ಮಂಗಳೂರಲ್ಲಿ ಪೊಲೀಸರ ಗುಂಡೇಟಿಗೆ ಇಬ್ಬರು ಸಾವು – ಇಂದು ರಜೆ

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದಿದ್ದ ಪ್ರತಿಭಟನೆಯಲ್ಲಿ ಇಬ್ಬರು ಪೊಲೀಸರ ಗುಂಡೇಟಿಗೆ ಬಲಿ ಆಗಿದ್ದಾರೆ. ಪೌರತ್ವ ಕಾಯ್ದೆ ವಿರುದ್ಧದ ಪ್ರತಿಭಟನೆಯಲ್ಲಿ ಕರ್ನಾಟಕದಲ್ಲಿ ಪ್ರತಿಭಟನಕಾರರು ಬಲಿಯಾದ ಮೊದಲ ಪ್ರಕರಣ ಇದಾಗಿದೆ.

೪೦ ವರ್ಷದ ಮೀನು ವ್ಯಾಪಾರಿ ಜಲೀಲ್‌ ಕಂದಕ್‌ ಮತ್ತು ಕುದ್ರೋಳಿ ಮೂಲದ ಮೆಕಾನಿಕ್‌ ೨೩ ವರ್ಷದ ನೌಶಿಮ್‌ ಪೊಲೀಸರ ಗುಂಡೇಟಿಗೆ ಬಲಿ ಆದವರು. ವೀಡಿಯೋವೊಂದರಲ್ಲಿ ಪೊಲೀಸರ ಗುಂಡಿನ ದಾಳಿಗೆ ವ್ಯಕ್ತಿಯೊಬ್ಬರು ನೆಲಕ್ಕರುಳಿದ ದೃಶ್ಯ ಮೊಬೈಲ್‌ನಲ್ಲಿ ಸೆರೆ ಆಗಿದೆ.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಬಳಿ ನಡೆದಿದ್ದ ಪ್ರತಿಭಟನೆಯ ವೇಳೆ ಪೊಲೀಸರು ಮತ್ತು ಪ್ರತಿಭಟನಕಾರರ ನಡುವೆ ಕಲ್ಲು ತೂರಾಟ ನಡೆದಿತ್ತು. ನಿಷೇಧಾಜ್ಞೆ ನಡುವೆಯೂ ಪ್ರತಿಭಟನೆಗಿಳಿದವರನ್ನು ಚದುರಿಸಲು ಪೊಲೀಸರು ಲಾಠಿ ಪ್ರಯೋಗ ನಡೆಸಿದರು. ಆದರೆ ಬೈಕ್‌ಗೆ ಬೆಂಕಿ ಹಚ್ಚುವಿಕೆ, ಕಲ್ಲು ತೂರಾಟದ ಹಿನ್ನೆಲೆಯಲ್ಲಿ ಅಶ್ರುವಾಯು ಪ್ರಯೋಗದ ಜೊತೆಗೆ ಗಾಳಿಯಲ್ಲಿ ಗುಂಡು ಹಾರಿಸಿದರು. ಈ ವೇಳೆ ಇಬ್ಬರು ಪ್ರತಿಭಟನಕಾರರು ಪ್ರಾಣ ಕಳೆದುಕೊಂಡರು.

ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್‌ ಅಶ್ರಫ್‌ ಕೂಡಾ ಗಾಯಗೊಂಡಿದ್ದಾರೆ.

ಮುನ್ನೆಚ್ಚರಿಕೆ ಕ್ರಮವಾಗಿ ಮಂಗಳೂರು ಪೊಲೀಸ್‌ ಆಯುಕ್ತರ ವ್ಯಾಪ್ತಿಯಲ್ಲಿ ಬರುವ ಠಾಣೆಗಳಾದ ಬಂದರು, ಉರ್ವ, ಪಾಂಡೇಶ್ವರ, ಹಂಪನಕಟ್ಟೆ, ಕದ್ರಿ, ಬರ್ಕೆ ಠಾಣಾ ವ್ಯಾಪ್ರಿಗಳಲ್ಲಿ ಕರ್ಫ್ಯೂ ವಿಧಿಸಲಾಗಿದ್ದು, 22ರ ಸಂಜೆ ೬ ಗಂಟೆಯವರೆಗೂ ಜಾರಿಯಲ್ಲಿರಲಿದೆ.

ಮುನ್ನೆಚ್ಚರಿಕಾ ಕ್ರಮವಾಗಿ ಇಂದು ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಪ್ರತಿಭಟನೆಯಲ್ಲಿ ಭಾಗಿ ಆಗಿದ್ದ ೧೦೦ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪೊಲೀಸರಿಗೂ ಗಾಯ:

ಮಂಗಳೂರು ಪೊಲೀಸ್‌ ಆಯುಕ್ತ ಹರ್ಷ ಹೇಳಿಕೆಯ ಪ್ರಕಾರ ೭ ಸಾವಿರದಷ್ಟು ಮಂದಿ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಭಾಗಿ ಆಗಿದ್ದರು. ಮಾರಕಾಸ್ತ್ರಗಳೊಂದಿಗೆ ದಾಳಿ ನಡೆಸಲು ಬಂದಿದ್ದ ಅವರು ಬಂದರು ಪೊಲೀಸ್‌ ಠಾಣೆಗೆ ಬೆಂಕಿ ಹಚ್ಚಲು ಪ್ರಯತ್ನಿಸಿದ್ದರು. ಠಾಣೆ ಒಳಗೆ ಕಲ್ಲು ತೂರಾಟ ಮಾಡಿದ್ದರು. ಪೊಲೀಸ್‌ ಸಿಬ್ಬಂದಿಯ ಹತ್ಯೆಗೂ ಯತ್ನಿಸಿದ್ದರು.

ಹಿಂಸಾಚಾರದಲ್ಲಿ ೨೦ ಮಂದಿ ಪೊಲೀಸರಿಗೆ ಗಾಯಗಳಾಗಿದ್ದು, ೮ ಮಂದಿ ಪೊಲೀಸರಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ಅಪರಾಧ ವಿಭಾಗದ ಡಿಸಿಪಿ ಅವರ ಕೈಯ ಎಲುಬು ತುಂಡಾಗಿದ್ದು, ಮತ್ತೋರ್ವ ಡಿಸಿಪಿ ಕಾಲಿನ ಮೂಳೆ ತುಂಡಾಗಿದೆ ಎಂದು ಪೊಲೀಸ್‌ ಆಯುಕ್ತರು ಹೇಳಿದ್ದಾರೆ.

ಕರ್ಫ್ಯೂ ಹಿನ್ನೆಲೆಯಲ್ಲಿ ಯಾರೂ ರಸ್ತೆಗಿಳಿಯದಂತೆ ಮನವಿ ಮಾಡಿದ್ದಾರೆ.

ಸರ್ಕಾರವೇ ನೇರ ಹೊಣೆ:

ಮಂಗಳೂರಲ್ಲಿ ಪೊಲೀಸರ ಗುಂಡೇಟಿಗೆ ಇಬ್ಬರು ವ್ಯಕ್ತಿಗಳ ಸಾವಿಗೆ ರಾಜ್ಯ ಸರ್ಕಾರವೇ ನೇರ ಹೊಣೆ ಎಂದು ಕಾಂಗ್ರೆಸ್‌ ಗಂಭೀರ ಆರೋಪ ಮಾಡಿದೆ.

LEAVE A REPLY

Please enter your comment!
Please enter your name here