ಬಿಜೆಪಿಯಿಂದ ಕೈಗೆ ಜಾರಿದ ಜಾರ್ಖಂಡ್‌ – ಫಲಕೊಡದ ಅಯೋಧ್ಯೆ, ಪೌರತ್ವ ಕಾಯ್ದೆ ತಂತ್ರ

ಗುಡ್ಡಗಾಡು ರಾಜ್ಯದ ಜಾರ್ಖಂಡ್‌ನಲ್ಲಿ ಕಾಂಗ್ರೆಸ್‌, ಜಾರ್ಖಂಡ್‌ ಮುಕ್ತಿ ಮೋರ್ಚಾ ಮತ್ತು ರಾಷ್ಟ್ರೀಯ ಜನತಾ ದಳ ಒಕ್ಕೂಟಕ್ಕೆ ಸ್ಪಷ್ಟ ಬಹುಮತ ಸಿಕ್ಕಿದ್ದು, ಐದು ವರ್ಷಗಳ ಆಡಳಿತ ಬಳಿಕದ ಬಿಜೆಪಿ ಅಧಿಕಾರ ಕಳೆದುಕೊಂಡಿದೆ.

ಒಟ್ಟು ೮೧ ಸೀಟುಗಳ ಪೈಕಿ ಕಾಂಗ್ರೆಸ್‌-೧೫, ಜೆಎಎಂ-೩೦ ಮತ್ತು ಆರ್‌ಜೆಡಿ-೦೧ ಸೀಟು ಗೆದ್ದುಕೊಂಡಿದ್ದು, ಬಹುಮತಕ್ಕೆ ಅಗತ್ಯವಿರುವ ೪೧ರ ಗಡಿ ದಾಟಿದೆ. ಬಿಜೆಪಿ ೨೫ ಸೀಟುಗಳನ್ನು ಜಯಿಸಿದೆ.

ಸೀಟು ಹಂಚಿಕೆ ವಿಷಯದಲ್ಲಿ ಬಿಜೆಪಿ ಜೊತೆ ಮೈತ್ರಿ ಕಡಿದುಕೊಂಡಿದ್ದ ಅಖಿಲ ಜಾರ್ಖಂಡ್‌ ವಿದ್ಯಾರ್ಥಿ ಒಕ್ಕೂಟ ೩ರಲ್ಲಿ, ಜಾರ್ಖಂಡ್‌ ವಿಕಾಸ್‌ ಮೋರ್ಚಾ ೩ರಲ್ಲೂ, ಎನ್‌ಸಿಪಿ -೦೧,  ಸಿಪಿಎಐಎಂ-೦೧ ಮತ್ತು ಸ್ವತಂತ್ರ ಅಭ್ಯರ್ಥಿ ೨ರಲ್ಲಿ ಗೆಲುವು ಸಾಧಿಸಿದ್ದಾರೆ.

ಅಯೋಧ್ಯೆ ರಾಮಮಂದಿರ ತೀರ್ಪು ಮತ್ತು ನಾಗರಿಕತ್ವ ಕಾಯ್ದೆ ಸಂಸತ್ತಿನಲ್ಲಿ ಅಂಗೀಕಾರಗೊಂಡ ಬಳಿಕ ನಡೆಯುತ್ತಿರುವ ಮೊದಲ ವಿಧಾನಸಭಾ ಚುನಾವಣೆ ಇದಾಗಿದೆ. ಚುನಾವಣಾ ಸಮಾವೇಶವೊಂದರಲ್ಲಿ ಇನ್ನು ನಾಲ್ಕು ತಿಂಗಳೊಳಗೆ ರಾಮಮಂದಿರ ನಿರ್ಮಾಣ ಮಾಡುವುದಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಘೋಷಣೆ ಮಾಡಿದ್ದರು. ನಾಗರಿಕತ್ವ ಕಾಯ್ದೆಯನ್ನು ಬಿಜೆಪಿ ಚುನಾವಣಾ ವಿಷಯವನ್ನಾಗಿ ಮಾಡಿಕೊಂಡಿತ್ತು.

ಇರ್ಫಾನ್‌ಗೆ ವೋಟ್‌ ಕೊಟ್ಟರೆ ರಾಮಮಂದಿರ ಕಟ್ಟುವುದು ಹೇಗೆ ಎಂದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಪ್ರಚಾರದಲ್ಲಿ ಹೇಳಿದ್ದರು. ಆದರೆ ಆ ಕ್ಷೇತ್ರದಲ್ಲೇ ಬಿಜೆಪಿ ಸೋತಿದೆ.

೨೦೧೪ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ -೩೭, ಜೆವಿಎಂ-೮, ಎಜೆಎಸ್‌ಯು-೫, ಜೆಎಎಂ+ಕಾಂಗ್ರೆಸ್‌+ಆರ್‌ಜೆಡಿ-೨೭ ಹಾಗೂ ಇತರರು ೬ ಸೀಟುಗಳನ್ನು ಗೆದ್ದುಕೊಂಡಿದ್ದರು.

ಕಾಂಗ್ರೆಸ್‌ ಕೂಟದಿಂದ ಜೆಎಂಎಂ ನಾಯಕ ಮಾಜಿ ಮುಖ್ಯಮಂತ್ರಿ ಶಿಬು ಸೊರೇನ್‌ ಪುತ್ರ ಹೇಮಂತ್‌ ಸೊರೇನ್‌ ಮುಖ್ಯಮಂತ್ರಿ ಆಗುವುದು ಖಚಿತ. ಬರ್‌ಹೈತ್‌ ಮತ್ತು ದುಮ್ಕಾ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಹೇಮಂತ್‌ ಸೊರೇನ್‌ ಎರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ನಿಯಮಗಳ ಪ್ರಕಾರ ಈಗ ಒಂದು ಕ್ಷೇತ್ರಕ್ಕೆ ರಾಜೀನಾಮೆ ಸಲ್ಲಿಸಬೇಕಾಗುತ್ತದೆ. ಹೀಗಾಗಿ ಸೊರೇನ್‌ ರಾಜೀನಾಮೆ ಕೊಡುವ ಒಂದು ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಬೇಕಾಗುತ್ತದೆ.

ಮುಖ್ಯಮಂತ್ರಿ ರಘುಬರ್‌ದಾಸ್‌ ಸೋಲು ಅನುಭವಿಸಿದ್ದು, ಅವರ ವಿರುದ್ಧ ಬಿಜೆಪಿ ಟಿಕೆಟ್‌ ಸಿಗದೇ ಬಂಡಾಯ ಅಭ್ಯರ್ಥಿ ಸರಯೂ ರಾಯ್‌ ವಿರುದ್ಧ ಜೆಮ್‌ಶೆಡ್‌ಪುರ ಪೂರ್ವ ಕ್ಷೇತ್ರದಲ್ಲಿ ಪರಾಭವಗೊಂಡಿದ್ದಾರೆ. ಈ ಕ್ಷೇತ್ರದಲ್ಲಿ ೧೯೯೫ರಿಂದಲೂ ದಾಸ್‌ ಗೆಲ್ಲುತ್ತಲೇ ಬಂದಿದ್ದರು. ಆದರೆ ಜಾರ್ಖಂಡ್‌ ರಾಜಕೀಯ ಇತಿಹಾಸದಲ್ಲಿ ಮುಖ್ಯಮಂತ್ರಿ ಆಗಿದ್ದವರು ಮತ್ತೆ ಗೆದ್ದು ಬಂದ ಉದಾಹರಣೆ ಇಲ್ಲ. ಆ ಇತಿಹಾಸ ಈಗ ಮರುಕಳಿಸಿದೆ.

ಜಾರ್ಖಂಡ್‌ನಲ್ಲಿ ಸೋಲಿನೊಂದಿಗೆ ಸತತ ಐದನೇ ರಾಜ್ಯ ಬಿಜೆಪಿ ತೆಕ್ಕೆಯಿಂದ ಜಾರಿದೆ. ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢದ ಬಳಿಕ ಮಹಾರಾಷ್ಟ್ರದಲ್ಲೂ ಬಿಜೆಪಿ ಅಧಿಕಾರ ಕಳೆದುಕೊಂಡಿದೆ. ೨೦೧೭ರಲ್ಲಿ ದೇಶದ ಒಟ್ಟು ಭೂಭಾಗದ  ಶೇಕಡಾ ೭೧ರಷ್ಟಲ್ಲೂ ಮತ್ತು ಒಟ್ಟು ಜನಸಂಖ್ಯೆಯ ಶೇಕಡಾ ೬೮ರಷ್ಟು ಜನಸಂಖ್ಯೆ ಬಿಜೆಪಿ ಆಡಳಿತಕ್ಕೆ ಒಳಪಟ್ಟಿತ್ತು. ೨೦೧೯ರಲ್ಲಿ ಭೂಭಾಗ ಶೇಕಡಾ ೩೫ರಷ್ಟು ಭೂಪ್ರದೇಶ ಮತ್ತು ಶೇಕಡಾ ೪೩ರಲ್ಲಷ್ಟೇ ಬಿಜೆಪಿ ಆಡಳಿತ ವ್ಯಾಪಿಸಿದೆ.

ಜಾರ್ಖಂಡ್‌ ಜನರ ತೀರ್ಪನ್ನು ನಾವು ಗೌರವಿಸುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಹೇಳಿದ್ದಾರೆ.

ಪ್ರಚಂಡ ಗೆಲುವಿನ ಬಗ್ಗೆ ಪ್ರತಿಕ್ರಿಯಿಸಿರುವ ಹೇಮಂತ್‌ ಸೊರೇನ್‌ ಜಾರ್ಖಂಡ್‌ನಲ್ಲಿ ಹೊಸ ಅಧ್ಯಾಯ ಆರಂಭವಾಗಲಿದೆ ಎಂದಿದ್ದಾರೆ.

LEAVE A REPLY

Please enter your comment!
Please enter your name here