ಭತ್ತದ ರಾಶಿಗೆ ಕೈ ಹಾಕಿದ ಅಂಬಾನಿ..!-ಹೊಸ ದಲ್ಲಾಳಿ ವ್ಯವಸ್ಥೆ ಸೃಷ್ಟಿನಾ..?-ಅಂಬಾನಿ, ಅದಾನಿ ಸ್ವತ್ತಾಗಲಿದ್ಯಾ ಆಹಾರ ವ್ಯವಸ್ಥೆ..?

ಭಾರತದ ಆಹಾರ ವ್ಯವಸ್ಥೆ ಕೆಲವೇ ಕೆಲವು ದೈತ್ಯ ಕಾರ್ಪೋರೇಟ್​ ಕಂಪನಿಗಳ ಸ್ವತ್ತಾಗಲಿದೆ ಎಂಬ ಆತಂಕ ದಿನದಿಂದ ದಿನಕ್ಕೆ ಇನ್ನಷ್ಟು ಹತ್ತಿರವಾದಂತೆ ಕಾಣುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಜಾರಿಗೆ ತಂದಿರುವ ಹೊಸ ಕೃಷಿ ಕಾನೂನುಗಳ ಅಡಿಯಲ್ಲಿ ದೈತ್ಯ ಉದ್ಯಮಿ ಮುಖೇಶ್​ ಅಂಬಾನಿ ಮಾಲೀಕತ್ವದ ರಿಲಯನ್ಸ್​ ಈಗ ಆಹಾರ ಕ್ಷೇತ್ರಕ್ಕೂ ಅಡಿಗಾಲಿಟ್ಟಿದ್ದು, ಕೃಷಿ ಉತ್ಪನ್ನಗಳ ಖರೀದಿಯನ್ನು ತೀವ್ರಗೊಳಿಸಿದೆ.

ಎಪಿಎಂಸಿ ಕಾಯ್ದೆ ತಿದ್ದುಪಡಿ ಆದ ಬೆನ್ನಲ್ಲೇ ರಿಲಯನ್ಸ್​ ರಿಟೇಲ್​ ಲಿಮಿಟೆಡ್ ​ಈಗ ಸೋನಾ ಮಸೂರಿ ಭತ್ತ ಖರೀದಿಗೆ ಒಪ್ಪಂದ ಆಹಾರ ಉತ್ಪನ್ನಗಳ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಭತ್ತದ ಕಣಜ ಎಂದೇ ಕರೆಯಲಾಗುವ ಕರ್ನಾಟಕ ರಾಜ್ಯದ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ 1 ಸಾವಿರ ಕ್ವಿಂಟಾಲ್​ ಭತ್ತ ಖರೀದಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ಟೈಮ್ಸ್​ ಆಫ್​ ಇಂಡಿಯಾ ವರದಿ ಮಾಡಿದೆ.

ಸೋನಾ ಮಸೂರಿ ಭತ್ತಕ್ಕೆ ಕನಿಷ್ಠ ಬೆಂಬಲ ಬೆಲೆ 1,868 ರೂಪಾಯಿ ಇದ್ದು 1,950 ರೂಪಾಯಿ ಕೊಟ್ಟು ರಿಲಯನ್ಸ್​ ಖರೀದಿಸುತ್ತಿದೆ. ಸ್ವಾಸ್ಥ್ಯ ಫಾರ್ಮಸ್​ ಪ್ರೊಡ್ಯೂಸಿಂಗ್​ ಕಂಪನಿ (ಎಸ್​ಎಫ್​ಪಿಸಿ) ಜೊತೆಗೆ ರಿಲಯನ್ಸ್​ ರೀಟೆಲ್​ ಒಪ್ಪಂದ ಮಾಡಿಕೊಂಡಿದೆ.

ಹೊಸ ದಲ್ಲಾಳಿಗಳ ಸೃಷ್ಟಿ..? 

ಒಪ್ಪಂದ ಪ್ರಕಾರ ಕನಿಷ್ಠ ಬೆಂಬಲ ಬೆಲೆಗಿಂತ ಕ್ವಿಂಟಾಲ್​ಗೆ 82 ರೂಪಾಯಿಯನ್ನು ರಿಲಯನ್ಸ್​ ಹೆಚ್ಚು ನೀಡಲಿದೆ. ಆದರೆ ಇದು ನೇರವಾಗಿ ರೈತರೊಂದಿಗೆ ಮಾಡಿಕೊಂಡಿರುವ ಖರೀದಿ ಅಲ್ಲ. ಎಸ್​ಎಫ್​ಪಿಸಿಯಲ್ಲಿ ರೈತರು ಸದಸ್ಯರಾಗಿದ್ದಾರೆ. ಈ ಕಂಪನಿ ರೈತರಿಂದ ಭತ್ತವನ್ನು ಖರೀದಿ ಮಾಡಿ ಅದನ್ನು ಬಳಿಕ ರಿಲಯನ್ಸ್ ರೀಟೆಲ್​ಗೆ ಮಾರುತ್ತದೆ. ಒಂದೇ ಪದದಲ್ಲಿ ಹೇಳುವುದಾದರೆ ಎಸ್​ಎಫ್​ಪಿಸಿ ಮಧ್ಯವರ್ತಿಯಂತೆ ಕಾರ್ಯನಿರ್ವಹಿಸಲಿದೆ.

ಪ್ರತಿ 100 ರೂಪಾಯಿ ವ್ಯವಹಾರಕ್ಕೆ 1 ರೂಪಾಯಿ 50 ಪೈಸೆಯಷ್ಟು ಕಮಿಷನ್​ನ್ನು ರೈತರೇ ಎಸ್​ಎಫ್​ಪಿಸಿ ಕಂಪನಿಗೆ ಪಾವತಿಸಬೇಕು. ಈ ಮೂಲಕ ಮತ್ತೆ ಎಪಿಎಂಸಿಗಳಲ್ಲಿರುವ ದಲ್ಲಾಳಿ ಪದ್ಧತಿಯೇ ಹೊಸ ರೂಪದಲ್ಲಿ ಬರುತ್ತಿದ್ಯಾ ಎಂಬ ಅನುಮಾನ ಬಲಗೊಂಡಿದೆ.

ರೈತರಿಗೇನು ಲಾಭ..?

ಎಸ್​ಎಫ್​ಪಿಸಿಯ ಉಗ್ರಾಣಕ್ಕೆ ಭತ್ತವನ್ನು ಪ್ಯಾಕ್​ ಮಾಡಿ ಸಾಗಾಟ ಮಾಡುವ ಜವಾಬ್ದಾರಿ ರೈತರದ್ದು. ಅದರ ಖರ್ಚು ವೆಚ್ಚವನ್ನು ರೈತರೇ ಭರಿಸಬೇಕು. ಭತ್ತ ಶೇಕಡಾ 16ಕ್ಕಿಂತ ಹೆಚ್ಚು ತೇವಾಂಶ ಹೊಂದುವಂತಿಲ್ಲ ಎಂದು ಷರತ್ತನ್ನು ಹಾಕಲಾಗಿದ್ದು ಅದಕ್ಕಿಂತ ಹೆಚ್ಚು ತೇವಾಂಶ ಇದ್ದರೆ ಭತ್ತವನ್ನು ರಿಲಯನ್ಸ್​ ರಿಟೇಲ್ ತಿರಸ್ಕರಿಸಬಹುದು. ತೇವಾಂಶದ ದೃಢೀಕರಣ ಜವಾಬ್ದಾರಿಯನ್ನು ಈಗ ಮೂರನೇ ಪಾರ್ಟಿಗೆ ನೀಡಲಾಗಿದ್ದು, ಅವರು ದೃಢೀಕರಣ ಮಾಡಬೇಕಾಗುತ್ತದೆ.

ಎಸ್​ಎಫ್​ಪಿಸಿ ಕಂಪನಿ ತಾನು ಖರೀದಿಸಿದ ಭತ್ತವನ್ನು ರಿಲಯನ್ಸ್​ಗೆ ಮಾರಿದ ಬಳಿಕ ರಿಲಯನ್ಸ್​ನಿಂದ ಹಣ ಪಾವತಿ ಆಗುತ್ತದೆ. ಆ ಬಳಿಕವಷ್ಟೇ ಎಸ್​ಎಫ್​ಪಿಸಿ ತಾನು ಭತ್ತ ಖರೀದಿಸಿದ ರೈತರ ಖಾತೆಗೆ ದುಡ್ಡು ಹಾಕಲಿದೆ.

ಹೀಗಿರುವಾಗ ಕನಿಷ್ಢ ಬೆಂಬಲ ಬೆಲೆಗಿಂತ ಕಿಂಟ್ವಾಲ್​ಗೆ ಕೇವಲ 82 ರೂಪಾಯಿ ಹೆಚ್ಚು ಸಿಗುತ್ತದೆ ಎನ್ನುವುದಷ್ಟೇ ಪ್ರಚಾರ ಆಗುತ್ತಿದ್ದು, ಎಲ್ಲ ವೆಚ್ಚವನ್ನು ರೈತರೇ ಭರಿಸುವಾಗ ಅವರಿಗೆ ಸಿಗುವ ಲಾಭವಾದರೂ ಏನು ಎಂಬ ಪ್ರಶ್ನೆ ಎದ್ದಿದೆ.

LEAVE A REPLY

Please enter your comment!
Please enter your name here