ಮಂಗಳೂರು ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ

ಮಂಗಳೂರು: ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಇದೇ ಜನವರಿ 17, 18, 19ರಂದು ಪಣಂಬೂರು ಕಡಲ ಕಿನಾರೆಯಲ್ಲಿ ಆಯೋಜಿಸಲು ಸಿದ್ಧತೆ ನಡೆಯುತ್ತಿದೆ.

ಟೀಂ ಮಂಗಳೂರು ಇದೇ ಮೊದಲ ಬಾರಿಗೆ ಜಿಲ್ಲಾಡಳಿತ ವತಿಯಿಂದ ನಡೆಯಲಿರುವ ಈ ಬಾರಿಯ ಕರಾವಳಿ ಉತ್ಸವದ ಜೊತೆಗೂಡಿದ್ದು, ಈ ಸಂಭ್ರಮಕ್ಕೆ ಮತ್ತಷ್ಟು ಮೆರುಗು ತರಲಿದೆ.

ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಅನುದಾನದ ಕೊರತೆಯಿಂದಾಗಿ ಕಳೆದ ಎರಡು ವರ್ಷ ನಡೆದಿರಲಿಲ್ಲ. ಕೆಲವು ದಿನಗಳ ಹಿಂದೆ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆದ ಸಭೆ ಯಲ್ಲಿ ಕರಾವಳಿ ಉತ್ಸವದಲ್ಲೇ ಗಾಳಿಪಟ ಉತ್ಸವ ಆಯೋಜನೆ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. ಜ.17ರಂದು ಬೆಳಗ್ಗೆ ಕಾರ್ಯಾಗಾರ, ಸಂಜೆ 4 ಗಂಟೆಗೆ ಉದ್ಘಾಟನೆ ಬಳಿಕ ಗಾಳಿಪಟ ಉತ್ಸವಕ್ಕೆ ಚಾಲನೆ ದೊರಕಲಿದೆ.

ನಮ್ಮ ಕರಾವಳಿ ಎಂಬ ಥೀಮ್‌ನೊಂದಿಗೆ ಈ ಬಾರಿ ಉತ್ಸವ ನಡೆಯಲಿರುವ ಉತ್ಸವದಲ್ಲಿ , ಹೊನಲು ಬೆಳಕಿನಲ್ಲೂ ಗಾಳಿಪಟ ಹಾರಾಟ ನಡೆಸಲು ಆಯೋಜಕರು ತೀರ್ಮಾನಿಸಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಉತ್ಸವ ಆರಂಭವಾಗುತ್ತದೆ. ಕೊನೆಯ ಎರಡು ದಿನ ಸಂಜೆ 6 ಗಂಟೆಯಿಂದ ರಾತ್ರಿ 8 ಗಂಟೆಯ ವರೆಗೂ ಗಾಳಿಪಟ ಪ್ರದರ್ಶನ ಇರಲಿದೆ. 

ಜ.12ರಂದು ಗುಜರಾತ್‌ನಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ನಡೆಯಲಿದೆ. ಬಳಿಕ ಅಲ್ಲಿಗೆ ಆಗಮಿಸುವ ತಂಡಗಳೇ ಮಂಗಳೂರಿಗೂ ಬರುವ ಸಾಧ್ಯತೆ ಇದೆ. ಅಂದಾಜು 25 ದೇಶಗಳ ತಂಡ ಭಾಗಿಯಾಗುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.

ಎರಡು ವರ್ಷಗಳ ಹಿಂದೆ ನಡೆದ ಉತ್ಸವದಲ್ಲಿ ಫ್ರಾನ್ಸ್‌, ಜರ್ಮನಿ, ಇಂಗ್ಲೆಂಡ್‌, ಆಸ್ಟ್ರೇಲಿಯಾ, ಟರ್ಕಿ, ನೆದರ್‌ಲ್ಯಾಂಡ್‌, ಕಾಂಬೋಡಿಯಾ, ಉಕ್ರೇನ್‌, ಕುವೈಟ್‌, ಥಾಯ್ಲೆಂಡ್‌, ನೈಜೀರಿಯಾ, ಇಟಲಿ, ಭಾರತ ಸೇರಿದಂತೆ 14 ರಾಷ್ಟ್ರಗಳ ಗಾಳಿಪಟ ತಂಡಗಳು ಭಾಗವಹಿಸಿದ್ದವು.

ಸ್ಮರಣಿಕೆಯಾಗಿ ಮುಟ್ಟಾಳೆ
25 ದೇಶಗಳಿಂದ ಪ್ರತಿನಿಧಿಗಳು ಬರಲಿದ್ದು, ಸ್ಮರಣಿಕೆಯಾಗಿ ಕರಾವಳಿಯ ಮುಟ್ಟಾಳೆ ನೀಡಲು ತೀರ್ಮಾನಿಸಲಾಗಿದೆ. ಹಿಂದೆ ಫ್ರಾನ್ಸ್‌ ನಲ್ಲಿ ನಡೆದ ಉತ್ಸವದಲ್ಲಿ ತಂಡಗಳ ಪೆರೇಡ್‌ ವೇಳೆ ಟೀಂ ಮಂಗಳೂರು ತಂಡವು ಬಿಳಿ ಪಂಚೆ, ಅಂಗಿ ಮತ್ತು ಶಾಲಿನೊಂದಿಗೆ ಮುಟ್ಟಾಳೆ ಧರಿಸಿ ಪಥಸಂಚಲನ ನಡೆಸಿತ್ತು. ಇದಕ್ಕೆ ಅಂತಾರಾಷ್ಟ್ರೀಯ ಮನ್ನಣೆಯೂ ದೊರಕಿತ್ತು.

LEAVE A REPLY

Please enter your comment!
Please enter your name here