ಮತ್ತೆ ಬ್ಯಾಂಕ್ ಬಂದ್.. ಯಾವಾಗ ಗೊತ್ತಾ..? ಸ್ವತಃ ಕೇಂದ್ರಕ್ಕೆ ಶಾಕ್..

ಇತ್ತೀಚಿಗಷ್ಟೇ ಭಾರತ್ ಬಂದ್ ಭಾಗವಾಗಿ ದೇಶಾದ್ಯಂತ ಬ್ಯಾಂಕ್ ನೌಕರರು ಮುಷ್ಕರ ನಡೆಸಿದ್ದರು. ಇದೀಗ ಮತ್ತೊಮ್ಮೆ ಬ್ಯಾಂಕ್ ನೌಕರರು ಮುಷ್ಕರಕ್ಕೆ ಸಿದ್ಧತೆ ನಡೆಸಿದ್ದಾರೆ. ಒಂದಲ್ಲ.. ಎರಡು ದಿನಗಳ ಕಾಲ ದೇಶಾದ್ಯಂತ ಬ್ಯಾಂಕ್ ಬಂದ್ ಮಾಡಿ ಮುಷ್ಕರ ನಡೆಸಲು ತೀರ್ಮಾನಿಸಿದ್ದಾರೆ.

ಇಂಡಿಯನ್ ಬ್ಯಾಂಕ್ಸ್ ಅಸೋಷಿಯೇಷನ್ ಜೊತೆಗಿನ ಚರ್ಚೆ ವಿಫಲವಾದ ಹಿನ್ನೆಲೆಯಲ್ಲಿ ಜನವರಿ 31 ಮತ್ತು ಫೆಬ್ರವರಿ 1ರಂದು ಬ್ಯಾಂಕ್ ಬಂದ್ ಮಾಡಿ ಮುಷ್ಕರ ನಡೆಸುವುದಾಗಿ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ತಿಳಿಸಿದೆ. ಇದು ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಜನವರಿ 31, ಫೆಬ್ರವರಿ 1ರಂದೇ ಮುಷ್ಕರ ಏಕೆ..?
ಕೇಂದ್ರ ಸರ್ಕಾರ ಇಕ್ಕಟ್ಟಿಗೆ ಸಿಲುಕಿರುವುದು ಏಕೆ..?

ಜನವರಿ 31 ಮತ್ತು ಫೆಬ್ರವರಿ 1 ಕೇಂದ್ರ ಸರ್ಕಾರಕ್ಕೆ ತುಂಬಾ ಪ್ರಮುಖ. ದೇಶದ ಜನತೆಯೂ ಈ ಎರಡು ದಿನಗಳತ್ತಲೇ ಮುಖ ಮಾಡುತ್ತಾರೆ. ಮುಂದಿನ ಆರ್ಥಿಕ ವರ್ಷದ ಭವಿಷ್ಯ ತಿಳಿಯುವುದು ಈ ಎರಡು ದಿನಗಳಲ್ಲೇ. ಜನವರಿ 31ರಂದು ಆರ್ಥಿಕ ಸಮೀಕ್ಷಾ ವರದಿಯನ್ನು ಸಂಸತ್ ಮುಂದಿಡಲಾಗುತ್ತದೆ. ಫೆಬ್ರವರಿ 1ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ.

ದೇಶದ ಆರ್ಥಿಕತೆ ದೃಷ್ಟಿಯಿಂದ ತುಂಬಾ ಪ್ರಮುಖವಾಗಿರುವ ಈ ಎರಡು ದಿನದಂದೇ ಬ್ಯಾಂಕ್ ನೌಕರರು ಮುಷ್ಕರಕ್ಕೆ ಮುಂದಾಗಿದ್ದಾರೆ. ಇದು ದೇಶದ ಆರ್ಥಿಕ ಚಟುವಟಿಕೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಬ್ಯಾಂಕ್ ಮುಷ್ಕರ ತಡೆಯಲು ಕೇಂದ್ರ ಸರ್ಕಾರ ಕಸರತ್ತುಗಳನ್ನು ಆರಂಭಿಸಿದೆ.

ಬ್ಯಾಂಕ್ ನೌಕರರ ಮುಷ್ಕರಕ್ಕೆ ಕಾರಣವೇನು..?
ಸರ್ಕಾರಿ ಸ್ವಾಮ್ಯದ 9 ಬ್ಯಾಂಕ್ ಯೂನಿಯನ್‍ಗಳ ಒಕ್ಕೂಟವಾದ ಯುಎಫ್‍ಬಿಯು ವೇತನ ಹೆಚ್ಚಳ ಸೇರಿ ಹಲವು ಬೇಡಿಕೆಗಳ ಈಡೇರಿಕೆ ಬಗ್ಗೆ ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ ಜೊತೆ ಸೋಮವಾರ ಸಭೆ ನಡೆಸಿತ್ತು. ಶೇಕಡಾ 20ರಷ್ಟು ವೇತನ ಹೆಚ್ಚಳ.., ಮೂಲವೇತನದಲ್ಲಿ ಪ್ರತ್ಯೇಕ ಭತ್ಯೆಗಳನ್ನು ಸೇರಿಸುವುದು…, ವಾರದಲ್ಲಿ ಐದು ದಿನವಷ್ಟೇ ಬ್ಯಾಂಕ್ ಸೇವೆ.. ಸೇರಿದಂತೆ ಹಲವು ಡಿಮ್ಯಾಂಡ್‍ಗಳನ್ನು ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ ಮುಂದಿಟ್ಟಿತ್ತು. ಜೊತೆಗೆ ವಿವಿಧ ಬ್ಯಾಂಕ್‍ಗಳ ವಿಲೀನಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಆದರೆ ಇದಕ್ಕೆ ಇಂಡಿಯನ್ ಬ್ಯಾಂಕ್ಸ್ ಅಸೋಷಿಯೇಷನ್ ಒಪ್ಪಿಗೆ ಕೊಡಲಿಲ್ಲ. ಹೀಗಾಗಿ ಜನವರಿ 31 ಮತ್ತು ಫೆಬ್ರವರಿ 1ರಂದು ಮುಷ್ಕರಕ್ಕೆ ಕರೆ ಕೊಡಲಾಗಿದೆ.

ಮುಂದಿವೆ ಸಾಲು ಸಾಲು ಮುಷ್ಕರ
ಜನವರಿ 31, ಫೆಬ್ರವರಿ 1ರಂದು ಬ್ಯಾಂಕ್ ನೌಕರರ ಮುಷ್ಕರ. ಇದಕ್ಕೆ ಮಣಿಯದಿದ್ದರೆ.. ಮಾರ್ಚ್ 11ರಿಂದ ಮಾರ್ಚ್ 13ರವರೆಗೆ ಮುಷ್ಕರ.. ಇದಕ್ಕೂ ಮಣಿಯದೇ ವೇತನ ಹೆಚ್ಚಿಸದಿದ್ದರೇ ಏಪ್ರಿಲ್ 1ರಿಂದ ಅನಿದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಬ್ಯಾಂಕ್ ನೌಕರರ ಒಕ್ಕೂಟ ಎಚ್ಚರಿಕೆ ನೀಡಿದೆ.

LEAVE A REPLY

Please enter your comment!
Please enter your name here