ಬೇಕಾಗಿದ್ದಾರೆ.! ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ..

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ನಿರ್ಲಿಪ್ತ ಧೋರಣೆ.. ಪಾರ್ಟ್ ಟೈಮ್ ಪಾಲಿಟಿಕ್ಸ್ ನಿಂದ ಪಕ್ಷದ ನಾಯಕರು ರೋಸಿ ಹೋದಂತೆ ಕಾಣುತ್ತಿದೆ. ಪ್ರಮುಖ ಸವಾಲುಗಳು ಎದುರಾದ ಸಂದರ್ಭದಲ್ಲಿಯೇ ರಾಹುಲ್ ಗಾಂದಿ ಪಕ್ಷದ ಚಟುವಟಿಕೆಗಳಿಂದ ದೂರ ಇರುವುದು.. ತಮಗೂ ಇದಕ್ಕೂ ಸಂಬಂಧವೇ ಇಲ್ಲ ಎಂಬಂತೆ ರಾಹುಲ್ ಗಾಂಧಿ ವರ್ತಿಸುತ್ತಿರುವುದು ಪಕ್ಷದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿಯೇ ಕೆಲವರು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಬೇಕೆಂದು ಬಹಿರಂಗವಾಗಿಯೇ ಆಗ್ರಹಿಸುತ್ತಿದ್ದಾರೆ.

ಗಾಂಧಿ ಕುಟುಂಬಕ್ಕೆ ವಿಧೇಯವಾಗಿರುವ ಮುಖಂಡರು ಮಾತ್ರ, ಸೋನಿಯಾ ಗಾಂಧಿಯೇ ಪೂರ್ಣ ಪ್ರಮಾಣದ ಅಧ್ಯಕ್ಷರಾಗಬೇಕೆಂದು ಬಯಸುತ್ತಿದ್ದಾರೆ. ದೇಶದ ಎಲ್ಲಾ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಬಲಿಷ್ಠವಾಗುತ್ತಿದ್ದರೂ, ಕಾಂಗ್ರೆಸ್ ಪಕ್ಷಕ್ಕೆ ಪೂರ್ವ ವೈಭವ ತಂದುಕೊಡುವ ನಿಟ್ಟಿನಲ್ಲಿ ರಾಹುಲ್ ಗಾಂಧಿ ಯಾವುದೇ ಪ್ರಯತ್ನಗಳನ್ನು ಮಾಡುತ್ತಿಲ್ಲ. ಕೋಮು ವಿಚಾರದಲ್ಲಿ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಲು ಯಾವುದೇ ರಣತಂತ್ರಗಳನ್ನು ರೂಪಿಸದೇ ಇರುವುದು ಪಕ್ಷದ ಕಾರ್ಯಕರ್ತರಲ್ಲಿ ನಿರಾಸೆ ಉಂಟು ಮಾಡಿದೆ.

ರಾಹುಲ್ ಗಾಂಧಿ ಏನು ಮಾತಾಡಿದರೂ, ಅದು ಪಕ್ಷಕ್ಕೆ ತಿರುಗುಬಾಣ ಆಗುತ್ತಿದೆ. ಹೀಗಾಗಿ ರಾಹುಲ್ ಗಾಂಧಿಗೆ ಪಟ್ಟ ಕಟ್ಟಬೇಕು ಎಂದು ಈ ಹಿಂದೆ ಹೇಳುತ್ತಿದ್ದವರೂ ಇದೀಗ ಹೆಜ್ಜೆ ಹಿಂದಕ್ಕೆ ಇಡುತ್ತಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಘೋರ ಪರಾಜಯ ಕಂಡ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ರಾಜೀನಾಮೆ ನೀಡಿದರು. ಕೊನೆಗೆ ಬೇರೆ ಆಯ್ಕೆಗಳಿಲ್ಲದೇ ಸೋನಿಯಾ ಗಾಂಧಿಯವರೇ ಪಕ್ಷದ ಚುಕ್ಕಾಣಿಯನ್ನು ತಾತ್ಕಾಲಿಕವಾಗಿ ಹಿಡಿಯಬೇಕಾಯಿತು. ಸೋನಿಯಾ ಗಾಂಧಿಗೆ ವಯಸ್ಸು ಸಹಕರಿಸದಿದ್ದರೂ, ಆರೋಗ್ಯ ಕೈಕೊಡುತ್ತಿದ್ದರೂ, ಇವರೇ ರಾಹುಲ್ ಗಾಂಧಿಗಿಂತ ಬೆಟರ್ ಅನ್ನೋ ಭಾವನೆ ಬಹುತೇಕ ಕಾಂಗ್ರೆಸ್ ನಾಯಕರಲ್ಲಿದೆ.

ಇನ್ನು, ಇವರಿಬ್ಬರೂ ಬೇಡ ಹೊಸಬರನ್ನು ಅಧ್ಯಕ್ಷರನ್ನಾಗಿ ಮಾಡಬೇಕು ಎಂಬ ಭಾವನೆ ಕೆಲವರಲ್ಲಿದೆ. ಇದರ ಭಾಗವಾಗಿಯೇ ರಾಹುಲ್ ಗಾಂಧಿ ನಿರ್ಲಿಪ್ತ ಧೋರಣೆ ಬಗ್ಗೆ ಬಹಿರಂಗವಾಗಿಯೇ ಕೆಲವರು ಮಾತನಾಡಲು ಶುರು ಮಾಡಿದ್ದಾರೆ. ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ಇಬ್ಬರು ಪಕ್ಷದಿಂದ ದೂರ ಉಳಿದರೇ ಉತ್ತಮ ಎಂದು ಲೋಕಸಭೆಯಲ್ಲಿನ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅಭಿಪ್ರಾಯಪಟ್ಟಿದ್ದಾರೆ ಎನ್ನಲಾಗುತ್ತಿದೆ. ರಾಹುಲ್ ಇಲ್ಲ ಅಂದ್ರೆ ಪಕ್ಷವೇನು ಉಳಿಯಲ್ವಾ, ಬೆಳೆಯಲ್ವಾ ಎಂಬ ಪ್ರಶ್ನೆಯನ್ನು ಅಧೀರ್ ಮುಂದಿಡುತ್ತಿದ್ದಾರೆ ಎನ್ನಲಾಗಿದೆ.

ಯಾರು ಏನು ಹೇಳಿದರು..?

ರಾಹುಲ್ ಗಾಂಧಿ ಮತ್ತೆ ಅಧ್ಯಕ್ಷ ಸ್ಥಾನವನ್ನು ಸ್ವೀಕರಿಸುತ್ತಾರೋ ಇಲ್ಲವೋ ಅನ್ನೋದನ್ನು ಸ್ಪಷ್ಟವಾಗಿ ಹೇಳುತ್ತಿಲ್ಲ. ಅವರ ನಿರ್ಲಿಪ್ತ ಧೊರಣೆಯಿಂದ ಕಾಂಗ್ರೆಸ್ ಪಕ್ಷದ ಮುಂದಿನ ದಾರಿ ಯಾವುದು ಅನ್ನೋದು ಗೊತ್ತಾಗುತ್ತಿಲ್ಲ. ಸದ್ಯದ ಸನ್ನಿವೇಶದಲ್ಲಿ ಚುರುಕಾದ ವ್ಯಕ್ತಿತ್ವ ಉಳ್ಳ ಸಮರ್ಥ ಅಧ್ಯಕ್ಷನ ಅಗತ್ಯತೆ ಪಕ್ಷಕ್ಕೆ ತುರ್ತಾಗಿ ಬೇಕಿದೆ.
– ಶಶಿ ತರೂರ್, ಸಂಸದ

===

ಕಾಂಗ್ರೆಸ್ ಪಕ್ಷ ನಾಯಕತ್ವ ಸಮಸ್ಯೆಯಿಂದ ಬಳಲುತ್ತಿದೆ. ಸೋನಿಯಾ ಗಾಂಧಿ ತಾತ್ಕಾಲಿಕ ಅಧ್ಯಕ್ಷರಾಗಿದ್ದಾರೆ. ಕೂಡಲೇ ಚುನಾವಣೆ ನಡೆಸಿ ಅಧ್ಯಕ್ಷರನ್ನು ಆಯ್ಕೆ ಮಾಡಬೇಕಿದೆ. ಒಂದು ವೇಳೆ ರಾಹುಲ್ ಸ್ಪರ್ಧೆ ಮಾಡದಿದ್ದರೇ ಹೊಸಬರಿಗೆ ಅವಕಾಶ ನೀಡಬೇಕು.
– ಅಭಿಷೇಕ್ ಮನು ಸಿಂಘ್ವಿ, ಸಂಸದ

===

ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋನಿಯಾ ಗಾಂಧಿ ಮಾತ್ರವೇ ಸಮರ್ಥವಾಗಿ ಮುನ್ನಡೆಸಲು ಸಾಧ್ಯ. ಪಕ್ಷದ ಭವಿಷ್ಯಕ್ಕಾಗಿ ಸೋನಿಯಾ ಅವರೇ ಪೂರ್ಣ ಪ್ರಮಾಣದ ಅಧ್ಯಕ್ಷರಾಗಬೇಕು.
– ಮನೀಶ್ ತಿವಾರಿ, ಸಂಸದ

===

ಕಾಂಗ್ರೆಸ್ ಪಕ್ಷದ ಸೀನಿಯರ್ ನಾಯಕರ್ಯಾರು ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಬೇಕು ಎಂದು ಭಾವಿಸುತ್ತಿಲ್ಲ. ಯಾಕಂದ್ರೆ, ಗಾಂಧಿ ಕುಟುಂಬದ ವಿರೋಧಿಗಳು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಬಂದು ಕುಳಿತರೇ ಕಷ್ಟ ಆಗುತ್ತದೆ.
– ಸಂದೀಪ್ ದೀಕ್ಷಿತ್

LEAVE A REPLY

Please enter your comment!
Please enter your name here