ಭಾರತದ ಜೈಲಿನಲ್ಲೇ ಪರ್ಮನೆಂಟ್‌ ಆಗಿ ಲಾಕ್‌ ಆಗ್ತಾನಾ ವಿಜಯ್‌ ಮಲ್ಯ..?

ಬಹುಕೋಟಿ ರೂಪಾಯಿ ಸಾಲ ವಂಚನೆ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಉದ್ಯಮಿ ವಿಜಯ್‌ ಮಲ್ಯ ಭಾರತಕ್ಕೆ ಗಡೀಪಾರಾಗುವುದು ಬಹುತೇಕ ಖಚಿತವಾಗಿದ್ದು, ಇನ್ನೆರಡು ಮೆಟ್ಟಿಲ್ಲಷ್ಟೇ ಬಾಕಿ ಉಳಿದಿದೆ. ಲಂಡನ್‌ ಕೋರ್ಟ್‌ ನೀಡಿದ್ದ ಗಡೀಪಾರು ಆದೇಶ ಪ್ರಶ್ನಿಸಿ ಮಲ್ಯ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಬ್ರಿಟನ್‌ನ ಹೈಕೋರ್ಟ್‌ ವಜಾ ಮಾಡಿದೆ.

ಲಂಡನ್‌ನ ಹಿರಿಯ ಜಿಲ್ಲಾ ನ್ಯಾಯಾಧೀಶರು ಮಲ್ಯ ಗಡೀಪಾರಿಗೆ ನೀಡಿದ್ದ ಆದೇಶವನ್ನು ಹೈಕೋರ್ಟ್‌ ನ್ಯಾಯಮೂರ್ತಿಗಳಾದ ಸ್ಟೀಫನ್‌ ಇರ್ವಿನ್ ಮತ್ತು ಎಲಿಸಬೆತ್‌ ಲೈಂಗ್‌ ಅವರಿದ್ದ ಹೈಕೋರ್ಟ್‌ನ ದ್ವಿಸದಸ್ಯ ಪೀಠ ಎತ್ತಿ ಹಿಡಿದಿದೆ.

64 ವರ್ಷದ ಮದ್ಯದ ದೊರೆಯ ವಿರುದ್ಧ ಭಾರತದ ಬ್ಯಾಂಕುಗಳಿಗೆ 9,000 ಕೋಟಿ ರೂಪಾಯಿ ಮೊತ್ತದಷ್ಟು ಸಾಲ ವಂಚಿಸಿರುವ ಆರೋಪವಿದೆ.

೧) ಕ್ರಿಮಿನಲ್‌ ಸಂಚಿನ ಮೂಲಕ ವಿಜಯ್‌ ಮಲ್ಯಗೆ ಮೂರು ಬಾರಿ ಸಾಲ ಮಂಜೂರಾಗಿದೆ.

೨) ಕಿಂಗ್‌ಫಿಶರ್‌ ಏರ್‌ಲೈನ್ಸ್‌ನ ಹಣಕಾಸು ದುಸ್ಥಿತಿ, ಕಂಪನಿಯ ಋಣಾತ್ಮಕ ಸಂಪತ್ತು ಮೌಲ್ಯ ಮತ್ತು ಸಾಲ ಮರು ಪಾವತಿ ರೇಟಿಂಗ್ಸ್‌ ಕುಸಿತದ ಹೊರತಾಗಿಯೂ ಸಾಲ ನೀಡಲಾಗಿದೆ.

೩) ಐಡಿಬಿಐ ಬ್ಯಾಂಕ್‌ನ ಕಾರ್ಪೋರೇಟ್‌ ಸಾಲ ನೀತಿ ನಿಯಮಗಳಿಗೆ ಕಿಂಗ್‌ ಫಿಶರ್‌ ಏರ್‌ಲೈನ್ಸ್‌ ಅರ್ಹವಾಗಿಲ್ಲದೇ ಇದ್ದರೂ  ಬ್ಯಾಂಕ್‌ನ ಹೊಸ ಗ್ರಾಹಕನಾಗಿದ್ದ ಕೆಎಫ್‌ಎಗೆ ಸಾಲವನ್ನು ನೀಡಲಾಯಿತು.

೪) ಸಾಲಗಳನ್ನು ಪಡೆಯಲು ವಿಜಯ್‌ ಮಲ್ಯ ಸುಳ್ಳು ಮಾಹಿತಿಯನ್ನು ನೀಡಿದ್ದಾರೆ

೫) ವೈಯಕ್ತಿಕ ಮತ್ತು ಕಾರ್ಪೋರೇಟ್‌ ಗ್ಯಾರಂಟಿಯನ್ನು ನೀಡದೇ ವಿಜಯ್‌ ಮಲ್ಯ ಸಾಲವನ್ನು ಮರು ಪಾವತಿ ಮಾಡುವ ವಿಷಯದಲ್ಲಿ ಅಪ್ರಾಮಾಣಿಕರಾಗಿದ್ದಾರೆ.

ಲಂಡನ್‌ ಕೋರ್ಟ್‌ನಲ್ಲಿ ನಡೆದಿದ್ದ ವಿಚಾರಣೆ ವೇಳೆ ಸಾಬೀತಾಗಿದ್ದ ಈ ಅಂಶಗಳನ್ನೇ ಎತ್ತಿಹಿಡಿದ ಬ್ರಿಟನ್‌ ಹೈಕೋರ್ಟ್‌ ಮಲ್ಯನ ಗಡೀಪಾರು ವಿರುದ್ಧದ ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿತು.

ಬ್ರಿಟನ್‌ ಗಡೀಪಾರು ಒಪ್ಪಂದ ಪ್ರಕಾರ ಹೈಕೋರ್ಟ್‌ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲು 14 ದಿನಗಳ ಕಾಲಾವಕಾಶ ಇರುತ್ತದೆ. ಹೀಗಾಗಿ ಮಲ್ಯ ಕೂಡಾ 14 ದಿನಗಳಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ.

ಒಂದು ವೇಳೆ ವಿಜಯ್‌ ಮಲ್ಯ ಅರ್ಜಿ ಸಲ್ಲಿಸಿದರೆ ಆಗ ಸುಪ್ರೀಂಕೋರ್ಟ್‌ನ ತೀರ್ಪಿಗೆ ಬ್ರಿಟನ್ ಸರ್ಕಾರ ಕಾಯಬೇಕಾಗುತ್ತದೆ. ಒಂದು ವೇಳೆ ಮೇಲ್ಮನವಿ ಸಲ್ಲಿಕೆ ಮಾಡದೇ ಹೋದಲ್ಲಿ ಆಗ ಬ್ರಿಟನ್‌ನ ಗೃಹ ಸಚಿವೆ ಆಗಿರುವ ಪ್ರೀತಿ ಪಟೇಲ್‌ ಗಡೀಪಾರಿಗೆ ಅಧಿಕೃತ ಮುದ್ರೆ ಒತ್ತಲಿದ್ದಾರೆ. ಆಗ ಕೇವಲ 28 ದಿನಗಳಲ್ಲೇ ವಿಜಯ್‌ ಮಲ್ಯ ಭಾರತಕ್ಕೆ ಗಡೀಪಾರಾಗಲಿದ್ದಾನೆ.

ವಿಜಯ್‌ ಮಲ್ಯನ ವಿರುದ್ಧ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಎರಡೂ ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ. ಸುಪ್ರೀಂಕೋರ್ಟ್‌ ಮತ್ತು ಕರ್ನಾಟಕ ಹೈಕೋರ್ಟ್‌ನಲ್ಲಿ ಪ್ರಕರಣಗಳ ವಿಚಾರಣೆ ನಡೆಯುತ್ತಿವೆ. ಹೀಗಾಗಿ ಭಾರತಕ್ಕೆ ಮಲ್ಯ ಗಡೀಪಾರಾದ್ರೆ ನೇರವಾಗಿ ಆತನನ್ನು ಸಿಬಿಐ ಅಥವಾ ಜಾರಿ ನಿರ್ದೇಶನಾಲಯ ವಿಚಾರಣೆಗಾಗಿ ಕಸ್ಟಡಿಗೆ ಪಡೆಯಬೇಕಾಗುತ್ತದೆ. ಆಗ ಭಾರತದಿಂದ ಓಡಿಹೋಗಿ ಆಟ ಆಡ್ತಿರುವ ಮಲ್ಯ ಜೈಲಿನಲ್ಲಿ ಕಾಲ ಕಳೆಯಬೇಕಾಗುತ್ತದೆ.

LEAVE A REPLY

Please enter your comment!
Please enter your name here