ಅನ್ನಭಾಗ್ಯ ಯೋಜನೆಯಡಿ ಇನ್ಮುಂದೆ ಒಬ್ಬರಿಗೆ ಏಳು ಕೆಜಿ ಅಕ್ಕಿಯಲ್ಲ.. ಐದು ಕೆಜಿ ಅಕ್ಕಿಯೂ ಅಲ್ಲ.. ಸಿಗೋದು ಮೂರು ಕೆಜಿ ಅಕ್ಕಿ ಅಷ್ಟೇ.. ಹೌದು ಜುಲೈನಿಂದ ಮತ್ತರಡು ಕೆಜಿ ಅಕ್ಕಿ ಕಡಿತ ಮಾಡಲು ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ನಿರ್ಧರಿಸಿದೆ.
ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸಿದ ದಿನವೇ ತಮ್ಮ ಕನಸಿನ ಯೋಜನೆ ಅನ್ನಭಾಗ್ಯಕ್ಕೆ ಚಾಲನೆ ನೀಡಿದ್ದರು. ಆರಂಭದಲ್ಲಿ ಏಳು ಕೆಜಿ ಅಕ್ಕಿ ವಿತರಣೆ ಮಾಡಲಾಗುತ್ತಿತ್ತು. ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಈ ಯೋಜನೆಯಡಿ ನೀಡಲಾಗ್ತಿದ್ದ ಅಕ್ಕಿ ಪ್ರಮಾಣವನ್ನು ಏಳರಿಂದ ಐದು ಕೆಜಿಗೆ ಇಳಿಸಿತ್ತು.
ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ರಾಜ್ಯ ಬಿಜೆಪಿ ಸರ್ಕಾರ ಇನ್ನೆರಡು ಕೆಜಿ ಅಕ್ಕಿ ಕಡಿತಕ್ಕೆ ಮುಂದಾಗಿದೆ. ಐದು ಕೆಜಿ ಅಕ್ಕಿ ಬದಲು ಮೂರು ಕೆಜಿ ಅಕ್ಕಿ ನೀಡುವಂತೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಗೋಪಾಲಯ್ಯ ತಿಳಿಸಿದ್ದಾರೆ. ಈ ಕುರಿತ ಅಧಿಕೃತ ಆದೇಶ ನಾಳೆ ಹೊರಬೀಳುವ ಸಾಧ್ಯತೆ ಇದೆ.
ಎರಡು ಕೆಜಿ ಅಕ್ಕಿ ಕಡಿತದ ಬದಲಾಗಿ ಮೈಸೂರು ಭಾಗದ ಪಡಿತರದಾರರಿಗೆ ಎರಡು ಕೆಜಿ ರಾಗಿ, ಉತ್ತರ ಕರ್ನಾಟಕದ ಪಡಿತರದಾರರಿಗೆ ಎರಡು ಕೆಜಿ ಜೋಳ ವಿತರಿಸಲು ಆಹಾರ ಇಲಾಖೆ ತೀರ್ಮಾನಿಸಿದೆ. ಇದರಿಂದ ಸರ್ಕಾರಕ್ಕೆ ವಾರ್ಷಿಕವಾಗಿ 800 ಕೋಟಿ ಉಳಿತಾಯ ಆಗಲಿದೆ ಎನ್ನಲಾಗಿದೆ