ಬೆಂಗಳೂರಿನಲ್ಲಿ ಸ್ಫೋಟ.. ಶಾಸಕ ಹ್ಯಾರಿಸ್ ಸೇರಿ 7 ಮಂದಿಗೆ ಗಾಯ..

ಮಂಗಳೂರು ಬಾಂಬ್ ಘಟನೆ ಬೆನ್ನಲ್ಲೇ ಬೆಂಗಳೂರಿನಲ್ಲಿಯೂ ಅನುಮಾನಾಸ್ಪದ ವಸ್ತು ಸ್ಫೋಟಗೊಂಡಿದ್ದು, ಶಾಂತಿನಗರದ ಕಾಂಗ್ರೆಸ್ ಶಾಸಕ ಎನ್‍ಎ ಹ್ಯಾರೀಸ್ ಸೇರಿ ಏಳು ಮಂದಿಗೆ ಗಾಯಗಳಾಗಿವೆ.

ರಾತ್ರಿ 9.30ರ ಸುಮಾರಿಗೆ ಶಾಂತಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವನ್ನಾರ್‍ಪೇಟೆ ವಾರ್ಡ್‍ನಲ್ಲಿ ಹ್ಯಾರಿಸ್ ಅಭಿಮಾನಿಗಳು ಆಯೋಜಿಸಿದ್ದ MGR ಬರ್ತ್‍ಡೆ ಕಾರ್ಯಕ್ರಮದಲ್ಲಿ ಈ ಅನಾಹುತ ಸಂಭವಿಸಿದೆ.

ಕಿಡಿಗೇಡಿಯೊಬ್ಬ ಶಾಸಕರಿದ್ದ ವೇದಿಕೆ ಮೇಲೆ ಪ್ಲಾಸ್ಟಿಕ್ ಮಾದರಿಯ ವಸ್ತುವೊಂದನ್ನು ಎಸೆದು ಪರಾರಿಯಾಗಿದ್ದಾರೆ. ಕೂಡಲೇ ಪ್ಲಾಸ್ಟಿಕ್ ಮಾದರಿಯ ವಸ್ತು ಸ್ಫೋಟಗೊಂಡಿದ್ದು, ಸ್ಥಳದಲ್ಲಿದ್ದ ಶಾಸಕ ಎನ್ ಎ ಹ್ಯಾರಿಸ್ ಸೇರಿ 7 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕೂಡಲೇ ಸೈಂಟ್ ಫಿಲೋಮಿನಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯ ಆಗಿಲ್ಲ.

ಶಾಂತಿನಗರ ಶಾಸಕ ಎನ್‍ಎ ಹ್ಯಾರಿಸ್ ಎಡಗಾಲಿನ ತೊಡೆ ಭಾಗಕ್ಕೆ ಗಾಯವಾಗಿದ್ದು, ಹೊಲಿಗೆ ಹಾಕಲಾಗಿದೆ. ಸ್ಫೋಟದ ಸದ್ದಿನಿಂದ ಕಿವಿಗೆ ಹಾನಿ ಆಗಿದೆ ಎನ್ನಲಾಗುತ್ತಿದೆ. ಶಾಸಕರಿಗೆ ಸ್ಫೋಟದಲ್ಲಿ ಪೆಟ್ಟಾಗಿರುವ ವಿಷಯ ತಿಳಿದು ಆಸ್ಪತ್ರೆ ಮುಂದೆ ಪ್ರಮಣದಲ್ಲಿ ಅವರ ಅಭಿಮಾನಿಗಳು ಸೇರಿದ್ದರು. ಇದು ಉದ್ದೇಶಪೂರ್ವಕ ಕೃತ್ಯ. ತಮ್ಮ ನಾಯಕನನ್ನ ಟಾರ್ಗೆಟ್ ಮಾಡಲಾಗಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಹ್ಯಾರೀಸ್ ಅಭಿಮಾನಿಗಳು ಆಗ್ರಹಿಸಿದರು. ಆಸ್ಪತ್ರೆಯಲ್ಲಿಯೇ ಇದ್ದ ಶಾಸಕ ಹ್ಯಾರೀಸ್ ಪುತ್ರ ಮೊಹ್ಮದ್ ನಲಪಾಡ್ ಅಭಿಮಾನಿಗಳನ್ನು ಸಮಾಧಾನ ಮಾಡುತ್ತಿದ್ದ ಸನ್ನಿವೇಶ ಕಂಡು ಬಂತು.

ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್, ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಆಸ್ಪತ್ರೆಗೆ ಭೇಟಿ ನೀಡಿ ಶಾಸಕ ಎನ್ ಎ ಹ್ಯಾರೀಸ್ ಆರೋಗ್ಯ ವಿಚಾರಿಸಿದರು. ಘಟನೆ ಸಂಬಂಧ ತನಿಖೆಗೆ ಒತ್ತಾಯಿಸಿದರು.

ಸ್ಫೋಟ ನಡೆದ ಸ್ಥಳಕ್ಕೆ ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಚೇತನ್ ಸಿಂಗ್ ರಾಥೋಡ್, ಪಶ್ಚಿಮ ವಲಯದ ಹೆಚ್ಚುವರಿ ಪೊಲೀಸ್ ಆಯುಕ್ತ ಉಮೇಶ್ ಕುಮಾರ್ ಸೇರಿ ಹಲವು ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು, ಶ್ವಾನ ಪಡೆಗಳು ಸ್ಥಳ ಪರಿಶೀಲನೆ ನಡೆಸಿದವು. ಸ್ಫೋಟಗೊಂಡ ವಸ್ತುವಿನ ಚೂರುಗಳನ್ನು ಸಂಗ್ರಹಿಸಲಾಯಿತು.ಅದರಲ್ಲಿ ಸಣ್ಣ ಸಣ್ಣ ಮೆಟಲ್ ಬಾಲ್ಸ್ ಕೂಡ ಕಂಡು ಬಂದಿದ್ದು, ಇದು ಮೇಲ್ನೋಟಕ್ಕೆ ಪಟಾಕಿ ಸ್ಫೋಟಕವಲ್ಲ. ನಾಡಬಾಂಬ್ ಇರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.

ಆದರೆ, ಇದು ಯಾವ ಮಾದರಿಯ ಸ್ಫೋಟಕ ಎಂಬುದನ್ನು ತಿಳಿಸಲು ಪೊಲೀಸ್ ಅಧಿಕಾರಿಗಳು ನಿರಾಕರಿಸಿದ್ದಾರೆ.ಎಫ್‍ಎಸ್‍ಎಲ್ ವರದಿ ಬಳಿಕವೇ ಸ್ಫೋಟಕದ ಬಗ್ಗೆ ವಿವರಣೆ ನೀಡುವುದಾಗಿ ಕೇಂದ್ರ ವಲಯ ಡಿಸಿಪಿ ಚೇತನ್ ಕುಮಾರ್ ರಾಥೋಡ್ ತಿಳಿಸಿದ್ದಾರೆ. ಪೊಲೀಸರು ಎಲ್ಲಾ ಆಯಾಮಗಳಲ್ಲಿಯೂ ತನಿಖೆ ಕೈಗೊಂಡಿದ್ದಾರೆ.

LEAVE A REPLY

Please enter your comment!
Please enter your name here