ಬೆಂಗಳೂರಿಗರೇ ಎಚ್ಚರ.. ಎಂಟ್ರಿ ಕೊಟ್ಟಿದೆ ಕೋವಿಡ್ ವೈರಸ್…

ಅದು ಫೆಬ್ರವರಿ 20.. ಇದ್ದಕ್ಕಿದ್ದಂತೆ ಹತ್ತಾರು ಐಟಿ ಕಂಪನಿಗಳು ತನ್ನ ಉದ್ಯೋಗಿಗಳಿಗೆ ಇನ್ನೂ 8 ದಿನ ಆಫೀಸ್ ಕಡೆ ತಲೆ ಹಾಕಬೇಡಿ. ವರ್ಕ್ ಫ್ರಂ ಹೋಂ ಮಾಡಿ ಎಂದು ಇ-ಮೇಲ್ ಮಾಡಿದ್ದವು. ಉದ್ಯೋಗಿಯೊಬ್ಬರಲ್ಲಿ ಹೆಚ್1ಎನ್1 ಸೋಂಕು ಕಂಡು ಬಂದಿದೆ. ಹೀಗಾಗಿ ಕಚೇರಿಗಳನ್ನು ಕ್ಲೀನ್ ಮಾಡುತ್ತಿದ್ದೇವೆ ಎಂದು ಕಂಪನಿಗಳು ಸ್ಪಷ್ಟೀಕರಣ ನೀಡಿದ್ದವು. ಆದರೆ, ಐಟಿ ಕಂಪನಿ ಉದ್ಯೋಗಿಗಳು ಮಾತ್ರ, ಹೆಚ್1ಎನ್1 ಕಂಡುಬಂದ ಕಾರಣ ವರ್ಕ್‍ಫ್ರಂ ಹೋಂ ನೀಡಿಲ್ಲ. ಟೆಕ್ಕಿ ಒಬ್ಬರಲ್ಲಿ ಕೊರೋನಾ ವೈರಸ್ ಸೋಂಕು ಕಂಡು ಬಂದಿದೆಯಂತೆ. ಹೀಗಾಗಿ ಕಂಪನಿಗಳು ಈ ನಿರ್ಧಾರ ಕೈಗೊಂಡಿವೆ ಎಂದು ಸ್ವತಃ ಕೆಲವು ಟೆಕ್ಕಿಗಳು ಅನುಮಾನ ವ್ಯಕ್ತಪಡಿಸಿದ್ದರು.

ಇದು ಕಾಕತಾಳಿಯವೋ ಏನೋ ಗೊತ್ತಿಲ್ಲ ನೋಡಿ. ಇದೀಗ ಕೊರೊನಾ ವೈರಸ್ ಸೋಂಕಿತ ಹೈದರಾಬಾದ್ ಮೂಲದ ಬೆಂಗಳೂರು ಟೆಕ್ಕಿ ಕೂಡ ದುಬೈನಿಂದ ಅದೇ ದಿನ ಅಂದರೆ, ಫೆಬ್ರವರಿ 19ರ ರಾತ್ರಿ ಬೆಂಗಳೂರಿಗೆ ಕೊರೊನಾ ವೈರಸ್ ಸಮೇತ ಬಂದಿಳಿಯುತ್ತಾರೆ. ತಮ್ಮ ಆಫೀಸ್‍ನಲ್ಲಿ ಎರಡು ದಿನ ಕೆಲಸ ಮಾಡಿ, ಅನಾರೋಗ್ಯದ ಕಾರಣ 22ರಂದು ಹೈದರಾಬಾದ್‍ಗೆ ತೆರಳುತ್ತಾರೆ. ಅಲ್ಲಿ ಟೆಕ್ಕಿ, ಶೀತ, ಕೆಮ್ಮು, ಜ್ವರ ಇನ್ನೂ ಹೆಚ್ಚಾದ ಹಿನ್ನೆಲೆಯಲ್ಲಿ ಸಿಕಿಂದ್ರಾಬಾದ್‍ನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಆದರೆ, ಕಮ್ಮಿ ಆಗೋದೇ ಇಲ್ಲ.

ಹೆಚ್1ಎನ್1 ಸೋಂಕು ತಗುಲಿರಬಹುದು ಎಂಬ ಅನುಮಾನದ ಮೇಲೆ ಅಪೋಲೋ ಆಸ್ಪತ್ರೆ ವೈದ್ಯರು ನಾಲ್ಕು ದಿನ ಬೆಂಗಳೂರು ಟೆಕ್ಕಿಯನ್ನು ಪ್ರತ್ಯೇಕ ವಾರ್ಡ್‍ನಲ್ಲಿರಿಸಿ ಚಿಕಿತ್ಸೆ ನೀಡುತ್ತಾರೆ. ಸ್ವೈನ್ ಫ್ಲೂ ಇಲ್ಲ ಅನ್ನುವುದು ಪರೀಕ್ಷೆಗಳಲ್ಲಿ ಸಾಬೀತಾಗುತ್ತದೆ. ಆದರೆ, ಟೆಕ್ಕಿ ಆರೋಗ್ಯದಲ್ಲಿ ಚೇತರಿಕೆ ಕಾಣುವುದಿಲ್ಲ. ನೀವು ಗಾಂಧಿ ಆಸ್ಪತ್ರೆಗೆ ತೆರಳಿ ಎಂದು ಅಪೋಲೋ ಆಸ್ಪತ್ರೆ ವೈದ್ಯರು ರೆಫರ್ ಮಾಡುತ್ತಾರೆ. ಅದರಂತೆ ಫೆಬ್ರವರಿ 1ರಂದು ಬೆಂಗಳೂರು ಟೆಕ್ಕಿಗೆ ಹೈದ್ರಾಬಾದ್‍ನ ಗಾಂಧಿ ಆಸ್ಪತ್ರೆಯಲ್ಲಿ ಕೊರೊನಾ ಪರೀಕ್ಷೆ ನಡೆಸಲಾಗುತ್ತದೆ. ಮೇಲ್ನೋಟಕ್ಕೆ ವೈರಸ್ ಸೋಂಕು ತಗುಲಿರುವುದು ಕಂಡುಬಂದ ಕಾರಣ ರಕ್ತದ ಸ್ಯಾಂಪಲ್ ಅನ್ನು ಪುಣೆಯ ವೈರಾಲಜಿ ಪ್ರಯೋಗಾಲಯಕ್ಕೆ ಕಳಿಸಿಕೊಡುತ್ತಾರೆ. ಅಲ್ಲಿ ಬೆಂಗಳೂರು ಟೆಕ್ಕಿದೆ ಕೊರೊನಾ ವೈರಸ್ ಸೋಂಕು ತಗುಲಿರುವುದು ಸಾಬೀತಾಗುತ್ತದೆ. ಹೀಗಾಗಿ ಕೇಂದ್ರ ಆರೋಗ್ಯ ಸಚಿವರು ಖುದ್ದಾಗಿ ಸುದ್ದಿಗೋಷ್ಠಿ ನಡೆಸಿ, ಸೋಂಕಿತರ ಬಗ್ಗೆ ಮಾಹಿತಿ ನೀಡಿದರು.

ಕೊರೊನಾ ವೈರಸ್ ಮಾರಿ
> ಕಂಪನಿ ಕೆಲಸದ ಮೇಲೆ ಫೆಬ್ರವರಿ 15ರಂದು ದುಬೈಗೆ ತೆರಳಿದ್ದ ಟೆಕ್ಕಿ
> ಐದು ದಿನಗಳ ಕಾಲ ಹಾಂಕಾಂಗ್ ಮೂಲದ ಟೆಕ್ಕಿಗಳ ಜೊತೆ ಕೆಲಸ
> ಫೆಬ್ರವರಿ 19ರ ರಾತ್ರಿ ದುಬೈನಿಂದ ಬೆಂಗಳೂರಿಗೆ ವಾಪಸ್
> ಫೆಬ್ರವರಿ 22ರ ರಾತ್ರಿ ಖಾಸಗಿ ಬಸ್‍ನಲ್ಲಿ ಹೈದರಾಬಾದ್‍ಗೆ ಪಯಣ
> ಟೆಕ್ಕಿ ಪಯಣಿಸಿದ ಬಸ್‍ನಲ್ಲಿ ಇದ್ದಿದ್ದು 28 ಪ್ರಯಾಣಿಕರು
> ಸಹ ಪ್ರಯಾಣಿಕರಿಗೂ ಕೊರೊನಾ ವೈರಸ್ ವ್ಯಾಪಿಸಿರುವ ಶಂಕೆ
> 10 ದಿನಗಳ ಅವಧಿಯಲ್ಲಿ ಒಟ್ಟು 80 ಮಂದಿ ಜೊತೆ ಟೆಕ್ಕಿ ಸಂಪರ್ಕ
> ಎಲ್ಲರನ್ನು ಸಂಪರ್ಕಿಸಿ ಗಾಂಧಿ ಆಸ್ಪತ್ರೆಗೆ ಕರೆತಂದ ತೆಲಂಗಾಣ ಸರ್ಕಾರ
> 15 ದಿನಗಳ ಕಾಲ ಆ 80 ಮಂದಿಯ ಆರೋಗ್ಯದ ಮೇಲೆ ನಿಗಾ
> ಬೆಂಗಳೂರು ಕಚೇರಿಯ ಸಹೋದ್ಯೋಗಿಗಳ ಆರೋಗ್ಯದ ಮೇಲೆಯೂ ನಿಗಾ
> ಎರಡು ವಾರಗಳ ಕಾಲ ಯಾರೊಬ್ಬರನ್ನು ಭೇಟಿ ಮಾಡದೇ ಪ್ರತ್ಯೇಕವಾಗಿರಲು ಸೂಚನೆ

ಅಂದ ಹಾಗೇ, ಕೊರೊನಾ ವೈರಸ್ ಸೋಂಕಿತ ತೆಲುಗು ಟೆಕ್ಕಿ, ಹೆಬ್ಬಾಳ ಬಳಿಯ ಕಂಪನಿಯೊಂದರಲ್ಲಿ ಸಾಫ್ಟ್‍ವೇರ್ ಎಂಜಿನಿಯರ್.. 24 ವರ್ಷದ ಈ ತೆಲುಗು ಟೆಕ್ಕಿ ನೆಲೆಸಿದ್ದು ಮಾರತ್ ಹಳ್ಳಿಯ ಪಿಜಿ ಒಂದರಲ್ಲಿ. ಪಿಜಿಯಲ್ಲಿ ರೂಂಮೇಟ್ ಆಗಿದ್ದವರನ್ನು ಗುರುತಿಸಿ ಅವರ ಆರೋಗ್ಯದ ಮೇಲೆ ನಿಗಾ ಇರಿಸಲಾಗಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಟ್ವೀಟ್ ಮಾಡಿದ್ದಾರೆ.

 

LEAVE A REPLY

Please enter your comment!
Please enter your name here