ಸಿಎಎ ವಿರೋಧಿ ಪ್ರತಿಭಟನೆ ವೇಳೆ ನಡೆದಿದ್ದ ಹಿಂಸಾಚಾರ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. 2019ರ ಡಿಸೆಂಬರ್ 19ರಂದು ಪೊಲೀಸರೇ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಕಲ್ಲು ತೂರಾಟ ನಡೆಸಿದ್ದ ಫೋಟೋಗಳು ಹೈಕೋರ್ಟ್‍ಗೆ ಸಲ್ಲಿಕೆ ಆಗಿವೆ. ಅಲ್ಲದೇ, ಉದ್ರಿಕ್ತರ ಪೈಕಿ ಒಬ್ಬರನ್ನು ಹೊರತುಪಡಿಸಿ ಉಳಿದವರ ಕೈಯಲ್ಲಿ ಯಾವುದೇ ಮಾರಕಾಸ್ತ್ರಗಳು ಇರಲಿಲ್ಲ. ಅವರು, ಪಿಎಫ್‍ಐ ಸಂಘಟನೆಗೆ ಸೇರಿರಬಹುದು ಮತ್ತು ಮುಸ್ಲಿಮರು ಎನ್ನುವ ಕಾರಣಕ್ಕೆ ಪ್ರಕರಣದಲ್ಲಿ ಪೊಲೀಸರು ಸಿಲುಕಿಸಿರಬಹುದು ಎಂದು ಹೈಕೋಟ್ ಅನುಮಾನ ವ್ಯಕ್ತಪಡಿಸಿದೆ. ಇದೇ ಅನುಮಾನದ ಮೇಲೆ 22 ಆರೋಪಿಗಳಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಬಂಧಿತ 22 ಆರೋಪಿಗಳು ಹಿಂಸಾಚಾರದಲ್ಲಿ ಪಾಲ್ಗೊಂಡಿದ್ದರು ಎನ್ನುವುದಕ್ಕೆ ಯಾವುದೇ ಸಾಕ್ಷ್ಯಗಳು ಲಭ್ಯ ಆಗುತ್ತಿಲ್ಲ. ಪ್ರತಿಭಟನಾಕಾರರ ಪೈಕಿ ಒಬ್ಬ ಮಾತ್ರ ಬಾಟಲ್ ಹಿಡಿದುಕೊಂಡಿದ್ದ. ಉಳಿದವರ ಕೈಯಲ್ಲಿ ಯಾವುದೇ ಶಸ್ತ್ರಾಸ್ತ್ರ ಇರಲಿಲ್ಲ. ಜೊತೆಗೆ ಬಂಧಿತರು ಗಲಭೆ ಸ್ಥಳದಲ್ಲಿ ಇರುವ ಯಾವುದೇ ಫೋಟೋಗಳಲ್ಲಿ ಇಲ್ಲ. ಬದಲಿಗೆ ಪೊಲೀಸರೇ ಜನಸಮೂಹದತ್ತ ಕಲ್ಲು ತೂರುವ ದೃಶ್ಯಗಳು ಲಭ್ಯ ಆಗಿವೆ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.
ಆರೋಪಿಗಳು ಹಿಂಸಾಚಾರದಲ್ಲಿ ತೊಡಗಿದ್ದರು ಎಂಬುದಕ್ಕೆ ಸಿಸಿಟಿವಿ ದೃಶ್ಯಾವಳಿಯಲ್ಲಾಗಲಿ, ಫೋಟೋಗಳಲ್ಲಿ ಆಗಲಿ ಯಾವುದೇ ಸಾಕ್ಷ್ಯ ಇಲ್ಲ. ಅವರು ಪಿಎಫ್‍ಐ ಸಂಘಟನೆ ಜೊತೆ ಸಂಪರ್ಕ ಹೊಂದಿದ್ದಾರೆ ಮತ್ತು ಅವರು ಮುಸ್ಲಿಮ್ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೆ ಅವರು ಫಿಕ್ಸ್ ಮಾಡಲಾಗಿದೆ ಎಂಬುದನ್ನು ತನಿಖಾಧಿಕಾರಿಗಳ ಒದಗಿಸಿದ ಸಾಕ್ಷ್ಯಗಳು ಮೇಲ್ನೊಟಕ್ಕೆ ಹೇಳುತ್ತಿವೆ ಎಂದು ನ್ಯಾ. ಜಾನ್ ಮೈಕಲ್ ಕುನ್ಹಾ ಅವರಿದ್ದ ಪೀಠ ಸ್ಪಷ್ಟಪಡಿಸಿದೆ.
ಪೊಲೀಸರು ಪ್ರತಿಭಟನಾಕಾರರ ವಿರುದ್ಧ 31 ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ. ಆದರೆ, ಗೋಲಿಬಾರ್‍ನಲ್ಲಿ ಮೃತಪಟ್ಟವರ ಕುಟುಂಬ ಮತ್ತು ಗಾಯಾಳುಗಳ ಕುಟುಂಬ ದೂರು ನೀಡಿದರೂ ಪೊಲೀಸರು ಎಫ್‍ಐಆರ್ ದಾಖಲಿಸಿಲ್ಲ ಎಂಬ ಅಂಶವನ್ನು ಗಮನಿಸಿದ ಹೈಕೋರ್ಟ್, ಪೊಲೀಸರ ನಡೆಗೆ ಅಸಮಾಧಾನ ವ್ಯಕ್ತಪಡಿಸಿದೆ.
ಈ ಅಂಶಗಳನ್ನು ಪರಿಗಣಿಸಿದಾಗ, ಆರೋಪಿಗಳ ಹಕ್ಕುಗಳಿಗೆ ಧಕ್ಕೆ ಜಿಲ್ಲಾಡಳಿತ ಮತ್ತು ಪೊಲೀಸರು ಧಕ್ಕೆ ತಂದಿರುವುದು ಗೋಚರ ಆಗುತ್ತದೆ. ಅರ್ಜಿದಾರರ ಮೇಲಿನ ಆರೋಪಗಳು ಗಲ್ಲು ಅಥವಾ ಜೀವಾವಧಿ ಶಿಕ್ಷೆ ವಿಧಿಸಲು ತಕ್ಕುದಾಗಿಲ್ಲ. ತನಿಖೆ ಪೂರ್ವಾಗ್ರಹಪೀಡಿತವಾಗಿದೆ. ಅರ್ಜಿದಾರರ ಹಕ್ಕುಗಳು ಮತ್ತು ಸ್ವಾತಂತ್ರ್ಯವನ್ನು ಗಮನದಲ್ಲಿರಿಸಿಕೊಂಡು ಜಾಮೀನು ಮಂಜೂರು ಮಾಡಲಾಗುತ್ತಿದೆ ಎಂದು ಕೋರ್ಟ್ ತೀರ್ಪು ನೀಡಿದೆ. ತಲಾ 1 ಲಕ್ಷ ರೂ. ಮೊತ್ತಡ ಬಾಂಡ್ ಮತ್ತು ಇಬ್ಬರ ಶ್ಯೂರಿಟಿ, ಪೊಲೀಸ್ ಠಾಣಾ ವ್ಯಾಪ್ತಿ ಬಿಟ್ಟು ತೆರಳಬಾರದೆಂದು ಷರತ್ತು ವಿಧಿಸಿ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಶಸ್ತ್ರಾಸ್ತ್ರ ಹೊಂದಿದ್ದ ಆರೋಪಿಗಳು ಮಂಗಳೂರು ಉತ್ತರ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಲು ಪ್ರಯತ್ನಿಸಿದ್ದರು ಎಂದು ಪೊಲೀಸರು ಪ್ರಕರಣ ದಾಖಲಿಸಿದ್ದರು. ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ. ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟ ಉಂಟು ಮಾಡಿದ್ದಾರೆ ಎಂಬುದು ಪೊಲೀಸರ ವಾದ ಆಗಿತ್ತು.