ಬೆಳುವಾಯಿ, ಕೆಸರುಗದ್ದೆ, ಪಟ್ಲ, ಕೊಡ್ಯಡ್ಕ,ಗುಂಡ್ಯಡ್ಕ ಭಾಗದ ಕೃಷಿಕರೇ ಎಚ್ಚರಾ ಎಚ್ಚರಾ..!!

ನಿಮ್ಮ ಕೃಷಿ ಭೂಮಿ ಬರಡಾಗುವಂತೆ ಮಾಡಿ ತೋಡಿನ ಬದಿಯಲ್ಲಿ ಇರುವ ನಿಮ್ಮ ಬಾವಿಯ ನೀರು ವಿಷವನ್ನಾಗಿಸಲಿದೆ ಈ ಅಪಾಯಕಾರಿ ರಾಸಾಯನಿಕ ತ್ಯಾಜ್ಯ.

ಏನಿದು ಅಂತೀರಾ..? ಮುಂದಕ್ಕೆ ಓದಿ.. ಕಾಲ ಮಿಂಚಿ ಹೋಗುವ ಮುನ್ನ ಈಗಲೇ ಜಾಗೃತರಾಗಿ..

ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ತಾಲೂಕಿನ ಬೆಳುವಾಯಿ ಗ್ರಾಮದ ನಾನಿಲು ಎಂಬಲ್ಲಿ ಕೆಂಪು ಕಲ್ಲಿನ 30 ಅಡಿ ಆಳದ ಕೋರೆಯನ್ನು ಮುಚ್ಚಲು ಮೂಡುಬಿದಿರೆಯ ಜ್ಯೋತಿನಗರದ ಬಾಲಾಜಿ ಎಣ್ಣೆ ಮಿಲ್ ನ ನೂರಾರು ಲೋಡು ಅಪಾಯಕಾರಿ ರಾಸಾಯನಿಕಗಳುಳ್ಳ ತ್ಯಾಜ್ಯವನ್ನು ಸುರಿದಿದ್ದು ಇದು ಇಡೀ ಪರಿಸರದಲ್ಲಿ ದುರ್ನಾತ ಬೀರುತ್ತಿದೆ.

ಕೋರೆಯನ್ನು ಮುಚ್ಚಲು ಬಾಲಾಜಿ ಎಣ್ಣೆ ಮಿಲ್ ನಿಂದ ತಂದು ಹಾಕಿರುವ ಅಪಾಯಕಾರಿ ರಾಸಾಯನಿಕವುಳ್ಳ ತ್ಯಾಜ್ಯ

ತೋಡಿಗೆ ಅಡ್ಡಲಾಗಿ ಸ್ಥಳೀಯ ಕೃಷಿ ಭೂಮಿಗೆ ಹೋಗಲು ಪಂಚಾಯತ್‌ ವತಿಯಿಂದ ನಿರ್ಮಿಸಿದ ಸಣ್ಣ ಕಾಲುವೆ

ನೀರು ಹರಿಯುವ ತೋಡನ್ನು ಕೋರೆ ಮಾಡಿ ತೋಡು ಮಾಯ!

ಕಾಂತಾವರ ಗುಡ್ಡದಿಂದ ಹರಿದು ಬರುವ ನೀರಿನ ತೋಡಿಗೆ ಹೊಂದಿಕೊಂಡಿರುವ ಈ ಕೆಂಪು ಕಲ್ಲಿನ ಕೋರೆಯು ಮಳೆಗಾಲ ಆರಂಭದ ನಂತರ ನವೆಂಬರ್ ತನಕ ನೀರು ತುಂಬಿ ಹರಿಯುತ್ತಿದ್ದು ಬೈಲು , ಬೆಟ್ಟು ಪ್ರದೇಶದ ಗದ್ದೆಗೆ ಇದೇ ನೀರಿನಾಶ್ರಯವಾಗಿದೆ.

ನಾನಿಲು, ಕಾಪಿಗುಂಡಿ, ಕೆಸರುಗದ್ದೆ,ಪಟ್ಲ, ಕೊಡ್ಯಡ್ಕ, ಗುಂಡ್ಯಡ್ಕಕ್ಕೆ ಈ ತೋಡಿನ ನೀರು ಹರಿಯುತ್ತದೆ. ಹಾಗಾಗಿ ಈ ಅಪಾಯಕಾರಿ ರಾಸಾಯನಿಕಗಳು ಇರುವ ನೀರು ಸಾವಿರಾರು ಎಕರೆ ಕೃಷಿ ಭೂಮಿ ನಾಶಕ್ಕೆ ಕಾರಣವಾಗಿ, ಕೋರೆಯ ಸಮೀಪದ ಎರಡು ಕಿಲೋಮೀಟರ್ ಸುತ್ತಳತೆಯಲ್ಲಿ ಅಂತರ್ಜಲದಲ್ಲಿ ಸೇರಿ ಬಾವಿ ಮತ್ತು ಕೊಳವೆ ಬಾವಿಯ ನೀರು ಸೇರುವ ಸಾಧ್ಯತೆಗಳಿದ್ದು, ಈ ನೀರು ಸೇವಿಸಿದಲ್ಲಿ ಮಾರಣಾಂತಿಕ ಖಾಯಿಲೆ ಬರುವ ಸಾಧ್ಯತೆಗಳು ಹೆಚ್ಚಾಗಿವೆ.

ಪರಿಸರದ ಮೇಲೆ ಅವ್ಯಾಹತವಾಗಿ ನಡೆಯುತ್ತಿರುವ ಈ ದೌರ್ಜನ್ಯವನ್ನು ತಡೆಯುವವರು ಯಾರು ಎಂಬ ಪ್ರಶ್ನೆ ಉದ್ಭವಿಸಿದೆ.

ಪಂಚಾಯತ್ ನ ಕೊಳವೆ ಬಾವಿ ಈ ರಾಸಾಯನಿಕ ತ್ಯಾಜ್ಯ ಹಾಕಿರುವ ಕೋರೆಯಿಂದ ಕೇವಲ 100 ಮೀಟರ್ ದೂರದಲ್ಲಿ ಇದ್ದು ಒಂದು ವೇಳೆ ಇದು ಕೊಳವೆ ಬಾವಿಯ ನೀರನ್ನು ಸೇರಿದರೆ ಇಡೀ ಗ್ರಾಮದ ಜನರು ಇದೇ ವಿಷಯುಕ್ತ ನೀರು ಕುಡಿಯಬೇಕಾಗುತ್ತದೆ.

ಈ ರಾಸಾಯನಿಕ ತ್ಯಾಜ್ಯ ಸುರಿದಿರುವ ಪ್ರದೇಶ ಮೇಲ್ಮೈ ನೀರಿನ ಒರತೆಯನ್ನು ಹೊಂದಿದ್ದು ಇದರಿಂದ ಒಂದೆರಡು ಮಳೆಗೆ ಇಲ್ಲಿ ನೀರು ತೋಡಿನಲ್ಲಿ ಹರಿಯುತ್ತದೆ ಹಾಗಾಗಿ ಜಲಮಾಲಿನ್ಯ ಕಟ್ಟಿಟ್ಟ ಬುತ್ತಿ ಎಂದು ಜನರು ಆತಂಕಕ್ಕೊಳಗಾಗಿದ್ದಾರೆ.

ತಲೆಕೆಡಿಸಿಕೊಳ್ಳದ ಅಧಿಕಾರಿಗಳು :

ಈಗಾಗಲೇ ಇದರ ಬಗ್ಗೆ ಸ್ಥಳೀಯರು ನೂರಾರು ಸಂಖ್ಯೆಯಲ್ಲಿ ಸೇರಿ ಆ ಪ್ರದೇಶದಲ್ಲಿ ಪ್ರತಿಭಟಿಸಿದರೂ ಕೂಡ ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಸದಸ್ಯರು ಸ್ಥಳಕ್ಕೆ ಭೇಟಿ ನೀಡಿದರೂ ಕೂಡ ಯಾವುದೇ ಕ್ರಮ ಕೈಗೊಳ್ಳದಿರುವುದು ಅನೇಕ ಅನುಮಾನಕ್ಕೆ ಕಾರಣವಾಗಿದೆ.

ಮೂಡುಬಿದಿರೆ ಪುರಸಭಾ ವ್ಯಾಪ್ತಿಯಲ್ಲಿ ಇರುವ ಈ ಜ್ಯೋತಿನಗರದ ಈ ಎಣ್ಣೆ ಮಿಲ್ ನ ರಾಸಾಯನಿಕಗಳುಳ್ಳ ತ್ಯಾಜ್ಯ ವಿಲೇವಾರಿ ಬೆಳುವಾಯಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿರುವುದು ದೊಡ್ಡ ಡೀಲ್ ಎಂಬಂತೆ ಸ್ಥಳೀಯಾಡಳಿತದ ಬಗ್ಗೆ ಅನುಮಾನಗಳು ದಟ್ಟವಾಗಿದೆ.

ಅಪಾಯಕಾರಿ ರಾಸಾಯನಿಕವುಳ್ಳ ತ್ಯಾಜ್ಯವನ್ನು ತಂದು ಸುರಿಸುತ್ತಿರುವ ಬಾಲಾಜಿ ಎಣ್ಣೆ ಮಿಲ್  

ತಹಶೀಲ್ದಾರ್ ಅವರಿಗೆ ಮತ್ತು ಜಿಲ್ಲಾಧಿಕಾರಿಗಳು ಹಾಗೂ ಗ್ರಾಮ ಪಂಚಾಯತ್ ಗೆ ಗ್ರಾಮಸ್ಥರು ಮನವಿ ನೀಡಿದ್ದು ಒಂದೆರಡು ವಾರದಲ್ಲಿ ಮಳೆಗಾಲ ಆರಂಭವಾಗುವ ಮುನ್ನ ಯಾವ ರೀತಿಯ ಕ್ರಮಗಳನ್ನು ಇವರು ಜರಗಿಸಲಿದ್ದಾರೆ ಎಂದು ನೋಡಬೇಕಾಗಿದೆ

LEAVE A REPLY

Please enter your comment!
Please enter your name here