ಮಹಾರಾಷ್ಟ್ರದ ಔರಂಗಾಬಾದಿನಲ್ಲಿ ನಡೆದ ಭೀಕರ ರೈಲು ದುರಂತಕ್ಕೆ 15 ಮಂದಿ ವಲಸೆ ಕಾರ್ಮಿಕರು ಬಲಿ

ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿ ಭೀಕರ ರೈಲು ದುರಂತ ಸಂಭವಿಸಿದ್ದು. ಘಟನೆಯಲ್ಲಿ 15 ಮಂದಿ ವಲಸೆ ಕಾರ್ಮಿಕರು ಸಾವನ್ನಪ್ಪಿದ್ದು, 5 ಜನ ಗಾಯಗೊಂಡಿದ್ದಾರೆ.

ಔರಂಗಾಬಾದ್ ನಲ್ಲಿ ಭೀಕರ ರೈಲು ದುರಂತ ನಡೆದಿದೆ. ಶುಕ್ರವಾರ ಬೆಳಗ್ಗಿನ ಜಾವ 6.30 ರ ಸಮಯದಲ್ಲಿ ಈ ಅವಘಡ ಸಂಭವಿಸಿದ್ದು, ರೈಲ್ವೆ ಹಳಿಗಳ ಮೇಲೆ ಮಲಗಿದ್ದ ಕಾರ್ಮಿಕರ ಮೇಲೆ ಗೂಡ್ಸ್ ರೈಲು ಹರಿದು ಹಲವು ಜೀವಗಳ ಬಲಿಯಾಗಿದೆ.

ಸುಮಾರು 20 ಜನರಿದ್ದ ಮಧ್ಯಪ್ರದೇಶ ಮೂಲದ ಈ ವಲಸೆ ಕಾರ್ಮಿಕರು ಜಲ್ನಾದಿಂದ ಭುಸ್ವಾಲ್ ಗೆ ನಡೆದುಕೊಂಡೇ ಹೊರಟಿದ್ದರು ಎಂದು ತಿಳಿದು ಬಂದಿದೆ.

ಅಪಘಾತದಲ್ಲಿ ಗಾಯಗೊಂಡವರನ್ನು ಔರಂಗಾಬಾದ್ ನ ಸಿವಿಲ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗೂಡ್ಸ್ ರೈಲು ಜಲ್ನಾದಿಂದ ಔರಂಗಾಬಾದ್ ಕಡೆಗೆ ಪ್ರಯಾಣಿಸುತ್ತಿತ್ತು ಎಂದು ತಿಳಿದುಬಂದಿದೆ.

ರೈಲ್ವೆ ಸಚಿವಾಲಯದ ಪ್ರಕಾರ,ಮುಂಜಾನೆ ಹಳಿಗಳ ಮೇಲೆ ಮಲಗಿದ್ದ ಕಾರ್ಮಿಕರನ್ನು ನೋಡಿ ಲೋಕೋ ಪೈಲಟ್‌ ಟ್ರೈನ್‌ ನ್ನು ನಿಲ್ಲಿಸಲು ಪ್ರಯತ್ನಿಸಿದರೂ ವಿಫಲವಾಗಿತ್ತು. ಔರಂಗಾಬಾದ್ ನ ಕರ್ಮಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದಾರೆ.

ಆಘಾತಕ್ಕೊಳಗಾದ ಬದುಕುಳಿದ ನಾಲ್ವರಿಗೆ ಪೊಲೀಸರು ಕೌನ್ಸೆಂಲಿಂಗ್ ನೀಡುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಮೋಕ್ಷದಾ ಪಾಟೀಲ್ ತಿಳಿಸಿದ್ದಾರೆ.

ಲಾಕ್ ಡೌನ್‌ ಹಿನ್ನಲೆಯಲ್ಲಿ ತುರ್ತು ಕಾರಣಗಳಿರುವ ವಲಸೆ ಕಾರ್ಮಿಕರಿಗೆ ಹಲವು ರಾಜ್ಯಗಳಿಂದ “ಶ್ರಮಿಕ್‌ ವಿಶೇಷ ರೈಲು” ಓಡಾಟ ಆರಂಭಿಸಿದ್ದರೂ ಬಹಳಷ್ಟು ಮಂದಿ ಕಾಲ್ನಡಿಗೆಯಲ್ಲೇ ತೆರಳುತ್ತಿದ್ದಾರೆ.

LEAVE A REPLY

Please enter your comment!
Please enter your name here