ಭಾರತದ ಕೇವಲ 63 ಮಂದಿ ಬಳಿ ಇರುವ ಸಂಪತ್ತು ಎಷ್ಟು ಗೊತ್ತಾ..? ಬಡವ-ಶ್ರೀಮಂತ ಯಾರು..?

ಭಾರತದ ಕೇವಲ ಶೇಕಡಾ 1ರಷ್ಟು ಜನರ ಬಳಿ ದೇಶದ 95.3 ಕೋಟಿ ಜನರ ಬಳಿ ಇರುವ ಸಂಪತ್ತಿಗಿಂತಲೂ ನಾಲ್ಕು ಪಟ್ಟು ಅಧಿಕ ಸಂಪತ್ತು ಇದೆ. ಹೌದು ಇಂಥದ್ದೊಂದು ಆಘಾತಕಾರಿ ಮಾಹಿತಿಯನ್ನು ನೀಡಿದೆ ಆಕ್ಸ್‌ಫಾಮ್‌ ಎಂಬ ಅಧ್ಯಯನ ಸಂಸ್ಥೆ.

ದೇಶದ ಜನಸಂಖ್ಯೆಯ ಶೇಕಡಾ 70ರಷ್ಟು ಮಂದಿಯ ಬಳಿ ಇರುವ ಸಂಪತ್ತಿಗೆ ಹೋಲಿಸಿದರೆ ಶೇಕಡಾ 1ರಷ್ಟು ಮಂದಿಯ ಬಳಿಯೇ ನಾಲ್ಕು ಪಟ್ಟು ಅಧಿಕ ಸಂಪತ್ತು ಇದೆ. ದೇಶದ ಜನಸಂಖ್ಯೆಯ ಆ ಶೇಕಡಾ 1ರಷ್ಟು ಆಗರ್ಭ ಶ್ರೀಮಂತರ ಬಳಿ ಇರುವ ಸಂಪತ್ತು ನಮ್ಮ ದೇಶದ ಬಜೆಟ್‌ನಷ್ಟೇ.

ಭಾರತದ 63 ಮಂದಿ ಶ್ರೀಮಂತರ ಬಳಿ ಇರುವ ಒಟ್ಟು ಆಸ್ತಿ ನಮ್ಮ ದೇಶದ ವಾರ್ಷಿಕ ಬಜೆಟ್‌ನ ಗಾತ್ರ ಅಂದರೆ 24 ಲಕ್ಷದ 42 ಸಾವಿರ 200 ಕೋಟಿ ರೂಪಾಯಿಯಷ್ಟು.

ಜಗತ್ತಿನ 460 ಕೋಟಿ ಜನರು ಅಂದರೆ ವಿಶ್ವಜನಸಂಖ್ಯೆಯ ಶೇಕಡಾ 60ರಷ್ಟು ಮಂದಿಯ ಬಳಿ ಇರುವ ಆಸ್ತಿಪಾಸ್ತಿಗಿಂತ ಅಧಿಕ ಸಂಪತ್ತು ಪ್ರಪಂಚದ ಕೇವಲ 2,153 ಮಂದಿ ಕೋಟ್ಯಾಧಿಪತಿಗಳ ಬಳಿ ಇದೆ.

ಭಾರತದಲ್ಲಿ ಮನೆಗೆಲಸದಾಕೆಯ ಸರಾಸರಿ ದುಡಿಮೆ ವರ್ಷಕ್ಕೆ 22, 277 ರೂಪಾಯಿ ದುಡಿದರೆ ಅಷ್ಟೇ ಮೊತ್ತವನ್ನು ದೊಡ್ಡ ದೊಡ್ಡ ಕಂಪನಿಗಳ ಸಿಇಒಗಳು ಕೇವಲ ಹತ್ತೇ ನಿಮಿಷದಲ್ಲಿ ದುಡಿಯುತ್ತಾರೆ.

ಭಾರತದಲ್ಲಿ ಮಹಿಳೆಯರು ಮತ್ತು ಹುಡುಗಿಯರು ಸಂಬಳ ಇಲ್ಲದೇ ಮಾಡುತ್ತಿರುವ ಕೆಲಸದ ಅವಧಿ ಎಷ್ಟು ಗೊತ್ತಾ..? ಬರೋಬ್ಬರೀ 3.26 ಶತಕೋಟಿ ಗಂಟೆಗಳು. ರೂಪಾಯಿ ಲೆಕ್ಕಾಚಾರದಲ್ಲಿ ನೋಡಿದರೆ ವರ್ಷಕ್ಕೆ 19 ಲಕ್ಷ ಕೋಟಿ ರೂಪಾಯಿ. ಇದು ಭಾರತದಲ್ಲಿ ವರ್ಷಕ್ಕೆ ಶಿಕ್ಷಣಕ್ಕಾಗಿ ಸರ್ಕಾರಗಳು ಖರ್ಚು ಮಾಡುವ ಬಜೆಟ್‌ (92 ಸಾವಿರ ಕೋಟಿ ರೂಪಾಯಿ)ಯ 22 ಪಟ್ಟುಗಿಂತಲೂ ಅಧಿಕ.

ವಿಶ್ವದಲ್ಲಿ ಮಹಿಳೆಯರು ಮತ್ತು ಹುಡುಗಿಯರು 12.5 ಶತಕೋಟಿ ಗಂಟೆಯಷ್ಟು ಸಂಬಳವಿಲ್ಲದೆಯೇ ದುಡಿಯುತ್ತಾರೆ. ಈ ಮೂಲಕ ವಿಶ್ವದ ಆರ್ಥಿಕತೆಗೆ ಅವರ ಕೊಡುಗೆ 10.8 ದಶಲಕ್ಷ ಕೋಟಿ ಅಮೆರಿಕನ್‌ ಡಾಲರ್‌.

ವಿಶ್ವದ 22 ಮಂದಿ ಅತ್ಯಂತ ಶ್ರೀಮಂತರ ಬಳಿ ಇರುವ ಆಸ್ತಿ ಆಫ್ರಿಕಾ ಖಂಡದಲ್ಲಿ ಮಹಿಳೆಯರ ಬಳಿ ಇರುವ ಒಟ್ಟು ಸಂಪತ್ತಿಗಿಂತಲೂ ಅಧಿಕ.

LEAVE A REPLY

Please enter your comment!
Please enter your name here