ಮಂತ್ರಾಲಯವನ್ನು ಕರ್ನಾಟಕಕ್ಕೆ ಸೇರಿಸಿಬಿಡಿ..!?

ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ಶಿವಸೇನೆ ಸರ್ಕಾರ ತಗಾದೆ ತೆಗೆದಿದೆ. ಕಾರವಾರ, ಜೋಯಿಡಾವನ್ನು ಗೋವಾಗೆ ಸೇರಿಸಿ ಎಂದು ಕೊಂಕಣಿ ಸಮುದಾಯದ ಗುಂಪುಂದು ಸಹಿ ಅಭಿಯಾನ ಮಾಡಿ, ಪ್ರಧಾನಮಂತ್ರಿಗೆ ಪತ್ರ ಬರೆಯಲು ಮುಂದಾಗಿದೆ. ಇಂತಹ ಹೊತ್ತಲ್ಲಿ, ಭೌಗೋಳಿಕವಾಗಿ ಆಂಧ್ರದಲ್ಲಿ ಇದ್ದರೂ ಮಾನಸಿಕವಾಗಿ ಕರ್ನಾಟಕದ ಜೊತೆಯೇ ಇರುವ ಶ್ರೀಗುರುರಾಯರ ಕ್ಷೇತ್ರ ಮಂತ್ರಾಲಯವನ್ನು ಅಧಿಕೃತವಾಗಿ ಕರ್ನಾಟಕಕ್ಕೆ ಸೇರಿಸಬೇಕೆಂಬ ಕೂಗು ಎದ್ದಿದೆ. ಕರ್ನಾಟಕಕ್ಕೆ ಮಂತ್ರಾಲಯವನ್ನು ಸೇರಿಸಬೇಕು ಅಂತಾ ಹಕ್ಕೋತ್ತಾಯ ಮಾಡುತ್ತಿರುವುದು ನಾವಲ್ಲ. ಬದಲಿಗೆ ಕರ್ನೂಲು ಜಿಲ್ಲೆಯ ತೆಲುಗುದೇಶ ಪಕ್ಷದ ನಾಯಕರು.

ಮಂತ್ರಾಲಯವನ್ನು ಕರ್ನಾಟಕಕ್ಕೆ ಸೇರಿಸಿ ಎನ್ನುತ್ತಿರುವುದೇಕೆ..?

ತೆಲುಗುದೇಶ ಪಕ್ಷದ ನಾಯಕರು ಈ ಬೇಡಿಕೆ ಇಡೋದಕ್ಕೆ ಕಾರಣ ಇದೆ. ಈ ಹಿಂದಿನ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ರಾಜಧಾನಿಯನ್ನಾಗಿ ಮಾಡಿದ್ದ ಅಮರಾವತಿಯನ್ನು ಈಗಿನ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಒಪ್ಪಲು ಸಿದ್ದರಿಲ್ಲ. ಆಂಧ್ರ ಪ್ರದೇಶಕ್ಕೆ ಮೂರು ರಾಜಧಾನಿ ಎಂದು ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಘೋಷಣೆ ಬೇರೆ ಮಾಡಿಬಿಟ್ಟಿದ್ದಾರೆ. ಇದನ್ನು ಅರಗಿಸಿಕೊಳ್ಳುವುದಕ್ಕೆ ತೆಲುಗು ದೇಶಂ ಪಕ್ಷಕ್ಕೆ, ರಾಜಧಾನಿಗಾಗಿ ಭೂಮಿ ಕೊಟ್ಟ ರೈತರಿಗೆ, ಅಮರಾವತಿಯಲ್ಲಿ ದೊಡ್ಡ ಪ್ರಮಾಣದ ಹೂಡಿಕೆ ಮಾಡಿದ್ದ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಆಗುತ್ತಿಲ್ಲ. ಪರಿಣಾಮ ಆಂಧ್ರ ಪ್ರದೇಶದಲ್ಲಿ ರಾಜಧಾನಿ ರಾಜಕೀಯ ಮುಗಿಲುಮುಟ್ಟಿದೆ. ಚಂದ್ರಬಾಬು ನಾಯ್ಡು, ಪವನ್ ಕಲ್ಯಾಣ್ ಸೇರಿ ಹಲವರು ಬೀದಿಗೆ ಇಳಿದು ಜಗನ್ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಿದ್ದಾರೆ.

ಒಂದು ವೇಳೆ ರಾಜಧಾನಿ ಅಮರಾವತಿಯಿಂದ ವಿಶಾಖಪಟ್ಟಣಕ್ಕೆ ಬದಲಿಸಿದರೇ, ಕರ್ನೂಲು ಜಿಲ್ಲೆಯಲ್ಲಿರುವ ಮಂತ್ರಾಲಯವನ್ನು ಕರ್ನಾಟಕಕ್ಕೆ ಸೇರಿಸಬೇಕು ಎಂದು ಟಿಡಿಪಿ ನಾಯಕ ತಿಕ್ಕಾರೆಡ್ಡಿ ಆಗ್ರಹಿಸಿದ್ದಾರೆ. ಮಂತ್ರಾಲಯ ಕರ್ನಾಟಕದ ಗಡಿಯಲ್ಲಿಯೇ ಇದೆ. ಮಂತ್ರಾಲಯದಿಂದ ವಿಶಾಖಪಟ್ಟಣ 1,000 ಕಿಲೋಮೀಟರ್ ದೂರವಿದೆ. ಇದರಿಂದಾಗಿ ಜನ ಸಾಮಾನ್ಯರು ಪ್ರತಿಯೊಂದಕ್ಕೂ ಸಾವಿರ ಕಿಲೋಮೀಟರ್ ಓಡಾಡಲು ಆಗುವುದಿಲ್ಲ. ಹೀಗಾಗಿ ನಮ್ಮ ಏರಿಯಾವನ್ನು ಕರ್ನಾಟಕಕ್ಕೆ ಸೇರಿಸಿ ನಮ್ಮ ಜನಕ್ಕೆ ಒಳ್ಳೆಯದಾಗುತ್ತೆ ಎಂದು ತಿಕ್ಕಾರೆಡ್ಡಿ ಡಿಮ್ಯಾಂಡ್ ಮಾಡಿದ್ದಾರೆ.

ಮೂರು ರಾಜಧಾನಿ ಯೋಜನೆಯ ಭಾಗವಾಗಿ ಕರ್ನೂಲಿನಲ್ಲಿ ಆಂಧ್ರ ಪ್ರದೇಶ ಹೈಕೋರ್ಟ್ ಸ್ಥಾಪನೆ ಮಾಡುವ ಚಿಂತನೆಯೂ ಜಗನ್ ಸರ್ಕಾರದ ಮುಂದಿದೆ. ಆದರೆ, ಕರ್ನೂಲಿಗೆ ಹೈಕೋರ್ಟ್ ಬಂದರೇ ಜನಸಾಮಾನ್ಯರಿಗೆ ಲಾಭವೇನು ಎಂದು ಟಿಡಿಪಿ ನಾಯಕರು ಪ್ರಶ್ನೆ ಮಾಡುತ್ತಿದ್ದಾರೆ. ವಿಶಾಖಪಟ್ಟಣವನ್ನು ರಾಜಧಾನಿ ಎಂದು ಘೋಷಿಸಿದರೇ ನಮಗೆ ಬೆಂಗಳೂರು ಬೆಸ್ಟ್ ಎಂಬ ನಿನಾದ ಹೊರಡಿಸಲು ಕರ್ನೂಲಿನ ತೆಲುಗು ದೇಶಂ ನಾಯಕರು ಸಜ್ಜಾಗುತ್ತಿದ್ದಾರೆ.

ಮಂತ್ರಾಲಯಕ್ಕೆ ನೀರು ಹರಿಯುತ್ತಿರುವುದು ಕರ್ನಾಟಕದಿಂದ.. ಕರ್ನಾಟಕಕ್ಕೆ ಮಂತ್ರಾಲಯವನ್ನು ಅಧಿಕೃತವಾಗಿ ಸೇರಿಸಿದಲ್ಲಿ ಈ ಭಾಗ ಸಸ್ಯಶಾಮಲೆ ಆಗುತ್ತದೆ ಎನ್ನುವುದು ಟಿಡಿಪಿ ವಾದವಾಗಿದೆ.

LEAVE A REPLY

Please enter your comment!
Please enter your name here