ಮಂಗಳೂರು : ಭ್ರಷ್ಟಾಚಾರ, ಅಲ್ಪಸಂಖ್ಯಾತರನ್ನು ಗುರಿ ಪಡಿಸಿ ಕೊಂಡು ತಾರತಮ್ಯ, ಜನವಿರೋಧಿ ನೀತಿಗಳು, ಸಾಲು ಸಲಾಗಿ ಹೊರ ಬರುತ್ತಿರುವ ಬಿಜೆಪಿ ಸರಕಾರದ ಪ್ರಮುಖ ಸಚಿವರುಗಳ ಹಗರಣಗಳು, ಪೊಲೀಸ್ ದೌರ್ಜನ್ಯಗಳು, RSS ಪ್ರಾಯೋಜಿತ ದಾಳಿಗಳು ಮತ್ತು ರಾಜ್ಯದಲ್ಲಿ ಹದಗೆಟ್ಟಿರುವ ಕಾನೂನು ಮತ್ತು ಸುವ್ಯವಸ್ಥೆ ಇದೆಲ್ಲವೂ ರಾಜ್ಯದಲ್ಲಿ ದೊಡ್ಡ ಮಟ್ಟದ ಆರಾಜಕತೆಯನ್ನು ಸೃಷ್ಟಿಸಿದೆ. ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ರಾಜ್ಯವನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯದೆ ಅರಾಜಕತೆ ಮತ್ತು ಕೋಮು ಧ್ರುವೀಕರಣದ ಆಡಳಿತ ನಡೆಸುತ್ತಿದ್ದಾರೆಎಂದು ಎಸ್ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಕೊಡ್ಲಿಪೇಟೆ ಆರೋಪಿಸಿದ್ದಾರೆ.
ಭ್ರಷ್ಟಾಚಾರದಲ್ಲಿ ಇಡೀ ಬಿಜೆಪಿ ಸರಕಾರದ ಮೇಲೆ 40% ಕಮಿಷನ್ ಆರೋಪಗಳು ಕೇಳಿ ಬರುತ್ತಿದೆ. ಇದಕ್ಕೆ ಪೂರಕ ಎಂಬAತೆ ಬಿಜೆಪಿ ನಾಯಕ ಈಶ್ವರಪ್ಪ ಅವರ ಹೆಸರು ಬರೆದಿಟ್ಟು ಸಂತೋಷ್ ಪಾಟೀಲ್ ಎಂಬ ಗುತ್ತಿಗೆದಾರ ಆತ್ಮಹತ್ಯೆ ಮಾಡಿದ್ದಾನೆ. ಅದರ ನಂತರ ಹಿಜಾಬ್ ವಿಚಾರದಲ್ಲಿ ಸಮವಸ್ತ್ರದ ರಾಜಕಾರಣ ಮಾಡಿದ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರು ಸಮವಸ್ತ್ರದಲ್ಲಿ 40% ಲಂಚ ಹಗರಣ ಬಯಲಾಗಿದೆ. ಸಚಿವೆ ಜೊಲ್ಲೆಯವರು ಶಾಲಾ ಮಕ್ಕಳಿಗೆ ನೀಡುವ ಮೊಟ್ಟೆಯಲ್ಲಿ ಕಮಿಷನ್ ಪಡೆದು ಮೊಟ್ಟೆ ಹಗರಣದಲ್ಲಿ ಭಾಗಿಯಾಗಿ ಕೋಟಿಗಟ್ಟಲೆ ನುಂಗಿದ್ದಾರೆ. ಕೊರೋಣ ಸಂದರ್ಭದಲ್ಲಿ ಇಡೀ ರಾಜ್ಯದಲ್ಲಿ ಜನರು ಸಂಕಷ್ಟದಲ್ಲಿ ಬದುಕುತ್ತಿದ್ದಾಗ ಬಿಜೆಪಿ ಸರಕಾರದ ಪ್ರಮುಖ ಸಚಿವರುಗಳು ದೊಡ್ಡ ಮಟ್ಟದ ಹಗರಣ ನಡೆಸಿದ್ದಾರೆ. ಸಚಿವ ಡಾ.ಸುಧಾಕರ್ ಆಸ್ಪತ್ರೆ ಉಪಕರಣಗಳ ಖರೀದಿಯಲ್ಲಿ ರಾಜ್ಯ ಕಂಡರಿಯದ ಮಟ್ಟದ ಭ್ರಷ್ಟಾಚಾರ ನಡೆಸಿದ್ದಾರೆ.
ರಾಜ್ಯದಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಇದನ್ನು ಬಿಜೆಪಿಯ ಎಚ್.ವಿಶ್ವನಾಥ್, ಬಸನಗೌಡ ಪಾಟಿಲ್ ಯತ್ನಾಳ್ ಅವರೇ ಹೇಳುತ್ತಿದ್ದಾರೆ. ವಿಶ್ವನಾಥ್ ಅವರು ಭದ್ರ ಮೇಲ್ದಂಡೆ ಯೋಜನೆಯಲ್ಲಿ 20 ಸಾವಿರ ಕೋಟಿ ರು.ಗೆ ಟೆಂಡರ್ ಕರೆದಿದ್ದು ಯಡಿಯೂರಪ್ಪನವರ ಮಗ ವಿಜಯೇಂದ್ರ 10 ಪರ್ಸೆಂಟ್ ಕಮಿಷನ್ ಪಡೆದಿದ್ದಾರೆ ಎಂದು ಆರೋಪ ಮಾಡುತ್ತಾರೆ.
ಅಲ್ಲದೆ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಅವರು ಪ್ರಧಾನಿಗಳಿಗೆ ಪತ್ರ ಬರೆದಿದ್ದು, ಬಿಜೆಪಿ ಸರ್ಕಾರದಲ್ಲಿ 40 ಪರ್ಸೆಂಚ್ ಕಮಿಷನ್ ಕೊಡಬೇಕು ಎಂದಿದ್ದಾರೆ. ಪ್ರತಿ 100 ರು.ಗಳಲ್ಲಿ ಶೇ.40 ರಷ್ಟುಕಮಿಷನ್, ಶೇ.20 ರಷ್ಟುಗುತ್ತಿಗೆದಾರರಿಗೆ, ಶೇ.15 ರಷ್ಟುಜಿಎಸ್ಟಿ ಹೋದರೆ ಇನ್ನು ಕೆಲಸ ಆಗುವುದು 25 ರು.ಗೆ ಮಾತ್ರ ಹೀಗೆ ಬಿಜೆಪಿ ಸರಕಾರ ಭ್ರಷ್ಟಾಚಾರವನ್ನೇ ಆಡಳಿತವಾಗಿಸಿದೆ.
ಪಿಎಸ್ಐ ನೇಮಕದಲ್ಲಿ ದೊಡ್ಡ ಮಟ್ಟದ ಹಗರಣ ಬಯಲಾಗಿದ್ದು ಇದರಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ ಅವರೇ ಆರೋಪ ಎಸುರಿಸುತ್ತಿದ್ದಾರೆ. ಪಿಎಸ್ಐ ನೇಮಕಾತಿಯಲ್ಲಿ ನಡೆದ ಹಗರಣದಲ್ಲಿ ಗೃಹ ಸಚಿವರ ಆಪ್ತೆ ಮಹಿಳೆ ಮತ್ತು ಆಕೆಯ ಪತಿಯನ್ನು ಬಂಧಿಸಲಾಗಿದೆ. ಅದೇ ರೀತಿ ಬಿಜೆಪಿ ಯ ವಿದ್ಯಾರ್ಥಿ ವಿಂಗ್ ಎಬಿವಿಪಿಯ ನಾಯಕನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.
ಇನ್ನೂ ಅಲ್ಪಸಂಖ್ಯಾತ ಸಮುದಾಯದ ಏಳಿಗೆಗೆ ಮತ್ತು ಸಬಲೀಕರಣದ ಉದ್ದೇಶದಲ್ಲಿ ಜಾರಿಯಲ್ಲಿದ್ದ ಹಲವು ಯೋಜನೆಗಳನ್ನು ಬೊಮ್ಮಾಯಿ ಸರಕಾರ ಕೈ ಬಿಟ್ಟಿದೆ ಮತ್ತು ಉಳಿದಿರುವ ಯೋಜನೆಗಳಿಗೆ ಬಿಡುಗಡೆ ಮಾಡುತ್ತಿದ್ದ ಹಣವನ್ನು ಕಡಿತಗೊಳಿಸಲಾಗಿದೆ.
ಇನ್ನೂ ಬಿಜೆಪಿ ಮಟ್ಟು ಸಂಘಪರಿವಾರ ಪ್ರೇರಿತ ದಾಳಿಗಳು, ಕೋಮುಗಲಭೆಗಳು, ಮುಸ್ಲಿಂ ಮತ್ತು ದಲಿತರನ್ನು ಗುರಿಯಾಗಿಸಿ ನಡೆಸುತ್ತಿರುವ ದೌರ್ಜನ್ಯಗಳು ದಿನದಿಂದ ದಿನಕ್ಕೆ ಅತಿಯಾಗುತ್ತಿದ್ದೂ ಕಾನೂನು ಮತ್ತು ಸುವ್ಯವಸ್ಥೆಯನ್ನು ಹದಗೆಡಿಸುತ್ತಿದೆ. ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ, ಹಿಜಾಬ್ ನಿರಾಕರಣೆ, ಬಿಜೆಪಿ ಶಾಸಕರು, ಸಂಸದರು ಮತ್ತು ಸಂಘಪರಿವಾರದ ನಾಯಕರ ಮುಸ್ಲಿಂರನ್ನು ಗುರಿಪಡಿಸಿ ನೀಡುತ್ತಿರುವ ದ್ವೇಷ ಭಾಷಣಗಳು ಮತ್ತು ಹೇಳಿಕೆಗಳು ರಾಜ್ಯದಲ್ಲಿ ಶಾಂತಿ ಸೌಹಾರ್ದತೆಗೆ ಕೊಡಲಿ ಏಟು ಹಾಕುತ್ತಿವೆ. ಒಟ್ಟಿನಲ್ಲಿ ರಾಜ್ಯದಲ್ಲಿ ಇಂದೆಂದೂ ಕಾಣದ ಅರಾಜಕತೆ ಸೃಷ್ಟಿಯಾಗಿದ್ದು, ಕೂಡಲೇ ಸರಕಾರವನ್ನು ವಜಾಗೊಳಿಸಿ, ರಾಷ್ಟ್ರಪತಿ ಆಡಳಿತವನ್ನು ಜಾರಿಗೊಳಿಸಬೇಕು.
ಈ ನಿಟ್ಟಿನಲ್ಲಿ SDPI ಕರ್ನಾಟಕ ಭ್ರಷ್ಟ ಬಿಜೆಪಿ ಸರಕಾರವನ್ನು ವಜಾಗೊಳಿಸಿ, ರಾಷ್ಟ್ರ ಪತಿ ಆಡಳಿತ ಜಾರಿಗೊಳಿಸಿ ಎಂಬ ಘೋಷಣೆಯೊಂದಿಗೆ ರಾಜ್ಯದ್ಯಂತ ಬಿಜೆಪಿ ಸರಕಾರದ ವಿರುದ್ಧ ಬೃಹತ್ ಜನಾಂದೋಲನವನ್ನು ಕೈ ಗೊಂಡಿದೆ. ಇಂದಿನಿಂದ ಈ ಆಂದೋಲನ ಆರಂಭಗೊಳಿಸುತ್ತಿದ್ದೇವೆ ಎಂದು SDPI ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಕೊಡ್ಲಿಪೇಟೆ ಘೋಷಿಸಿದ್ದಾರೆ. ಈ ಪತ್ರಿಕಾ ಗೋಷ್ಠಿಯಲ್ಲಿ ಅಬೂಬಕ್ಕರ್ ಕುಳಾಯಿ (ಎಸ್ಡಿಪಿಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರು), ಅಥಾವುಲ್ಲಾ ಜೋಕಟ್ಟೆ (ಎಸ್ಡಿಪಿಐ ರಾಜ್ಯ ಸಮಿತಿ ಸದಸ್ಯರು),ರಿಯಾಝ್ ಕಡಂಬು (ಎಸ್ಡಿಪಿಐ ರಾಜ್ಯ ಸಮಿತಿ ಸದಸ್ಯರು) ಇದ್ದರು.