ಬೆಂಗಳೂರು-ಧಾರವಾಡ ನಡುವೆ ವಂದೇ ಭಾರತ್​ಗೂ ಎಕ್ಸ್​ಪ್ರೆಸ್​​ಗೂ ಏನು ವ್ಯತ್ಯಾಸ.

ಜೂನ್​ 26ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದಲ್ಲಿ ಹೊಸ ಐದು ವಂದೇ ಭಾರತ್​ ಎಕ್ಸ್​​ಪ್ರೆಸ್​ ರೈಲುಗಳಿಗೆ ಚಾಲನೆ ನೀಡಲಿದ್ದಾರೆ.

ಈ ಐದು ರೈಲುಗಳ ಪೈಕಿ ಬೆಂಗಳೂರು-ಧಾರವಾಡ ನಡುವಿನ ವಂದೇ ಭಾರತ್​ ಎಕ್ಸ್​​ಪ್ರೆಸ್​ ರೈಲು ಕೂಡಾ ಒಂದು. ಈ ಮೂಲಕ ಕರ್ನಾಟಕಕ್ಕೆ ಬೆಂಗಳೂರು-ಚೆನ್ನೈ ಬಳಿಕ ಎರಡನೇ ವಂದೇ ಭಾರತ್ ರೈಲು ಸಿಗಲಿದೆ.

ವೇಳಾಪಟ್ಟಿ:

ಬೆಂಗಳೂರಿನಿಂದ ಬೆಳಗ್ಗೆ 5.45ಕ್ಕೆ ಹೊರಡುವ ವಂದೇ ಭಾರತ್​ ರೈಲು ದಾವಣಗೆರೆಗೆ ಬೆಳಗ್ಗೆ 9 ಗಂಟೆ 55 ನಿಮಿಷಕ್ಕೆ ತಲುಪಿ ಹುಬ್ಬಳ್ಳಿಗೆ ಮಧ್ಯಾಹ್ನ 12.10 ನಿಮಿಷಕ್ಕೆ ಮತ್ತು ಧಾರವಾಡಕ್ಕೆ 12 ಗಂಟೆ 40 ನಿಮಿಷಕ್ಕೆ ತಲುಪುತ್ತದೆ.

ಧಾರವಾಡದಿಂದ ಮಧ್ಯಾಹ್ನ 1.15 ಗಂಟೆಗೆ ಹೊರಡುವ ವಂದೇ ಭಾರತ್​ ದಾವಣಗೆರೆ ಮಧ್ಯಾಹ್ನ 3 ಗಂಟೆ 48 ನಿಮಿಷಕ್ಕೆ ತಲುಪಿ ಅಲ್ಲಿಂದ ಬೆಂಗಳೂರಿಗೆ ರಾತ್ರಿ 8 ಗಂಟೆ 10 ನಿಮಿಷಕ್ಕೆ ತಲುಪುತ್ತದೆ.

7 ಗಂಟೆ ಪ್ರಯಾಣ:

ಅಂದರೆ ಬೆಂಗಳೂರಿಂದ ವಂದೇ ಭಾರತ್​ ಎಕ್ಸ್​ಪ್ರೆಸ್​ ರೈಲು ಬೆಳಗ್ಗೆ ಹೊರಟರೆ, ಧಾರವಾಡದಿಂದ ಮಧ್ಯಾಹ್ನ ಬೆಂಗಳೂರಿಗೆ ಹೊರಡುತ್ತದೆ.

ಬೆಂಗಳೂರು-ಧಾರವಾಡ, ಧಾರವಾಡ-ಬೆಂಗಳೂರು ನಡುವೆ ವಂದೇ ಭಾರತ್ ಓಡಾಟದ ಅವಧಿ 6 ಗಂಟೆ 55 ನಿಮಿಷ.

ಏಕ್ಸ್​​ಪ್ರೆಸ್​-ವಂದೇಭಾರತ್​ಗೆ ಎಷ್ಟು ಅಂತರ..? (ಬೆಂಗಳೂರು-ಧಾರವಾಡ ಮಾರ್ಗದಲ್ಲಿ ಸಂಚರಿಸುವ ರೈಲುಗಳು)

ಅಂದಹಾಗೆ ಎಕ್ಸ್​ಪ್ರೆಸ್​ ರೈಲಿಗೂ ವಂದೇ ಭಾರತ್ ರೈಲಿನ ನಡುವಿನ ಅವಧಿಯ ಅಂತರ ಎಷ್ಟು..?

ರಾಣಿ ಚೆನ್ನಮ್ಮ ಎಕ್ಸ್​ಪ್ರೆಸ್​ ರೈಲಿನ ಅವಧಿ 7 ಗಂಟೆ 16 ನಿಮಿಷ.

ಬೆಂಗಳೂರು ಮತ್ತು ಬೆಳಗಾವಿ ನಡುವಿ ಸೂಪರ್​ ಫಾಸ್ಟ್​ ಎಕ್ಸ್​ಪ್ರೆಸ್​ ರೈಲಿನ ಅವಧಿ 7 ಗಂಟೆ 16 ನಿಮಿಷ.

ಯಶವಂತಪುರ-ಹಜ್ರಾತ್​ ನಿಜಾಮುದ್ದೀನ್​​ ಕರ್ನಾಟಕ ಸಂಪರ್ಕ ಕ್ರಾಂತಿ ಎಕ್ಸ್​ಪ್ರೆಸ್​ ಅವಧಿ 7 ಗಂಟೆ 46 ನಿಮಿಷ.

ಯಶವಂತಪುರ-ವಾಸ್ಕೋಡಗಾಮ ರೈಲಿನ ಅವಧಿ 7 ಗಂಟೆ 48 ನಿಮಿಷ.

ಮೈಸೂರು-ಅಜ್ಮೇರ್​ ಎಕ್ಸ್​ಪ್ರೆಸ್​ ರೈಲಿನ ಅವಧಿ 7 ಗಂಟೆ 36 ನಿಮಿಷ.

ಮೂರರಷ್ಟೇ ನಿಲುಗಡೆ:

ಎಕ್ಸ್​ಪ್ರೆಸ್​ ರೈಲಿಗಿಂತ ಕೇವಲ 30-45 ನಿಮಿಷ ಮುಂಚೆಯಷ್ಟೇ ಪ್ರಯಾಣಿಸುವ ವಂದೇ ಭಾರತ್​ ಎಕ್ಸ್​ಪ್ರೆಸ್​ ರೈಲಿನ ನಿಲುಗಡೆ ಮೂರು ಕಡೆಯಷ್ಟೇ.

ಬೆಂಗಳೂರು, ದಾವಣಗೆರೆ, ಹುಬ್ಬಳ್ಳಿ ಮತ್ತು ಧಾರವಾಡ. ಅಂದರೆ ಬೆಂಗಳೂರಿನಿಂದ ದಾವಣಗೆರೆವರೆಗೂ ಎಲ್ಲೂ ಕೂಡಾ ವಂದೇ ಭಾರತ್​ ಎಕ್ಸ್​ಪ್ರೆಸ್​ ರೈಲು ನಿಲುಗಡೆ ಇಲ್ಲ. ಹೀಗಾಗಿ ಈ ರೈಲು ಜನಸಾಮಾನ್ಯರಿಗೆ ಅಷ್ಟೊಂದು ಲಾಭ ಆಗುವುದು ಅಷ್ಟರಲ್ಲೇ ಇದೆ. 

ಉದಾಹರಣೆಗೆ ಬೆಂಗಳೂರು-ಮೈಸೂರು ನಡುವಿನ ವಂದೇ ಭಾರತ್​ ರೈಲಿಗೆ ಮಧ್ಯದಲ್ಲಿ ಎಲ್ಲೂ ನಿಲುಗಡೆಯೇ ಇಲ್ಲ.