು. ಎಲ್ಲವೂ ಮುಕ್ತವಾಯಿತು. ಬದುಕು ಬಹುತೇಕ ಸಹಜ-ಸಾಮಾನ್ಯ ಸ್ಥಿತಿಗೆ ಮರಳಿತು.

ಕೊರೋನಾ ಸೋಂಕಿನ ತಡೆಗೆ ಇನ್ನೂ ಲಸಿಕೆ ಬಂದಿಲ್ಲವಾದ ಕಾರಣ ಮೂರು ಸೂತ್ರಗಳಷ್ಟೇ ಅದರಿಂದ ನಮ್ಮನ್ನು ಉಳಿಸಬಹುದು ಎನ್ನುವುದು ಎಲ್ಲರ ವಾದ. ಮಾಸ್ಕ್​ ಧರಿಸುವುದು, 6 ಅಡಿಗಳ ಸಾಮಾಜಿಕ ಅಂತರ ಪಾಲಿಸುವುದು, ಆಗ್ಗಾಗ್ಗೆ ಸ್ಯಾನಿಟೈಸರ್​ನಿಂದ ಕೈ ತೊಳೆಯುವುದು ಈ ಸೂತ್ರಗಳ ಪಾಲನೆಯೇ ಕೊರೋನಾಗೆ ಮದ್ದು ಎನ್ನುವುದು ತಜ್ಞರ ಸಲಹೆ.

ಎಲ್ಲವೂ ಹಿಂದಿನಂತೆ ಆಗುತ್ತಿದೆ ಎನ್ನುವಾಗ ರಾಜ್ಯ ಸರ್ಕಾರದ ಕಣ್ಣಿಗೆ ಕಂಡಿದ್ದು ಜನರ ನಿರ್ಲಕ್ಷ್ಯ. ಆಗ ಆಡಳಿತದಲ್ಲಿ ಕೂತಿರುವ ಮಂದಿಗೆ ಅನ್ನಿಸಿದ್ದು ಬಾಯಿ ಮಾತಲ್ಲಿ ಹೇಳಿದರೆ ಆಗಲ್ಲ, ದಂಡ ಹಾಕಿ ದಂಡಿಸೋಣ ಎಂದು. ಮಾಸ್ಕ್​ ಮತ್ತು ಸಾಮಾಜಿಕ ಅಂತರ ಪಾಲಿಸದವರಿಗೆ ಆರಂಭದಲ್ಲಿ 1 ಸಾವಿರ ರೂಪಾಯಿ ದಂಡ ಘೋಷಣೆ ಮಾಡಿತು. ಆದರೆ ಟೀಕೆಗಳು, ಆಕ್ರೋಶಗಳು ವ್ಯಕ್ತವಾದ ಬಳಿಕ ಆ ಮೊತ್ತವನ್ನು 250 ರೂಪಾಯಿಗೆ ಇಳಿಸಿತು.

ಶಿರಾದಲ್ಲಿ ಬಿಜೆಪಿ ಸಮಾವೇಶದಲ್ಲಿ ಸಿಎಂ ಬಿಎಸ್​ವೈ ಮತ್ತು ಇತರರು

ಮಾಸ್ಕ್​ ಮತ್ತು ಸಾಮಾಜಿಕ ಅಂತರ ಪಾಲನೆ ಜಾರಿಗಾಗಿಯೇ ಸರ್ಕಾರ ಮಾರ್ಷಲ್​ಗಳನ್ನೂ ನೇಮಿಸಿತು. ರಾಜಧಾನಿ ಬೆಂಗಳೂರಲ್ಲಿ ಮಾರುಕಟ್ಟೆ, ರಸ್ತೆಯ ಬದಿಗಳು ಹೀಗೆ ಎಲ್ಲೆಂದರಲ್ಲಿ ಈ ಮಾರ್ಷಲ್​ಗಳು ಕಾಣಸಿಗುತ್ತಾರೆ. ದಾರಿಯಲ್ಲಿ ಹೋಗುವವರನ್ನು ಅಡ್ಡಹಾಕಿ 250 ರೂಪಾಯಿ ದಂಡ ಕಟ್ಟಿ ಎಂದು ಹೇಳುತ್ತಾರೆ. ದಂಡ ಕಟ್ಟದೇ ಹೋದರೆ ಪೊಲೀಸ್​ ಸ್ಟೇಷನ್​ಗೆ ಕರೆದುಕೊಂಡು ಹೋಗುತ್ತಾರೆ, ನೀವು ಹೇಗೆ ಕೋವಿಡ್​ ಸೋಂಕು ಹಬ್ಬಿಸುತ್ತಿದ್ದೀರಿ ಎಂದು ಪುಂಖಾನುಪುಂಖವಾಗಿ ನಡುರಸ್ತೆಯಲ್ಲಿ ನಿಲ್ಲಿಸಿ ಆರ್ಶೀವಚನ ನೀಡುತ್ತಾರೆ. ಬೈಕ್​ನಲ್ಲಿ ಹೋಗುವಾಗ ಹೆಲ್ಮೆಟ್​ ಕಾರಣದಿಂದ ಹಾಕಿರುವ ಮಾಸ್ಕ್​ ಮೂಗಿನ ಹೊಳ್ಳೆಯ ಕೆಳಗೆ ಜಾರಿದರೂ ಅದಕ್ಕೂ ದಂಡ ವಸೂಲಿ ಮಾಡುತ್ತಾರೆ, ಯಾಕೆಂದರೆ ಮಾಸ್ಕ್​ ಮೂಗಿಗೇ ಹೊರತು ಮುಖಕ್ಕಲ್ಲ.

ಆದರೆ ಮಾರ್ಷಲ್​ಗಳನ್ನು ದೂರಿ ಪ್ರಯೋಜನವಿಲ್ಲ, ಅದರಲ್ಲಿ ಅವರದ್ದೇನು ತಪ್ಪೂ ಇಲ್ಲ. ರಾಜ್ಯ ಸರ್ಕಾರ ಮಾರ್ಷಲ್​ಗಳಿಗೆ, ಗ್ರಾಮ ಪಂಚಾಯತಿ ಮಟ್ಟದ ಅಧಿಕಾರಿಗಳಿಗೆ ಗುರಿಗಳನ್ನು ನೀಡಿದೆ. ದಿನಕ್ಕೆ ಇಂತಿಷ್ಟು ಮಂದಿಯಿಂದ ಮಾಸ್ಕ್​ ಮತ್ತು ಸಾಮಾಜಿಕ ಅಂತರ ಪಾಲಿಸದ್ದಕ್ಕೆ ತಲಾ 250 ರೂಪಾಯಿ ದಂಡ ವಸೂಲಿ ಮಾಡಲೇಬೇಕು ಎಂದು. ಗುರಿ ಮುಟ್ಟಲೇಬೇಕು. ಗುರಿ ಮುಟ್ಟದೇ ಹೋದರೆ ಮಾರ್ಷಲ್​ಗಳ ವಿರುದ್ಧವೇ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕರ್ತವ್ಯಲೋಪದ ಕೇಸ್​ ಹಾಕುವ ಎಚ್ಚರಿಕೆಯ ಸುತ್ತೋಲೆ ಹೊರಡಿಸಿ ದಿನಗಳೇ ಆಗಿವೆ.

ಈಗ ಪ್ರಮುಖ ವಿಷಯಕ್ಕೆ ಬರೋಣ. ಕೋವಿಡ್​ ಕಾರಣದಿಂದ ದಸರಾವನ್ನು ಈ ಬಾರಿ ಸರಳವಾಗಿ ಕೇವಲ 300 ಜನಕ್ಕೆ ಸೀಮಿತಗೊಳಿಸಿ (ಇಷ್ಟು ಸರಳಕ್ಕೆ 15 ಕೋಟಿ ರೂಪಾಯಿ ಖರ್ಚು, ಅದ್ಧೂರಿಯಾದರೆ..?) ಆಚರಿಸಲಾಗಿದೆ. ಹಳ್ಳಿಗಳಲ್ಲಿ ನಡೆಯುವ ಊರಹಬ್ಬಗಳು, ಜಾತ್ರೆಗಳಿಗೆ ನಿರ್ಬಂಧ ಹೇರಲಾಗಿದೆ. ಜನಜಂಗುಳಿಯಾದರೆ ಕೋವಿಡ್​ನ ಪ್ರಸರಣ ವೇಗವಾಗಿರುತ್ತದೆ ಎಂಬ ಕಾರಣಕ್ಕಾಗಿ. ನವೆಂಬರ್​ 1ರಂದು ನಡೆಯುವ ನಾಡಹಬ್ಬ ಕನ್ನಡ ರಾಜ್ಯೋತ್ಸವದ ಮೆರವಣಿಗೆಯ ಮೇಲೂ ಸರ್ಕಾರ ನಿರ್ಬಂಧಗಳನ್ನು ಹೇರಿದೆ. ಇವಿಷ್ಟು ಜನಸಾಮಾನ್ಯರಿಗೆ ಅನ್ವಯಿಸುವ ಆದೇಶಗಳು, ಸುತ್ತೋಲೆ, ಕಾನೂನು-ಕಟ್ಟಳೆಗಳು.

ಆರ್​ ಆರ್​ನಗರಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಪ್ರಚಾರ

ಕೇಂದ್ರದ ಗೃಹ ಸಚಿವಾಲಯ ಲಾಕ್​ಡೌನ್​ ಮೊದಲುಗೊಂಡು ಅನ್​ಲಾಕ್​ ಮಾರ್ಗಸೂಚಿಗಳಲ್ಲೂ ಅಡಕಗೊಳಿಸಿರುವ ನಿಯಮಗಳ ಪ್ರಕಾರ ಮಾಸ್ಕ್​ ಧರಿಸದೇ ಇರುವುದು, ಸಾಮಾಜಿಕ ಅಂತರ ಪಾಲಿಸದೇ ಇರುವುದು ಅಪರಾಧ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯ ಸೆಕ್ಷನ್​ 56ರಿಂದ 60ರವರೆಗಿನ ಕಲಂಗಳು ಸರ್ಕಾರದ ಆದೇಶದ ಉಲ್ಲಂಘನೆ ಮತ್ತು ಅವುಗಳಿಗೆ ವಿಧಿಸಲಾಗುವ ದಂಡ ಮತ್ತು ಶಿಕ್ಷೆಯ ಬಗ್ಗೆ ಹೇಳುತ್ತವೆ.

ಸೆಕ್ಷನ್​ 51ರ ಪ್ರಕಾರ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರ ಅಥವಾ ಸರ್ಕಾರದ ಸಂಸ್ಥೆಗಳು ಎನ್​ಡಿಎಂಎ ಕಾಯ್ದೆಯಡಿ ಹೊರಡಿಸುವ ಆದೇಶಗಳನ್ನು ಪಾಲನೆ ಮಾಡದೇ ಹೋದಲ್ಲಿ ಅಥವಾ ಅದಕ್ಕೆ ಅಡ್ಡಿಪಡಿಸಿದ್ದಲ್ಲಿ ಅಂತವರಿಗೆ ಗರಿಷ್ಠ 2 ವರ್ಷದವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬಹುದು ಎಂದು ಹೇಳುತ್ತದೆ. ಕಲಂ 57ರ ಪ್ರಕಾರ ಸಾಂಕ್ರಾಮಿಕ ರೋಗ ತಡೆಗಾಗಿ ಹೊರಡಿಸುವ ಆದೇಶವನ್ನು ಯಾರೇ ಉಲ್ಲಂಘನೆ ಮಾಡಿದರೂ ಅವರಿಗೆ 1 ವರ್ಷದವರೆಗೆ ಜೈಲು ಶಿಕ್ಷೆ ಮತ್ತು ದಂಡದ ಬಗ್ಗೆ ಹೇಳುತ್ತದೆ. ಕಲಂ 56ರ ಪ್ರಕಾರ ತನಗೆ ಅಧಿಕಾರಿ ತನಗೆ ವಹಿಸಲಾದ ಕರ್ತವ್ಯದ ಪಾಲನೆಗೆ ವಿಫಲವಾದರೆ 1 ವರ್ಷ ಜೈಲು ಅಥವಾ ದಂಡದೊಂದಿಗೆ ಜೈಲು ಮತ್ತು ಸೆಕ್ಷನ್​ 55ರ ಪ್ರಕಾರ ಇಲಾಖೆಗಳು ಎಸಗುವ ಅಕ್ರಮಗಳ ಬಗ್ಗೆ ಹೇಳುತ್ತದೆ. ಭಾರತೀಯ ದಂಡ ಸಂಹಿತೆ ಸೆಕ್ಷನ್​ 188ರ ಪ್ರಕಾರ ಸರ್ಕಾರ ಹೊರಡಿಸಿದ ಆದೇಶ ಪಾಲನೆ ಉಲ್ಲಂಘಿಸಿದರೆ 6 ತಿಂಗಳ ಜೈಲು ಅಥವಾ ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ. ಆಗಾಗ್ಗೇ ಹೊರಡಿಸಲಾಗುವ ಅನ್​ಲಾಕ್​ ಮಾರ್ಗಸೂಚಿಯಲ್ಲಿ ಈ ಬಗ್ಗೆ ಹೇಳಲಾಗುತ್ತಿದೆ.

ಇನ್ನು ಉಪಚುನಾವಣೆಯ ವಿಷಯ. ರಾಜರಾಜೇಶ್ವರಿನಗರ, ಶಿರಾಕ್ಕೆ ನಡೆಯುತ್ತಿರುವ ಉಪ ಚುನಾವಣೆ ಮತ್ತು ಪರಿಷತ್​ಗಳಿಗೆ ನಡೆದ ಚುನಾವಣೆಯ ಭರಾಟೆ ನೋಡಿದರೆ ಎಂತಹ ಜನಸಾಮಾನ್ಯನಿಗೆ ಬೇಕಾದರೂ ಅನ್ನಿಸಬಹುದು, ರಾಜಕಾರಣಿಗಳೇನು ಕೊರೋನಾ ಪ್ರತಿರೋಧಕರೇ ಎಂದು. ಜನಸಾಮಾನ್ಯರಿಗೆ ಅನ್ವಯಿಸುವ ಕಾನೂನು ಇವರಿಗೆಲ್ಲ ಯಾಕೆ ಅನ್ವಯಿಸಲ್ಲ, ಇವರಿಗೆ ಯಾಕೆ ಶಿಕ್ಷೆಗಳಿಲ್ಲ. ಇವರಿಗೆ ಯಾಕೆ ದಂಡಗಳಿಲ್ಲ.

ಸೆಪ್ಟೆಂಬರ್​ 29ರಂದು ಹೊರಡಿಸಲಾದ ಮಾರ್ಗಸೂಚಿಯ ಪ್ರಕಾರ ಕಂಟೈನ್ಮೆಂಟ್​ ಝೋನ್ ಹೊರಗೆ ನಡೆಯುವ ನಡೆಯುವ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ಕ್ರೀಡೆ ಮತ್ತು ರಾಜಕೀಯ ಕಾರ್ಯಕ್ರಮಗಳಲ್ಲಿ 100ಕ್ಕಿಂತ ಹೆಚ್ಚು ಮಂದಿ ಭಾಗವಹಿಸಲು ಅನುಮತಿಸಲಾಗಿದೆ. ಆದ್ರೆ ಮಾಸ್ಕ್​ ಧರಿಸುವುದು, ಪ್ರತಿಯೊಬ್ಬರ ನಡುವೆ 6 ಅಡಿ ಅಂತರ ಕಾಯ್ದುಕೊಳ್ಳುವುದು, ಸಮಾವೇಶ ಸ್ಥಳಗಳಿಗೆ ಬರುವವರಿಗೆ ದೇಹದ ಉಷ್ಣಾಂಶ ಪರೀಕ್ಷೆ ಮಾಡುವುದು ಕಡ್ಡಾಯವಾಗಿದೆ. ಕೇಂದ್ರೀಯ ಚುನಾವಣಾ ಆಯೋಗ ಕೂಡಾ ಮತದಾನ, ಮತ ಪ್ರಚಾರ, ಬಹಿರಂಗ ಸಮಾವೇಶ, ರೋಡ್​ಶೋಗಳಲ್ಲಿ ಕೋವಿಡ್​ ನಿಯಮ ಪಾಲನೆ ಕಡ್ಡಾಯವಾಗಿದ್ದು ಅದರ ಉಲ್ಲಂಘನೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯ ಸೆಕ್ಷನ್​ 56ರಿಂದ 60ರವರೆಗಿನ ಕಲಂಗಳ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ ಎಂದು ಹೇಳಿದೆ.

ಆದರೆ ಉಪ ಚುನಾವಣೆಯಲ್ಲಿ ಆ ನಿಯಮಗಳು ಎಲ್ಲಿ ಪಾಲನೆ ಆಗುತ್ತಿವೆ..? ಮುಖ್ಯಮಂತ್ರಿಗಳು, ಸಚಿವರು, ವಿರೋಧಪಕ್ಷದ ನಾಯಕರು, ಶಾಸಕರು, ಸಂಸದರು, ಕೆಪಿಸಿಸಿ ಅಧ್ಯಕ್ಷರು, ಮಾಜಿ ಮುಖ್ಯಮಂತ್ರಿಗಳು ಹೀಗೆ ರಾಜಕೀಯ ನಾಯಕರು ಈ ಎಲ್ಲ ನಿಯಮಗಳನ್ನು ಉಲ್ಲಂಘಿಸಿಯೇ ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ. ಈ ರಾಜಕೀಯ ನಾಯಕರು ಮತ್ತು ಅವರ ಪಕ್ಷಗಳ ಕಾರ್ಯಕರ್ತರ ಜಮಾವಣೆಯನ್ನು ನೋಡಿದರೆ ಕೋವಿಡ್​ ನಿಜಕ್ಕೂ ಬಂದಿತ್ತಾ ಎಂದು ಅನುಮಾನ ಸೃಷ್ಟಿಯಾದರೂ ತಪ್ಪಿಲ್ಲ. ಆದರೆ ಇದೇ ಸರ್ಕಾರ, ಇದೇ ನಾಯಕರು ಜನರಿಗೆ ಹೇಳುವುದು ಮಾತ್ರ ಮಾಸ್ಕ್​ ಧರಿಸಿ, ಸಾಮಾಜಿಕ ಅಂತರ ಪಾಲಿಸಿ ಎಂದು. ಚುನಾವಣೆ ಮಾತ್ರವಲ್ಲ ರಾಜಕಾರಣಿಗಳು ಹೋಗುವ ಕಡೆಯೆಲ್ಲ ಅವರ ಎಡ-ಬಲ, ಹಿಂದು-ಮುಂದಕ್ಕೆ ಮುತ್ತಿಕೊಳ್ಳುವಾಗ ಬೆಂಬಲಿಗ ಪಡೆಯ ದೃಶ್ಯಗಳನ್ನು ನೋಡಿದರೆ ಇವರಿಗೆ ಕಾನೂನು ಇಲ್ಲವೇ ಎಂಬ ಸಿಟ್ಟು ಬರುತ್ತದೆ.

ಕೊರೋನಾ ಸೋಂಕಿತರ ಜೊತೆಗೆ ಅವರ ಸಂಪರ್ಕದಲ್ಲಿರುವರನ್ನು ಪತ್ತೆ ಹಚ್ಚಿ ನಿಯಂತ್ರಣ ಮಾಡಬೇಕು ಎನ್ನುತ್ತಾರೆ ತಜ್ಞರು. ಆದರೆ ಸಮಾವೇಶ, ರೋಡ್​ಶೋಗಳಲ್ಲಿ ಕಿಕ್ಕಿರಿದು ನೆರೆಯುವ ಮಂದಿಯನ್ನು ಕೋವಿಡ್​ ಪರೀಕ್ಷೆಗೆ ಒಳಪಡಿಸುವವರು ಯಾರು, ಇವರಿಗೆ ಸಾಮಾಜಿಕ ಅಂತರ ಪಾಲಿಸಿ ಎನ್ನುವವರು ಯಾರು, ಉಷ್ಣಾಂಶ ತಪಾಸಣೆ ಮಾಡುವವರು ಯಾರು..? ಒಂದು ವೇಳೆ ಇವರಲ್ಲಿ ಯಾರಿಗಾದರೂ ಒಬ್ಬರಿಗೆ ಸೋಂಕು ಕಾಣಿಸಿಕೊಂಡರೇ ಇವರ ಮೂಲ ಪತ್ತೆ ಹಚ್ಚುವುದು ಎಲ್ಲಿಂದ..? ಇವರ ಸಂಪರ್ಕಿತರನ್ನು ಹುಡುಕಲು ಸಾಧ್ಯವೇ..?

ಮಾಸ್ಕ್​ ಧರಿಸಿಲ್ಲ, ಸಾಮಾಜಿಕ ಅಂತರ ಪಾಲಿಸಿಲ್ಲ ಎಂಬ ಕಾರಣಕ್ಕಾಗಿ ಅಂಗಡಿಗಳಿಗೆ ತೆರಳಿ ದಂಡ ಹಾಕುವ, ಮಾಲ್​ಗಳಲ್ಲಿ ಕೂತವರಿಗೆ ದಂಡ ಹಾಕುವ, ಮೂಗಿನಿಂದ ಕೆಳಗೆ ಮಾಸ್ಕ್​ ಇತ್ತು ಎಂಬ ಕಾರಣಕ್ಕೆ ದಂಡ ಹಾಕುವ ಸರ್ಕಾರಕ್ಕೆ ಕೇಳಬೇಕಿರುವ ಪ್ರಶ್ನೆ ಒಂದೇ – ರಾಜಕಾರಣಿಗಳೇ, ನೀವೇನು ಕೊರೋನಾ ಪ್ರತಿರೋಧಕರೇ.

LEAVE A REPLY

Please enter your comment!
Please enter your name here