ಮಂಗಳೂರಲ್ಲಿ ಬಾಂಬ್‌ – ಆ ವ್ಯಕ್ತಿ ಯಾರು..?

ಪೌರತ್ವ ಕಾಯ್ದೆ ವಿರುದ್ಧ ನಡೆದಿದ್ದ ಪ್ರತಿಭಟನೆ ವೇಳೆ ಹಿಂಸಾಚಾರ ಮತ್ತು ಬಳಿಕ ಗೋಲಿಬಾರ್‌ ಘಟಿಸಿದ್ದ ಮಂಗಳೂರಲ್ಲಿ ಇವತ್ತು ಜೀವಂತ ಬಾಂಬ್‌ ಪತ್ತೆಯಾಗಿದೆ. ಆದರೆ ವಿಮಾನನಿಲ್ದಾಣದಲ್ಲಿ ಸಿಕ್ಕ ಬಾಂಬ್‌ನ್ನು ಬಾಂಬ್‌ ನಿಷ್ಕ್ರಿಯ ದಳ ಸ್ಫೋಟಿಸಿ ನಿಷ್ಕ್ರಿಯಗೊಳಿಸಿ ಕಡಲ ನಗರಿಯಲ್ಲಿ ಘಟಿಸಬಹುದಾಗಿದ್ದ ದುರಂತವೊಂದು ತಪ್ಪಿದೆ.

ಬೆಳಗ್ಗೆ ೮ ಗಂಟೆ ೪೫ ನಿಮಿಷದ ಸುಮಾರಿಗೆ ಅಪರಿಚಿತ ವ್ಯಕ್ತಿಯೊಬ್ಬ ಮಂಗಳೂರು ಏರ್‌ಪೋರ್ಟ್‌ನ ನಿರ್ಗಮನ ದ್ವಾರದ ಬಳಿ ಟಿಕೆಟ್‌ ಕೌಂಟರ್‌ ಪಕ್ಕ ಲ್ಯಾಪ್‌ಟ್ಯಾಪ್‌ ಬ್ಯಾಂಗ್‌ವೊಂದನ್ನು ಬಿಟ್ಟುಹೋದ. ಆ ಬ್ಯಾಗ್‌ನಲ್ಲಿ ಸ್ಟಿಲ್‌ ಡಬ್ಬಿಯಲ್ಲಿ ಹುದುಗಿಸಿಟ್ಟಿದ್ದ ಬಾಂಬ್‌ ಇತ್ತು. ಕೇವಲ ಐದೇ ನಿಮಿಷದಲ್ಲಿ ತಲೆಗೊಂದು ಬಿಳಿ ಬಣ್ಣದ ಹ್ಯಾಟ್‌, ಇನ್‌ಶರ್ಟ್‌ ಮಾಡಿದ್ದ ೪೫ ವರ್ಷ ಸುಮಾರಿನ ಆ ವ್ಯಕ್ತಿ ಅಲ್ಲಿಂದ ಆಟೋವೊಂದರಲ್ಲಿ ಹೊರಟೇ ಹೋದ.

 ಬಾಂಬ್‌ ಪತ್ತೆ ಹಚ್ಚಿದ್ದ ಶ್ವಾನ ಜ್ಯಾಕ್‌:

ಅಂದಹಾಗೆ ಏರ್‌ಪೋರ್ಟ್‌ಗಳಿಗೆ ಭದ್ರತೆ ಕೊಡುವ ಜವಾಬ್ದಾರಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯದ್ದು. ಬೆಳಗ್ಗಿನ ಗಸ್ತಿನ ವೇಳೆ ಸುಮಾರು ೧೦ ಗಂಟೆಗೆ ಸಿಐಎಸ್‌ಎಫ್‌ ಯೋಧರ ಜೊತೆಗೆ ಗಸ್ತುವಿಗೆ ತೆರಳಿದ್ದ ಜ್ಯಾಕ್‌ ಹೆಸರಿನ ಬಿಳಿ ಶ್ವಾನ ಆ ಬ್ಯಾಗ್‌ನ್ನು ಪತ್ತೆ ಹಚ್ಚಿತು.

ಬಾಂಬ್‌ ಸ್ಫೋಟಿಸಿ ನಿಷ್ಕ್ರಿಯ:

ಬಾಂಬ್‌ ನಿಷ್ಕ್ರಿಯಗೊಳಿಸುವುದು ಅತ್ಯಂತ ಸಂಕೀರ್ಣ ಪ್ರಕ್ರಿಯೆ, ಸವಾಲಿನ ಹೊಣೆಗಾರಿಕೆ. ವಿಮಾನನಿಲ್ದಾಣದಲ್ಲಿ ಪತ್ತೆಯಾದ ಬಾಂಬ್‌ನ್ನು ಬ್ಯಾಗ್‌ ಸಮೇತವಾಗಿ ಬಾಂಬ್‌ ಪ್ರತಿರೋಧಕ ವಾಹನದ ಮೂಲಕ ಸಮೀಪದಲ್ಲೇ ಇರುವ ಕೆಂಜಾರು ಮೈದಾನಕ್ಕೆ ತೆಗೆದುಕೊಂಡು ಹೋಗಲಾಯ್ತು. ಮೈದಾನದಲ್ಲಿ ಸಿಮೆಂಟ್‌, ಮರಳಿನ ಚೀಲಗಳನ್ನು ಜೋಡಿಸಿ ತಡೆಗೋಡೆಯನ್ನು ನಿರ್ಮಿಸಲಾಗಿತ್ತು. ಮೈದಾನಕ್ಕೆ ತೆರಳಿದ ಬಳಿಕ ಬಾಂಬ್‌ ಪ್ರತಿರೋಧ ವಾಹನದಿಂದ ಬ್ಯಾಗ್‌ನ್ನು ತೆಗೆದ ಬಾಂಬ್‌ ನಿಷ್ಕ್ರಿಯ ದಳದ ತಜ್ಞರಾಗಿರುವ ಗಂಗಯ್ಯ ಆ ಮರಳಿನ ಮೂಟೆಗಳ ಬಳಿಯಲ್ಲಿ ಇಟ್ಟು ಬಂದರು.

ಮೊದಲ ಬಾರಿಗೆ ನಿಷ್ಕ್ರಿಯ ಪ್ರಯತ್ನ ಕೈಕೊಟ್ಟ ಹಿನ್ನೆಲೆಯಲ್ಲಿ ಸ್ಫೋಟಿಸುವ ನಿರ್ಧಾರಕ್ಕೆ ಬರಲಾಯಿತು. ಈ ಹಿನ್ನೆಲೆಯಲ್ಲಿ ವಿಶೇಷವಾಗಿ ಕೇಬಲ್‌ಗಳನ್ನು ಎಳೆದು ಆ ಕೇಬಲ್‌ಗಳನ್ನು ಬಾಂಬ್‌ನಲ್ಲಿರುವ ಡಿಟೋನೇಟರ್‌ಗೆ ಜೋಡಿಸಿ ಬ್ಯಾಟರಿಗೂ ಸಂಪರ್ಕಿಸಿ ರಿಮೋಟ್‌ ಕಂಟ್ರೋಲ್‌ ಮೂಲಕ ಸ್ಫೋಟಿಸಲಾಯಿತು.

ಸ್ಫೋಟದ ತೀವ್ರತೆಗೆ ದೊಡ್ಡ ಸದ್ದಿನ ಜೊತೆಗೆ ಭಾರೀ ಬೆಂಕಿ, ಹೊಗೆಯೂ ಕಾಣಿಸಿಕೊಳ್ತು. ಆದರೆ ಮರಳಿನ ಗೋಡೆ ಪಕ್ಕದಲ್ಲಿದ್ದ ಇದ್ದಿದ್ದರಿಂದ ಅನಾಹುತವೇನೂ ಆಗಲಿಲ್ಲ.

ತನಿಖೆಗೆ ತಂಡ ರಚನೆ:

ಮಂಗಳೂರು ಪೊಲೀಸ್‌ ಆಯುಕ್ತ ಹರ್ಷ ಶಂಕಿತನ ಪತ್ತೆ ಮೂರು ಪೊಲೀಸ್‌ ತಂಡಗಳನ್ನು ರಚಿಸಿದ್ದು, ಶೀಘ್ರವೇ ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here