ಮಠದ ಮಕ್ಕಳ ಮುಂದೆ ಮೋದಿ ರಾಜಕೀಯ ಭಾಷಣ ಸರೀನಾ..?

ಪ್ರಧಾನಮಂತ್ರಿ ನರೇಂದ್ರ ಮೋದಿ ತುಮಕೂರಿನ ಸಿದ್ದಗಂಗಾ ಮಠದ ಮಕ್ಕಳನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ರಾಜಕೀಯ ಇಣುಕಿದ್ದು, ತೀವ್ರ ಟೀಕೆಗೆ ಗುರಿಯಾಗಿದೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿ ಹಲವರು ಪ್ರಧಾನಮಂತ್ರಿ ವಿರುದ್ಧ ಹರಿಹಾಯ್ದಿದ್ದಾರೆ.

ಅಷ್ಟಕ್ಕೂ ಪ್ರಧಾನಮಂತ್ರಿ ಹೇಳಿದ್ದೇನು..?

ಸಿದ್ದಗಂಗಾ ಮಠದ ಲಿಂಗೈಕ್ಯ ಶ್ರೀಶಿವಕುಮಾರ ಸ್ವಾಮೀಜಿಗಳ ಗದ್ದುಗೆಗೆ ಭೇಟಿ ನೀಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೊರಳಲ್ಲಿ ರುದ್ರಾಕ್ಷಿ ಸರಗಳನ್ನು ಧರಿಸಿ, ಹಣೆಗೆ ವಿಭೂತಿ ಹಚ್ಚಿಕೊಂಡು ಮಠದ ಮಕ್ಕಳನ್ನು ಉದ್ದೇಶಿಸಿ ಭಾಷಣ ಮಾಡಿದ್ದರು. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳ ವಿಚಾರವಾಗಿ ಕಾಂಗ್ರೆಸ್ ಪಕ್ಷವನ್ನು ಟಾರ್ಗೆಟ್ ಮಾಡಿಕೊಂಡು ವಾಗ್ದಾಳಿ ನಡೆಸಿದ್ದರು.

ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯಗಳು ನಡೆಯುತ್ತಿದ್ದರೂ ಕಾಂಗ್ರೆಸ್ ಪಕ್ಷ ಮತ್ತು ಅವರ ಸಹಚರ ಪಕ್ಷಗಳು ಮಾತನಾಡುತ್ತಿಲ್ಲ. ತಮ್ಮ ಜೀವ, ಹೆಣ್ಣುಮಕ್ಕಳ ಮಾನ ಉಳಿಸಿಕೊಳ್ಳಲು ಭಾರತಕ್ಕೆ ಬಂದವರನ್ನು ಕಾಪಾಡಲು ಮುಂದಾದರೇ ಕಾಂಗ್ರೆಸ್ಸಿಗರು ವಿರೋಧ ಮಾಡುತ್ತಿದ್ದಾರೆ. ಇವರಿಗೆ ಇತರೆ ದೇಶಗಳಿಂದ ಬಂದ ಅಲ್ಪಸಂಖ್ಯಾತರ ಬದುಕು ಅರಿಯಲು, ಸುಧಾರಿಸಲು ಸಮಯವೇ ಇಲ್ಲ. ಪೌರತ್ವ ಕಾಯ್ದೆ ವಿರೋಧಿಸುತ್ತಿರುವವರೇ ನಿಮಗೆ ವಿರೋಧಿಸಲೇಬೇಕು, ಹೋರಾಟ ಮಾಡಲೇಬೇಕು ಎಂದಿದ್ದರೇ, ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಮೇಲಾಗುತ್ತಿರುವ ದೌರ್ಜನ್ಯಗಳ ಬಗ್ಗೆ ಮಾತನಾಡಿ, ಹೋರಾಟ ಮಾಡಿ. ವಿಶ್ವ ವೇದಿಕೆಗಳಲ್ಲಿ ಪಾಕಿಸ್ತಾನದ ಬಣ್ಣವನ್ನು ಬಯಲು ಮಾಡಿ. ಅದು ಬಿಟ್ಟು ಪಾಕಿಸ್ತಾನದ ಪರವಾಗಿ ಏಕೆ ಮಾತನಾಡುತ್ತೀರಿ ? ದೇಶದಲ್ಲಿ ದ್ವೇಷದ ವಾತಾವರಣ ನಿರ್ಮಿಸುತ್ತಿದ್ದೀರಿ ಎನ್ನುವುದನ್ನು ಜನರು ಗಮನಿಸುತ್ತಿದ್ದಾರೆ ಎಂದು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುತ್ತಿರುವ ರಾಜಕೀಯ ಪಕ್ಷಗಳಿಗೆ ಅದರಲ್ಲೂ ಪ್ರಮುಖವಾಗಿ ಕಾಂಗ್ರೆಸ್ ಪಕ್ಷಕ್ಕೆ ಚುರುಕು ಮುಟ್ಟಿಸುವ ಕೆಲಸ ಮಾಡಿದ್ದಾರೆ.

ಮೋದಿ ಭಾಷಣಕ್ಕೆ ಟೀಕೆ

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುತ್ತಿರುವ ಕಾಂಗ್ರೆಸ್ ವಿರುದ್ಧ ಕೇಂದ್ರ ಸರ್ಕಾರ ಟೀಕೆ, ಆರೋಪ, ವಾಗ್ದಾಳಿ ಮಾಡುವುದು ಸರಿ. ಆದರೆ, ಎಲ್ಲಿ ಟೀಕೆ ಮಾಡುತ್ತಿದ್ದೀರಿ ಎನ್ನುವುದು ಮುಖ್ಯವಾಗುತ್ತದೆ. ಪ್ರಧಾನಮಂತ್ರಿಗಳು ಮಠದ ಮಕ್ಕಳ ಮುಂದೆ ರಾಜಕೀಯ ಭಾಷಣ ಮಾಡಿದ್ದು ಸರಿಯಲ್ಲ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಭಾಷಣಕ್ಕೆ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ತುಮಕೂರಿನ ಸಿದ್ದಗಂಗಾ ಮಠಕ್ಕೆ ಜಾತ್ಯಾತೀತ ಮತ್ತು ಪಕ್ಷಾತೀತವಾದ ಗೌರವದ ಸ್ಥಾನ ಇದೆ. ಈ ಕಾರಣಕ್ಕಾಗಿಯೇ ಅದು ಸರ್ವರೂ ಭಕ್ತಿಯಿಂದ ನಮಿಸುವ ಶ್ರೀ ಕ್ಷೇತ್ರ. ಇಂತಹ ಕ್ಷೇತ್ರದಲ್ಲಿ ಎಳೆಯ ಮಕ್ಕಳನ್ನು ಕೂರಿಸಿಕೊಂಡು ಕೊಳಕು ರಾಜಕೀಯ ಭಾಷಣ ಮಾಡಿದ ನರೇಂದ್ರ ಮೋದಿಯವರೇ ನಿಮ್ಮನ್ನು ಈ ಪವಿತ್ರ ನೆಲ ಕ್ಷಮಿಸದು ಎಂದು ಸಿದ್ದರಾಮಯ್ಯನವರು ಟೀಕೆ ಮಾಡಿದ್ದಾರೆ.

ಸಿದ್ದರಾಮಯ್ಯನವರ ಈ ಟ್ವಿಟ್‍ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಸಿದ್ದರಾಮಯ್ಯ ನಿಲುವನ್ನು ಟೀಕಿಸಿದ್ದಾರೆ. ಇನ್ನೂ ಕೆಲಸವರು ಸಮರ್ಥನೆ ಮಾಡಿಕೊಂಡಿದ್ದಾರೆ. ಮಕ್ಕಳು ತಿನ್ನುವ ಊಟದಲ್ಲಿಯೂ ರಾಜಕೀಯ ಮಾಡಿದ ನಿಮಗೆ ಈ ಟೀಕೆ ಮಾಡುವ ಹಕ್ಕಿಲ್ಲ ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

LEAVE A REPLY

Please enter your comment!
Please enter your name here