ಮತ್ತೆ ಬಂದಿದೆ ಮಹಿಳಾ ಅಂತರಾಷ್ಟ್ರೀಯ ದಿನ

ಸತ್ಯಸಾಕ್ಷಿ ತುಮರಿ

ಮಹಿಳಾ ದಿನಾಚರಣೆ ಮುಗಿದಿದೆ, ಸಂಭ್ರಮದ ಕಾರ್ಯಕ್ರಮಗಳು ಎಲ್ಲೆಡೆ ನಡೆದದ್ದು ಅದರ ವರದಿ ಈಗಾಗಲೇ ನನ್ನ ವಾಟ್ಸ್ಯಾಪ್ ಗೆ ಬಂದು ಬಿದ್ದಿದೆ. ಅಂದು ಬೆಳಗ್ಗೆಯಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ, ನನ್ನ ಪ್ರತಿಕ್ರಿಯೆ ಮಾತ್ರ ಎಲ್ಲರಿಗೂ ಒಂದೇ ರೀತಿ ‘thank u sm 2 u’ ಹೌದು ಮಾರ್ಚ್ 8 ಮಹಿಳೆಯ ದಿನ, ನನ್ನ ದಿನ, ನನ್ನವಳ ದಿನ ಎಂದು ಸಂಭ್ರಮ ಪಟ್ಟು ಇಷ್ಟುದ್ದದ ಕವಿತೆಯೊಂದನ್ನ ಗೀಚಿ ಎಲ್ಲರಿಗೂ ಹಂಚಿ ನನ್ನದೇ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದೆನೇನೋ ಆದರೆ ಆ ಸಂಭ್ರಮ ನನಗಿಲ್ಲವಲ್ಲ….ಇರಲಿ ಬಿಡಿ ಅಂದು ಬೆಳಗ್ಗೆಯಿಂದ ನಡೆದದ್ದು ಬೇಡ, ಅಂದು ರಾತ್ರಿ ಊಟ ಮಾಡಿ ಮೊಬೈಲ್ ನಲ್ಲಿ ನ್ಯೂಸ್ ಓದುತ್ತಾ ಕುಳಿತವಳಿಗೆ ಒಂದು ವಾರ್ತೆ ಕಣ್ಣಿಗೆ ಬಿತ್ತಲ ಅದು ಮಹಿಳಾ ದಿನದ ಸಾರ್ಥಕತೆಯನ್ನ ನನಗೆ ಅರುಹಿ ಬಿಟ್ಟಿದೆ. ವಿಷಯ ಗರ್ಭಿಣಿ ಆತ್ಮಹತ್ಯೆ: ಕಾರಣ ವರದಕ್ಷಿಣೆ ಕಿರುಕುಳ……. ಛೆ….ನಾಚಿಕೆಯಾಗಬೇಕು ನಿಮ್ಮ ಗಂಡಸುತನಕ್ಕೆ…..ನಿಮ್ಮ ಹೊಲಸು ಮನಸ್ಸಿಗೆ. ಮಹಿಳಾ ದಿನ ಅಂತ ಸಂಭ್ರಮದಿಂದ ಕುಣಿದು ಕುಪ್ಪಳಿಸಿದವರು ಮೈಸೂರಿನ ಲಕ್ಷ್ಮೀ ಎಂಬ 23 ವರ್ಷದ ಹೆಣ್ಣುಮಗಳ ಸಾವಿಗೆ ಪ್ರತಿಕ್ರಿಯಿಸಿ ನೋಡೋಣ…

ಅಲ್ಲ ಆತ್ಮಹತ್ಯೆ ಅಷ್ಟು ಸುಲಭವೇ? ನಾವಾಗೇ ಸಾವನ್ನು ತಂದುಕೊಳ್ಳಬೇಕೆಂದರೆ ಅದಕ್ಕೂ ಧೈರ್ಯ ಬೇಕಲ್ಲ…. ಅಂತದ್ದರಲ್ಲಿ ತನ್ನೊಡಲೊಳಗೆ ಇನ್ನೊಂದು ಜೀವ ಇಟ್ಟುಕೊಂಡಿದ್ದ ಈ ಹೆಣ್ಣು ಜೀವ ಆತ್ಮಹತ್ಯೆಯ ದಾರಿ ಹಿಡಿದಿದೆ ಎಂದರೆ ಆಕೆಗೆ ಅದೆಷ್ಟು ನೋವಾಗಿರಬೇಡ, ವರದಕ್ಷಿಣೆ ಎಂಬ ಪೆಡಂಭೂತ ಹಿಡಿದ ಗಂಡನೆಂಬ ಪಿಶಾಚಿ ಅದೆಷ್ಟು ಕಾಡಿರ ಬೇಡ ಆಕೆಯನ್ನ…. ಛೀ ಆತನ ಗಂಡಸುತನಕ್ಕೆ ನನ್ನದೊಂದು ದಿಕ್ಕಾರ.

ಮಹಿಳಾ ದಿನಾಚರಣೆಯ ಈ ಹೊತ್ತಿನಲ್ಲಿ ನಾನು ಮಾತನಾಡಲೇ ಬೇಕಾದ ವಿಷಯ ಮತ್ತೊಂದಿದೆ, ದಿನಗಳು ಕಳೆಯುತ್ತಲೇ ಇದೆ, ನಡುರಾತ್ರಿಯಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ಬದುಕಿರುವಷ್ಟು ಹೊತ್ತು ನರಕಯಾತನೆ ಪಟ್ಟ ಹೆಣ್ಣುಮಗಳು ನಿರ್ಭಯಾಳ ಆ ಸಾವಿಗೆ ನ್ಯಾಯ ಸಿಕ್ಕಿದ್ದರೆ ಬಹುಶಃ ಎಲ್ಲೋ ಒಂದು ಕಡೆ ಈ ದಿನ ಒಂದು ಹಂತಕ್ಕೆ ಸಾರ್ಥಕ ಎಂದು ಹೇಳಿಬಿಡುತ್ತಿದ್ದೆನೇನೋ….ಆದರೆ ಕಾನೂನಿನ ಅವಕಾಶಗಳಿವೆ ನಿಮಗೆ ಉಪಯೋಗಿಸಿಕೊಳ್ಳಿ ಅಂತ ಕಾಮುಕರನ್ನು ಹಾಗೆಯೆ ಬಿಟ್ಟಿದ್ದಾರಲ್ಲ ಏನು ಮಾಡುವುದು ಹೇಳಿ….

ಅದೆಷ್ಟೋ ಮಂದಿ ಓದಿ ವಿದ್ಯಾವಂತರಾದರೂ ಗಂಡಸಿನ ಸಂಪ್ರದಾಯದ ಕಟ್ಟುಪಾಡಿಗೆ ಸಿಲುಕಿ ನಲುಗುತ್ತಿರುವವರು ಇಂದು ಎಷ್ಟು ಮಂದಿ ಬೇಕು, ಈಗ ಸ್ವಲ್ಪ ವರ್ಷಗಳ ಹಿಂದೆ ತೀರಿಕೊಂಡ ಗೆಳತಿ ಗೀತಾಳ ನೆನಪು ಮಾಸದಂತೆ ನನ್ನೊಳಗೆ ಅಚ್ಚಾಗಿದೆಯಲ್ಲ, ಆಕೆಯ ಸಾವು ಆತ್ಮಹತ್ಯೆ ಅಲ್ಲ ಎಂದು ಸಾರಿ ಸಾರಿ ನನ್ನ ಮನಸ್ಸು ಹೇಳುತ್ತಿದ್ದರೂ ಸಾಕ್ಷಿ ಕೊರತೆಯ ಕಾರಣವೋ ಅಥವಾ ನನ್ನ ಅಸಹಾಯಕತೆಯೋ ಗೊತ್ತಿಲ್ಲ ಅವಳ ಸಾವು ಮನಸ್ಸಿಲ್ಲದ ಮನಸ್ಸಿನಿಂದ ಆತ್ಮಹತ್ಯೆ ಎಂದು ಒಪ್ಪುವಂತೆ ಮಾಡಿತ್ತಲ್ಲ, ಇದಾ ಮಹಿಳಾ ದಿನಾಚರಣೆ? ಬರಹಗಾರ್ತಿ, ಗೆಳತಿ ರಂಜಿತಾ ಸಾವು ನಂಬಲಾಗದ ಕಥೆಗಳನ್ನ ನನ್ನ ಮುಂದೆ ಪ್ರತಿನಿತ್ಯ ತಂದು ನಿಲ್ಲಿಸುತ್ತಿದೆಯಲ್ಲ ಇದೂ ಮಹಿಳಾ ದಿನಾಚರಣೆನಾ? ಹಲವು ವರ್ಷಗಳ ಹಿಂದೆ ಇದ್ದಕ್ಕಿದ್ದಂತೆ ಚೆನ್ನೈ ನ ಗಂಡನ ಮನೆಯಿಂದ ಕಾಣೆಯಾದ ಮೇಘ ಎಂಬ ಆರು ತಿಂಗಳ ಗರ್ಭಿಣಿ ಏನಾದಳು? ರೈಲು ಹಳಿಯ ಮೇಲೆ ಬಿದ್ದಿದ್ದ ಆರು ತಿಂಗಳ ಗರ್ಭಿಣಿಯ ಶವವನ್ನು ಅವಳದ್ದೇ ಎಂದು ನಂಬಿಸಿ ಆತ್ಮಹತ್ಯೆ ಎಂದು ಕೇಸಿಗೆ ಇತಿಶ್ರೀ ಹಾಕಿದ ಈ ವ್ಯವಸ್ಥೆಗೆ ಮಹಿಳಾ ದಿನಾಚರಣೆಯ ಮಜಬೂತು ಆಚರಣೆ ಬೇಕು ಅಲ್ಲವೇ?

ಗಂಡ ಕುಡಿದು ಬರಲಿ, ಹೊಡೆಯಲಿ, ಹೀಯಾಳಿಸಲಿ ಮಹಿಳೆ ಸಹಿಸಿಕೊಳ್ಳಲೇ ಬೇಕು, ಎಲ್ಲಿಯೋ ದೂರದ ಹಳ್ಳಿ ಮೂಲೆಯಲ್ಲಿದ್ದು ಮದುವೆಯಾಗಿ ಪೇಟೆಯಲ್ಲಿನ ಗಂಡನ ಮನೆ ಸೇರಿದವಳಿಗೆ ಕಟ್ಟುಪಾಡುಗಳ ಚೌಕಟ್ಟುಗಳ ಸಂಕೋಲೆಗಳು ಬಿಗಿಯುತ್ತವಲ್ಲ, ವಾರ ಪೂರ್ತಿ ಮನೆಯಲ್ಲಿ ಒಬ್ಬಳೇ ಕಾಲ ಕಳೆಯುತ್ತಿದ್ದಾಕೆ ನನಗಾಗಿ ಗಂಡ ವಾರದ ಒಂದು ದಿನದ ಒಂದು ಗಂಟೆ ಮೀಸಲಿಡಲಿ ಎಂದು ಬಯಸುವುದೂ ತಪ್ಪಾಗುತ್ತದೆಯೇ? ಆಫೀಸಿನಿಂದ ಬಂದ ಗಂಡ ಎಷ್ಟು ಬೇಕಾದರೂ ಸಿಡುಕ ಬಹುದು ಹೀಯಾಳಿಸಿ ಬೈದು ಬಂಗಿಸಬಹುದು, ಆದರೆ ಈಕೆ ಒಂದು ಚಿಕ್ಕ ಮಾತೂ ಆಡುವಂತಿಲ್ಲ ಎಂಬ ಕಟ್ಟುನಿಟ್ಟಿನ ನೀತಿ ನಿಯಮಗಳು. ಈ ರೀತಿ ಈಗಲೂ ಎಷ್ಟು ಮನೆಯಲ್ಲಿ ನಡೆಯುತ್ತಿಲ್ಲ? ಮನಸ್ಸಿನ ಸಹಜ ಆಸೆಗಳನ್ನೂ ಬಾಯಿ ಬಿಟ್ಟು ಹೇಳುಕೊಳ್ಳಲಾರದೆ ಒದ್ದಾಡುವ ಆಕೆಗೆ ಸಿಕ್ಕಯವುದೇನು? ಗಂಡನಿಂದ ಸಿಗಬೇಕಾದ ದೈಹಿಕ ಸುಖದಿಂದಲೂ ವಂಚಿತಳಾಗಿ ಕಣ್ಣೀರು ಸುರಿಸುವ ಹೆಣ್ಣುಮಕ್ಕಳು ಎಷ್ಟು ಮಂದಿ ಬೇಕು ನಮ್ಮ ನಡುವೆ?

ಹೆಣ್ಣು ನಿಮ್ಮಂತೆಯೇ ಅಲ್ಲವೇ? ಅವಳಿಗೂ ನಿಮ್ಮಂತೆ ಆಸೆಗಳಿಲ್ಲವೇ? ನಿಮ್ಮಂತೆ ರಕ್ತ, ಮಾಂಸಗಳಿಲ್ಲವೇ? ನಿಮ್ಮಂತೆ ಮನಸ್ಸಿಲ್ಲವೇ? ಅವಳಿಂದ ಸಿಗಬೇಕಾದ ಸುಖದಲ್ಲಿ ಚೂರು ವ್ಯತ್ಯಾಸ ಆದರೂ ಸಹಿಸದ ನೀವು ನಿಮ್ಮಿಂದ ಸಿಗಬೇಕಾದ ಸುಖ ಸಂಪೂರ್ಣವಾಗಿ ಇಲ್ಲವಾಗಿಸಿದರೆ ಹೇಗೆ ಸಹಿಸಿಕೊಂಡಾಳು ಅವಳು?

ಎಷ್ಟು ಉದಾಹರಣೆಗಳು ಬೇಕು? ಮಹಿಳೆಯ ಕಣ್ಣೀರ ಕಥೆಗೆ? ನಿತ್ಯ ಕಣ್ಣೀರು ಸುರಿಸುವ ಮಹಿಳೆಯರು ನಮ್ಮ ನಡುವೆ ಇರುವಾಗ ಮಹಿಳಾ ದಿನಾಚರಣೆ ಅಂತ ಮಾಡಿ ಉಪಯೋಗವಾದರೂ ಏನು? ಮಹಿಳಾ ದಿನಾಚರಣೆ ವಿಶೇಷ ಕಾರ್ಯಕ್ರಮ ಅತಿಥಿ ಯಾಗಿ ಇಂತವರು ಆಗಮಿಸಬೇಕು ಎಂದು ಮೀಟಿಂಗ್ ಸೇರಿ ನಿರ್ಧಾರ ಮಾಡಿ ಆಮಂತ್ರಣ ನೀಡಲು ಹೋದರೆ ಗಂಡನನ್ನು ಕೇಳಬೇಕು ಎಂದು ಆ ಮಹಿಳೆ ಹೇಳುವ ಪರಿಸ್ಥಿತಿ ಇನ್ನೂ ಜೀವಂತ ಇರುವಾಗ ಇದಕ್ಕಿಂತ ಬೇರೆ ದುರಂತ ಇನ್ನೇನಿದೆ? ನಿಮ್ಮ ಪ್ರಕಾರ ಇದೇ ಅಲ್ವ ಸಂಭ್ರಮದಿಂದ ಆಚರಿಸಿದ ಮಹಿಳಾ ದಿನಾಚರಣೆಯ ಸಾರ್ಥಕತೆ?

LEAVE A REPLY

Please enter your comment!
Please enter your name here