ಭಾರತೀಯರ ಪೌರತ್ವವನ್ನು ಕಿತ್ತು ಹಾಕುವ ಒಂದು ಅಂಶವನ್ನಾದರೂ ಪತ್ತೆ ಮಾಡಿ: ಅಮಿತ್‌ ಶಾ ಸವಾಲು

ಮಧ್ಯಪ್ರದೇಶದ ಜಬಲ್ಪುರ್‌ನಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಗೃಹ ಸಚಿವ ಅಮಿತ್‌ ಶಾ, ಮಮತಾ ಬ್ಯಾನರ್ಜಿ ಮತ್ತು ರಾಹುಲ್‌ ಗಾಂಧಿ ಅವರಿಗೆ ಸಿಎಎ ಯಲ್ಲಿ ಭಾರತೀಯರ ಪೌರತ್ವವನ್ನು ಕಿತ್ತು ಹಾಕುವ ಒಂದು ಅಂಶವನ್ನಾದರೂ ಪತ್ತೆ ಮಾಡಿ ಎಂದು ಸವಾಲು ಹಾಕಿದರು.

ಅಧಿಕೃತ ಅಧಿಸೂಚನೆಯ ಮೂಲಕ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಬಂದ ಎರಡು ದಿನಗಳ ನಂತರ, ಗೃಹ ಸಚಿವ ಅಮಿತ್ ಶಾ ಅವರು ತೃಣಮೂಲ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಪಕ್ಷದ ಮೇಲೆ ಸಿಎಎ ಮೇಲೆ ರಾಷ್ಟ್ರವನ್ನು ‘ದಾರಿತಪ್ಪಿಸಿದ’ ವಿರುದ್ಧ ತೀವ್ರ ದಾಳಿ ನಡೆಸಿದರು.

ಸಿಎಎ ವಿಚಾರದಲ್ಲಿ ಕಾಂಗ್ರೆಸ್‌ ಮತ್ತು ವಿರೋಧ ಪಕ್ಷಗಳು ಅಲ್ಪಸಂಖ್ಯಾತರನ್ನು ಪ್ರಚೋದಿಸುತ್ತಿವೆ ಎಂದು ಆಪಾದಿಸಿದರು.

ನಾವು ಹೇಗೆ ಈ ದೇಶದಲ್ಲಿ ಸಂಬಂಧಪಟ್ಟಿದ್ದೇವೋ ಅದೇ ರೀತಿ ಪಾಕಿಸ್ತಾನ ಮತ್ತು ದಕ್ಷಿಣ ಏಷ್ಯಾದ ಇತರ ದೇಶಗಳ ಹಿಂದೂಗಳು, ಕ್ರಿಶ್ಚಿಯನ್, ಸಿಖ್ಖರು ಮತ್ತು ಬೌದ್ಧರಿಗೆ ಈ ದೇಶದಲ್ಲಿ ಒಂದೇ ರೀತಿಯ ಹಕ್ಕುಗಳಿವೆ ಮತ್ತು ಸಿಎಎ ಅವರಿಗೆ ಪೌರತ್ವ ನೀಡುತ್ತದೆ ಎಂದು ವಾಗ್ದಾನ ಮಾಡಿದರು.

ಪೂರ್ವ ಮತ್ತು ಪಶ್ಚಿಮ ಪಾಕಿಸ್ತಾನಗಳಲ್ಲಿ ವಾಸಿಸುತ್ತಿರುವ ಹಿಂದೂಗಳು, ಸಿಖ್ಖರು, ಪಾರ್ಸಿಗಳು, ಜೈನರು ಇಲ್ಲಿಗೆ ಬರಲು ಬಯಸಿದ್ದರು, ಆದರೆ ರಕ್ತಪಾತದ ಕಾರಣ ಅವರು ಅಲ್ಲಿಯೇ ಇದ್ದರು. ನಮ್ಮ ನಾಯಕರು ಈ ಜನರಿಗೆ ಭಾರತದಲ್ಲಿ ಆಶ್ರಯದ ಭರವಸೆ ನೀಡಿದ್ದರು ಮತ್ತು ನಾವು ಅದನ್ನು ಸಿಎಎ ಮೂಲಕ ಕಾರ್ಯ ರೂಪಕ್ಕೆ ತರುತ್ತಿದ್ದೇವೆ “ಎಂದು ಅವರು ಹೇಳಿದರು.

ಹಾಗೆಯೇ ಜೆಎನ್ ಯು ಘಟನೆ ಬಗ್ಗೆ ಮಾತನಾಡಿದ ಶಾ, ಕೆಲವೊಂದು ವಿದ್ಯಾರ್ಥಿಗಳು ದೇಶ ವಿರೋಧಿ ಘೋಷಣೆಯನ್ನು ಕೂಗಿದ್ದಾರೆ, ಇಂಥವರನ್ನು ಜೈಲಿಗೆ ಅಟ್ಟಬೇಕಲ್ಲವೇ? ರಾಷ್ಟ್ರವಿರೋಧಿ ಘೋಷಣೆ ಕೂಗುವವರನ್ನು ಕಂಬಿ ಎಣಿಸುವಂತೆ ಮಾಡಲಾಗುವುದು ಎಂದು ಅವರು ಸಿಎಎ ಪರ ನಡೆದ ರ್ಯಾಲಿಯಲ್ಲಿ ಹೇಳಿದರು.

ಮುಂದಿನ ನಾಲ್ಕು ತಿಂಗಳೊಳಗೆ ರಾಮ ಮಂದಿರ ನಿರ್ಮಿಸಲಾಗುವುದು, ತಾಕತ್ತಿದ್ದರೆ ಅದನ್ನು ತಡೆಯಿರಿ ಎಂದ ಅಮಿತ್ ಷಾ, ಕಾಂಗ್ರೆಸ್‌ ನಾಯಕ ವಕೀಲ ಕಪಿಲ್‌ ಸಿಬಲ್‌ ಅವರ ರಾಮ ಮಂದಿರ ನಿರ್ಮಾಣ ವಿರೋಧಿ ಹೇಳಿಕೆಗೆ ಪ್ರತ್ಯುತ್ತರವಾಗಿ ಅವರಿಗೆ ಸವಾಲು ಹಾಕಿದರು.

LEAVE A REPLY

Please enter your comment!
Please enter your name here