ಭಾರತ, ಚೀನಾ ಮಧ್ಯೆ ಗಡಿ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದೆ. 1967ರ ಬಳಿಕ ಒಂದೇ ಒಂದು ಗುಂಡು ಸಿಡಿಯದ ಭಾರತ-ಚೀನಾ ನೈಜ ನಿಯಂತ್ರಣ ರೇಖೆ ಉದ್ದಕ್ಕೂ ದೊಡ್ಡ ಪ್ರಮಾಣದಲ್ಲಿ ಸೇನೆಗಳು ಎದುರುಬದುರಾಗಿ ನಿಂತಿವೆ. ಎರಡು ದೇಶಗಳಲ್ಲಿ ಕೋರೋನಾ ವೈರಸ್ ತಾಂಡವ ಆಡುತ್ತಿರುವ ಸಂದರ್ಭದಲ್ಲಿಯೂ ಚೀನಾದ ಸೈನಿಕರು ಭಾರತದೊಳಗೆ ನುಗ್ಗೋದನ್ನು ಬಿಟ್ಟಿಲ್ಲ. ಮುಖ್ಯವಾಗಿ ಪಾಂಗಾಂಗ್ ಸರೋವರದ ಬಳಿ, ಗಾಲ್ವಾನ್ ಕಣಿವೆಯಲ್ಲಿ, ಸಿಕ್ಕಿಂನ ನಾಕುಲ ಬಳಿ ಇಂಡೋ ಚೈನಾ ಸೈನಿಕರ ಮಧ್ಯ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
ಪಾಂಗಾಂಗ್ ಬಳಿ ವಿವಾದ ಏನು?
ಲಡಾಖ್ ಬಳಿ ಪಾಂಗಾಂಗ್ ಸರೋವರ ಇದೆ. ಹೆಚ್ಚು ಕಡಿಮೆ 134 ಕಿಲೋಮೀಟರ್ ಉದ್ದ ಇರುವ ಈ ಸರೋವರ ಟಿಬೆಟ್ ವರೆಗೂ 604 ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ವಿಸ್ತರಿಸಿದೆ. 5 ಕಿಲೋಮೀಟರ್ ಅಗಲ ಇರುವ ಈ ಸರೋವರದ ಶೇಕಡಾ 60ರಷ್ಟು ಭಾಗ ಟಿಬೆಟ್ ಪರಿಧಿಗೆ ಬರುತ್ತದೆ. 1962ರಲ್ಲಿ ದಾಳಿ ಮಾಡಿದ ಚೀನಾ, ಅಕ್ಸಾಯ್ ಚಿನ್ ವಶಪಡಿಸಿಕೊಂಡಿತು. ಆ ದಿನದಿಂದ ಎರಡು ದೇಶಗಳು ತಮ್ಮ ಗಡಿ ಎಂದು ಭಾವಿಸುತ್ತಿರುವ ನೈಜ ನಿಯಂತ್ರಣ ರೇಖೆ ಈ ಸರೋವರದ ಮೇಲೆ ಹೋಗುತ್ತದೆ. ಎರಡು ದೇಶಗಳು ತಮ್ಮ ಭೂಪ್ರದೇಶ ಇಲ್ಲಿಯವರೆಗೆ ಬರುತ್ತದೆ ಎಂದು ಖಚಿತವಾಗಿ ಎಲ್ಲಿಯೂ ಗಡಿಯನ್ನು ಹಂಚಿಕೊಂಡಿಲ್ಲ. ಪಾಂಗಾಂಗ್ ಸರೋವರದ ಉತ್ತರ ದಿಕ್ಕಿನಲ್ಲಿ ಬಂಜರು ಪರ್ವತ ಪ್ರದೇಶಗಳಿವೆ. ಇವುಗಳನ್ನು ಬೆರಳುಗಳೆಂದು (ಫಿಂಗರ್ಸ್) ಎರಡು ದೇಶದ ಸೇನೆಗಳು ಕರೆಯುತ್ತವೆ. ಈ ಬೆರಳುಗಳ ಲೆಕ್ಕದ ವಿಚಾರದಲ್ಲಿಯೇ ಎರಡು ದೇಶಗಳ ನಡುವೆ ವಿವಾದವಾಗಿ ಮಾರ್ಪಟ್ಟಿದೆ.
ಪಾಂಗಾಂಗ್ ಸರೋವರ
ಏನಿದು ಬೆರಳು ವಿವಾದ?
ಫಿಂಗರ್ 8ರ ಮೇಲೆ ನೈಜ ನಿಯಂತ್ರಣ ರೇಖೆ ಹಾದು ಹೋಗುತ್ತದೆ ಎಂದು ಭಾರತ ವಾದ ಮಂಡಿಸುತ್ತಿದೆ. ಆದರೆ, ಭೌತಿಕವಾಗಿ ಭಾರತಕ್ಕೆ ಫಿಂಗರ್ 4ರವರೆಗಷ್ಟೆ ಹಿಡಿತ ಇದೆ. ಆದರೆ ಚೀನಾ ಫಿಂಗರ್ 8ರ ಬಳಿ ಗಡಿ ಪೋಸ್ಟ್ ಹೊಂದಿದೆ. ಆದರೂ, ಫಿಂಗರ್ 2ವರೆಗಿನ ಭೂಭಾಗ ನಮ್ಮದೆ ಎಂದು ಚೀನಾ ವಾದ ಮಾಡುತ್ತಿದೆ. ಪ್ರಸ್ತುತ ಫಿಂಗರ್ 2ವರೆಗೂ ನುಗ್ಗಿ ಬಂದಿರುವ ಚೀನಾ ಸೇನೆ, ಭಾರತೀಯ ಸೇನೆಯನ್ನು ಫಿಂಗರ್ 2 ಬಳಿಯೇ ತಡೆದು ನಿಲ್ಲಿಸಿದೆ. ಸರೋವರ ವಿಚಾರದಲ್ಲಿಯೂ ವಿವಾದ ಮುಂದುವರೆದಿದೆ. ಕೆಲವು ವರ್ಷಗಳ ಹಿಂದೆ ಸರೋವರದಲ್ಲಿ ಪ್ಯಾಟ್ರೋಲಿಂಗ್ ಮಾಡುತ್ತಿದ್ದ ಭಾರತೀಯ ಸೇನೆಯನ್ನು ಬೋಟ್ ಗಳಲ್ಲಿ ಬಂದ ಚೀನಾದ ಸೈನಿಕರು ತಡೆದಿದ್ದರು.
ಫಿಂಗರ್ 4 ಪ್ರಾಮುಖ್ಯತೆ ಏನು..? ವ್ಯೂಹಾತ್ಮಕವಾಗಿ ಇಂಪಾರ್ಟೆಂಟ್ ಏಕೆ?
ಬಂಜರು ಪರ್ವತಗಳ ಸಾಲಿನಲ್ಲಿ ಬರುವ ಫಿಂಗರ್ 4 ಮೇಲೆ ಅಧಿಪತ್ಯ ಸಾಧಿಸಲು ಚೀನಾ ಪ್ರಯತ್ನಿಸುತ್ತಿರುವುದರ ಹಿಂದೆ ತುಂಬಾ ವ್ಯೂಹಾತ್ಮಕ ತಂತ್ರವೇ ಇದೆ. ಭಾರತ ದೇಶಕ್ಕೂ ಕೂಡ ಫಿಂಗರ್ 4 ತುಂಬಾನೆ ಇಂಪಾರ್ಟೆಂಟ್. ಚೀನಾ ಫಿಂಗರ್ 4 ಮೇಲೆ ನಿಂತು ಒಮ್ಮೆ ಕಣ್ಣು ಹಾಯಿಸಿದರೇ ಪಾಂಗಾಂಗ್ ಸರೋವರದಲ್ಲಿ ಭಾರತೀಯ ಪಡೆಗಳು ಪ್ಯಾಟ್ರೋಲಿಂಗ್ ಬಳಸುತ್ತಿರುವ ಬೋಟ್ ಎಷ್ಟು..? ಅಲ್ಲಿನ ಸೈನಿಕ ಚಟುವಟಿಕೆಗಳು ಸುಲಭವಾಗಿ ಮತ್ತು ಸ್ಪಷ್ಟವಾಗಿ ಗೋಚರ ಆಗುತ್ತವೆ. ಭಾರತ ಬೋಟ್ ಗಳನ್ನು ನಿಲ್ಲಿಸುವ ಲುಕಾಂಗ್ ಪ್ರಾಂತ್ಯ ಕೂಡ ಗೋಚರವಾಗುತ್ತದೆ.
ಕಾರ್ಗಿಲ್ ಯುದ್ಧದ ವೇಳೆ…!
ಕಾರ್ಗಿಲ್ ಯುದ್ಧದ ವೇಳೆ ಭಾರತಕ್ಕೆ ಹೆಚ್ಚುವರಿ ಸೇನೆ ಅಗತ್ಯವಿದ್ದ ಕಾರಣ ಈ ಸರೋವರದ ಬಳಿಯಿದ್ದ ಸೈನಿಕರನ್ನು ಕಾರ್ಗಿಲ್ ಯುದ್ಧ ಭೂಮಿಗೆ ರವಾನಿಸಲಾಗಿತ್ತು. ಇದನ್ನೇ ತನಗೆ ಪೂರಕವಾಗಿ ಬಳಸಿಕೊಂಡ ಚೀನಾ ಸದ್ದಿಲ್ಲದೇ ಫಿಂಗರ್ ಬಳಿಯೇ ರಸ್ತೆ ನಿರ್ಮಾಣ ಶುರು ಮಾಡಿಕೊಂಡಿತು. ಸದ್ಯ ಫಿಂಗರ್ 2-3 ಮಧ್ಯೆ ರಸ್ತೆ ಕಾಮಗಾರಿಗಳು ನಡೆಯುತ್ತಿವೆ. ಭಾರತಕ್ಕೆ ಹೋಲಿಸಿದರೇ ಈ ಪ್ರದೇಶಕ್ಕೆ ವೇಗವಾಗಿ ಸೇರಿಕೊಳ್ಳಬಹುದಾಗಿದೆ. ಕಳೆದ ಕೆಲವು ತಿಂಗಳಿಂದ ಭಾರತೀಯ ಸೇನೆಯ ಗಸ್ತು ತಡೆಯಲು ಚೀನಾ ಭಾರಿ ಸಂಖ್ಯೆಯಲ್ಲಿ ಸೈನಿಕರನ್ನು ರವಾನಿಸಿದೆ.
ಗಾಲ್ವಾನ ಕಣಿವೆಯಲ್ಲೂ ಚೀನಾ ಕ್ಯಾತೆ?
1962ರ ಅಕ್ಟೋಬರ್ 20ರಂದು ಚೀನಾ ಸೇನೆ ದಾಳಿ ಪ್ರಾರಂಭಿಸಿದ ಪ್ರದೇಶಗಳಲ್ಲಿ ಗಾಲ್ವಾನ್ ಕಣಿವೆ ಕೂಡ ಒಂದು. ಭಾರತ 2017ರಲ್ಲಿ ಡೋಕ್ಲಾಂ ಬಳಿ ಚೀನಾ ಸೇನೆಗೆ ಎದುರೊಡ್ಡಿ ನಿಂತಿತ್ತು. ಆಗ ಸೇನೆಯನ್ನು ತೆರಳಿಸಲು ಆದ ಅಡ್ಡಿಗಳನ್ಮು ಗಮನದಲ್ಲಿ ಇರಿಸಿಕೊಂಡು ಗಡಿಗಳಲ್ಲಿ ರಸ್ತೆ ನಿರ್ಮಾಣ ಕಾರ್ಯವನ್ನು ಮತ್ತಷ್ಟು ಚುರುಕುಗೊಳಿಸಿತು. ನೈಜ ನಿಯಂತ್ರಣ ರೇಖೆಗೆ 10 ಕಿಲೋಮೀಟರ್ ಅಂತರದಲ್ಲಿ ಡರ್ಬುಕು-ಷ್ಯಾಕ್-ಡಿಬಿಓ ಮಧ್ಯೆ ರಸ್ತೆ ಕಾಮಗಾರಿ ಕೈಗೊಂಡಿತ್ತು.
ಗಾಲ್ವಾನ್ ಕಣಿವೆ
ಇದು ಸೇನಾ ಪಡೆಗಳ ರವಾನೆಗೆ ಉಪಯೋಗಿಸಬಹುದಾಗಿದೆ. ಸದ್ಯ ಲಡಾಖ್ ನ ಗಾಲ್ವಾನ್ ಕಣಿವೆಯಲ್ಲಿ ಇಂಡೋ ಚೀನಾ ನಡುವೆ ವಿವಾದಕ್ಕೆ ಇದು ಕೂಡ ಕಾರಣವಾಗಿದೆ. ಇಲ್ಲಿ ಭಾರತ ರಸ್ತೆ ನಿರ್ಮಿಸುವುದಕ್ಕೆ ಚೀನಾ ಅಂಗೀಕರಿಸುತ್ತಿಲ್ಲ. ಗಾಲ್ವಾನ್ ಕಣಿವೆ ಬಳಿಯೇ ಭಾರತಕ್ಕೆ ಸೇರಿದ ಧೌಲತ್ ಬೇಗ್ ಏರ್ ಸ್ಟ್ರೀಪ್ ಕೂಡ ಇದೆ. ಇಲ್ಲಿ ದೊಡ್ಡ ದೊಡ್ ವಿಮಾನಗಳು ಸಹ ಲ್ಯಾಂಡ್ ಆಗಬಹುದು.
ಇದೀಗ ಚೀನಾ ದೊಡ್ಡ ಮಟ್ಟದಲ್ಲಿ ತನ್ನ ಪಡೆಗಳನ್ನು ಭಾರತದೊಳಕ್ಕೆ ನುಗ್ಗಿಸುತ್ತಿದೆ. ಕಳೆದ ಎರಡು ವಾರಗಳಲ್ಲಿ 100ಕ್ಕೂ ಹೆಚ್ಚು ಗುಡಾರಗಳನ್ನು ನಿರ್ಮಿಸಿಕೊಂಡಿದೆ. ಬಂಕರ್ ನಿರ್ಮಿಸಲು ಅಗತ್ಯವಾದ ಸಾಮಗ್ರಿಗಳನ್ನು ದೊಡ್ಡ ಮಟ್ಟದಲ್ಲಿ ತರಿಸಿಕೊಂಡಿದೆ. ಆದರೆ ಗಾಲ್ವಾನ್ ಬಳಿ ಭಾರತೀಯ ಸೇನಾ ಪಡೆಗಳು ಸೀಮಿತ ಪ್ರಮಾಣದಲ್ಲಿಯೇ ಇರುವುದು ಆತಂಕಕ್ಕೆ ಕಾರಣವಾಗಿದೆ.
ಚೀನಾ ಪಡೆಗಳು ಭಾರತದ ಭೂಭಾಗ ಪ್ರವೇಶ ಮಾಡಿರುವುದನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೇ ಒಪ್ಪಿಕೊಂಡಿದ್ದಾರೆ. ಅಗತ್ಯ ಕ್ರಮಗಳನ್ನು ಕೈಗೊಳ್ಳಾಗಿದೆ ಎಂದಿದ್ದಾರೆ. ಆದರೆ ಆ ಅಗತ್ಯ ಕ್ರಮಗಳೇನು ಎಂಬುದನ್ನು ಮಾತ್ರ ರಕ್ಷಣಾ ಸಚಿವರು ಹೇಳಿಲ್ಲ