ಮಹದಾಯಿ ಯೋಜನೆ – ಎರಡೇ ತಿಂಗಳಲ್ಲಿ ಕೈ ಎತ್ತಿದ ಪ್ರಧಾನಿ ಮೋದಿ..!

ಉಪ ಚುನಾವಣೆಗೂ ಕೆಲ ದಿನಗಳ ಹಿಂದೆಯಷ್ಟೇ ಮಹಾದಾಯಿ ಯೋಜನೆಗೆ ಪರಿಸರಾತ್ಮಕ ಅನುಮತಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಈಗ ಉಲ್ಟಾ ಹೊಡೆದಿದ್ದು, ಅನುಮತಿ ಪತ್ರವನ್ನು ಕೇಂದ್ರ ಪರಿಸರ ಸಚಿವಾಲಯ ತಡೆ ಹಿಡಿದಿದೆ. ಒಪ್ಪಿಗೆ ನೀಡಿದ್ದರ ವಿರುದ್ಧ ನೆರೆಯ ಗೋವಾದಲ್ಲಿನ ಆಡಳಿತಾರೂಢ ಬಿಜೆಪಿ ಸರ್ಕಾರ ಮತ್ತು ವಿಪಕ್ಷ ಕಾಂಗ್ರೆಸ್‌ನ ಆಕ್ರೋಶಕ್ಕೆ ಕೇಂದ್ರ ಸರ್ಕಾರ ಶರಣಾಗಿದೆ.

ಕಳಸಾ-ಬಂಡೂರಿ ಯೋಜನೆ ಜಾರಿಗೆ ಪರಿಸರಾತ್ಮಕ ಅನುಮತಿ ಕೊಟ್ಟು ಅಕ್ಟೋಬರ್‌ ೧೭ರಂದು ಕೇಂದ್ರ ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ ಕರ್ನಾಟಕಕ್ಕೆ ಪತ್ರ ಬರೆದಿತ್ತು.

ಮಹಾದಾಯಿ ಜಲ ನ್ಯಾಯಮಂಡಳಿ ನೀಡಿದ್ದ ನೀರು ಹಂಚಿಕೆ ತೀರ್ಪಿನ ಬಗ್ಗೆ ಸ್ಪಷ್ಟನೆ ಕೋರಿ ಆಗಸ್ಟ್‌ ೧೪, ೨೦೧೮ರಂದು ಕರ್ನಾಟಕ ಮತ್ತು ಗೋವಾ ಸರ್ಕಾರ ಸಲ್ಲಿಸಿದೆ. ಜೊತೆಗೆ ತೀರ್ಪನ್ನೇ ಪ್ರಶ್ನಿಸಿ ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿವೆ. ಗೋವಾ ಸಲ್ಲಿಸಿದ್ದ ಮೇಲ್ಮನವಿ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್‌ ಕರ್ನಾಟಕಕ್ಕೆ ನೋಟಿಸ್‌ ಕೂಡಾ ನೀಡಿದೆ.

ಈ ಹಿನ್ನೆಲೆಯಲ್ಲಿ ಮಹದಾಯಿ ಯೋಜನೆಗೆ ಒಪ್ಪಿಗೆ ನೀಡಿ ನಿಮಗೆ ಕೊಟ್ಟಿರುವ ಪತ್ರವನ್ನು ವಿವಾದ ಸಂಪೂರ್ಣವಾಗಿ ಕಾನೂನಾತ್ಮಕವಾಗಿ ಬಗೆಹರಿಯುವವರೆಗೆ ತಡೆ ಹಿಡಿಯಲಾಗಿದೆ ಎಂದು ಕರ್ನಾಟಕ ನೀರಾವರಿ ನಿಗಮದ ಮುಖ್ಯ ಇಂಜಿನಿಯರ್‌ಗೆ ಇವತ್ತು ಕೇಂದ್ರ ಸರ್ಕಾರ ಪತ್ರ ಬರೆದು ತಿಳಿಸಿದೆ.

ಯೋಜನೆಗೆ ನೀಡಿರುವ ಅನುಮತಿಯನ್ನು ತಡೆ ಹಿಡಿದಿರುವುದರ ಬಗ್ಗೆ ಗೋವಾ ಸಿಎಂ ಪ್ರಮೋದ್‌ ಸಾವಂತ್‌ ಮಾಹಿತಿ ಹಂಚಿಕೊಂಡಿದ್ದಾರೆ.

ಫಲಿಸಿದ ಗೋವಾ ಒತ್ತಡ ತಂತ್ರ:

ಕರ್ನಾಟಕಕ್ಕೆ ಯೋಜನೆಗೆ ಅನುಮತಿ ಕೊಟ್ಟ ಬಳಿಕ ಗೋವಾ ಸರ್ಕಾರ ಪ್ರಧಾನಿ ಮೋದಿ ಸರ್ಕಾರದ ಮೇಲೆ ಇನ್ನಿಲ್ಲದ ಒತ್ತಡ ಹೇರಿತ್ತು. ಕೇಂದ್ರ ಪರಿಸರ ಸಚಿವ ಪ್ರಕಾಶ್‌ ಜಾವ್ಡೇಕರ್‌ ಮೇಲೆ ಸಾಕಷ್ಟು ಒತ್ತಡ ಹಾಕಿದ್ದ ಸಿಎಂ ಸಾವಂತ್‌, ಸಚಿವರ ಬಳಿಕ ಸರ್ವಪಕ್ಷ ನಿಯೋಗವನ್ನೂ ಕೊಂಡೊಯ್ದು ಯೋಜನೆ ಜಾರಿಯಿಂದಾಗುವ ಪರಿಸರಾತ್ಮಕ ಅಪಾಯಗಳ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದರು.

ಕಳಸಾ ಬಂಡೂರಿ ಯೋಜನೆ ಜಾರಿಯಿಂದ ರಾಜ್ಯದ ಶೇಕಡಾ ೪೨ರಷ್ಟು ಭೂಪ್ರದೇಶಕ್ಕೆ ಅಪಾಯ ಉಂಟಾಗಲಿದೆ. ಭಗವಾನ್‌ ಮಹಾವೀರ ರಾಷ್ಟ್ರೀಯ ಉದ್ಯಾನವನ, ಬಂಡಲೆ ಅರಣ್ಯಧಾಮ ಹಾಗೂ ಡಾ. ಸಲೀಂ ಅಲಿ ಪಕ್ಷಿಧಾಮಕ್ಕೆ ಅಪಾಯವಾಗಲಿದ್ದು, ನದಿ ತಿರುವಿನ ಗೋವಾದ ಜನಜೀವನ ಮತ್ತು ಸಂಸ್ಕೃತಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಸಚಿವ ಜಾವ್ಡೇಕರ್‌ಗೆ ಕೊಟ್ಟಿದ್ದ ಮನವಿ ಪತ್ರದಲ್ಲಿ ವಾದಿಸಿತ್ತು.

ಕರ್ನಾಟಕದ ೨೮ ಸಂಸದರು:

೨೦೧೮ರಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆ ವೇಳೆ ಹುಬ್ಬಳ್ಳಿಯಲ್ಲಿ ನಡೆದಿದ್ದ ಬೃಹತ್‌ ಬಿಜೆಪಿ ಸಮಾವೇಶದಲ್ಲಿ ಆಗ ವಿಪಕ್ಷ ನಾಯಕರಾಗಿದ್ದ ಯಡಿಯೂರಪ್ಪ ಅಧಿಕಾರಕ್ಕೆ ಕೆಲವೇ ದಿನಗಳಲ್ಲಿ ಮಹದಾಯಿ ವಿವಾದ ಬಗೆಹರಿಸುವ ವಾಗ್ದಾನವನ್ನೂ ಮಾಡಿದ್ದರು. ಜೊತೆಗೆ ಆಗಿನ ಗೋವಾ ಸಿಎಂ ಆಗಿದ್ದ ಮನೋಹರ್‌ ಪರಿಕ್ಕರ್‌ ಸಂಧಾನಕ್ಕೆ ಒಪ್ಪಿ ಬರೆದಿದ್ದ ಪತ್ರವನ್ನೂ ಓದಿ ಹೇಳಿದ್ದರು. ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಮತ್ತೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದರೆ ವಿವಾದ ಬಗೆಹರಿಯಲಿದೆ ಎಂಬ ವಾಗ್ದಾನವನ್ನೂ ಬಿಜೆಪಿ ಮಾಡಿತ್ತು.

ಕರ್ನಾಟಕದ ೨೮ ಸಂಸದರ ಪೈಕಿ ೨೫ ಮಂದಿ ಬಿಜೆಪಿಯವರೇ ಇದ್ದಾರೆ. ೨೦೧೪ಕ್ಕೆ ಹೋಲಿಸಿದೆ ೭ ಮಂದಿ ಹೆಚ್ಚು ಸಂಸದರನ್ನು ಆಯ್ಕೆ ಮಾಡಿದ್ದಾರೆ. ಗೋವಾ ಕೇವಲ ಇಬ್ಬರು ಸಂಸದರನ್ನು ಹೊಂದಿದ್ದೂ ಇಬ್ಬರೂ ಬಿಜೆಪಿ ಸಂಸದರು.

ಕುಮಾರಸ್ವಾಮಿ ಕಿಡಿ:

ಕನ್ನಡಿಗರನ್ನು ರಾಜಕೀಯಕ್ಕೆ ದುಡಿಸಿಕೊಳ್ಳುವುದು, ಯೋಜನೆ, ಕಾರ್ಯಕ್ರಮ, ಅನುದಾನಗಳ ವಿಷಯದಲ್ಲಿ ಶೋಷಿಸುವುದು ಬಿಜೆಪಿಯ ಚಾಳಿಯಾಗಿದೆ. ಕಳಸಾ ಬಂಡೂರಿ ಯೋಜನೆಗೆ ಕೇಂದ್ರ ಸರ್ಕಾರ ತಡೆ ನೀಡಿರುವುದನ್ನು ಕನ್ನಡಿಗರಾಗಿ ಟೀಕಿಸಬೇಕೋ? ಬೆಂಬಲಿಸಬೇಕೋ? ಕನ್ನಡಿಗರ ಆತ್ಮಾಭಿಮಾನ ಕೆಣಕುವುದರಲ್ಲಿ ನಿಮಗೆಂಥ ಸಂತೋಷ? ಎಂದು ಮಾಜಿ ಸಿಎಂ ಹೆಚ್‌ ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಚುನಾವಣೆ ವೇಳೆ ಮಹದಾಯಿ ಸಮಸ್ಯೆ ಬಗೆಹರಿಸುತ್ತೇವೆ ಎಂದು ವೋಟು ಹಾಕಿಸಿಕೊಂಡ ರಾಜ್ಯದ ಬಿಜೆಪಿ ನಾಯಕರು ಇದೀಗ ಮೋದಿಗೆ ಬೆದರಿ ತಮ್ಮ ಧ್ವನಿಯನ್ನೇ ಕಳೆದುಕೊಂಡಿದ್ದಾರೆ. ಕನ್ನಡಿಗರನ್ನು ದಾಸ್ಯಕ್ಕೆ ಈಡು ಮಾಡುವ ದಲ್ಲಾಳಿಗಳಾಗಿದ್ದಾರೆ ಎಂದು ಹೆಚ್‌ಡಿಕೆ ಕಿಡಿಕಾರಿದ್ದಾರೆ.

LEAVE A REPLY

Please enter your comment!
Please enter your name here