ಮಂತ್ರಾಲಯ ಮಹಾತ್ಮೆ.. ನಿಮಗೆಷ್ಟು ಗೊತ್ತು..?

ದೇಶದ ಪ್ರಸಿದ್ಧ ಆಧ್ಯಾತ್ಮಿಕ ಕ್ಷೇತ್ರಗಳ ಪೈಕಿ ಆಂಧ್ರ-ಕರ್ನಾಟಕ ಗಡಿಯಲ್ಲಿರುವ ಮಂತ್ರಾಲಯದ ಶ್ರೀರಾಘವೇಂದ್ರಸ್ವಾಮಿ ಮಠ ಕೂಡ ಒಂದು. ರಾಘವೇಂದ್ರ ಸ್ವಾಮೀಜಿ ಜೀವ ಸಮಾಧಿಯಾದ ಬೃಂದಾವನವನ್ನು ದರ್ಶಿಸಿಕೊಳ್ಳಲು ಕರ್ನಾಟಕ, ಮಹಾರಾಷ್ಟ್ರ, ಆಂಧ್ರ, ತೆಲಂಗಾಣದಿಂದ ನಿತ್ಯ ಸಾವಿರಾರು ಭಕ್ತರು ಮಂತ್ರಾಲಯಕ್ಕೆ ಬರುತ್ತಾರೆ.

ಕ್ಷೇತ್ರ ಪುರಾಣ;
ಮಂತ್ರಾಲಯ ಒಂದಾನೊಂದು ಕಾಲದಲ್ಲಿ ಹಳ್ಳಿ. ಇದನ್ನು ಮಂಚಾಲ ಗ್ರಾಮ ಎಂದು ಕರೆಯಲಾಗುತ್ತಿತ್ತು. ಅದೋನಿ ನವಾಬನ ಆಳ್ವಿಕೆ ಇತ್ತು. ಮಾಧ್ವಮಠದಲ್ಲಿ ಸನ್ಯಾಸತ್ವ ಸ್ವೀಕರಿಸಿದ ಶ್ರೀರಾಘವೇಂದ್ರ ಸ್ವಾಮಿ, ಮೂಲ ರಾಮನನ್ನ ಪೂಜಿಸುತ್ತಾ, ಬೋಧನೆ ಮಾಡುತ್ತಾ ಮಂತ್ರಾಲಯಕ್ಕೆ ಬರುತ್ತಾರೆ. ರಾಘವೇಂದ್ರ ಸ್ವಾಮಿ ಪೂರ್ವಾವತಾರದಲ್ಲಿ ಮಹಾವಿಷ್ಣುವಿನ ಭಕ್ತ ಪ್ರಹ್ಲಾದ ಆಗಿದ್ದರು. ಪೂರ್ವಾವತಾರದಲ್ಲಿ ರಾಜನಾಗಿ ಇದೇ ಸ್ಥಳವನ್ನು ಆಳಿದ ಕಾರಣ ತಾವು ಇಲ್ಲಿಯೇ ಜೀವಸಮಾಧಿ ಆಗಲು ರಾಘವೇಂದ್ರ ಸ್ವಾಮಿ ಬಯಸಿದ್ದರು. ಇದೇ ವೇಳೆ, ಮಂಚಾಲ ಗ್ರಾಮದ ಗ್ರಾಮದೇವತೆ ಮಂಚಾಲಮ್ಮ ಕೂಡ ರಾಘವೇಂದ್ರ ಸ್ವಾಮಿಯನ್ನು ಇಲ್ಲೇ ಇರಬೇಕು ಎಂದು ಆಜ್ಞಾಪಿಸಿದರಂತೆ. ಇದರೊಂದಿಗೆ ಸ್ವಾಮಿ ಕೊನೆಗೆ ಇಲ್ಲಿಯೇ ಬೃಂದಾವನಾಸ್ಥರಾದರು.

ಅಂದಿನಿಂದ ನಿತ್ಯ ರಾಘವೇಂದ್ರ ಸ್ವಾಮಿ ಬೃಂದಾವನಕ್ಕೆ ಪಂಡಿತರು ಮಂತ್ರಗಳು ಅರ್ಪಿಸುತ್ತಾ ಬಂದರು. ಹೀಗಾಗಿ ಕಾಲಕ್ರಮೇಣ ಮಂಚಾಲ ಗ್ರಾಮಕ್ಕೆ ಮಂತ್ರಾಲಯ ಎಂಬ ಹೆಸರು ಬಂತು ಎಂದು ಹೇಳಲಾಗುತ್ತದೆ. ಇಲ್ಲಿಗೆ ಬರುವ ಭಕ್ತರು ಮೊದಲು ಗ್ರಾಮ ದೇವತೆ ಮಂಚಾಲಮ್ಮನನ್ನು ದರ್ಶಿಸಿಕೊಂಡು, ನಂತರ ರಾಘವೇಂದ್ರ ಸ್ವಾಮಿ ಬೃಂದಾವನದ ದರ್ಶನ ಮಾಡಿಕೊಳ್ಳುತ್ತಾರೆ.

ರಾಘವೇಂದ್ರ ಸ್ವಾಮಿಯ ಪೂರ್ವಾಶ್ರಮ;
ತಮಿಳುನಾಡಿನ ಭುವನಗಿರಿ ನಿವಾಸಿಗಳಾದ ತಿಮ್ಮನಭಟ್ಟ-ಗೋಪಿಕಾಂಬ ದಂಪತಿಗೆ 1595ರಲ್ಲಿ ವೆಂಕಟನಾಥ(ರಾಘವೇಂದ್ರ ಸ್ವಾಮಿಗೆ ತಂದೆ ತಾಯಿ ಇಟ್ಟ ಹೆಸರು ಇದೆ) ಜನಿಸಿದರು. ಐದರ ಪ್ರಾಯದಲ್ಲೇ ಅಕ್ಷರಾಭ್ಯಾಸ ಮಾಡಿ, ನಂತರ ನಾಲ್ಕು ವೇದಗಳ ಅಧ್ಯಯನ ನಡೆಸಿದರು. ಯುಕ್ತ ವಯಸ್ಸು ಬರುವಷ್ಟರಲ್ಲಿ ಗೃಹಸ್ಥಾಶ್ರಮ ಬೇಡ ಎಂದು ನಿರ್ಣಯಿಸಿದ ವೆಂಕಟನಾಥ ಸನ್ಯಾಸ ದೀಕ್ಷೆ ಸ್ವೀಕರಿಸಿದರು. ರಾಘವೇಂದ್ರನಾಗಿ ಬದಲಾದರು. ಆಧ್ಯಾತ್ಮಿಕ ಬೋಧನೆ ಮಾಡುತ್ತಾ ತಮಿಳುನಾಡು, ಕರ್ನಾಟಕದಲ್ಲಿ ಪರ್ಯಾಟನೆ ಮಾಡಿದರು. ಕರ್ನಾಟಕದ ಪಂಚಮುಖಿ ಬಳಿ 12 ವರ್ಷಗಳ ಕಾಲ ತಪಸ್ಸು ಮಾಡಿದರು. ರಾಘವೇಂದ್ರ ಸ್ವಾಮಿಯ ತಪಸ್ಸಿಗೆ ಪ್ರಸನ್ನನಾದ ಪಂಚಮುಖಿ ಆಂಜನೇಯ ಸ್ವಾಮಿ ಪ್ರತ್ಯಕ್ಷರಾಗಿದ್ದರು ಎನ್ನುತ್ತದೆ ಪುರಾಣ.

ನಂತರ ಪವಿತ್ರ ತುಂಗಭದ್ರಾ ನದಿ ತೀರದಲ್ಲಿರುವ ಮಂತ್ರಾಲಯ್ಯಕ್ಕೆ ಬರುವ ರಾಘವೇಂದ್ರ ಸ್ವಾಮಿ ಅಲ್ಲಿಯೇ ನೆಲೆ ನಿಂತು ಧರ್ಮ ಬೋಧನೆಯಲ್ಲಿ ನಿರತರಾಗಿದ್ದರು. ಆದೋನಿ ನವಾಬ ಸಿದ್ದಿ ಮಸೂದ್ ಖಾನ್‍ರಿಂದ ಮಂಚಾಲ ಗ್ರಾಮವನ್ನು ದಾನವಾಗಿ ಪಡೆದುಕೊಂಡರು. ಮಾಧವರಂ ಸಮೀಪವಿರುವ ಬೆಟ್ಟಕ್ಕೆ ತೆರಳಿದ ರಾಘವೇಂದ್ರ ಸ್ವಾಮಿ, ಇಲ್ಲಿನ ಕಲ್ಲನ್ನೇ ಬಳಸಿ ತಮಗೆ ಬೃಂದಾವನ ನಿರ್ಮಾಣ ಮಾಡಬೇಕೆಂದು ದಿವಾನ್ ವೆಂಕಣ್ಣಾಚಾರಿಗೆ ನಿರ್ದೇಶನ ನೀಡಿದ್ದರು. ತ್ರೇತಾಯುಗದಲ್ಲಿ ಈ ಬೆಟ್ಟದ ಕಲ್ಲು ಸೀತಾರಾಮರಿಗೆ ಏಳು ಗಂಟೆಗಳ ಕಾಲ ವಿಶ್ರಾಂತಿ ನೀಡಿತ್ತು.. ಹೀಗಾಗಿ 700 ವರ್ಷಗಳ ಕಾಲ ಪೂಜೆ ಮಾಡಿಸಿಕೊಳ್ಳುತ್ತೀಯಾ ಎಂದು ಆ ಕಲ್ಲಿಗೆ ಸೀತಾರಾಮರು ವರ ನೀಡಿದ್ದರು. ಹೀಗಾಗಿ ಮಹಿಮೆಯುಳ್ಳ ಇದೇ ಕಲ್ಲಿನಿಂದ ತಮಗೆ ಬೃಂದಾವನ ನಿರ್ಮಿಸಬೇಕೆಂದು ರಾಘವೇಂದ್ರ ಸ್ವಾಮಿ ಆಜ್ಞಾಪಿಸಿದ್ದರು. ಹೀಗಾಗಿ ಇದೇ ಕಲ್ಲಿನಿಂದಲೇ ರಾಘವೇಂದ್ರ ಸ್ವಾಮಿಗೆ ಬೃಂದಾವನ ನಿರ್ಮಿಸಲಾಯಿತು. 1671ರಲ್ಲಿ ರಾಘವೇಂದ್ರ ಸ್ವಾಮಿಗಳು ಮಂತ್ರಾಲಯದ ಈ ಬೃಂದಾವನದಲ್ಲಿ ಸಜೀವ ಸಮಾಧಿ ಆದರು. ಅಂದಿನಿಂದ ಇಲ್ಲಿ ನಿತ್ಯ ಪೂಜೆ ಮಾಡಲಾಗುತ್ತಿದೆ.

ರಾಘವೇಂದ್ರ ಸ್ವಾಮಿ ದರ್ಶನ ಸಮಯ
ಪ್ರತಿದಿನವೂ ಬೆಳಗ್ಗೆ 6ರಿಂದ 8.30ರವರೆಗೆ ದರ್ಶನ ಮಾಡಲು ಅವಕಾಶವಿದೆ. ಮಧ್ಯದಲ್ಲಿ ಅರ್ಧ ಗಂಟೆ ವಿರಾಮದ ಬಳಿಕ ಬೆಳಗ್ಗೆ 9ರಿಂದ ಮಧ್ಯಾಹ್ನ 2 ಗಂಟೆಯವರೆಗೂ ರಾಘವೇಂದ್ರ ಸ್ವಾಮಿ ಬೃಂದಾವನದ ದರ್ಶನಕ್ಕೆ ಅವಕಾಶ ಕೊಡಲಾಗುತ್ತದೆ. ಸಂಜೆ 4 ಗಂಟೆಯಿಂದ ರಾತ್ರಿ 9 ಗಂಟೆಯವರೆಗೂ ಮತ್ತೆ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಇಲ್ಲಿ ಯಾವುದೇ ರೀತಿಯ ಪ್ರತ್ಯೇಕ ದರ್ಶನಗಳು ಇರಲ್ಲ.

ಪರಿಮಳ ಪ್ರಸಾದ – ರಾಘವೇಂದ್ರ ಸ್ವಾಮಿ ಬೃಂದಾವನ ದರುಶನದ ಬಳಿಕ ಭಕ್ತರಿಗೆ ಪರಿಮಳ ಪ್ರಸಾದ ವಿತರಣೆ ಇರುತ್ತದೆ. 20 ರೂಪಾಯಿಗೆ ನಾಲ್ಕು ತುಂಡು ಪರಿಮಳ ಪ್ರಸಾದ ನೀಡಲಾಗುತ್ತದೆ.

ಪ್ರತಿ ದಿನ ಭಕ್ತರಿಗೆ ಉಚಿತವಾಗಿ ಅನ್ನದಾನ ಇರುತ್ತದೆ. ಬೆಳಗ್ಗೆ 11.30ರಿಂದ ಮಧ್ಯಾಹ್ನ 2 ಗಂಟೆಯವರೆಗೂ ಭಕ್ತರು ಪ್ರಸಾದ ಸ್ವೀಕರಿಸಬಹುದು. ರಾತ್ರಿ 7ರಿಂದ 8 ಗಂಟೆಯವರೆಗೂ 2 ರೂ.ಗೆ ಪುಳಿಯೋಗರೆ, ಮೊಸರನ್ನ ನೀಡಲಾಗುತ್ತದೆ.

ಇಲ್ಲಿ ಏನೇನು ನೋಡಬಹುದು
* ಪಂಚಮುಖ ಆಂಜನೇಯ ದೇಗುಲ – ಮಂತ್ರಾಲಯದಿಂದ 20 ಕಿಲೋಮೀಟರ್ ದೂರದಲ್ಲಿದೆ. ಇಲ್ಲಿ ರಾಘವೇಂದ್ರ ಸ್ವಾಮಿ 12 ವರ್ಷ ತಪಸ್ಸು ಮಾಡಿದ್ದರು.

* ಪಾತೂರು – ರಾಘವೇಂದ್ರ ಸ್ವಾಮಿ ಮೊದಲು ಈ ಗ್ರಾಮಕ್ಕೆ ಬಂದು ವೆಂಕಟೇಶ್ವರ ಸ್ವಾಮಿ ದೇಗುಲವನ್ನು ನಿರ್ಮಿಸಿದ್ದರು. ಇಲ್ಲಿರುವ ತಿಮ್ಮಪ್ಪನ ವಿಗ್ರಹವನ್ನು ಖುದ್ದು ರಾಘವೇಂದ್ರ ಸ್ವಾಮಿ ಕೆತ್ತಿದ್ದಾಗಿ ಪ್ರತೀತಿ ಇದೆ.

* ವೆಂಕಣ್ಣಾಚಾರಿ ಏಕಶಿಲಾ ಬೃಂದಾವನ – ರಾಘವೇಂದ್ರ ಸ್ವಾಮಿಯ ಮುಖ್ಯ ಶಿಷ್ಯ ವೆಂಕಣ್ಣಾಚಾರಿ ಬಳಿ ರಾಘವೇಂದ್ರ ಸ್ವಾಮಿ 2 ವರ್ಷ ಇದ್ದರು ಎನ್ನಲಾಗಿದೆ.

LEAVE A REPLY

Please enter your comment!
Please enter your name here