ಮಕರ ಸಂಕ್ರಾಂತಿಯ ವಿಶೇಷತೆ

-ಸತ್ಯಸಾಕ್ಷಿ ತುಮರಿ

ಅದ್ಯಾಕೋ ಕೆಲವು ಹಬ್ಬಗಳು ಮನಸ್ಸಿನಲ್ಲಿ ಕುತೂಹಲ ಮೂಡಿಸುತ್ತವೆ… ಹಿಂದೆ ಹಬ್ಬಗಳೆಂದರೆ ಹೊಸ ಬಟ್ಟೆ, ಸಿಹಿ ತಿನಿಸು,ಸಂಭ್ರಮಕ್ಕೆ ಮಾತ್ರ ಸೀಮಿತವಾಗಿತ್ತು. ಆದರೆ ಬೆಳೆದು ದೊಡ್ಡವರಾದಂತೆಲ್ಲಾ ಪ್ರತೀ ಹಬ್ಬಗಳ ಆಚರಣೆಯ ಹಿಂದಿರುವ ಕಾರಣ ತಿಳಿದುಕೊಳ್ಳುವ ಹಂಬಲ ಮನಸ್ಸಿನಲ್ಲಿ ಮನೆಮಾಡುತ್ತದೆ. ಚಿಕ್ಕವರಿದ್ದಾಗ ಮಕರ ಸಂಕ್ರಾಂತಿ ಹಬ್ಬ ಯಾಕೋ ಗೊತ್ತಿಲ್ಲ ಎಲ್ಲಾ ಹಬ್ಬಗಳಿಗಿಂತ ವಿಭಿನ್ನ ಎನಿಸುತ್ತಿತ್ತು.

ಮಕರ ಸಂಕ್ರಾಂತಿ ಎಂದರೆ ಊರಿನಲ್ಲಿ ಎರಡು ದಿನಗಳ ಜಾತ್ರೆಯ ಸಂಭ್ರಮ ಒಂದುಕಡೆಯಾದರೆ ಮತ್ತೊಂದು ಕಡೆ ಹೊಸ ಬಟ್ಟೆ ಧರಿಸಿ ಸಂಕ್ರಾಂತಿ ಕಾಳುಗಳನ್ನು ಮನೆ ಮನೆಗೆ ಹಂಚುವ ಮತ್ತು ಅದರಲ್ಲಿ ಬೆರೆತಿದ್ದ ಶೇಂಗಾ ಕಾಳುಗಳನ್ನು ಆರಿಸಿಕೊಂಡು ಮೆಲ್ಲುವ ತವಕದ ಆನಂದ ಮತ್ತೊಂದು ಕಡೆ. ಅಂದು ಈ ಸಂಭ್ರಮ ಸಡಗರ ಮಾತ್ರ ನಮಗೆ ಮುಖ್ಯವಾಗುತ್ತಿತ್ತು. ಆದರೆ ಇತ್ತೀಚೆಗೆ ಹಬ್ಬಗಳ ಕುರಿತು ಕುತೂಹಲ ಮೂಡಿ ಪ್ರತೀ ಹಬ್ಬಗಳ ಹಿನ್ನೆಲೆ ತಿಳಿಯುತ್ತಾ ಹೋದಂತೆಲ್ಲಾ  ಅಚ್ಚರಿಯಾಗುವ ಮತ್ತು ಅದ್ಭುತ ಹಿನ್ನೆಲೆಗಳು ನನಗೆ ಗೋಚರವಾಗಿದ್ದವು. ಇಂದು ನಾನು ಹಾಗೇ ಓದಿಕೊಂಡ ಹಬ್ಬಗಳಲ್ಲಿ ಒಂದಾದ ಮಕರ ಸಂಕ್ರಾಂತಿ ಹಬ್ಬದ ಕುರಿತು ಮಾತನಾಡುತ್ತೇನೆ.

ಹಿಂದಿನಿಂದ ನಡೆದುಕೊಂಡು ಬಂದ ಪದ್ಧತಿಯ ಪ್ರಕಾರ ಸೂರ್ಯ ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶ ಪಡೆಯುವ ಪುಣ್ಯ ಕಾಲ ಇದು. ಇದನ್ನು ಉತ್ತರಾಯಣ ಪುಣ್ಯಕಾಲ, ಸಂಕ್ರಾಂತಿ, ಸಂಕ್ರಮಣ, ಮಕರ ಸಂಕ್ರಾಂತಿ, ಎಂಬ ಇತ್ಯಾದಿ ಹೆಸರುಗಳಿಂದ ಕರೆಯುತ್ತಾರೆ. ಈ ಕಾಲದಲ್ಲಿ ಶುಭ ಕಾರ್ಯಗಳನ್ನು ಕೈಗೊಳ್ಳುವುದು ತುಂಬಾ ಒಳ್ಳೆಯದು ಎಂಬ ಪ್ರತೀತಿ ಕೂಡಾ ಇದೆ.

ಉತ್ತರಾಯಣದ ಕಾಲ ಕತ್ತಲೆಯನ್ನು ಹೋಗಲಾಡಿಸಿ ಬೆಳಕು ನೀಡುವ ಪುಣ್ಯ ಕಾಲ. ಈ ಕಾಲ ವೈಜ್ಞಾನಿಕ ದೃಷ್ಟಿಯಿಂದಲೂ ಉತ್ತಮವಾದದ್ದು. ಈ ಕಾಲದಲ್ಲಿ ಸಸ್ಯಗಳ ಬೆಳವಣಿಗೆಗೆ ಸಹಾಯಕವಾಗುವ ವಾತಾವರಣ ಸೃಷ್ಟಿಯಾಗುವ ಸಮಯವಿದು. ಈ ಕಾಲದಲ್ಲಿ ದೀರ್ಘ ಹಗಲನ್ನು ನಾವು ಕಾಣಬಹುದು. ಹೆಚ್ಚಿನ ಬೆಳಕು ಈ ಕಾಲದಲ್ಲಿ ಇರುವುದರಿಂದ ಇದು ಸಸ್ಯಗಳ ಬೆಳವಣಿಗೆಗೆ ಪೂರಕವಾಗಿದೆ ಎಂದೇ ಹೇಳಬಹುದು. ಇನ್ನು ಪುರಾಣಗಳ ಪ್ರಕಾರ ಈ ಕಾಲದಲ್ಲಿ ಸ್ವರ್ಗದ ಬಾಗಿಲು ತೆರೆದಿರುತ್ತದೆ. ಆದ್ದರಿಂದ ಈ  ಕಾಲದಲ್ಲಿ ಮರಣಹೊಂದುವವರಿಗೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬುದು ನಂಬಿಕೆ. ಇದಕ್ಕೆ ಪುಷ್ಟಿ ನೀಡುವಂತೆ ಪುರಾಣದ ಒಂದು ಕಥೆ ನೆನಪಿಸಿಕೊಳ್ಳಬಹುದು. ಅದು ಮಹಾಭಾರತದ ಕಥೆ.

ಕುರುಕ್ಷೇತ್ರ ಯುದ್ಧಭೂಮಿಯಲ್ಲಿ ಇಚ್ಚಾಮರಣಿಯಾದ ಭೀಷ್ಮ ಭಾಣಗಳಿಂದ ಜರ್ಜರಿತನಾಗಿ ಸಾವು ಬದುಕಿನ ನಡುವೆ ಹೋರಾಟ ಮಾಡುವ ಸ್ಥಿತಿ. ಹೇಳಿ ಕೇಳಿ ಆತ ಇಚ್ಚಾ ಮರಣಿ.. ತಾನು ಬಯಸಿದಾಗ ಸಾವನ್ನು ತಂದುಕೊಳ್ಳುವ ವರ ವುಳ್ಳ ವ್ಯಕ್ತಿ.. ಆದರೆ ಆತ ನೋವಿನಿಂದ ನರಳುತ್ತಿದ್ದರೂ ಕೂಡಾ ಸಾವನ್ನು ಬಯಸಲಿಲ್ಲ. ಆತ ಸ್ವರ್ಗಕ್ಕೇ ಹೋಗಬೇಕೆಂದು ಇಚ್ಚಿಸಿ ಕಾದದ್ದು ಈ ಉತ್ತರಾಯಣ ಕಾಲಕ್ಕೆ. ಅದೇ ಪುಣ್ಯ ಕಾಲದಲ್ಲಿ ಆತ ಜೀವ ತ್ಯಾಗ ಮಾಡಿದ್ದ. ಇದು ಸ್ವರ್ಗದ ಬಾಗಿಲು ತೆಗೆದಿರುತ್ತದೆ ಎಂಬುದಕ್ಕೆ ಒಂದು ಪುರಾಣದ ಕಥೆ.

ಈ ಕಾಲದಲ್ಲಿ ತಾವು ಬೆಳೆದ ಬೆಳೆಯನ್ನು ತಂದು ಪೂಜಿಸಿ ಉಪಯೋಗಿಸುವ ಪದ್ದತಿ ರೂಡಿಯಲ್ಲಿದೆ. ಇನ್ನೂ ಕೆಲವೆಡೆ ಭತ್ತದ ಹೊಸ ಕದಿರು ತಂದು ಅದನ್ನು ಪೂಜಿಸಿ ನಂತರ ಅದರಿಂದ ಖಾಧ್ಯಗಳನ್ನು ಮಾಡಿ ಸೇವಿಸುವ ಪದ್ಧತಿ ಕೂಡಾ ಚಾಲ್ತಿಯಲ್ಲಿದೆ. ಇನ್ನೂ ಕೆಲವೆಡೆ ಈ ಹಬ್ಬವನ್ನು ಗಾಳಿಪಟ ಹಾರಿಸುವ ಹಬ್ಬವನ್ನಾಗಿ ಕೂಡಾ ಆಚರಿಸುತ್ತಾರೆ. ತಮಿಳುನಾಡಿನಲ್ಲಿ ಹೊಸ ಅಕ್ಕಿ ತಂದು ಅದನ್ನು ಹಾಲಿನೊಂದಿಗೆ ಬೇಯಿಸಿ ಪೊಂಗಲ್ ಮಾಡಿ ಸೇವಿಸುವ ಕ್ರಮವಿದೆ. ಇಲ್ಲಿ ಸಂಕ್ರಾಂತಿ ಹಬ್ಬವನ್ನು ಪೊಂಗಲ್ ಎಂದೇ ಕರೆಯುತ್ತಾರೆ.

ಇನ್ನು ಈ ಕಾಲ ಪವಿತ್ರತೆ ಪಡೆದುಕೊಳ್ಳಲು ಮತ್ತೊಂದು ಕಾರಣವಿದೆ. ನಾಸಿಕ್, ಪ್ರಯಾಗ, ಉಜ್ಜೈನಿ ಮೊದಲಾದೆಡೆ ಹನ್ನೆರಡು ವರ್ಷಕ್ಕೊಮ್ಮೆ ನಡೆಯುವ ಕುಂಬಮೇಳವು ಈ ಕ್ಷೇತ್ರಗಳಲ್ಲಿ ಯಾವುದಾದರೂ ಒಂದು ಕ್ಷೇತ್ರದಲ್ಲಿ ನಡೆದೇ ನಡೆಯುತ್ತದೆ. ಇದು ಭಾರತದಲ್ಲಿ ಸಂಕ್ರಾಂತಿಯ ವಿಷೇಶ ಆಚರಣೆಗಳಲ್ಲಿ ಒಂದಾಗಿದೆ. ಇನ್ನು ಕರ್ನಾಟಕದಲ್ಲಿ ಹಲವಾರು ಕ್ಷೇತ್ರಗಳಲ್ಲಿ ಜಾತ್ರೆಗಳು ನೆಡೆಯುತ್ತವೆ. ಅಂತಹ ಕ್ಷೇತ್ರಗಳಲ್ಲಿ ಸಿಗಂದೂರು ಚೌಡೇಶ್ವರಿ ದೇವಿಯ ಜಾತ್ರೆ ಪ್ರಮುಖವಾದದ್ದು

ಇನ್ನು ಈ ಹಬ್ಬದಲ್ಲಿ ಎಳ್ಳು ಮತ್ತು ಬೆಲ್ಲ ಹಂಚುವ ಪರಿಪಾಠವಿದೆ. ಇದಕ್ಕೆ ಕಾರಣ ಎಳ್ಳು ಮತ್ತು ಬೆಲ್ಲವನ್ನು ಈ ಕಾಲದಲ್ಲಿ ಸೇವಿಸುವುದರಿಂದ ಅದು ಆರೋಗ್ಯಕ್ಕೆ ಪೂರಕವಾಗಿರುತ್ತದೆ. ಆದ್ದರಿಂದ ಈ ಹಬ್ಬವನ್ನು ಎಳ್ಳುಬೀರುವ ಹಬ್ಬ ಎಂದೂ ಕರೆಯುತ್ತಾರೆ. ಈ ಕಾಲದಲ್ಲಿ ಚಳಿ ಹೆಚ್ಚಿರುವುದರಿಂದ ದೇಹಕ್ಕೆ ಉಷ್ಣತೆ ನೀಡಿ ದೇಹದ ಕಾಂತಿ ಹೆಚ್ಚಳಕ್ಕೆ ಎಳ್ಳು ಕಾರಣವಾಗಿದೆ. ಆದ್ದರಿಂದ ಈ ಕಾಲದಲ್ಲಿ ಎಳ್ಳು ಸೇವನೆ ಒಳ್ಳೆಯದಾಗಿದೆ. ಬರೀ ಎಳ್ಳು ಮಾತ್ರ ತಿಂದರೆ ಅದು ಕಫವನ್ನು ಹೆಚ್ಚಿಸುತ್ತದೆ ಆದ್ದರಿಂದ ಅದರ ಜೊತೆ ಜೊತೆಗೆ ಬೆಲ್ಲ ಮತ್ತು ಕಬ್ಬು, ಹುರಿಗಡಲೆ ಸೇರಿಸಿ ತಿನ್ನುವುದು ರೂಢಿ.

ಎಳ್ಳು ಹಿಂದಿನ ವರ್ಷದ ಅಂತ್ಯಕ್ಕೆ ಕಾರಣವಾದರೆ ಬೆಲ್ಲ ಮುಂದಿನ ವರ್ಷದ ಆರಂಭದ ಸಿಹಿಯ ಸಂಕೇತ. ಆದ್ದರಿಂದ ಹಳೆಯ ಕಹಿಯನ್ನು ಮರೆತು ಹೊಸ ಬದುಕಿನ ಸಿಹಿಯತ್ತ ಸಾಗಲು ನಮ್ಮನ್ನು ಪ್ರೇರೇಪಿಸುವುದೇ ಈ ಮಕರ ಸಂಕ್ರಾಂತಿ. ಇದರ ಆಚರಣೆಯನ್ನು ಎಲ್ಲರೂ ಅರ್ಥವತ್ತಾಗಿ ಆಚರಿಸಿಕೊಳ್ಳೋಣ.

LEAVE A REPLY

Please enter your comment!
Please enter your name here